ಪರಮಾತಂಕ

Update: 2023-10-01 04:28 GMT

ಹಿಂದಿನದರ ನೆನಪಿನ ಒತ್ತಡವೇ ಖಿನ್ನತೆ. ಮುಂದಿನದರ ಭಯವೇ ಆತಂಕ. ಸಾಮಾನ್ಯವಾಗಿ ಮನಸ್ಸಿಗೆ ಸದಾ ಕಾಡುವ ಎರಡು ವಿಷಯಗಳೆಂದರೆ ಒತ್ತಡ ಮತ್ತು ಭಯ ಹಾಗೂ ಈ ಭಯಗಳ ಒತ್ತಡವೇ ಆತಂಕಕ್ಕೆ ಕಾರಣವಾಗುವುದು. ಒತ್ತಡದಲ್ಲಿಯೂ ಬೇಕಾದ ಒತ್ತಡ ಮತ್ತು ಬೇಡದ ಒತ್ತಡ ಎಂಬುದುಂಟು. ಬೇಕಾದ ಒತ್ತಡವು ರಚನಾತ್ಮಕ ಮತ್ತು ಉತ್ಪಾದಕ ಕೆಲಸಗಳನ್ನು ಮಾಡಿಸಿದರೆ, ಸಂತೋಷ ಮತ್ತು ತೃಪ್ತಿಯನ್ನು ಉಂಟು ಮಾಡಿದರೆ, ಅದೇ ರೀತಿ ಬೇಡದ ಒತ್ತಡವು ನಕಾರಾತ್ಮಕವಾದ, ಅನುತ್ಪಾದಕವಾದ ಕೆಲಸಗಳನ್ನು ಮಾಡಿಸುತ್ತವೆ ಹಾಗೂ ದುಃಖ, ನಿರಾಸೆ ಮತ್ತು ಬೇಸರವನ್ನು ಹುಟ್ಟಿಸುತ್ತವೆ. ಬೇಕಾದ್ದು ನಲಿವು, ಬೇಡದ್ದು ನೋವು. ಸಕಾರಾತ್ಮಕ ಮತ್ತು ನಕಾರಾತ್ಮಕ ಎಂದರೂ ಅಷ್ಟೇ. ನಲಿವನ್ನು ಉಂಟುಮಾಡುವ ಬೇಕಾದದ್ದೇ ಸಕಾರಾತ್ಮಕ, ನೋವನ್ನು ಉಂಟುಮಾಡುವ ಬೇಡವಾದದ್ದೇ ನಕಾರಾತ್ಮಕ.

ಭಯ ಎಂದರೆ ಯಾವಾಗಲೂ ನಕಾರಾತ್ಮಕವೇನಲ್ಲ. ಎಷ್ಟೋ ಬಾರಿ ಎಚ್ಚರದಿಂದ ಹೆಜ್ಜೆ ಇಡಲು, ಅಪಾಯ ತಂದುಕೊಳ್ಳದಿರಲು, ತಮಗೆ ಹಾನಿಯಾಗದಂತೆ ನೋಡಿಕೊಳ್ಳಲು ಭಯ ಎನ್ನುವುದು ಎಚ್ಚರಿಕೆಯಾಗಿ ಕೆಲಸ ಮಾಡುತ್ತದೆ. ಆದರೆ, ತಮ್ಮ ಭಯವು ಸಕಾರಣವಾಗಿದೆಯೋ, ವಿನಾಕಾರಣವಾಗಿದೆಯೋ ಎಂಬುದನ್ನು ನೋಡಿಕೊಳ್ಳಬೇಕು. ಸಕಾರಣವಾಗಿರುವುದು ಎಚ್ಚರಿಕೆಯ ಪ್ರಜ್ಞೆಯನ್ನು ಪ್ರಚೋದಿಸಿದರೆ, ವಿನಾಕಾರಣವು ಆತಂಕವನ್ನು ಹುಟ್ಟಿಸುತ್ತದೆ.

ಎಲ್ಲಾ ಆತಂಕಗಳೂ ಸಮವಾಗಿ ಹುಟ್ಟುವವೇನಲ್ಲ. ಅಥವಾ ಒಂದೇ ಮೂಲದಿಂದಾಗಿರುವವೂ ಅಲ್ಲ. ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಮೂರು ಬಗೆಯ ಆತಂಕಗಳನ್ನು ಗುರುತಿಸುತ್ತಾರೆ. ಅವು; ನೈತಿಕತೆಯ ಆತಂಕ, ನರಸಂಬಂಧಿ ಆತಂಕ ಮತ್ತು ನಿಜಾಂಶಗಳ ಆತಂಕ.

ತಾನೇ ನೈತಿಕತೆಯನ್ನು ಎಲ್ಲಿ ಮೀರಿಬಿಡುತ್ತೇನೋ ಎಂಬ ಕಳವಳ ಮತ್ತು ಭಯ. ಸಾಮಾನ್ಯವಾಗಿ ಸಮಾಜವು ಯಾವುದನ್ನು ಒಪ್ಪಿತ ಮತ್ತು ಯಾವುದನ್ನು ಸಲ್ಲದ್ದು ಎಂದು ಗೆರೆ ಎಳೆದಿರುತ್ತದೆಯೋ ಅಂತಹ ವಿಷಯಗಳು ವ್ಯಕ್ತಿಯ ಮನಸ್ಸಿನಲ್ಲಿ ಸಾಮಾನ್ಯವಾಗಿ ಬಯಕೆಗಳ ಅಥವಾ ಆಕರ್ಷಣೆ ಅಥವಾ ಕುತೂಹಲಗಳ ರೂಪದಲ್ಲಿರುತ್ತದೆ. ಯಾವುದೇ ಹುಟ್ಟುವ ಬಯಕೆಯು, ಆಕರ್ಷಣೆಯು ಮತ್ತು ಕುತೂಹಲವು ತಾನು ತೃಪ್ತವಾಗಬೇಕೆಂದೇ ತೀವ್ರವಾಗಿ ಹಂಬಲಿಸುತ್ತಿರುತ್ತದೆ. ಆದರೆ ಕುಟುಂಬ ಮತ್ತು ಸಮಾಜದಲ್ಲಿ ನಿಯಮದ ಚೌಕಟ್ಟು ಅಥವಾ ನೀತಿಯ ಕಟ್ಟುಪಾಡಿಗೆ ಒಳಗಿರುವಂತಹ ಅನಿವಾರ್ಯತೆ ಇರುವುದರಿಂದ ಮನಸ್ಸು ಸಹಜವಾಗಿ ಒತ್ತಡಕ್ಕೆ ಒಳಗಾಗಿರುತ್ತದೆ. ಈ ಒತ್ತಡವು ಆಂತರಿಕವಾಗಿ ತೀವ್ರವಾದಂತೆ ತಾನು ನಿಯಂತ್ರಣವನ್ನು ಎಲ್ಲಿ ಮೀರಿಬಿಡುತ್ತೇನೆಯೋ ಎಂಬ ಆತಂಕ ವ್ಯಕ್ತಿಗೆ ಉಂಟಾಗುತ್ತದೆ. ಎಲ್ಲಿ ತನ್ನ ಲೈಂಗಿಕ ಬಯಕೆ ತನ್ನ ನಿಯಂತ್ರಣವನ್ನು ಕಳೆದುಕೊಂಡು ನಿರ್ಬಂಧದ ಪ್ರಕಾರ ತಪ್ಪು ಮಾಡಿಬಿಡುವೆನೋ ಎಂಬ ಆತಂಕ ಅಂತಹುದರಲ್ಲಿ ಒಂದು. ಅದೇ ರೀತಿ ತಾನೆಲ್ಲಿ ಕೋಪದಿಂದ ಕೊಲೆಯೇ ಅಥವಾ ಇನ್ನಾವುದಾದರೂ ಘೋರ ಕೃತ್ಯಗಳನ್ನು ಮಾಡಿಬಿಟ್ಟರೆ ಎಂಬ ಆತಂಕ, ದೇವರ ಪೂಜೆಯೋ ಅಥವಾ ಇನ್ನಾವುದಾದರೂ ಪವಿತ್ರವಾದ ಕೆಲಸ ಮಾಡುವಾಗ ತಾನೇನಾದರೂ ಅಪವಿತ್ರವಾದ ಅಥವಾ ಅಶ್ಲೀಲವಾದ ಕೆಲಸ ಮಾಡಿಬಿಟ್ಟರೆ ಎಂಬವ ಆತಂಕವೇ ಮೊದಲಾದ ತಳಮಳದ ಜೊತೆಗಿನ ಅಂಜಿಕೆಗಳಿರುತ್ತವೆ. ಇದು ಬರೀ ಸಮಾಜದ್ದು ಮಾತ್ರವಲ್ಲ. ತಾನೇ ವಿಧಿಸಿಕೊಂಡಿರುವ ನೈತಿಕತೆಯನ್ನು ಉಲ್ಲಂಘಿಸುವ ಆತಂಕ ಕೂಡಾ ಇರಬಹುದು.

ಇನ್ನು ನರಸಂಬಂಧಿತ ಆತಂಕಗಳು ನಾನಾ ಸ್ವರೂಪಗಳಲ್ಲಿ ಕಾಣುತ್ತವೆ. ಕೆಲವೊಮ್ಮೆ ಮೆದುಳಿನಲ್ಲಿನ ರಾಸಾಯನಿಕ ಸ್ರವಿಸುವಿಕೆಯಲ್ಲಿ ಉಂಟಾಗುವ ಏರುಪೇರುಗಳಿಂದಲೂ ಆತಂಕ ಕಾಡಬಹುದು. ಈ ಆತಂಕವು ದೈಹಿಕ ರೂಪದಲ್ಲಿ ಕೂಡಾ ಕಾಣಿಸುವುದುಂಟು. ವಿಪರೀತವಾದ ಆಲೋಚನೆಗಳು, ಅನುಚಿತವಾಗಿ ಮಾತಾಡುವುದು ಅಥವಾ ವರ್ತಿಸುವುದು, ಅದಕ್ಕೆ ಶಿಕ್ಷೆ ವಿಧಿಸಿಕೊಳ್ಳುವಂತೆ ತಾವೇ ವರ್ತಿಸುವುದು; ಹೀಗೆ ಹಲವು ವಿನಾಕಾರಣವಾಗಿ ಆತಂಕಕ್ಕೆ ಒಳಗಾಗುವಂತಹ ಸನ್ನಿವೇಶಗಳನ್ನು ತಾವೇ ಸೃಷ್ಟಿಸಿಕೊಳ್ಳುತ್ತಾರೆ.

ಇನ್ನು ನಿಜಾಂಶಗಳ ಆತಂಕವೆಂದರೆ, ತಮ್ಮ ಸುತ್ತಮುತ್ತ ಇರುವ, ಕಾಣುವ, ಸಂಭವಿಸಬಹುದಾದ ವಿಷಯಗಳ ಬಗ್ಗೆ ಆತಂಕವನ್ನು ಹೊಂದುವುದು. ಅಪರಿಚಿತ ನಾಯಿ ಎಲ್ಲಿ ಕಚ್ಚಿಬಿಡುವುದೋ ಎಂದು ಹೆದರುವುದು, ನೀರಿನ ಹೊಳೆಯಲ್ಲಿ ಪಾಚಿ ಕಟ್ಟಿರುವ ಬಂಡೆಯ ಮೇಲೆ ಹೋದರೆ ಎಲ್ಲಿ ಕಾಲು ಜಾರಿ ಬಿದ್ದು ಕೊಚ್ಚಿ ಹೋಗುವೆನೋ ಎಂದು ಆತಂಕಪಡುವುದು, ಎತ್ತರದ ಸ್ಥಳದಿಂದ ಬಿದ್ದು ಹೋದರೆ, ಬೆಂಕಿಯಿಂದ ಸುಟ್ಟುಕೊಂಡುಬಿಟ್ಟರೆ; ಹೀಗೆ ನಿಜಾಂಶಗಳ ಬಗ್ಗೆ ಆತಂಕವನ್ನು ಪಡುವುದು.

ಇಂತಹ ಮೂರು ಬಗೆಯ ಆತಂಕಗಳನ್ನು ಮೀರಿದ ಇನ್ನೊಂದು ಪರಮಾತಂಕವೊಂದಿದೆ. ಅದು ಅತ್ಯಂತ ಮಹತ್ವದ್ದು. ಅದು ಬಹಳ ಆಳವಾಗಿ ಬೇರೂರಿರುವಂತಹದ್ದು. ಅದು ಮಾನಸಿಕವೂ ಮತ್ತು ಭಾವನಾತ್ಮಕವೂ ಮಾತ್ರವಲ್ಲ ಜೈವಿಕವಾಗಿಯೂ ಕೂಡ ಪ್ರತಿಯೊಂದು ಜೀವಿಯಲ್ಲಿ ಆಂತರಿಕವಾಗಿರುವ ಆತಂಕ. ಅದು ಅಳಿವಿನ ಆತಂಕ. ತಾನು ಎಲ್ಲಿ ಅಸ್ತಿತ್ವದಿಂದ ಮರೆಯಾಗಿಬಿಡುವೆನೋ, ತಾನು ನಾಶ ಹೊಂದಿಬಿಡುವೆನೋ ಎಂಬ ಭಯ. ಅದು ಬಹಳ ಸೂಕ್ಷ್ಮ ಸ್ವರೂಪದಲ್ಲಿ ಜೈವಿಕವಾಗಿಯೂ, ಮಾನಸಿಕವಾಗಿಯೂ ಮತ್ತು ಭಾವನಾತ್ಮಕವಾಗಿಯೂ ಇರುತ್ತದೆ. ಇದೇ ಪರಮಾತಂಕ. ಈ ಪರಮಾತಂಕವೇ ನಾನಾ ರೀತಿಗಳಲ್ಲಿ ಪ್ರಕಟಗೊಳ್ಳುತ್ತಿರುತ್ತದೆ. ಈ ಪರಮಾತಂಕವು ತನಗೇ ತಿಳಿಯದಂತೆ ಇರುತ್ತದೆ. ಸೂಕ್ಷ್ಮರೂಪದಲ್ಲಿರುವ ಅದು ಇರುವುದಾಗಲಿ, ಅದು ಕೆಲಸ ಮಾಡುವುದಾಗಲಿ, ಅದು ಗ್ರಹಿಸುವುದಾಗಲಿ, ಅದು ಅಭಿವ್ಯಕ್ತಪಡಿಸಲು ಬಳಸುವ ತಂತ್ರಗಳಾಗಲಿ, ತನ್ನನ್ನು ತಾನು ಉಳಿಸಿಕೊಳ್ಳಲು ಉಪಯೋಗಿಸುವ ತಂತ್ರಗಳಾಗಲಿ ವ್ಯಕ್ತಿಯ ಜಾಗೃತ ಮನಸ್ಸಿಗೆ ತಿಳಿಯುವುದೇ ಇಲ್ಲ. ಆದರೆ ಅದು ತುಂಬಾ ಪರಿಣಾಮಕಾರಿಯಾಗಿ ಮನುಷ್ಯನ ವರ್ತನೆ, ಆಲೋಚನೆ, ಕ್ರಿಯೆ, ಪ್ರತಿಕ್ರಿಯೆ, ಮನಸ್ಥಿತಿ; ಹೀಗೆ ಎಲ್ಲದರ ಮೇಲೆ ಕೆಲಸ ಮಾಡುತ್ತಲೇ ಇರುತ್ತದೆ.

ಈ ಪರಮಾತಂಕವು ಸಿಗ್ಮಂಡ್ ಫ್ರಾಯ್ಡ್ ಗುರುತಿಸಿರುವ ಮೂರು ಆತಂಕಗಳಿಗೂ ತಾಯಿ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಯೋಗೇಶ್ ಮಾಸ್ಟರ್,

contributor

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು
ತನ್ನಾರೈಕೆ