ಟೀಕಾಚಾರ್ಯರು

Update: 2024-03-24 04:57 GMT

‘‘ನಾನು ಹೇಳುವುದೆಲ್ಲಾ ನಿನ್ನ ಒಳ್ಳೆಯದಕ್ಕೆ. ನಿನ್ನ ತಪ್ಪು ಏನೂಂತ ನಿನಗೆ ಹೇಳಿದಾಗ ನೀನು ತಿದ್ದಿಕೋ ಬೇಕು’’ ಎಂದು ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಹೇಳುವುದಾಗಲಿ, ‘‘ನೀನು ಬರೆದ ಕೃತಿಯಲ್ಲಿ ಇಂತಹ ಲೋಪದೋಷಗಳಿವೆ’’ ಅಥವಾ ‘‘ನಿನ್ನ ಸಿನೆಮಾವನ್ನು ಹೀಗೆ ಮಾಡಬೇಕಿತ್ತು’’ ಎಂದು ಟೀಕಿಸುವವರ ಧೋರಣೆ ಎಂದರೆ ವಿಮರ್ಶೆಗಳನ್ನು ಮಾಡುವುದು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ. ಹಾಗೆಯೇ ವಿಮರ್ಶೆಗಳನ್ನು ಸ್ವೀಕರಿಸುವವರು ತಮ್ಮ ಕ್ಷೇತ್ರದಲ್ಲಿ ಬೆಳೆಯುತ್ತಾರೆ ಎಂಬುದೂ ಅವರ ಅಭಿಪ್ರಾಯ.

ಬಹಳ ಮುಖ್ಯವಾಗಿ ಬಹಳಷ್ಟು ಜನರಿಗೆ ವಿಮರ್ಶೆ, ಟೀಕೆ, ಅಭಿಪ್ರಾಯ, ಪ್ರತಿಕ್ರಿಯೆ, ಅನಿಸಿಕೆ, ಸ್ಪಂದಿಸುವಿಕೆಗಳ ನಡುವೆ ವ್ಯತ್ಯಾಸವೇ ತಿಳಿಯದಿರುವುದು. ತಾವು ಮಾಡುವ ಟೀಕೆಯಲ್ಲಿಯೇ ಇಲ್ಲಿ ಉಲ್ಲೇಖಿಸಿರುವ ಎಲ್ಲಾ ಬಗೆಗಳೆಲ್ಲವನ್ನೂ ಭಾವಿಸಿಬಿಡುತ್ತಾರೆ. ಹಾಗಾಗಿಯೇ ಟೀಕೆಯು ಸಮಸ್ಯೆಯಾಗಿ ಪರಿಣಮಿಸುವುದು.

ಭಾಷಿಕವಾಗಿ ಹೇಳುವುದಾದರೆ ಟೀಕೆ ಎಂದರೆ ಅದು ದೋಷ ಮತ್ತು ಸಮಸ್ಯೆಯನ್ನೇ ಕೇಂದ್ರೀಕರಿಸಿ ಅದರ ಸುತ್ತಲೇ ಮಾತಾಡುವುದಾಗಿರುತ್ತದೆ. ಆ ಮಾತಿಗೆ ಹಲವು ಬಗೆಯ ಧ್ವನಿಗಳಿವೆ, ಉದ್ದೇಶಗಳಿವೆ, ಹಿನ್ನೆಲೆಗಳಿರುತ್ತವೆ, ಮೂಲಭೂತ ಮಾನಸಿಕ ಸಮಸ್ಯೆಗಳಿರುತ್ತವೆ, ಅವುಗಳ ಪ್ರಭಾವಗಳಿರುತ್ತವೆ, ಬೋಧನೆಗಳಿರುತ್ತವೆ, ಪ್ರಲೋಭನೆಗಳಿರುತ್ತವೆ ಮತ್ತು ಅವುಗಳನ್ನು ವ್ಯಕ್ತಪಡಿಸುವುದರಲ್ಲಿ ತಾಂತ್ರಿಕ ದೋಷಗಳಿರುತ್ತವೆ. ಹಾಗೆಯೇ ನಾವು ನೋಡುವ ಟೀಕೆಗಳು ರಚನಾತ್ಮಕವಾಗಿ ಅಥವಾ ನಕಾರಾತ್ಮಕವಾಗಿ ಇರಬಹುದು.

ಟೀಕೆಗೆ ಧ್ವನಿ ಮಾತ್ರವಲ್ಲ ಅವುಗಳಲ್ಲಿ ಕಾಳಜಿ, ಅಹಂಕಾರ, ವಿನಯ, ಅಜ್ಞಾನ, ಮುಗ್ಧತೆ, ಅಸೂಯೆ, ಖಂಡನೆ, ಅಸಹನೆ, ವ್ಯಂಗ್ಯ, ವಿಡಂಬನೆ; ಏನೆಲ್ಲಾ ಗುಣ ಸ್ವಭಾವಗಳೂ ಇರಬಹುದು.

ರಚನಾತ್ಮಕವಾಗಿರುವ ಟೀಕೆಗಳು ಮತ್ತು ದೋಷಪೂರಿತ ಟೀಕೆಗಳು ಎನ್ನುವುದರ ಬಗ್ಗೆ ಗಮನಿಸಿದರೂ ಸಾಕು ಸ್ಥೂಲವಾಗಿ ಮತ್ತು ಸಮರ್ಥವಾಗಿ ಅವನ್ನು ನಿಭಾಯಿಸಲು ಸಾಧ್ಯ.

ಟೀಕೆಗಳು ಸಮಸ್ಯೆಗಳ ಸುತ್ತಲೇ ಗಿರಕಿ ಹೊಡೆಯುತ್ತಿದ್ದರೂ ವ್ಯಕ್ತಿಗೆ ರಚನಾತ್ಮಕವಾದ ಧೋರಣೆ ಇದ್ದಲ್ಲಿ, ತಾವು ಮಾಡುವ ಟೀಕೆಯು ಆ ವ್ಯಕ್ತಿಯ ಏಳ್ಗೆಯ ಪರವಾಗಿದ್ದು, ಉತ್ತಮಗೊಳಿಸಿಕೊಳ್ಳಲು ಸಲಹೆಗಳನ್ನು ನೀಡುತ್ತದೆ. ಮುಖ್ಯವಾಗಿ ಕಾಳಜಿಯನ್ನು ಹೊಂದಿರುತ್ತದೆ.

ಅದೇ ಟೀಕೆಯನ್ನು ಮಾಡುವ ವ್ಯಕ್ತಿಯು ಅಹಂಕಾರಿ ಮತ್ತು ಮಾನಸಿಕ ಆರೋಗ್ಯವಿಲ್ಲದೆ ಇರುವ ವ್ಯಕ್ತಿಯಾದರೆ, ಅವನ ಟೀಕೆಯು ಅವಹೇಳನಕಾರಿಯಾಗಿರುತ್ತದೆ. ಟೀಕಿಸುವ ವಿಷಯದ ಕರ್ತೃವಾದ ವ್ಯಕ್ತಿಯ ವೈಫಲ್ಯಗಳನ್ನು ಅಣಕಿಸುತ್ತಾನೆ. ಖಂಡಿಸುವುದರಲ್ಲಿ ಅತೀವ ಆಸಕ್ತಿಯನ್ನೂ ಮತ್ತು ಮುಖಭಂಗ ಮಾಡುವುದರಲ್ಲಿ ಸಂತೋಷವನ್ನೂ ಹೊಂದಿರುತ್ತಾನೆ.

ಕೌಟುಂಬಿಕವಾಗಿಯಾಗಲಿ ಅಥವಾ ಸಾಮಾಜಿಕವಾಗಿಯಾಗಲಿ ಟೀಕೆಗೆ ಒಳಗಾಗುವವರು ಇಷ್ಟಪಡಲಿ, ಇಷ್ಟಪಡದಿರಲಿ ರಚನಾತ್ಮಕ ಮತ್ತು ನಕಾರಾತ್ಮಕವಾದ ಟೀಕೆಗಳನ್ನು ಎದುರಿಸಲೇ ಬೇಕು. ಟೀಕೆಗಳನ್ನು ಮಾಡುವವರ ಮನಸ್ಥಿತಿಗಳು ಟೀಕೆಗೆ ಒಳಗಾಗುವವರ ನಿಯಂತ್ರಣದಲ್ಲಿ ಇರುವುದಿಲ್ಲವಲ್ಲ! ಟೀಕೆಗೆ ಒಳಗಾಗುವವರು ಅಂತಹ ಟೀಕೆಗಳಿಗೆ ಭಾವನಾತ್ಮಕವಾಗಿ ಸ್ಪಂದಿಸುವುದರ ವಿಷಯದಲ್ಲಿ ಎಚ್ಚರವನ್ನು ವಹಿಸಬೇಕಷ್ಟೇ. ಟೀಕೆಗೆ ಒಳಗಾಗುವ ವ್ಯಕ್ತಿಯು ತನ್ನನ್ನು ತಾನು ಸ್ವೀಕರಿಸುವ ಕಲೆಯನ್ನು ಅರಿತಿದ್ದರೆ ಮತ್ತು ತನ್ನ ವ್ಯಕ್ತಿತ್ವದ ಇತಿಮಿತಿ ಹಾಗೂ ಸಾಮರ್ಥ್ಯದ ಮೌಲ್ಯದ ಚಿತ್ರಣವನ್ನು ಅರಿತಿದ್ದರೆ ವಿಚಲಿತನಾಗುವುದಿಲ್ಲ.

ತನ್ನತನದ ಸ್ವೀಕಾರ ಭಾವಕ್ಕೆ ಬಹಳ ಮುಖ್ಯವಾದದ್ದು ತನ್ನ ಜೀವನ ಪದ್ಧತಿ ಮತ್ತು ಮನಸ್ಥಿತಿಗಳನ್ನು ಸರಿಪಡಿಸಿಕೊಳ್ಳಲು ಸಿದ್ಧವಾಗಿರುವುದು. ಅದಕ್ಕೆ ಬೇಕಾದ ಕೆಲಸಗಳನ್ನು ಪ್ರಜ್ಞಾಪೂರ್ವಕವಾಗಿ ಮಾಡುವುದು. ಉದಾಹರಣೆಗೆ, ನಕಾರಾತ್ಮಕ ವ್ಯಕ್ತಿಗಳ ಅಥವಾ ನಂಜುಗೇಡಿತನದ ವ್ಯಕ್ತಿಗಳ ಸಂಪರ್ಕವನ್ನು ಕಡಿದುಕೊಳ್ಳುವುದು, ಪದೇ ಪದೇ ಅಂದುಕೊಳ್ಳುವ ಮತ್ತು ಆಡುವ ಮಾತುಗಳ ಅಥವಾ ಆಲೋಚನೆಗಳ ಕುರಿತಾಗಿ ನಿಗಾವಹಿಸುವುದು, ಅವುಗಳನ್ನು ಪ್ರಜ್ಞಾಪೂರ್ವಕವಾಗಿ ಸರಿಪಡಿಸಿಕೊಳ್ಳುವುದು, ನಕಾರಾತ್ಮಕವಾದ ಆಲೋಚನೆ ಅಥವಾ ಭಾವನೆಗಳ ಎಡೆಯಲ್ಲಿ ಸಕಾರಾತ್ಮಕವಾದ ಆಲೋಚನೆ ಅಥವಾ ಭಾವನೆಗಳನ್ನು ಇಡುವಂತಹ ರೂಢಿ ಮಾಡಿಕೊಳ್ಳುವುದು. ಹಠಾತ್ತಾಗಿ ಪ್ರತಿಕ್ರಿಯಿಸಲು ಅಥವಾ ವರ್ತಿಸಲು ಪ್ರೇರೇಪಿಸುವ ಭಾವನೆಗಳನ್ನು ನಮ್ಮ ಗಮನದಲ್ಲಿರಿಸಿಕೊಳ್ಳುವುದು.

ನಾವು ಒಬ್ಬರನ್ನು ಟೀಕಿಸುವಾಗ ಯಾವ ಸ್ವರೂಪದ ಟೀಕೆಯನ್ನು ಮಾಡುತ್ತಿದ್ದೇವೆ ಎಂಬುದನ್ನು ಗಮನಿಸಿಕೊಳ್ಳಬೇಕು. ಆಗ ನಮ್ಮಿಂದ ಇತರರ ಮಾನಸಿಕ ಆರೋಗ್ಯಕ್ಕೆ ತೊಂದರೆ ಆಗುತ್ತಿದ್ದೇವೆಯೋ ಇಲ್ಲವೋ ಎಂದು ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಹಾಗೆಯೇ ಇತರರು ನಮ್ಮನ್ನು ಟೀಕಿಸುವಾಗ ಅವರು ಯಾವ ನೆಲೆಗಟ್ಟಿನಿಂದ ಅಥವಾ ಎಂತಹ ಮನಸ್ಥಿತಿಯಿಂದ ಟೀಕಿಸುತ್ತಿದ್ದಾರೆ ಎಂದು ತಿಳಿಯಲು ಪ್ರಯತ್ನ ಮಾಡಿದರೆ ನಾವು ಭಾವನಾತ್ಮಕವಾಗಿ ಒತ್ತಡಕ್ಕೆ ಒಳಗಾಗದಿರಲು ನಮ್ಮನ್ನು ನಾವು ನೋಡಿಕೊಳ್ಳಲು ಸಾಧ್ಯವಾಗುತ್ತದೆ.

ವಿಮರ್ಶೆ ಎಂದರೆ ವಿಮರ್ಶಕ ತಾನು ವಿಮರ್ಶೆ ಮಾಡುವ ವಿಷಯದಲ್ಲಿ ಅಧ್ಯಯನವನ್ನು, ಜ್ಞಾನವನ್ನು ಮತ್ತು ಅನುಭವವನ್ನು ಪಡೆದಿರಬೇಕು. ಹಾಗಿದ್ದಾಗ ಮಾತ್ರ ಒಂದು ಕಲಾಕೃತಿ, ಸಾಹಿತ್ಯಕೃತಿ ಅಥವಾ ಸಿನೆಮಾವನ್ನು ವಿಮರ್ಶಿಸಲು ಸಾಧ್ಯ. ವಿಮರ್ಶೆ ಎಂಬುದು ಕೃತಿಯ ತಾಂತ್ರಿಕ, ತಾತ್ವಿಕ ಮತ್ತು ಆಶಯ ಅಥವಾ ಉದ್ದೇಶಗಳನ್ನೆಲ್ಲಾ ಮುಂದಿಟ್ಟುಕೊಂಡು ತನ್ನ ಮುಂದಿರುವ ಕೃತಿಯನ್ನು ವಿಶ್ಲೇಷಿಸುವುದು. ಉದಾಹರಣೆಗೆ ಸಿನೆಮಾ ಅಧ್ಯಯನ ಮಾಡದವರು, ಅದರ ಬಗ್ಗೆ ಯಾವ ಪ್ರಾಯೋಗಿಕ ಅನುಭವವನ್ನು ಪಡೆಯದವರು ವಿಮರ್ಶಿಸುತ್ತಿದ್ದಾರೆಂದರೆ ಅದು ವಿಮರ್ಶೆಯಲ್ಲದೆ ಬರಿದೇ ಅವರ ಅಭಿಪ್ರಾಯವಾಗಿರುತ್ತದೆ ಅಥವಾ ಭಾವನಾತ್ಮಕವಾದ ಪ್ರತಿಕ್ರಿಯೆ ಆಗಿರುತ್ತದೆ. ಟೀಕೆ, ಅಭಿಪ್ರಾಯ, ಪ್ರತಿಕ್ರಿಯೆ, ಅನಿಸಿಕೆಗಳೆಲ್ಲಾ ವಿಮರ್ಶೆಗಳಲ್ಲ ಎಂದು ನಮಗೆ ನೆನಪಿರಬೇಕು.

ಒಟ್ಟಾರೆ ಟೀಕೆಗೆ ಒಳಗಾಗುವವರು ತಮ್ಮ ಹಿನ್ನೆಲೆ, ಅನುಭವ, ಸಮಯ, ಸಂಪನ್ಮೂಲ, ಪ್ರಾಯೋಗಿಕ ಸಂಕಷ್ಟಗಳನ್ನು ಹೊಂದಿರುತ್ತಾರೆಂಬ ಅರಿವನ್ನು ಹೊಂದಿದ್ದರೆ ನಾವು ಯಾವ ಬಗೆಯ ಟೀಕೆಯನ್ನು ಮಾಡಬಹುದೆಂದು ಆಲೋಚಿಸಬಹುದು. ಈ ನನ್ನ ಟೀಕೆಯಿಂದ ಆ ವ್ಯಕ್ತಿಗೆ ಯಾವ ಬಗೆಯ ಪ್ರಯೋಜನವಾಗಬಹುದೆಂಬ ಒಂದು ಸಣ್ಣ ಪ್ರಮಾಣದ ಅರಿವನ್ನಾದರೂ ಹೊಂದಿರಬಹುದು. ಅದೇ ರೀತಿ ತಮ್ಮನ್ನು ಟೀಕಿಸುವವರ ಹಿನ್ನೆಲೆ, ಅವರ ವ್ಯಕ್ತಿತ್ವದ ಸ್ವರೂಪ, ಅವರಿಗಿರುವ ಇತಿಮಿತಿಯ ಬಗ್ಗೆ ಗಮನ ಹರಿಸಿದಾಗ ಅವರ ಟೀಕೆಯದ್ದು ಪ್ರಹಾರವೋ, ಪ್ರೇರಣೆಯೋ ಅಥವಾ ಕಾಳಜಿಯೋ ಎಂದು ಅರಿವಾಗುತ್ತದೆ. ಅಂತಹ ಟೀಕೆಗಳನ್ನು ಎಷ್ಟರಮಟ್ಟಿಗೆ ನಾವು ಪರಿಗಣಿಸಬೇಕೆಂಬ ಎಚ್ಚರಿಕೆಯೂ ನಮಗುಂಟಾಗುತ್ತದೆ. ಅನವಶ್ಯಕವಾಗಿ ನಮ್ಮ ತಲೆಯನ್ನು ಅಥವಾ ಹೃದಯವನ್ನು ಸಾರ್ವಜನಿಕ ಕಸದ ತೊಟ್ಟಿಯನ್ನಾಗಿಸಿಕೊಳ್ಳಲಾರೆವು.

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಶ್ ಮಾಸ್ಟರ್

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು