ತನ್ನಾರೈಕೆ

Update: 2024-08-04 08:41 GMT

ಹದಿಹರೆಯದ ಮಕ್ಕಳು ತಮ್ಮ ಮಾತನ್ನು ಕೇಳುವುದಿಲ್ಲ. ತಮ್ಮ ಆಣತಿಯನ್ನು ಪಾಲಿಸುವುದಿಲ್ಲ. ಬೆಳೆದು ವಯಸ್ಕರಾದ ಮಕ್ಕಳು ತಮ್ಮ ತಮ್ಮ ದಾರಿ ಹಿಡಿದು ಹೋದರು, ತಮ್ಮನ್ನು ನೋಡಿಕೊಳ್ಳುತ್ತಿಲ್ಲ. ‘‘ಮದುವೆಯಾಗುವ ಮೊದಲು ಚೆನ್ನಾಗಿಯೇ ಇದ್ದ ಮಗ ಈಗ ಹೆಂಡತಿಯ ಸೆರಗು ಹಿಡಿದುಬಿಟ್ಟ, ನಾನೆಷ್ಟೆಲ್ಲಾ ಅವರಿಗೆ ಮಾಡಿದೆ ಆದರೆ ಅವರು ನನಗೇನು ಮಾಡಿದರು? ಈ ಜನರೇ ಹೀಗೆ, ತಮ್ಮ ತಮ್ಮ ಅವಶ್ಯಕತೆಗಳಿಗೆ ತಕ್ಕಂತೆ ನಮ್ಮ ಜೊತೆ ಇರುತ್ತಾರೆ, ಅವರ ಅವಶ್ಯಕತೆ ತೀರಿದ ಮೇಲೆ ಅವರವರ ದಾರಿ ಹಿಡಿಯುತ್ತಾರೆ. ಸಂಬಂಧಗಳಿಗೆ ಬೆಲೆಯೇ ಇಲ್ಲ, ಒಂಟಿತನ ಕಾಡುತ್ತಿದೆ, ನನ್ನವರು ಯಾರೂ ಇಲ್ಲ ಎಂಬ ಭಾವ ಹಿಂಡುತ್ತಿದೆ’’ ಹೀಗೇ ತಮ್ಮನ್ನು ಮನೆಯವರು, ಸ್ನೇಹಿತರು, ಆಪ್ತರು, ಇತರರು ಕಡೆಗಣಿಸಿದರೆಂದು ಪ್ರಲಾಪಿಸುವ ಮಂದಿಯನ್ನು ಕಾಣುತ್ತಿರುತ್ತೇವೆ. ಈ ರೀತಿಯಾಗಿ ಶೋಕಿಸುವ ಜನಕ್ಕೆ ತನ್ನಾರೈಕೆ ಅಥವಾ ಸೆಲ್ಫ್-ಕೇರ್ ಎಂಬ ವಿಷಯವೊಂದಿದೆ ಎಂಬುದರ ಅರಿವಿಲ್ಲ ಎಂದಾಗುತ್ತದೆ.

ಮಕ್ಕಳು ಅವರು ತಮ್ಮ ಬಾಲ್ಯದಲ್ಲಿ ಕೊಡುವ ಸಂತೋಷ ಮತ್ತು ಸಂಭ್ರಮಗಳಷ್ಟೇ ಹೆತ್ತವರ ಸಹಜ ಭಾಗ್ಯ. ಅವರು ಹದಿಹರೆಯ ಮತ್ತು ವಯಸ್ಕರಾದರೂ ಮನೆಯವರ ಒಡನಾಟದಲ್ಲಿ ಅದೇ ಸಂತೋಷ ಮತ್ತು ಸಂಭ್ರಮಗಳನ್ನು ನೀಡುತ್ತಾ ಇದ್ದಾರೆಂದರೆ ಅದು ಬಂಪರ್ ಲಾಟರಿ. ಆದರೆ ಅದು ಅತ್ಯಂತ ಸಹಜವಾಗಿಯೇ ಇಳಿಮುಖವಾಗುವುದು. ಮಗುವು ಬೆಳೆಬೆಳೆಯುತ್ತಿದ್ದಂತೆ ಅದರ ಆದ್ಯತೆಗಳು ಕೂಡಾ ಬದಲಾಗುತ್ತವೆ. ವಯಸ್ಕರಾಗುವಷ್ಟರಲ್ಲಿ ಅನೇಕಾನೇಕ ಸಂಪರ್ಕಗಳು, ಸಂಬಂಧಗಳು, ಅಭಿರುಚಿಗಳು, ಆಸಕ್ತಿಗಳು ಮೂಡುವುದಲ್ಲದೆ ಅವರ ಆಯ್ಕೆಗಳೂ ಕೂಡಾ ಬದಲಾಗುವುದು ಸಾಮಾನ್ಯ. ಅವರು ಕೊನೆಯವರೆಗೂ ಹೆತ್ತವರೊಂದಿಗೆ ತಮ್ಮ ಮಗುತನದಲ್ಲಿಯೇ ಇರಬೇಕೆಂದು ಬಯಸುವುದು, ಆ ಮಕ್ಕಳ ತಮ್ಮತನವನ್ನು ತಮಗೆ ಬಲಿಗೊಡಿ ಎಂದು ಹೆತ್ತವರು ಕೇಳುವುದೇ ಆಗಿರುತ್ತದೆ. ಮಕ್ಕಳು ತಮ್ಮೊಂದಿಗೆ ಚೆನ್ನಾಗಿ ಇರುತ್ತಾರೋ ಇಲ್ಲವೋ ಎಂಬ ವಿಷಯಗಳನ್ನು ಸಾಮಾನ್ಯೀಕರಿಸಿ ಹೇಳಲಾಗದು. ಅನೇಕಾನೇಕ ಪ್ರಭಾವಿಸುವಂತಹ ಸಂಗತಿಗಳು ಒಂದೊಂದು ವ್ಯಕ್ತಿ ಮತ್ತು ಮನೆಗಳಿಗೆ ಭಿನ್ನವೇ ಆಗಿರುತ್ತದೆ.

ಮಕ್ಕಳು ಮಾತ್ರವಲ್ಲ, ಯಾರೇ ಆದರೂ ಕಾಲಕ್ರಮೇಣ ಮತ್ತು ಸಂದರ್ಭಾನುಸಾರ ತಮ್ಮ ಆದ್ಯತೆಗಳನ್ನು ಹಾಗೂ ಆಯ್ಕೆಗಳನ್ನು ಬದಲಿಸಿಕೊಳ್ಳುತ್ತಾರೆ. ಈ ಬದಲಾವಣೆಗೆ ಅವರನ್ನು ದೂರಲಾಗದು. ನಮ್ಮನ್ನು ನಾವು ಅಯ್ಯೋ ಪಾಪಗೊಳಿಸಿಕೊಳ್ಳುವ ಬದಲು ತನ್ನಾರೈಕೆಯ ವಿಚಾರವನ್ನು ಅರಿಯಬೇಕು.

ತನ್ನಾರೈಕೆ ಎಂದರೆ ತನ್ನನ್ನು ತಾನು ನೋಡಿಕೊಳ್ಳುವುದೆಂದಷ್ಟೇ. ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ, ಆರೋಗ್ಯವಾಗಿ, ಆರ್ಥಿಕವಾಗಿ; ಹೀಗೆ ಎಲ್ಲಾ ಆಯಾಮಗಳಿಂದಲೂ ತಮ್ಮ ಅಸ್ತಿತ್ವವನ್ನು ಸ್ವತಂತ್ರವಾಗಿಯೂ ಮತ್ತು ನಿರ್ಬಂಧವಾಗಿಯೂ ಒತ್ತಡ ಹಾಗೂ ಆತಂಕಕ್ಕೆ ಒಳಗಾದಂತೆ ನೋಡಿಕೊಳ್ಳುವುದು.

ಇವತ್ತು ನಾನು ಅವರಿಗೆ ಮಾಡಿದರೆ, ಅವರು ನಾಳೆ ನನಗೆ ಮಾಡುತ್ತಾರೆ ಎಂಬ ಉದ್ದೇಶದಿಂದ ಮಾಡಿದರಾದರೆ ‘‘ಮಾಡಿ ಮಾಡಿ ಕೆಟ್ಟರು ಮನವಿಲ್ಲದೇ, ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ’’ ಎನ್ನಬೇಕಾಗುತ್ತದೆ. ತನ್ನ ಸಹಜೀವಿಯೊಂದಕ್ಕೆ ಏನಾದರೂ ಸಮಸ್ಯೆ ಎದುರಾದಾಗ, ತನಗೆ ಮಾಡಲು ಸಾಧ್ಯವಾಗುವಂತಿದ್ದರೆ, ತನ್ನ ಇತಿಮಿತಿಯಲ್ಲಿ ಮಾಡುವುದು ಮನುಷ್ಯನ ಸಂಘಜೀವನದಲ್ಲಿ ಹೊಣೆಗಾರಿಕೆ ಮತ್ತು ಸಾಮಾಜಿಕ ಕರ್ತವ್ಯ. ಆದರೆ ಅವರೂ ಮಾಡಲಿ ಎಂದೇ ಮಾಡುವುದಾದರೆ ಅದು ಜೂಜಿನಲ್ಲಿ ಹಣ ತೊಡಗಿಸಿದಂತೆ.

ಜೂಜಿನಲ್ಲಿ ಹಣ ತೊಡಗಿಸುವಾಗಲೂ ಆತಂಕ, ಹಣ ಬರದಿದ್ದರೆ ವೈಫಲ್ಯ, ಅದರಿಂದ ಒತ್ತಡ. ಹೂಡಿಕೆಯಿಂದ ಅಧಿಕ ಲಾಭದ ನಿರೀಕ್ಷೆ ಮತ್ತು ಅಪೇಕ್ಷೆಗಳೆರಡೂ ಒತ್ತಡ ಮತ್ತು ಆತಂಕಗಳಿಗೆ ಈಡು ಮಾಡಿ ವ್ಯಕ್ತಿಯನ್ನು ಹತಾಶೆಗೊಳಿಸುತ್ತದೆ. ಮಾನಸಿಕವಾದ ಮತ್ತು ಭಾವನಾತ್ಮಕವಾದ ಒತ್ತಡ ಆತಂಕಗಳಿಂದ ಹತಾಶೆಗೊಳಗಾಗಬಾರದೆಂದರೆ ತನ್ನಾರೈಕೆಯ ಸೂತ್ರಗಳನ್ನು ಪಾಲಿಸಬೇಕು.

ತನ್ನಾರೈಕೆ ಎಂದರೆ ವ್ಯಕ್ತಿಯೊಬ್ಬನು ತನ್ನನ್ನು ತಾನು ನೋಡಿಕೊಳ್ಳಲಾಗುವ ಸಾಮರ್ಥ್ಯ. ತನ್ನ ದೇಹದ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ತೆಗೆದುಕೊಳ್ಳಬೇಕಾಗಿರುವಂತಹ ಎಚ್ಚರಿಕೆ. ತನ್ನ ಭಾವನೆಗಳು ಏರುಪೇರಾಗಿ ಅದು ತನ್ನ ದೇಹದ, ಮನಸ್ಸಿನ, ಸಂಬಂಧಗಳ, ಕುಟುಂಬ ಮತ್ತು ಸಮಾಜದ ವ್ಯವಸ್ಥೆಗಳ ಮೇಲೆ ನಕಾರಾತ್ಮಕವಾದ ಪರಿಣಾಮ ಬೀಳದಂತೆ ವಹಿಸಬೇಕಾದ ಜಾಗ್ರತೆ. ತನ್ನ ದೈಹಿಕ ಅನಾರೋಗ್ಯದ ಸಮಯದಲ್ಲಿ ಅಥವಾ ಸಂಕಷ್ಟದ ಸಮಯದಲ್ಲಿ ಒಂದು ಹಂತಕ್ಕೆ ಪರಾವಲಂಬಿಯಾಗದೆ ನಿಭಾಯಿಸಿಕೊಳ್ಳುವಷ್ಟರ ಮಟ್ಟಿಗಿನ ಸಿದ್ಧತೆ. ಆರೋಗ್ಯಕರವಾಗಿ ಮತ್ತು ಸ್ವತಂತ್ರವಾಗಿ ತಾನು ಸುಸ್ಥಿತಿಯಲ್ಲಿರಿಸಿಕೊಳ್ಳಲು ಬೇಕಾದ ಎಲ್ಲಾ ಅಗತ್ಯಗಳ ಅರಿವು ಮತ್ತು ಅವುಗಳನ್ನು ಪಡೆದುಕೊಳ್ಳಲು ಮಾಡಿಕೊಳ್ಳಬೇಕಾದ ತಯಾರಿ.

ದೇಹಕ್ಕೆ ಬೇಕಾಗಿರುವ ಪೌಷ್ಟಿಕಾಂಶಗಳು, ಬೇಡದಿರುವ ಅಂಶಗಳು, ಕಾಲದಿಂದ ಕಾಲಕ್ಕೆ ತಪಾಸಣೆ, ವ್ಯಾಯಾಮ, ವ್ಯಕ್ತಿಗಳನ್ನು ಕ್ಷಮಿಸುವ ಗುಣ, ತಲೆದೋರುವ ಅಹಂಕಾರ ಮತ್ತು ಹಟದ ವರ್ತನೆಗಳ ತಪಾಸಣೆ ಮತ್ತು ಭಾವನಾತ್ಮಕವಾಗಿ ಪರಾವಲಂಬಿಯಾಗದಿರುವ ಧೋರಣೆ; ಇವೆಲ್ಲವೂ ಕೂಡಾ ತನ್ನಾರೈಕೆಯಲ್ಲಿ ಸೇರುತ್ತದೆ. ತನ್ನಾರೈಕೆ ತಿಳಿಯದವರು ಅವರಿವರನ್ನು ದೂರುತ್ತಾ, ತಮ್ಮನ್ನು ತಾವು ಪಾಪದವರೆಂಬಂತೆ ಬಿಂಬಿಸಿಕೊಳ್ಳುತ್ತಾ, ಪ್ರೀತಿ ವಾತ್ಸಲ್ಯ ಸ್ನೇಹಕ್ಕೆ ಅರ್ಥವೇ ಇಲ್ಲ ಎಂದು ಪ್ರಲಾಪಿಸುತ್ತಾ ತಮ್ಮ ಅನುಕ್ಷಣದ ಆನಂದವನ್ನು ಕಳೆದುಕೊಳ್ಳುತ್ತಿರುತ್ತಾರೆ.

ತನ್ನಾರೈಕೆಯೆಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಯಾರೊಬ್ಬರಿಂದ ಅಥವಾ ಸಮೂಹದಿಂದ ದಾಳಿಗೆ ಒಳಗಾದಾಗ, ವಂಚನೆಗೆ ಒಳಗಾದಾಗ, ದೌರ್ಜನ್ಯಕ್ಕೆ ಒಳಗಾದಾಗಲೂ ಮೇಲೆ ಹೇಳಿದ ತನ್ನಾರೈಕೆಯ ಧೋರಣೆಯನ್ನೇ ಪ್ರತಿಪಾದಿಸುತ್ತಾ ದುಃಖಿಸಬೇಡಿ ಎಂದು ಹೇಳಲಾಗದು. ಆದರೆ ವ್ಯಕ್ತಿಗಳ ಸಾಮಾನ್ಯ ಮನಸ್ಥಿತಿಯ ವಿಷಯದಲ್ಲಿ ಮತ್ತು ಸಾಧಾರಣ ಬದುಕಿನಲ್ಲಿ ತನ್ನನ್ನು ತಾನು ನೋಡಿಕೊಳ್ಳುವಂತಹ ತನ್ನಾರೈಕೆಯ ಸೂತ್ರಗಳನ್ನು ಖಂಡಿತ ತಿಳಿದಿರಲೇಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಶ್ ಮಾಸ್ಟರ್,

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು