ಸಾವಧಾನವೇ ಸೂತ್ರ

Update: 2024-06-30 09:55 GMT

ಪಾಪದ ನಮ್ಮ ಮನಸ್ಸಿನ ಮಿತಿಮೀರುವ ಆಲೋಚನೆಗಳನ್ನು, ಅವುಗಳ ನಿರಂತರ ಚಲನೆಯನ್ನು ಚಂಚಲತೆ, ವಿಚಲಿತ, ಹುಚ್ಚು ಕೋಡಿ, ಮಂಗ; ಏನಾದರೂ ಅಂದುಕೊಳ್ಳಿ. ಆದರೆ ಬೇಕಾಗಿರುವುದು ಆಲೋಚನೆಗಳನ್ನು ತಹಬಂದಿಗೆ ತರುವ ತಂತ್ರಗಳು. ಮನಸ್ಸಿನ ಚಲನೆಯ ಮಾರ್ಗವನ್ನು ಬದಲಿಸಿ. ಅದರ ವೇಗವನ್ನು ತಗ್ಗಿಸಿ. ಅದರ ಪ್ರಸ್ತುತ ವೃತ್ತಿಯಿಂದ ನಿವೃತ್ತಿಗೊಳಿಸಿ. ಅದಕ್ಕೆ ಸೂತ್ರವೇ ಸಾವಧಾನ ಅಂದರೆ ಗಮನ.

ನನ್ನ ಗಮನವನ್ನು ಬದಲಿಸುತ್ತೇನೆ. ಈಗಲೇ ವ್ಯಕ್ತಪಡಿಸಬೇಕು ಎಂದು ತೋರುವ ಭಾವನೆಯನ್ನು ಈಗಲೇ ಪ್ರಕಟಿಸದೇ ಮುಂದೂಡುತ್ತೇನೆ. ನನ್ನಲ್ಲಿ ಉಂಟಾಗಿರುವುದು ಈಗ ಭಾವೋದ್ರೇಕ. ಉದ್ರೇಕವು ತಿಳಿಯಾಗುವುದಕ್ಕೆ ಕಾಯುತ್ತೇನೆ. ಭಾವೋದ್ವೇಗಕ್ಕೆ ಒಳಗಾಗದೆ ನನ್ನಲ್ಲಿರುವ ವಿವೇಕಕ್ಕೆ ಕೆಲಸ ಮಾಡಲು ಅವಕಾಶ ಕೊಡುತ್ತೇನೆ. ಈ ಉದ್ವಿಗ್ನ ಮನಸ್ಥಿತಿಗೆ ಕಾರಣ ಏನೇ ಇರಲಿ, ನಾನು ಈ ಪ್ರವಾಹದ ಸೆಳೆತಕ್ಕೆ ಸಿಗುವುದಿಲ್ಲ. ಅದನ್ನು ಎದುರಿಸುವ ಮನೋಬಲ ನನ್ನಲ್ಲಿದೆ. ಈ ಜಗತ್ತಿನಲ್ಲಿ ನನ್ನ ಆಲೋಚನೆಗಳನ್ನು ಗಮನಿಸುವ, ಅವನ್ನು ಸರಿದಾರಿಗೆ ತರುವ ಮತ್ತು ಅದನ್ನು ಬೇಕಾದ ಹಾಗೆ ಪಳಗಿಸುವ ಹಕ್ಕು, ಅಧಿಕಾರ ಮತ್ತು ಸಾಮರ್ಥ್ಯ ಇರುವುದು ನನಗೆ ಮಾತ್ರವೇ. ಈ ಅರಿವಿನ ಹೊಳಹು ನಮಗೆ ಬೇಕಾಗಿ ರುವುದು. ಇದು ಮನೋಬಲದ ಸಾವಧಾನ ಸೂತ್ರ.

ಮನೋಬಲದ ಅರಿವು ಉಂಟಾದರೆ ನಮ್ಮಲ್ಲಿ ಸಾವಧಾನದ ಪ್ರಜ್ಞೆ ಜಾಗೃತವಾಗುತ್ತದೆ. ಮನಸ್ಸಿನ ಯಾವುದೇ ವ್ಯತ್ಯಾಸಗಳಿಗೆ ಅಗತ್ಯ ಈ ಸಾವಧಾನದ ಪ್ರಜ್ಞೆ. ಇದು ನಮ್ಮ ನಡೆ, ನುಡಿ ಮತ್ತು ಪ್ರತಿಕ್ರಿಯಿಸುವ ಬಗೆಯನ್ನು ನಿಧಾನಿಸುತ್ತದೆ.

ಆತಂಕಕ್ಕೆ, ಆತುರಕ್ಕೆ, ಆವೇಶಕ್ಕೆ, ಆಗ್ರಹಕ್ಕೆ; ಈ ಎಲ್ಲಾ ಆಟಾಟೋಪಗಳಿಗೆ ಕಡಿವಾಣವೇ ಸಾವಧಾನದ ಪ್ರಜ್ಞೆ. ಹಾರಾಡದೆ, ಹೋರಾಡದೆ, ಹೂಂಕರಿಸದೆ ಇರಲಾರೆ ಎನ್ನುವ ಹಾಹಾಕಾರದ ಮನಸ್ಸಿಗೆ ಸಾಂತ್ವನವೇ ಸಾವಧಾನ. ಸಾವಧಾನ ಎಂದರೆ ಸಮಾಧಾನ, ಸರಳವಾಗಿ ಹೇಳುವುದಾದರೆ ‘ನಿಧಾನಿಸು, ನಿಧಾನಿಸು’ ಎಂದು ಸಾಮಾನ್ಯವಾಗಿ ಬಳಸುತ್ತಾರೆ. ಹಾಗಾದರೂ, ಈ ದ್ವಿರುಕ್ತಿಯಲ್ಲಿ ನಿಧಾನಿಸುತ್ತಾ ಗಮನಿಸುವುದು ಒಂದು ನುಡಿಗಾದರೆ, ಮತ್ತೊಂದು ನಿಧಾನಿಸು ನಡೆಗೆ. ನಡೆನುಡಿಗಳೆರಡೂ ಸಮಾಧಾನವಾದಲ್ಲಿ ಪೂರ್ಣಪ್ರಜ್ಞೆ ಪ್ರಾಪ್ತಿ.

ಮೇಲಿಂದ ಮೇಲೆ ನಮ್ಮಲ್ಲೇ ಹುಟ್ಟಿ ಹರಿಯುತ್ತಾ ಇತರರಿಗೆ ವರ್ಗಾವಣೆಯಾಗುತ್ತಾ ನಮ್ಮ ಆಲೋಚನೆ ಗಳಿಂದಾಗಿ ಮನಸ್ಸು ಇತರರ ಗಮನವನ್ನು ತನ್ನ ಕಡೆಗೆ ಸಂಪೂರ್ಣ ಸೆಳೆಯಲು ಪ್ರಯತ್ನಿಸುತ್ತದೆ. ಅಪ್ರಬುದ್ಧವಾಗಿ ಮತ್ತು ಅವಿವೇಕದಿಂದ ನಡೆದುಕೊಳ್ಳುವಂತೆ ಮಾಡುತ್ತದೆ. ನಿಯಂತ್ರಣಕ್ಕೆ ಸಿಗದೇ ಹರಿಹಾಯುತ್ತದೆ. ರಕ್ತ ಕುದಿಯುತ್ತದೆ. ಕಣ್ಣೀರು ಹರಿಯುತ್ತದೆ. ಉಸಿರಾಟದ ವೇಗ ಹೆಚ್ಚುತ್ತದೆ. ಕೈ ಕಾಲುಗಳು ನಡುಗುತ್ತವೆ. ಮತ್ತೆ ಅಂತರಂಗದಲ್ಲಿ ನಾಚಿಕೆ ಪಟ್ಟುಕೊಳ್ಳುತ್ತದೆ. ತಾನೇ ತನ್ನನ್ನು ಅಪಮಾನಿಸಿಕೊಂಡಂತೆ ಭಾವಿಸುತ್ತದೆ. ಭಾವನಾತ್ಮಕವಾಗಿಯೂ ಕುಗ್ಗುವ, ಮಾನಸಿಕವಾಗಿ ಗೊಂದಲಕ್ಕೆ ಈಡಾಗುವ, ದೈಹಿಕವಾಗಿಯೂ ಆಯಾಸವಾಗುವಂತಹ ಆಲೋಚನೆಗಳ ಆಟಾಟೋಪಗಳಿವು. ಇದರ ಬಗ್ಗೆ ಪ್ರಜ್ಞಾಪೂರ್ಣವಾದ ಗಮನ ಹರಿಸುವುದೇ, ಆ ಎಲ್ಲಾ ಆಗುಹೋಗುಗಳನ್ನು ಸಾಕ್ಷೀಕರಿಸುವುದೇ ಮೊತ್ತ ಮೊದಲ ಅಗತ್ಯದ ಕೆಲಸ. ಈ ಪೂರ್ಣಪ್ರಜ್ಞೆಗೆ ಮುನ್ನ ಆಗಬೇಕಾಗಿರುವ ಸಾವಧಾನದ ಸಾಕ್ಷಾತ್ಕಾರವನ್ನು ಸಾಧಿಸಲು ಕೆಲವು ತಂತ್ರಗಳಿವೆ.

ಆ ತಂತ್ರದ ಸೂಕ್ಷ್ಮತೆ ಎಂದರೆ, ಒಳಗಿನ ಪ್ರಭಾವ ಹೊರಗಿನ ಚಟುವಟಿಕೆಯನ್ನು ಉಂಟುಮಾಡುತ್ತದೆ. ಒಳಗಿನ ಪ್ರಭಾವವು ಅಮೂರ್ತ, ಕೈಗೆಟುಕದು. ಆದರೆ ಚಟುವಟಿಕೆ ಭೌತಿಕವಾದದ್ದು ಅಥವಾ ಶಾರೀರಿಕವಾದದ್ದು. ಅದು ಕೈಗೆಟುಕುವುದರಿಂದ, ಅದರಿಂದ ಒಳಗಿನ ಪ್ರಭಾವವನ್ನು ತಗ್ಗಿಸುವುದು.

ನೋಡಿ, ಮನಸ್ಸಿನ ವಿಕೋಪದಿಂದ ಉಸಿರಾಟದಲ್ಲಿ ಏರಿಳಿತ ಉಂಟಾಗುವುದು. ಮನಸ್ಸಿನದು ಅಮೂರ್ತ ಚಟುವಟಿಕೆ. ಉಸಿರಾಟ ಕಾಣುವ ಚಟುವಟಿಕೆ. ಈಗ ಉಸಿರಾಟದ ಕಡೆಗೆ ಗಮನ ಹರಿಸಬೇಕು. ವೇಗವಾಗಿ ತೀವ್ರಗತಿಯಲ್ಲಿ ಆಗುತ್ತಿರುವ ಉಸಿರಾಟವನ್ನು ನಿಧಾನಗೊಳಿಸುವ ಪ್ರಯತ್ನ ಮಾಡುವುದು. ಉಸಿರಾಟದ ಕಡೆಗೆ ಎಚ್ಚರವಹಿಸುವುದು. ಉಸಿರಾಟದಲ್ಲಿ ವೇಗವಾಗಿ ದಬ್ಬಲ್ಪಡುತ್ತಿರುವ ಗಾಳಿಯನ್ನು ನಿಧಾನವಾಗಿ ಬಿಡುವುದು. ಹಾಗೆಯೇ ನಿಧಾನವಾಗಿ ಎಳೆದುಕೊಳ್ಳುವುದು. ಉಸಿರಾಟದ ಗತಿಯ ಕಡೆಗೆ ಗಮನ ಕೊಡುವುದು. ಒಂದು ಸುಂದರ ಮತ್ತು ಪರಿಮಳಭರಿತ ಹೂವಿನ ಗುಚ್ಛದ ಮಧುರಗಂಧವ ಆನಂದಿಸುವಂತೆ ನಿಧಾನವಾಗಿ ಮೆಚ್ಚಿನ ಹೂವಿನ ಸುವಾಸನೆಯನ್ನು ಎಳೆದುಕೊಳ್ಳುವಂತೆ ಉಸಿರನ್ನು ಎಳೆದುಕೊಳ್ಳುವುದು.

ಉಸಿರಾಟದ ಒಳ ಹೊರಗಿನ ಚಲನೆಯನ್ನು ಪ್ರಶಾಂತ ಸಮುದ್ರದ ದಡದಲ್ಲಿ ಬಂದು ಹೋಗುತ್ತಿರುವ ಅಲೆಗಳಂತೆ ನೋಡಿ. ಗಾಳಿಯೇ ಒಂದು ಬೆಳಕಿನಂತಾಗಿ ಅದನ್ನು ಮೂಗಿನಿಂದ ಎಳೆದುಕೊಂಡು ಅದೇ ಬೆಳಕನ್ನು ಮತ್ತೆ ಹೊರಗೆ ಮರಳಿಸುವಂತೆ ಉಸಿರಾಡಿ. ಉಸಿರಾಟದಲ್ಲಿ ಒಳಗೆ ಪ್ರವೇಶಿಸುವ ಆ ಜೀವಾನಿಲ ಶ್ವಾಸಕೋಶವನ್ನು ತುಂಬಿ ದೇಹವನ್ನೆಲ್ಲಾ ಆವರಿಸುವಂತೆ ಭಾಸವಾಗಲಿ. ಉಸಿರಾಟ ಸುಂದರ! ನಮ್ಮ ಜೀವಂತಿಕೆಯ ಜೈವಿಕ ಸಂಕೇತ. ಈ ಉಸಿರಾಟವನ್ನು ಪ್ರಜ್ಞಾಪೂರ್ವಕವಾಗಿ ಆನಂದಿಸಲು ರೂಢಿಸಿಕೊಂಡಷ್ಟೂ ಸಾವಧಾನದ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಿದ್ದೇವೆಂದೇ ಅರ್ಥ.

ಮನಸ್ಸು ತೀವ್ರವಾಗುತ್ತಿದ್ದಂತೆ, ಅದಕ್ಕೆ ಕಾರಣವಾಗಿರುವ ಆಲೋಚನೆಗಳ ವಿಷಯಗಳಾಚೆಗೆ ಕಣ್ಣು, ಕಿವಿ, ಮೂಗು, ಚರ್ಮ, ನಾಲಿಗೆಯ ಗಮನವನ್ನು ಹರಿಸಿ. ಕೋಣೆಯಲ್ಲಿನ ಒಗೆದ ಬಟ್ಟೆಯ ಸಾಬೂನಿನ ವಾಸನೆಯನ್ನು ಮೂಗು ಗ್ರಹಿಸುವುದೇ, ನೋಡಿ. ಹೂವಿನ ಅಥವಾ ಗಿಡದ ಪರಿಮಳವಿದೆಯೇ, ನೋಡಿ.

ಎದುರಿಗೆ ನಿಂತು ವಾದಿಸುತ್ತಿರುವವರ ಮಾತನ್ನು ಬಿಟ್ಟು ರಸ್ತೆಯಲ್ಲಿ ಸಾಗುತ್ತಿರುವ ವಾಹನದ ಸದ್ದು ಕೇಳಿ. ಅದು ಮೋಟಾರ್ ಬೈಕೋ, ಕಾರೋ, ಮೇಲೆ ಹಾರಾಡುತ್ತಿರುವ ವಿಮಾನವೋ? ಯಾವುದು? ಅಥವಾ ಮಹಡಿ ಮೇಲೆ ಟೊಕಟೊಕ ಕುಟ್ಟುತ್ತಿರುವುದು ಏನು? ಅಡುಗೆಗೆ ಶುಂಠಿ ಜಜ್ಜುತ್ತಿದ್ದಾರೆಯೇ? ಮಕ್ಕಳು ಆಡುತ್ತಿದ್ದಾರೆಯೇ?

ಅಲ್ಲಿರುವ ಹಣ್ಣೋ, ಸಿಹಿಯೋ, ತಿನಿಸೋ ಯಾವುದನ್ನೋ ಕೈ ತನಗೆಟುಕಿಸಿಕೊಳ್ಳಲಿ. ಬೈಯುವ ಬಾಯಿ ಬಿಸ್ಕತ್ ತಿನ್ನಲು ಪ್ರಾರಂಭಿಸಿದರೆ! ಅದು ಸಿಹಿಯೋ, ಉಪ್ಪೋ, ಹುಳಿಯೋ, ಸಪ್ಪೆಯೋ? ಯಾವ ಸಾಮಗ್ರಿಗಳನ್ನು ಬಳಸಿದ್ದಾರೆ? ಇದು ತಯಾರಾಗಿರುವುದು ಎಲ್ಲಿ? ಈ ಬಿಸ್ಕತ್ತಿನ ಪ್ಯಾಕಿಂಗಿನ ಕಲರ್ ಕೆಂಪೋ, ಹಳದಿಯೋ? ಇದರ ಬದಲು ಬೇರೆ ಬಣ್ಣದ್ದಾಗಿದ್ದರೆ ಹೇಗಿರುತ್ತಿತ್ತು?

ಇಂದಿನ ಹವಾಮಾನ ಹೇಗಿದೆ? ಚಳಿಯೇ, ಸೆಕೆಯೇ? ಕುಳಿತಿರುವ ಭಾಗವು ಎಷ್ಟರಮಟ್ಟಿಗೆ ಕುರ್ಚಿಯ ಮೇಲೆ ಒತ್ತಿದೆ? ನಾನು ಹಾಗೆ ಕುಳಿತಿರುವಂತಹ ಭಂಗಿಯಲ್ಲಿ ಇರುವಾಗಲೇ ಮೆಲ್ಲನೆ ಕುರ್ಚಿಯನ್ನು ಹಿಂದಕ್ಕೆ ಎಳೆದರೆ ಹಾಗೇ ಕುಳಿತಿರಬಲ್ಲೆನೇ?

ಏನಿಲ್ಲ, ಮನಸ್ಸು ಸಾರಥಿಯಂತೆ ನಮ್ಮ ಇಂದ್ರಿಯಗಳೆಂಬ ಕುದುರೆಗಳ ಲಗಾಮನ್ನು ಹಿಡಿದುಕೊಂಡು ತನ್ನ ಹತೋಟಿಯಲ್ಲಿ ಇಟ್ಟುಕೊಂಡಿರುತ್ತದೆ. ಕುದುರೆಗಳು ಈಗ ಸಾರಥಿಯ ಗಮನವನ್ನು ಸೆಳೆಯುವ ಪ್ರಯತ್ನ ಮಾಡಬೇಕು, ಅಷ್ಟೇ!

ಬೇಡದ ಅಥವಾ ಮಾರಕ ಆಲೋಚನೆಗಳನ್ನು ಅಗತ್ಯದ ಅಥವಾ ಪೂರಕ ಆಲೋಚನೆಗಳ ಕಡೆಗೆ ಮಾರ್ಗಪಲ್ಲಟ ಮಾಡಿಸುವುದಕ್ಕೆಯೇ ಸಾವಧಾನದ ಸೂತ್ರ ಬೇಕಿರುವುದು.

Writer - ವಾರ್ತಾಭಾರತಿ

contributor

Editor - Musaveer

contributor

Byline - ಯೋಗೇಶ್ ಮಾಸ್ಟರ್,

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು