ಮನೆಯೊಳಗಣ ಕಿಚ್ಚು

Update: 2024-02-04 04:38 GMT

ನನ್ನ ಮನಸ್ಸೇ ಸರಿ ಇಲ್ಲ. ಏನೇನೋ ಆಲೋಚನೆಗಳು ಬರುತ್ತಿರುತ್ತವೆ. ಬೇಡ ಬೇಡವೆಂದರೂ ಯೋಚನೆಗಳು ತಾವಾಗಿಯೇ ಬರುತ್ತಿರುತ್ತವೆ. ಯಾವುದ್ಯಾವುದೋ ಹಿಂದಿನ ವಿಷಯಗಳೆಲ್ಲಾ ನೆನಪಿಗೆ ಬಂದು ಬೇಸರ, ದುಃಖವಾಗುತ್ತಿರುತ್ತದೆ, ಹೀಗಾಗಿಬಿಟ್ಟರೆ ಏನು ಗತಿ, ಹಾಗಾದರೆ ಏನು ಮಾಡುವುದು ಎಂದು ಭವಿಷ್ಯದ ಬಗ್ಗೆ ಕೊರಗುತ್ತಾ ಆತಂಕಕ್ಕೆ ಒಳಗಾಗುವಂತೆ ಆಗುತ್ತದೆ. ಇವುಗಳ ಜೊತೆ ಜೊತೆಗೆ ಯಾವುದೋ ವ್ಯಕ್ತಿಯನ್ನು ನೋಡಲು, ಜೊತೆಗಿರಲು ಇಷ್ಟವೇ ಆಗುವುದಿಲ್ಲ, ಮತ್ಯಾರೋ ವ್ಯಕ್ತಿಯನ್ನು ಬಿಟ್ಟಿರಲು ಆಗುವುದೇ ಇಲ್ಲ ಎಂಬ ನಂಟಿನ ಆಕರ್ಷಣೆ ಮತ್ತು ವಿಕರ್ಷಣೆಗಳು ಬೇರೆ. ಕೆಲವು ವಸ್ತುಗಳನ್ನು, ವಿಷಯಗಳನ್ನು ಮತ್ತು ವ್ಯಕ್ತಿಗಳನ್ನು ಕಂಡರೆ ಸೆಳೆತ, ಮತ್ತೆ ಕೆಲವನ್ನು ಕಂಡರೆ ಅಷ್ಟೇ ಕಿರಿಕಿರಿ, ಅಲರ್ಜಿ.

ನಮ್ಮಲ್ಲಿ ಮಧುರವಾದ ಭಾವ ಮೂಡಿದಾಗ ಸಂತೋಷವಾಗುತ್ತದೆ, ಅದರಿಂದ ಒತ್ತಡ ರಹಿತವಾದ ಮನಸ್ಥಿತಿ ಉಂಟಾಗುತ್ತದೆ. ತೃಪ್ತಿ ಮತ್ತು ನೆಮ್ಮದಿ ಎನಿಸುತ್ತದೆ. ಅದೇ ರೀತಿ ಕಿರಿಕಿರಿ ಇರುವಾಗ ಮನಸ್ಸಿನಲ್ಲಿ ಭಾರ, ಒತ್ತಡ, ಅಸಂತೋಷ, ಅತೃಪ್ತಿ, ಅಸಮಾಧಾನ ಮತ್ತು ಅಶಾಂತಿ ಉಂಟಾಗುತ್ತದೆ. ನೆಮ್ಮದಿಯಿಂದ ಇರಬೇಕು, ಪ್ರಶಾಂತವಾಗಿರಬೇಕು ಎಂದೇನೋ ಜನರು ಬಯಸುವರು. ಆದರೆ ಅವರು ಅದನ್ನು ಪಡೆಯುವುದಕ್ಕಾಗಿ ಅಶಾಂತಿಯ, ಸಮಾಧಾನದ ದಾರಿಯನ್ನೇ ಆಯ್ದುಕೊಳ್ಳುವರು. ಇದು ಸಾಮಾನ್ಯ ಜನರ ವಿಚಿತ್ರ ಮತ್ತು ವಿಪರ್ಯಾಸ.

ಉದಾಹರಿಸುವುದಾದರೆ, ಇಬ್ಬರ ನಡುವೆ ಮನಸ್ತಾಪ ಬಂದಿತೆಂದುಕೊಳ್ಳಿ. ಅವರಿಬ್ಬರು ಅದರ ಬಗ್ಗೆ ಮಾತಾಡುವಾಗ ತಾವು ಕೇಳುವುದರ ಬದಲು ಹೇಳುವುದಕ್ಕೇ ಹಾತೊರೆಯುತ್ತಾರೆ. ತಾವು ಗೆಲ್ಲಬೇಕು, ಮತ್ತೊಬ್ಬರು ಮಣಿಯಬೇಕು ಎಂದು ಹಟ ಹಿಡಿಯುತ್ತಾರೆ. ‘‘ನಿನ್ನಿಂದ ನನ್ನ ಮನಸ್ಥಿತಿ ಹಾಳಾಯ್ತು, ನೆಮ್ಮದಿ ಹಾಳಾಯ್ತು’’ ಎಂದು ಪರಸ್ಪರ ದೂರಿಕೊಳ್ಳುತ್ತಿರುತ್ತಾರೆ. ಇಬ್ಬರೂ ಗೆಲ್ಲುವ ಹಟ ತೊಡುವ ಕಾರಣದಿಂದ ಜಗ್ಗಾಟ ಮುಂದುವರಿಯುತ್ತದೆ. ಒಂದು ವೇಳೆ ಅವರಿಗೆ ಮಣಿದರೆ ತಾನು ಸೋತ ಭಾವದಲ್ಲಿ, ಅಪಮಾನಿತರಾಗುವ ಭಾವದಲ್ಲಿ ಕುಗ್ಗುತ್ತಾರೆ. ಈ ಕುಸಿತ ತನ್ನ ಎದುರಾಳಿಯ ಮುಂದೆ ಮಂಡಿಯೂರಿದ ಭಾವದಲ್ಲಿ ನರಳುತ್ತದೆ.

ಸರಿ, ಆದರೆ ಒಬ್ಬರ ವಿಷಯವೇ ಅಗತ್ಯವೂ, ಸರಿಯೂ ಇದ್ದು ಮತ್ತೊಬ್ಬರಿಗೆ ಅದರ ಅರಿವು ಇಲ್ಲದೇ ಇರುವಾಗ ಮಾಡುವುದಾದರೂ ಏನು? ಅವರು ತಮ್ಮ ಮಾತನ್ನು ಕೇಳಿಸಿಕೊಳ್ಳಲು, ತಮ್ಮನ್ನು ಮತ್ತು ತಮ್ಮ ವಿಷಯವನ್ನು ಒಪ್ಪಲು ಸಿದ್ಧವೇ ಇಲ್ಲದಿರುವಾಗ ಏನು ಮಾಡಬೇಕು? ತಮ್ಮನ್ನು ಮಣಿಸಲು, ತಮ್ಮ ಅಧೀನಕ್ಕೆ ತೆಗೆದುಕೊಳ್ಳಲು, ತಮ್ಮನ್ನು ತಮ್ಮ ಇಚ್ಛೆಯಂತೆ ನಡೆಸಿಕೊಳ್ಳಲು ಅಥವಾ ಉಪಯೋಗಿಸಿಕೊಳ್ಳಲು ಪ್ರಯತ್ನಿಸುವಾಗ ಏನು ಮಾಡಬೇಕು? ಇದು ಸಾಮಾನ್ಯವಾಗಿ ಏಳುವ ಪ್ರಶ್ನೆ.

ವಿಷಯ ಅದೇನೇ ಇರಲಿ, ಮೊದಲು ಈ ಹೊತ್ತಿನಲ್ಲಿ ಎದ್ದಿರುವ ಆಗ್ರಹ ಮತ್ತು ಆವೇಶದ ಸನ್ನಿವೇಶವನ್ನು ತಿಳಿಗೊಳಿಸಬೇಕೆಂಬ ಆಲೋಚನೆಯೇ ಜಾಣ ನಿರ್ಧಾರ. ಹಾಗಾಗಿ ಈ ಜಾಣರು ಹೊತ್ತಿ ಉರಿಯುವ ಕಿಚ್ಚು ಮತ್ತಷ್ಟು ಉರಿದೇಳದಿರಲು ಇಂಧನ ಒದಗಿಸುವುದಿಲ್ಲ. ದೈಹಿಕವಾಗಿಯಾದರೂ, ಮಾನಸಿಕವಾಗಿಯಾದರೂ, ಭಾವನಾತ್ಮಕವಾಗಿಯಾದರೂ ತಳಮಳಕ್ಕೆ ಒಳಗಾಗದೆ ಹತ್ತು ಹೆಜ್ಜೆ ಹಿಂದೆ ಸರಿಯುವುದನ್ನೇ ಆಯ್ದುಕೊಳ್ಳುತ್ತಾರೆ.

ಎರಡನೆಯ ನಡೆ ಎಂದರೆ ಕೋಪದಿಂದ, ಆವೇಶ ಮತ್ತು ಆಗ್ರಹದಿಂದ ನಡೆದುಕೊಳ್ಳುವವರಿಗೆ ಅದೇ ಕೋಪ ಮತ್ತು ಆವೇಶದಿಂದ ಪ್ರತಿಕ್ರಿಯಿಸದಿರಲು ನಿರ್ಧರಿಸುತ್ತಾರೆ.

ಮೂರನೆಯದಾಗಿ ಎದುರಿನ ವ್ಯಕ್ತಿಯ ವರ್ತನೆಯ ಕಾರಣ ಮತ್ತು ವಿಷಯದ ಆಯಾಮವನ್ನು ತಿಳಿಯಲು ಪ್ರಯತ್ನಿಸುತ್ತಾರೆ.

ನಾಲ್ಕನೆಯದಾಗಿ ಅಸಹಾಯಕವಾಗಿ ಮತ್ತು ಹತಾಶೆಯಿಂದ ಆವೇಶಕ್ಕೆ ಒಳಗಾಗಿರುವ ಅವರಿಗೆ ತನ್ನ ನೆರವು ಬೇಕಿದೆ ಎಂದು ಕರುಣೆಯ ಕಣ್ಣುಗಳಿಂದ ನೋಡಲು ಸಾಧ್ಯವಾಗಿಸಿಕೊಳ್ಳುತ್ತಾರೆ.

ಐದನೆಯದಾಗಿ ಸಂಘರ್ಷಕ್ಕೆ ಕಾರಣವಾಗಿರುವ ವಿಷಯವನ್ನು ಆಗಲೇ ಬಗೆ ಹರಿಸುವ ಹಟ ಮಾಡುವ ಬದಲು ಸಮಯ ತೆಗೆದುಕೊಳ್ಳುತ್ತಾರೆ.

ಆರನೆಯದಾಗಿ ತಮ್ಮ ಬಗ್ಗೆ ಒಂದಿಷ್ಟು ಗಮನಿಸಿಕೊಳ್ಳುತ್ತಾರೆ. ಇತರರು ತನ್ನನ್ನು ಒಪ್ಪದೇ ಇದ್ದರೆ ತನಗೆ ಬೇಸರವಾಗುತ್ತದೆಯೇ? ಅಥವಾ ಆತ್ಮಾಭಿಮಾನಕ್ಕೆ ಭಂಗವಾಗುತ್ತಿದೆಯೇ? ನಾನು ನನ್ನ ಆಲೋಚನೆಗಳನ್ನು ಮುನ್ನೆಲೆಗೆ ತರಲು ಒತ್ತಾಯ ಮಾಡುತ್ತಿದ್ದೇನೆಯೇ? ಇತರರ ಅಗತ್ಯಗಳನ್ನು ಪರಿಗಣಿಸದೇ ಬರಿಯ ನನ್ನ ಅಗತ್ಯಗಳನ್ನು ಮಾತ್ರ ನಾನು ಆಲೋಚಿಸುತ್ತಾ ಆತ್ಮಕೇಂದ್ರಿತವಾಗಿದ್ದೇನೆಯೇ? ಅದೇ ರೀತಿ ನನ್ನ ಹಕ್ಕು ಮತ್ತು ಅಧಿಕಾರಗಳನ್ನು ಹೊಂದಿರುವಂತೆ ಅವರು ಹೊಂದಿರುವ ಹಕ್ಕು ಮತ್ತು ಅಧಿಕಾರಗಳನ್ನು ನಾನು ನಿರ್ಲಕ್ಷಿಸುತ್ತಿದ್ದೇನೆಯೇ? ನಾನು ನನ್ನ ಅಹಂಕಾರದ ಕಾರಣದಿಂದ ಇತರರನ್ನು ಕೆಳಮಟ್ಟಕ್ಕೆ ತಳ್ಳುತ್ತಿದ್ದೇನೆಯೇ? ಇತರರು ಮಾತಾಡುವುದನ್ನು ಪೂರ್ಣಗೊಳಿಸುವುದಕ್ಕೆ ಬಿಡದೆ ನಾನು ಮಧ್ಯ ಪ್ರವೇಶಿಸಿ ನನ್ನ ಮಾತನ್ನು ಕೇಳಿಸಲು ಆತುರಿಸುತ್ತಿದ್ದೇನೆಯೇ; ಇಂತಹ ಆತ್ಮಾವಲೋಕನದ ಅಂಶಗಳು ಇತರ ವ್ಯಕ್ತಿಗಳ ಜೊತೆಗೆ ಸಂಘರ್ಷಕ್ಕೆ ಇಳಿಯದಂತೆ ಕಾಪಾಡುತ್ತವೆ.

ಏಳನೆಯದಾಗಿ, ಅವರ ಅಗತ್ಯಗಳನ್ನು ಗುರುತಿಸುವುದು, ನಮ್ಮ ಭಾವನೆಗಳನ್ನು ಉದ್ವೇಗವಿಲ್ಲದೆ ಪ್ರದರ್ಶಿಸುವುದು, ಪ್ರಾಮಾಣಿಕವಾಗಿ ಅವರ ಮಾತುಗಳನ್ನು ಪೂರ್ವ ನಿರ್ಧಾರಗಳಿಲ್ಲದೆ ಆಲಿಸುವುದು, ಆ ವ್ಯಕ್ತಿಯನ್ನು ಮತ್ತು ಅವರ ಅಗತ್ಯಗಳನ್ನು ಪ್ರಾಮಾಣಿಕವಾಗಿ ಗೌರವಿಸುವುದು, ಆ ವ್ಯಕ್ತಿಯನ್ನು ಸೋಲಿಸಬೇಕು ಅಥವಾ ನಾನು ಗೆಲ್ಲಬೇಕು ಎಂಬ ಹಟವಿಲ್ಲದ ಧೋರಣೆಯನ್ನು ನಮ್ಮದಾಗಿಸಿಕೊಳ್ಳುವುದು. ಇಷ್ಟು ಆಗಲೇ ಬೇಕಾಗಿರುವುದು ನನ್ನ ಕಡೆಯಿಂದ.

ಆದರೆ ಸಮಸ್ಯೆ ಇರುವುದು, ನನ್ನ ಎದುರಾಳಿಯೂ ಹಾಗೆ ಮಾಡಬೇಕಲ್ಲವೇ? ನಾನು ಮಾತ್ರ ಸುಮ್ಮನಾಗಬೇಕಾ? ಎಂದು ಯೋಚಿಸುವಂತಹ ಮನಸ್ಸುಗಳಲ್ಲಿ. ಇಂತಹ ಮನಸ್ಸುಗಳು ಮತ್ತೆ ಅಹಂಕಾರದ ತಾಂಡವದಲ್ಲಿಯೇ ತೊಡಗುತ್ತವೆ. ಕ್ರಿಯೆಗಳು ಉಂಟಾಗುವ ಪ್ರತಿಕ್ರಿಯೆಗಳನ್ನು ಅಧೀನದಲ್ಲಿಟ್ಟುಕೊಳ್ಳುತ್ತವೆ. ನಮ್ಮ ವರ್ತನೆಗಳು ಅವರಲ್ಲಿ ಪ್ರತಿವರ್ತನೆಗಳನ್ನು ಉಂಟುಮಾಡುತ್ತವೆ. ಬಹಳ ಮುಖ್ಯವಾಗಿ ಅವರಲ್ಲಿ ಯಾವ ಪರಿವರ್ತನೆಯನ್ನು ಉಂಟುಮಾಡುತ್ತದೆಯೋ ಇಲ್ಲವೋ, ರೂಢಿಗೊಳಿಸಿಕೊಳ್ಳುವ ಈ ಮನೋಗತಿ ನಮಗಂತೂ ನೆಮ್ಮದಿಯನ್ನೂ ಮತ್ತು ಒತ್ತಡರಹಿತವಾದ ಹಗುರಭಾವವನ್ನು ನೀಡುತ್ತಾ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.

ನಮ್ಮ ನಮ್ಮ ಮನಸ್ಸಿನ ಮೇಲೆ ಕರುಣೆ ತೋರುವುದಕ್ಕಾದರೂ ಅವರ ಮೇಲೆ ಕರುಣೆ ತೋರಬೇಕು. ಇದು ಸೂತ್ರ.

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೇಶ್ ಮಾಸ್ಟರ್,

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು