ಆಯ್ಕೆಯ ಪ್ರಾರಬ್ಧಗಳು

Update: 2024-02-25 05:17 GMT

ಆಯ್ಕೆ ಮಾಡುವುದರಲ್ಲಿ ತುಂಬಾ ಜನಕ್ಕೆ ಸಮಸ್ಯೆ ಇರುತ್ತದೆ. ಆಯ್ಕೆ ಎಂದರೆ ಆ ಹೊತ್ತಿನ ತೀರ್ಮಾನ ಅಷ್ಟೇ. ಜೀವಮಾನದ ನಿರ್ಣಯವಾಗಿರಬೇಕೆಂದೇನಿಲ್ಲ. ಆದರೆ ಆ ಹೊತ್ತಿನ ತೀರ್ಮಾನ ಅಥವಾ ಆಯ್ಕೆ ಮುಂದಿನ ಪರಿಣಾಮಗಳನ್ನು ರೂಪಿಸಬಲ್ಲದು. ಉದ್ಧಾರ ಅಥವಾ ಅವನತಿಗೆ ಕಾರಣವಾಗಬಹುದು. ಇಡೀ ಜೀವಮಾನದ ನಿರ್ಣಯವೂ ಆಗಬಹುದು. ಆದ್ದರಿಂದ ಆಯ್ಕೆ ಎಂಬ ದೃಷ್ಟಿ ಅಥವಾ ಮಾನಸಿಕ ಕ್ರಿಯೆಯ ಬಗ್ಗೆ ತಿಳಿದುಕೊಂಡಿದ್ದರೆ ಒಳಿತು.

ಆಯ್ಕೆಗೆ ಚರಿತ್ರೆ ಇರುತ್ತದೆ. ಅದಕ್ಕೂ ಆರೋಗ್ಯ ಅನಾರೋಗ್ಯ, ಅದಕ್ಕೂ ಶಕ್ತಿ ನಿಶ್ಶಕ್ತಿ, ಸಾಮರ್ಥ್ಯ ದೌರ್ಬಲ್ಯ, ಸ್ಪಷ್ಟತೆ ಗೊಂದಲಗಳೆಲ್ಲಾ ಇರುತ್ತದೆ. ಹಾಗೆಯೇ ಆಯ್ಕೆಗೆ ಕಾರಣ ಮತ್ತು ಪರಿಣಾಮಗಳೂ ಕೂಡಾ ಇರುತ್ತವೆ. ಭೂತ ಮತ್ತು ಭವಿಷ್ಯವೂ ಇರುತ್ತದೆ.

ಹಾಗಾಗಿ ಆಯ್ಕೆ ಜೀವನದಲ್ಲಿ ಮಹತ್ತರ ಪಾತ್ರವಹಿಸುತ್ತದೆ.

ಯಶಸ್ಸು, ವೈಫಲ್ಯ, ಶಾಂತಿ, ಸಮಾಧಾನ, ಸಂಕಟ, ಜಗಳ ಎಲ್ಲವೂ ನಮ್ಮ ಆಯ್ಕೆಗಳೇ ಆಗಿರುತ್ತವೆ. ನಮ್ಮ ಆಯ್ಕೆಯನ್ನು ನಾವು ಮಾಡುವುದರಲ್ಲಿ ಸ್ವತಂತ್ರರಾಗಿರಬೇಕು ಎಂಬ ಆಲೋಚನೆ ಕೂಡಾ ಗಮನಾರ್ಹವಾದದು.

ಉದಾಹರಣೆಗೆ ಗಮನಿಸುವುದಾದರೆ, ನಾನು ಮತ್ತು ಮತ್ತೊಬ್ಬರ ನಡುವೆ ವಾಗ್ವಾದವಾಗುತ್ತಿರುತ್ತದೆ. ಭಿನ್ನಾಭಿಪ್ರಾಯವಿರುತ್ತದೆ. ನಮ್ಮ ನಮ್ಮ ಪದಗಳ ಬಳಕೆಗಳು, ಮಾತಿನ ಏರಿಳಿತಗಳು, ವರ್ತನೆಗಳು; ಅಲ್ಲಿನ ಚಟುವಟಿಕೆಯನ್ನು ಜಗಳವೋ, ಮಾತುಕತೆಯೋ ಎಂದು ನಿರ್ಧರಿಸುತ್ತವೆ. ಮೊದಲಿಗೆ ನಾನು ಅದು ಸಂವಾದವಾಗಬೇಕೋ ಅಥವಾ ಸಂಘರ್ಷವಾಗಬೇಕೋ ಆಯ್ಕೆ ಮಾಡಬೇಕು. ಆ ಆಯ್ಕೆಯ ಸ್ವಾತಂತ್ರ್ಯ ನನ್ನದು. ಮತ್ತೊಬ್ಬರ ಆಯ್ಕೆಯ ಮೇಲೆ ನಮಗೆ ನಿಯಂತ್ರಣ ಇರುವುದಿಲ್ಲ. ಅವರ ಪದ ಪ್ರಯೋಗಗಳು, ನಡವಳಿಕೆಗಳು, ಒಲವು ನಿಲುವುಗಳ ಆಯ್ಕೆಯ ಮೇಲೆ ನಮ್ಮ ಅಧಿಕಾರ ಇರುವುದಿಲ್ಲ. ಅವರ ಆಯ್ಕೆಯ ವಿಷಯದಲ್ಲಿ ನಾನು ಅಸಹಾಯಕ. ಆದರೆ, ನಾನು ಯಾವ ಪದಗಳನ್ನು ಬಳಸಬೇಕು? ನನ್ನ ವರ್ತನೆ ಹೇಗಿರಬೇಕು? ಯಾವ ಸ್ವರೂಪದಲ್ಲಿ ಅವರಿಗೆ ನನ್ನ ಪ್ರತಿಕ್ರಿಯೆಯನ್ನು ದಾಟಿಸಬೇಕು? ಈ ನಿರ್ಧಾರ ನನ್ನದು. ನನ್ನದಾಗಿರಲೇ ಬೇಕು.

ಕುಟುಂಬ, ಸಮಾಜ, ಸಂಸ್ಕೃತಿ, ವ್ಯವಸ್ಥೆ ಮತ್ತು ಸಹಜೀವಿಗಳು ಎಷ್ಟೆಲ್ಲಾ ಆಯ್ಕೆಗಳನ್ನು ಮುಂದಿಟ್ಟರೂ ಆಯ್ಕೆ ಮಾಡುವ ಸ್ವಾತಂತ್ರ್ಯ ವ್ಯಕ್ತಿಯದೇ ಆಗಿರುತ್ತದೆ. ಸ್ವತಂತ್ರ ಭಾವವೂ ಒಂದು ಶಕ್ತಿ ಎಂಬುದನ್ನು ಮರೆಯಬಾರದು. ಆ ಶಕ್ತಿ ದುರ್ಬಲವಾದಾಗ ನಾವು ಆಯ್ಕೆ ಮಾಡುವುದರಲ್ಲಿ ಸೋಲುತ್ತೇವೆ. ಅವರು ಇಡುವ ಹಲವಾರು ಆಯ್ಕೆಗಳಲ್ಲಿ ಯಾವುದೋ ಒಂದನ್ನು ಕೈಗೆತ್ತಿಕೊಳ್ಳುತ್ತೇವೆ.

ನನ್ನ ಆದ್ಯತೆ ಏನು? ನನ್ನ ಉದ್ದೇಶವೇನು? ನನಗೆ ಯಾವ ಸ್ವರೂಪದ ದೃಶ್ಯ ಈಗ ಇರಬೇಕು? ಕಾಣುವ ಕಣ್ಣುಗಳಿಗೆ ನಾನು ಹೇಗೆ ಕಾಣಿಸಿಕೊಳ್ಳಬೇಕು? ನನ್ನ ಈಗಿನ ಕ್ರಿಯೆಯ ಪರಿಣಾಮ ಏನಾಗಿರಬೇಕು? ಹೀಗೆಲ್ಲಾ ಆಲೋಚನೆಗಳನ್ನು ಮಾಡುತ್ತಾ ಪ್ರಜ್ಞೆಯನ್ನು ಗಟ್ಟಿಗೊಳಿಸಿಕೊಳ್ಳಬೇಕು. ಪದೇ ಪದೇ ಮಾಡುವ ಆಲೋಚನೆಗಳೇ ಧೋರಣೆಗಳನ್ನು ಬೆಳೆಸುವುದು.

ನಮ್ಮ ಆದ್ಯತೆ ಮತ್ತು ಉದ್ದೇಶಗಳ ಬಗ್ಗೆ ನಮಗೆ ಪ್ರಜ್ಞೆ ಇದ್ದಲ್ಲಿ ಬಹಳ ಎಚ್ಚರಿಕೆಯಿಂದ ಆಯ್ಕೆಗಳನ್ನು ಮಾಡುತ್ತೇವೆ. ಆ ಪ್ರಜ್ಞೆ ಇಲ್ಲದಿದ್ದರೆ ಎಡವುತ್ತೇವೆ.

ತಮ್ಮ ಬಗ್ಗೆ ತಾವು ಒಂದು ಹುಸಿ ಚಿತ್ರಣವನ್ನು ರೂಪಿಸಿಕೊಂಡು ಅದಕ್ಕೆ ತಕ್ಕಂತೆ ಆಯ್ಕೆಗಳನ್ನು ಮಾಡಲು ಕೆಲವರು ಹೋಗುತ್ತಾರೆ. ಏಕೆಂದರೆ ಅವರ ಆಲೋಚನೆಗಳ ಮತ್ತು ಭಾವನೆಗಳ ಬೇರುಗಳನ್ನು ಅವರು ತಿಳಿದುಕೊಂಡಿರುವುದಿಲ್ಲ.

ಎಷ್ಟೋ ಸಲ ತಮಗೆ ಏನು ಬೇಕೋ ಅದು ದೊರಕದೆ ಹೋದಾಗ ತಾವು ಆಯ್ಕೆ ಮಾಡಿದ ಮಾರ್ಗದಲ್ಲಿ ಇರುವ ಸಮಸ್ಯೆಗಳನ್ನು ಅವರು ಗಮನಿಸಲು ಹೋಗುವುದಿಲ್ಲ. ಬದಲಾಗಿ ತಮ್ಮ ಆಯ್ಕೆ ಸರಿಯೇ ಇತ್ತು ಆದರೆ ಬೇರೆ ಬೇರೆ ಕಾರಣಗಳಿಂದ ತಾವು ವಿಫಲವಾದೆವು ಎಂದು ತಮ್ಮನ್ನು ಸಮರ್ಥಿಸಿಕೊಂಡು ಇತರರನ್ನು ದೂರುತ್ತಾರೆ. ಅದರೆ ವಿಷಯವೇನೆಂದರೆ, ಅವರು ಆಯ್ಕೆ ಮಾಡುವ ರೀತಿಯಲ್ಲಿಯೇ ದೋಷವಿರುತ್ತದೆ. ಆ ದೋಷವನ್ನು ಗುರುತಿಸಿಕೊಳ್ಳಲು ಅವರು ಸಿದ್ಧವಿರುವುದಿಲ್ಲ. ಆ ಆಯ್ಕೆಯು ತಮ್ಮದೇ ಆದ್ದರಿಂದ ಅಹಂಕಾರವು ತನ್ನ ಆಯ್ಕೆಯು ಸೋತಿತು ಎಂದು ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ. ಅವರ ಐಡೆಂಟಿಟಿ ಅವರ ಅಹಂಕಾರದೊಂದಿಗೆ ಗುರುತಿಸಿಕೊಂಡಿದ್ದು ತಮ್ಮ ಅಹಂಕಾರಕ್ಕೆ ಧಕ್ಕೆಯಾದರೆ ತಮ್ಮತನದ ಗುರುತೇ ಅಥವಾ ಐಡೆಂಟಿಟಿಯನ್ನೇ ಕಳೆದುಕೊಂಡುಬಿಡುತ್ತೇವೆ ಎಂಬ ಭಯವಿರುತ್ತದೆ.

ಹೀಗೆ ಆಯ್ಕೆಗಳನ್ನು ಭಯ, ಆಸೆ, ನಿರಾಶೆ, ಹಿಂದಣ ಅನುಭವಗಳ ಪ್ರಭಾವಗಳೂ ಕೂಡಾ ನಿರ್ಧರಿಸುತ್ತವೆ. ಆಯ್ಕೆ ತಮ್ಮದೇ ಆದ್ದರಿಂದ ಅದರ ಪರಿಣಾಮಗಳಿಗೆ ತಾವೇ ಜವಾಬ್ದಾರರಾದ್ದರಿಂದ ಬಹಳ ಎಚ್ಚರಿಕೆಯಿಂದ ಆಯ್ಕೆಯನ್ನು ಮಾಡುವ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು. ಆಯ್ಕೆ ಮಾಡುವ ಶಕ್ತಿಯೇನೂ ಹುಟ್ಟಿದಾಗಿನಿಂದ ಬರುವಂತಹದ್ದೇನಲ್ಲ. ಯಾವ ಹೊತ್ತಿನಲ್ಲಾದರೂ ಹುಟ್ಟಿದ ನಿರ್ಧಾರವನ್ನು ನಿರಂತರವಾಗಿ ಅಭ್ಯಾಸ ಮಾಡುವುದು, ರೂಢಿಗೊಳಿಸಿಕೊಳ್ಳುವುದು. ಆ ಮೂಲಕ ಸರಿಯಾದ ಆಯ್ಕೆಗಳನ್ನು ಮಾಡುವ ಸ್ವಭಾವವನ್ನೇ ನಮ್ಮದಾಗಿಸಿಕೊಳ್ಳುವುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೇಶ್ ಮಾಸ್ಟರ್,

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು