ತಾನುಳಿಯಬೇಕು

Update: 2023-09-24 06:17 GMT

ಮನಸ್ಸು ತನ್ನ ಇರುವಿಕೆಯನ್ನು ಖಚಿತ ಪಡಿಸಿಕೊಳ್ಳಲು, ತನ್ನನ್ನು ತಾನು ಬಲಪಡಿಸಿಕೊಳ್ಳಲು, ತಾನು ನಾಶ ಹೊಂದದಿರುವಂತೆ ನೋಡಿಕೊಳ್ಳಲು ಮತ್ತು ತನ್ನ ಮೇಲ್ಮೈಯನ್ನು ಸಾಧಿಸಲು ಅನೇಕಾನೇಕ ತಂತ್ರಗಳನ್ನು ಉಪಯೋಗಿಸುತ್ತಿರುತ್ತದೆ. ಮನಸ್ಸು ತನಗಿರುವ ಬಯಕೆ ಮತ್ತು ಭಯಗಳನ್ನು ಆಧರಿಸಿ ಮತ್ತು ತಾನು ಎದುರಿಸಬೇಕಾಗಿರುವ ಸಂಘರ್ಷದ ಸ್ಥಿತಿ, ಗತಿ ಮತ್ತು ತೀವ್ರತೆಯನ್ನು ಆಧರಿಸಿ ಬಳಸುವ ರಕ್ಷಣಾತಂತ್ರಗಳೇ ಕಾಪುತೋಡು. ಅನೇಕ ಬಾರಿ ಅತೀ ಹಳೆಯ ತಂತ್ರಗಳನ್ನು ಉಪಯೋಗಿಸಿದರೆ, ಕೆಲವೊಮ್ಮೆ ಆ ಹೊತ್ತಿಗೆ ತಾನೇ ಸೃಜನಾತ್ಮಕವಾಗಿ ಕಟ್ಟಿಕೊಳ್ಳುತ್ತದೆ. ಸುಳ್ಳು ಹೇಳುವುದು ಅತ್ಯಂತ ಹಳೆಯ ಕಾಪುತೋಡು. ಹೋರಾಡುವುದು ಅಥವಾ ಓಡಿಹೋಗುವುದೂ ಕೂಡಾ ಇಂತಹ ಕಾಪುತೋಡೇ.

ತನ್ನ ಜೈವಿಕ ಉಳಿವಿಗಾಗಿ ಹೋರಾಡುವುದು ಅಥವಾ ತನ್ನ ಇರುವನ್ನು ಉಳಿಸಿಕೊಳ್ಳಲು, ಒಟ್ಟಾರೆ ಜೀವ ರಕ್ಷಣೆಗಾಗಿ ಯಾವುದೇ ಜೀವಿ ಮಾಡುವಂತೆಯೇ ಮನಸ್ಸು ಕೂಡಾ ಮಾನಸಿಕ ಹೋರಾಟ ಮತ್ತು ಮಾನಸಿಕ ಪಲಾಯನಗಳನ್ನು ಮಾಡುವಂತಹ ತಂತ್ರಗಳನ್ನು ಹೂಡುತ್ತವೆ. ಅದರಲ್ಲಿ ತನ್ನತನ, ತನ್ನ ಬಯಕೆ, ಭಯ, ಅಗತ್ಯ, ಅಹಂಕಾರ, ಅರಿಮೆ; ಹೀಗೆ ಹಲವಾರು ಅಂಶಗಳು ಅಡಗಿರುತ್ತವೆ. ವ್ಯಕ್ತಿಯ ಮನಸ್ಸಿಗೆ ಸಮಾಜ, ಪ್ರಕೃತಿ, ಕುಟುಂಬ, ಮತ್ತೊಂದು ವ್ಯಕ್ತಿ, ಸಂಗತಿಗಳು, ಘಟನೆಗಳು, ವ್ಯವಸ್ಥೆ; ಹೀಗೆ ಬದುಕಿನ ಅನೇಕ ವಿಷಯಗಳು ಬೆದರಿಕೆ ಒಡ್ಡುತ್ತಲೇ ಇರುತ್ತವೆ.

ಮುಖ್ಯವಾಗಿ ತನ್ನನ್ನು ಅಪಾಯದಿಂದ ಕಾಪಾಡಿಕೊಳ್ಳಲು ಅವುಗಳಿಗೆ ತಂತ್ರಗಳು ಅಗತ್ಯವಾಗಿರುತ್ತವೆ. ಈ ಕಾಪುತೋಡುಗಳು ಅಪ್ರಜ್ಞಾವಸ್ಥೆಯಲ್ಲಿದ್ದು ಸುಪ್ತಚೇತನದಲ್ಲಿ ಇರುತ್ತವೆ. ತಾವು ಎದುರಿಸುವ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಹೊರಗೆ ಬರುತ್ತವೆ. ಅವುಗಳು ತಮಗೆ ಸಿಗುವ ಪ್ರಚೋದನೆಯಿಂದ ಪ್ರತಿಕ್ರಿಯೆ ನೀಡುತ್ತವೆ. ಈ ಪ್ರತಿಕ್ರಿಯೆಗಳು ವರ್ತನೆಗಳ, ಚಟುವಟಿಕೆಗಳ, ಮಾತಿನ ಮತ್ತು ಭಾವನೆಗಳನ್ನು ಹೊರ ಹಾಕುವುದರ ಮೂಲಕ ಕಾಣಿಸಿಕೊಳ್ಳುತ್ತಿರುತ್ತವೆ. ಆದರೆ ಅವರಿಗೆ ತನ್ನ ಮನಸ್ಸು ಉಪಯೋಗಿಸುತ್ತಿರುವ ರಕ್ಷಣಾ ತಂತ್ರವಿದು ಎಂದು ಅರಿವಿನಲ್ಲಿ ಇರುವುದಿಲ್ಲ. ಎಷ್ಟೋ ಜನರು ಹೇಳುತ್ತಿರುತ್ತಾರೆ, ನನ್ನ ಮಾತು ಯಾರೂ ಕೇಳುವುದೇ ಇಲ್ಲ. ನನ್ನನ್ನು ಯಾರೂ ಪರಿಗಣಿಸುವುದೇ ಇಲ್ಲ ಎಂದು. ಆದರೆ ವಾಸ್ತವದಲ್ಲಿ ಅವರೇ ಯಾರ ಮಾತನ್ನೂ ಕೇಳುತ್ತಿರುವುದಿಲ್ಲ.

ಅವರೇ ಯಾರನ್ನೂ ಪರಿಗಣಿಸುವುದಿಲ್ಲ. ತಾವು ಮಾಡುವುದನ್ನು ಮತ್ತು ತಾವು ಭಾವಿಸುವುದನ್ನು ಇತರರ ಮೇಲೆ ಆರೋಪಿಸುವುದು ಕೂಡಾ ಮನಸ್ಸಿನ ಒಂದು ರಕ್ಷಣಾತಂತ್ರವೇ ಆಗಿರುತ್ತದೆ. ಇದೂ ಬಹಳ ಅಪ್ರಬುದ್ಧ, ಅವಿವೇಕ ಮತ್ತು ಹುಡುಗಾಟದ ತಂತ್ರವೇ ಆಗಿರುತ್ತದೆ. ಕೆಲವು ಮಕ್ಕಳು ತಮಗೆ ಏನಾದರೂ ಬೇಕಾಗಿದ್ದರೆ, ದೊಡ್ಡವರ ಬಳಿ ಬಂದು ಮತ್ತೊಂದು ಮಗುವಿಗೆ ಆ ವಸ್ತು ಬೇಕೆಂದು ಹೇಳುತ್ತದೆ. ತನಗೆ ಬೇಕೆಂದು ಹೇಳದು. ತಮ್ಮದನ್ನು ಅವರದೆಂದು ಬಿಂಬಿಸುವುದು. ಬಿಂಬಾರೋಪವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಮಾಡುವ ಮನಸ್ಸಿನ ಕಾಪುತೋಡು ಅಥವಾ ರಕ್ಷಣಾ ತಂತ್ರ. ಇನ್ನೊಂದು ನಕಾರಾತ್ಮಕವಾದ ಅಥವಾ ಕೆಡುಕಾಳದ ಕಾಪುತೋಡೆಂದರೆ, ತಮ್ಮಲ್ಲಿ ಮೂಡುವಂತಹ ಭಾವನೆಗಳ ವಿರುದ್ಧವಾದ ಭಾವನೆಗಳನ್ನು ತೋರುವಂತಹ ಪ್ರತಿಕ್ರಿಯೆಗಳನ್ನು ರೂಪಿಸಿಕೊಳ್ಳುವುದು.

ಉದಾಹರಣೆಗೆ, ತಾನು ಮಾಡುತ್ತಿರುವಂತಹ ಕೆಲಸದಲ್ಲಿ ಅತೃಪ್ತಿ, ತನ್ನ ಮೇಲಧಿಕಾರಿಯ ಮೇಲೆ ಭಯಂಕರ ಕೋಪ ಮತ್ತು ತನ್ನ ಸಹೋದ್ಯೋಗಿಗಳ ಮೇಲೆ ಅಸಹನೆ ಇರುವಂತಹ ವ್ಯಕ್ತಿ; ತನಗೆ ಈ ಕೆಲಸವೆಂದರೆ ಅತ್ಯಂತ ಪವಿತ್ರವೂ ಮತ್ತು ಆಪ್ತವೂ ಆಗಿರುವಂತಹದ್ದು, ತನ್ನ ಮೇಲಧಿಕಾರಿಯು ಅತ್ಯಂತ ಗೌರವಾನ್ವಿತನೂ ಮತ್ತು ತಂದೆಯ ಸಮಾನನು, ತನ್ನ ಸಹೋದ್ಯೋಗಿಗಳೆಲ್ಲಾ ಒಡಹುಟ್ಟುಗಳು ಎಂಬಂತೆ ವರ್ತಿಸುವುದು. ಹಾಗೆಯೇ ನಡೆದುಕೊಳ್ಳುವುದು. ಇದು ಮೂಲತಃ ಕೆಡುಕಾಳ ಅಥವಾ ನಕಾರಾತ್ಮಕವಾಗಿರುವುದರಿಂದ ಅವರ ಕೆಲಸಗಳಲ್ಲಿ ಪ್ರಚಂಡವಾದ ಆಗ್ರಹವಿರುತ್ತದೆ. ತಾನಿರುವುದೇ ಈ ಸಂಸ್ಥೆಯ ಮೇಲ್ಮೈ ಸಾಧಿಸಲು, ತಾನು ಈ ಸಂಸ್ಥೆಗೆ ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದೇನೆ ಎಂಬಂತೆ ವರ್ತಿಸುತ್ತಿರುತ್ತಾರೆ. ಅವರ ಆಗ್ರಹ ಮತ್ತು ಆವೇಶ ಹೇಗಿರುತ್ತದೆ ಎಂದರೆ ಹಳಬರಿಗೆ ಅತ್ಯಂತ ಸಮರ್ಪಣಾಭಾವವಿರುವ ಅತಿ ಕಟ್ಟುನಿಟ್ಟಿನ ವ್ಯಕ್ತಿ ಎಂದು ತೋರಿದರೆ, ಹೊಸಬರಿಗೆ ದುಃಸ್ವಪ್ನವಾಗಿ ಪರಿಣಮಿಸುತ್ತಾರೆ.

ಇದು ಎಂತಹ ಕಾಪುತೋಡೆಂದರೆ ಮನಸ್ಸು ತನ್ನಲ್ಲಿ ಉಂಟಾಗಿರುವ ಕೆಡುಕಾಳದ ಅಥವಾ ನಕಾರಾತ್ಮಕವಾದ ಭಾವನೆಗಳನ್ನು ಒಳಿತಾಳ ಅಥವಾ ಸಕಾರಾತ್ಮಕವಾದ ಭಾವನೆಗಳೆಂಬಂತೆ ಬಿಂಬಿಸುತ್ತಾ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮಾಡುವಂತಹ ಒಂದು ಬಗೆಯ ಕಾಪುತೋಡು ಅಥವಾ ರಕ್ಷಣಾತಂತ್ರ. ಈ ಕಾಪುತೋಡಿನ ಜೊತೆಜೊತೆಗೆ ತನ್ನರಿಮೆಗಳು (ಕಾಂಪ್ಲೆಕ್ಸ್) ಇದ್ದರಂತೂ ಇನ್ನೂ ಮಹಾ ನಾಟಕ ಪ್ರದರ್ಶನಗಳು. ತನ್ನೊಲುಮೆ (ಆತ್ಮರತಿ ಅಥವಾ ನಾರ್ಸಿಸಿಸಂ) ಇರುವವರ ಸೊಕ್ಕಿನ ಅಮಲು ತನಗೆ ಇದಿರಾಗಿರುವವರನ್ನು ಮಣಿಸುವವರೆಗೂ ಬಿಡದು. ಅಂತಹ ಸಮಯದಲ್ಲಿ ತನ್ನ ಕಾಪುತೋಡನ್ನು ಬದಲಾಯಿಸಿಕೊಳ್ಳುತ್ತದೆ. ಒಬ್ಬಾಕೆ ಒಬ್ಬಾತನಿಂದ ಯಾವುದೋ ಪುಸ್ತಕವನ್ನು ಎರವಲು ಪಡೆದಿದ್ದಳು.

ಆತ ಎಷ್ಟು ಕಾಲವಾದರೂ ಪುಸ್ತಕವನ್ನು ಮರಳಿಸದ ಆಕೆಯ ಮೇಲೆ ಕೋಪಗೊಂಡು ಗದರಿಸಿ ಕೇಳಿದ. ಆಕೆಯೂ ತಾನು ಹಿಂದಿರುಗಿಸಲಾಗದಿರಲು ಕಾರಣಗಳನ್ನು ಕೊಡುತ್ತಾ, ಅದಕ್ಕೆ ಆತನೇ ಸಹಕರಿಸದೆ ಅಥವಾ ಉತ್ತರಿಸದೆ ಇರುವುದೆಂದು ವಾದಿಸಿ ಆತನನ್ನು ಕುಗ್ಗಿಸಲು ಯತ್ನಿಸುತ್ತಿದ್ದಳು. ಆದರೆ ಆತ ಬಿಡಲಿಲ್ಲ. ಅವಳ ಎಲ್ಲಾ ಬಾಣಗಳನ್ನೂ ಹಿಂದಕ್ಕೆ ತಿರುಗಿಸಿಬಿಟ್ಟ. ಅವಳ ಬತ್ತಳಿಕೆ ಖಾಲಿಯಾದಾಗ ಅವಳು ಅಳತೊಡಗಿದಳು. ‘‘ನೀವೂ ನನ್ನನ್ನು ಅನುಮಾನಿಸುತ್ತೀರಿ ಮತ್ತು ಅಪಮಾನಿಸುತ್ತೀರಿ. ಯಾರೂ ನನ್ನನ್ನು ನಂಬುವುದಿಲ್ಲ. ನಾನೆಷ್ಟೇ ಒಳ್ಳೆಯದು ಮಾಡಿದರೂ ಅದನ್ನು ತಪ್ಪಾಗಿಯೇ ಬಿಂಬಿಸುತ್ತಾರೆ. ನೀವು ನನ್ನ ಅರ್ಥ ಮಾಡಿಕೊಳ್ಳುತ್ತೀರಿ ಎಂದು ನಂಬಿದ್ದೆ. ಆದರೆ ನೀವೂ ಕೂಡಾ ನನ್ನ ಕೈ ಬಿಟ್ಟು ಬೈಯುತ್ತಿದ್ದೀರಿ. ನನಗೆ ಯಾರು ನನ್ನವರು ಅಂತ ಇಲ್ಲ.’’

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೇಶ್ ಮಾಸ್ಟರ್,

contributor

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು
ತನ್ನಾರೈಕೆ