ಸಹಜ ಮನಸ್ಸು

Update: 2023-11-19 04:08 GMT

Photo: freepik


ದೇಹದ ಆರೋಗ್ಯವು ಸರಿಯಾಗಿದೆ ಎಂದರೆ ಉಸಿರಾಟ, ರಕ್ತಪರಿಚಲನೆ, ಜೀರ್ಣಕ್ರಿಯೆಗಳು, ಹಸಿವು, ಬಾಯಾರಿಕೆ, ನಿದ್ರೆಯೇ ಮೊದಲಾದ ಎಲ್ಲಾ ವಿಷಯಗಳೂ ಸರಾಗವಾಗಿಯೂ, ತೊಡಕುಗಳಿಲ್ಲದೆಯೂ ಮತ್ತು ನೋವು ಅಶಕ್ತತೆ ಇಲ್ಲದೆಯೂ ಇರಬೇಕಾಗಿರುತ್ತದೆ.

ಅದೇ ರೀತಿ ಮನಸ್ಸಿನ ಆರೋಗ್ಯವು ಸಾಧಾರಣವಾಗಿದೆ ಅಥವಾ ಸಮಸ್ಯೆಯಲ್ಲಿದೆ ಎಂದು ಗುರುತಿಸುವುದು ಒಬ್ಬ ವ್ಯಕ್ತಿಯ ಮನಸ್ಸು ಸಹಜವಾಗಿರುವ ಮತ್ತು ಅಸಹಜವಾಗಿರುವ ಸ್ಥಿತಿಯನ್ನು ಅವಲಂಬಿಸಿರುತ್ತದೆ. ವಾಸ್ತವವಾಗಿ ಅಸಹಜ ಮನಸ್ಸೇ ಸಮಸ್ಯೆಗಳನ್ನು ತಂದೊಡ್ಡುವುದು. ಹಾಗಾಗಿ ಯಾವುದೇ ವ್ಯಕ್ತಿಯು ತನಗಿರುವುದು ಸಹಜ ಮನಸ್ಸೇ ಅಥವಾ ಅಲ್ಲವೇ ಎಂದು ಪರೀಕ್ಷಿಸಬೇಕು. ಅಸಹಜ ಮನಸ್ಸೇ ವ್ಯಕ್ತಿ, ಕುಟುಂಬ, ಸಮಾಜ ಮತ್ತು ತನಗೂ ತೊಂದರೆಯಾಗಿ ಪರಿಣಮಿಸುವುದು. ಹಾಗಂತ ಅಸಹಜ ಮನಸ್ಸಿನ ಬಗ್ಗೆ ಹೇಳಲು ಹೋದರೆ ಮೊದಲು ಸಹಜ ಮನಸ್ಸು ಎಂದರೆ ಯಾವುದು ಎಂದು ಗುರುತಿಸಬೇಕಾಗುತ್ತದೆ.

ಸಹಜ ಮನಸ್ಸು ಎಂದು ಗುರುತಿಸುವುದೇ ಚರ್ಚಾರ್ಹ, ಗೊಂದಲ ಮತ್ತು ಸಂಕೀರ್ಣ. ಏಕೆಂದರೆ ಮನುಷ್ಯ ಯಾವುದೇ ವಿಷಯವನ್ನು ಅಥೈಣಸಲು ಹೋದಾಗ ಅವನ ಸಾಂಸ್ಕೃತಿಕ, ಸಾಮಾಜಿಕ ಮತ್ತು ವ್ಯಕ್ತಿಗತವಾದಂತಹ ಧೋರಣೆಗಳ ಆಧಾರವನ್ನೇ ಅವಲಂಬಿಸುತ್ತಾನೆ. ಅದರಿಂದಾಗಿ ವಿವರಣೆಗಳು ಕಲುಷಿತಗೊಂಡಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ವ್ಯಕ್ತಿ ತನ್ನಲ್ಲಿ ಸರಾಗವಾಗಿ ಮತ್ತು ಸಶಕ್ತವಾಗಿ ಚಟುವಟಿಕೆಯಿಂದ ಇರುವ ಮನಸ್ಸನ್ನು ಮತ್ತು ಅದರ ಸ್ಥಿತಿಗತಿಯನ್ನೇ ಸಹಜ ಎಂದೂ ಭಾವಿಸಿಬಿಡುತ್ತಾನೆ. ಅದರಿಂದ ತನಗೆ ಉಂಟಾಗುವ ಹಿತ ಮತ್ತು ಅಹಿತಗಳನ್ನು, ಸಿಗುವಂತಹ ಸಕಾರಾತ್ಮಕ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗಳನ್ನು ತನ್ನ ಮನಸ್ಸಿನ ಸಹಜ ಮತ್ತು ಅಸಹಜತೆಗಳ ಮಾನದಂಡವನ್ನಾಗಿಸಿಕೊಂಡು ಬಿಡುತ್ತಾನೆ. ಒಬ್ಬ ಸ್ಯಾಡಿಸ್ಟ್ ವ್ಯಕ್ತಿಗೆ ಕ್ರೌರ್ಯದಿಂದ ಆನಂದ ಪಡೆಯುವುದು ಸಹಜವಾಗಿರುತ್ತದೆ ಅಥವಾ ವ್ಯಸನಿಯೊಬ್ಬನು ತನ್ನ ವ್ಯಸನದ ವಸ್ತುಗಳಿಂದ ಹಿತವನ್ನು ಪಡೆಯುವುದು ಅವನಿಗೆ ಸಹಜವೇ ಆಗಿರುತ್ತದೆ. ಆದರೆ ಅದು ಸಾಮಾನ್ಯ ಮಾನಸಿಕ ದೃಷ್ಟಿಯಿಂದ ಸಹಜವಲ್ಲ.

ಒಟ್ಟಾರೆ ಯಾವುದೇ ಸಾಮಾನ್ಯ ಮನಸ್ಸಿನ ಸಹಜ ಸ್ಥಿತಿಗೆ ಯಾವುದೇ ಸಮಾಜದ, ಧರ್ಮದ, ಸಂಸ್ಕೃತಿಯ ಪ್ರಭಾವಗಳು ಮತ್ತು ಸಂಸ್ಕಾರಗಳು ಸೇರಿ, ಆ ಮನಸ್ಸನ್ನು ಒಂದು ನಿರ್ದಿಷ್ಟ ಸ್ವರೂಪಕ್ಕೆ ತಂದಿದ್ದರೆ, ನಿರ್ದಿಷ್ಟ ಸ್ವಭಾವವನ್ನಾಗಿಸಿದ್ದರೆ; ಅದು ಕಲುಷಿತ ಮನಸ್ಸೇ ಆಗಿರುತ್ತದೆ. ಸೌಜನ್ಯ ಪೂರ್ವಕವಾಗಿ ಕಲುಷಿತ ಪದದ ನಿಷ್ಠುರತೆಯನ್ನು ತೆಗೆದುಹಾಕಲು ಹೀಗೆ ಹೇಳಬಹುದು. ಯಾವುದೇ ಸಮಾಜದ, ಸಂಸ್ಕೃತಿಯ ಮತ್ತು ಧರ್ಮದ ಪೂರಕ ಅಥವಾ ಮಾರಕ ಪ್ರಭಾವಗಳು ಇಲ್ಲದೇ ಸಾರ್ವತ್ರಿಕವಾಗಿರುವಂತಹ ಮನಸ್ಸೇ ಸಹಜ ಮನಸ್ಸು.

ವ್ಯಕ್ತಿಗೆ ತನ್ನ ದೈನಂದಿನ ಬದುಕಿನಲ್ಲಿ ಸಾಧಾರಣವಾಗಿರುವ ಕರ್ತವ್ಯ ಮತ್ತು ಹಕ್ಕುಗಳನ್ನು ಪಾಲಿಸಲು ಸಾಧ್ಯವಾಗುತ್ತಿದ್ದರೆ, ಕುಟುಂಬ, ನೆರೆಹೊರೆ ಮತ್ತು ಸಮಾಜದಲ್ಲಿ ಇತರರ ಜೊತೆ ತನ್ನ ಸಂಬಂಧವನ್ನು ದೃಢವಾಗಿ ಉತ್ತಮ ಸ್ಥಿತಿಯಲ್ಲಿ ಹೊಂದಿದ್ದರೆ, ಸಾಮಾನ್ಯ ಅನುಭವಗಳಲ್ಲಿ ಸಂತೋಷ ಮತ್ತು ತೃಪ್ತಿ ಪಡೆಯಲು ಸಾಧ್ಯವಾಗುತ್ತಿದ್ದರೆ, ಹಾಗೆಯೇ ಸಮಸ್ಯೆ, ತೊಂದರೆ ಮತ್ತು ನೋವಿನ ವಿಷಯಗಳಿಗೆ ತಕ್ಕನಾಗಿ ಪ್ರತಿಕ್ರಿಯಿಸುತ್ತಿದ್ದರೆ ಅದು ಸಹಜ ಮನಸ್ಥಿತಿ.

ಯಾವುದೇ ವ್ಯಕ್ತಿಯ ಆಲೋಚನೆಗಳು ವ್ಯಕ್ತಿಗತವಾಗಿ ಮತ್ತು ಸಮಾಜದ ಅಸ್ತಿತ್ವದ ಭಾಗವಾಗಿ ಉಳಿಯುವ, ಬೆಳೆಯುವ, ಉಳಿಯುವಿಕೆಗೆ ಬೆದರಿಕೆಯುಂಟಾದಾಗ ಪ್ರತಿಭಟಿಸುವ, ಹೋರಾಡುವ, ಪಲಾಯನ ಮಾಡುವ, ರಕ್ಷಣಾ ತಂತ್ರಗಳನ್ನು ಕಂಡುಕೊಳ್ಳುವ, ಪರಸ್ಪರ ಸಹಕರಿಸುವ ಆಶಯಗಳನ್ನು ಪ್ರಾಥಮಿಕವಾಗಿ ಹೊಂದಿರುವುದು ಸಹಜ ಮನಸ್ಸು.

ಪ್ರಕೃತಿಯಲ್ಲಿ ಎಲ್ಲಾ ಜೀವಿಗಳೂ ತಮ್ಮ ಉಳಿವಿಗಾಗಿ ಹಂಬಲಿಸುವುದು ಸಹಜ. ತನ್ನ ಉಳಿಯುವಿಕೆಗೆ ಬೆದರಿಕೆ ಬಂದಾಗ ಹೆದರುವುದು ಸಹಜ. ತನ್ನನ್ನು ಉಳಿಸಿಕೊಳ್ಳಲು ಹೋರಾಡುವುದು ಅಥವಾ ಪಲಾಯನ ಮಾಡುವುದು ಕೂಡಾ ಸಹಜ. ಅದೇ ರೀತಿಯಲ್ಲಿ ಉಳಿಯುವಿಕೆಯ ವಿಷಯದಲ್ಲಿ ಎಲ್ಲಾ ಜೀವಿಗಳಲ್ಲಿ ಅದರಲ್ಲೂ ವಿಶೇಷವಾಗಿ ಮನುಷ್ಯರಲ್ಲಿ ಮತ್ತೊಂದು ಮಹತ್ತರ ಸ್ವಭಾವವೆಂದರೆ ಹೊಂದಿಕೊಳ್ಳುವುದು.

ತನ್ನ ಜೀವದ ಉಳಿವಿಗಾಗಿ, ಜೀವನ ನಿರ್ವಹಣೆಯ ಸಲುವಾಗಿ ಮನುಷ್ಯನಿಗೆ ತನ್ನ ಪರಿಸರದೊಂದಿಗೆ, ಹವಾಮಾನದೊಂದಿಗೆ ಹೊಂದಿಕೊಳ್ಳುವಂತಹ ವಿಶೇಷಗುಣವಿದೆ. ಮನುಷ್ಯ ತನ್ನ ಪ್ರಾಕೃತಿಕ ಪರಿಸರದಲ್ಲಿ, ಸಾವಯವ ಸಂಬಂಧಗಳೊಡನೆ ಹೊಂದಿಕೊಳ್ಳುವ ಗುಣವಿಲ್ಲದೇ ಇದ್ದರೆ ಅದು ಸಹಜವಾದ ಮನಸ್ಸು ಅಲ್ಲ. ಹಾಗೂ ಅಶಕ್ತವಾಗಿರುವ ಮನಸ್ಸೂ ಕೂಡಾ.

ಮನುಷ್ಯನ ಮನಸ್ಸು ಇತರ ಜೀವಿಗಳಂತೆ ತನ್ನ ಉಳಿವು, ಅಳಿವು ಮತ್ತು ಅದಕ್ಕಾಗಿ ಹೊಂದಿಕೊಳ್ಳುವ ಸ್ವಭಾವವಿದ್ದರೂ ಅವನ ಸ್ವಕೇಂದ್ರಿತ ಆಲೋಚನೆಯ ಸ್ವಭಾವದ ವಿಷಯದಲ್ಲಿ ವಿವೇಚನಾ ಸಾಮರ್ಥ್ಯವು ಇತರ ಜೀವಿಗಳಿಗಿಂತ ತೀವ್ರವಾಗಿದೆ. ಆದ್ದರಿಂದ ಅವನು ಇತರ ಪ್ರಾಣಿಗಳಿಗಿಂತ ಹೆಚ್ಚಿನ ಎಚ್ಚರಿಕೆ ಮತ್ತು ಪ್ರಜ್ಞೆಯನ್ನು ಹೊಂದಿರಬೇಕಾಗಿರುವುದು. ತನ್ನ ಸಂಘಜೀವನದಲ್ಲಿ ಎಲ್ಲರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಆದರಪೂರ್ವಕವಾದ ಗಮನವನ್ನು ಹೊಂದಿರಬೇಕು. ಸಂಘರ್ಷ ಉಂಟುಮಾಡುವ ನಾಶದಿಂದ ತಮ್ಮ ಜೀವನವನ್ನು ಉಳಿಸಿಕೊಳ್ಳಲು ಒಡಂಬಡಿಕೆಗಳನ್ನು ಮಾಡಿಕೊಳ್ಳಬೇಕು. ಆ ಒಡಂಬಡಿಕೆಗಳ ನಿಯಮಗಳ ಬಗ್ಗೆ ಜಾಗೃತಿ ಮತ್ತು ಬದ್ಧತೆಯನ್ನು ಹೊಂದಿರಬೇಕು. ಇವೆಲ್ಲದರ ಜೊತೆಗೆ ವ್ಯಕ್ತಿ ತನ್ನ ಸಹಜೀವಿಗಳನ್ನು ಪರಿಗಣಿಸುವುದರಲ್ಲಿ ಸಾಮಾನ್ಯ ನೈತಿಕತೆಯನ್ನು ಪಾಲಿಸುವುದು ಕೂಡಾ ಸಹಜ ಮನಸ್ಸಿನ ಲಕ್ಷಣವೇ ಆಗಿರುತ್ತದೆ.

ಆದರೆ ಒಬ್ಬ ವ್ಯಕ್ತಿ ವಿಷಯಗಳನ್ನು ಗ್ರಹಿಸುವುದರಲ್ಲಿಯೇ ಒಂದು ಮೂಲಭೂತವಾದ ತೊಡಕಿದೆ. ಅದೇನೆಂದರೆ, ವ್ಯಕ್ತಿಯ ವಯಸ್ಸು, ಲಿಂಗ, ಸಂಸ್ಕೃತಿ, ಸಾಮಾಜಿಕ ರಚನೆ ಮತ್ತು ವ್ಯಕ್ತಿಗತವಾದ ಹಿನ್ನೆಲೆಗಳೆಲ್ಲವೂ ಕೂಡಾ ವ್ಯಕ್ತಿಯ ಗ್ರಹಿಸುವಿಕೆಯ ವಿಷಯದಲ್ಲಿ ನೇರವಾಗಿ ಮತ್ತು ಗಾಢವಾಗಿ ಪ್ರಭಾವ ಬೀರುತ್ತದೆ.

ಆಯಾ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಭೌಗೋಳಿಕ ಪ್ರಭಾವಗಳಿಂದ ವ್ಯಕ್ತಿ ಆಲೋಚಿಸುತ್ತಾನೆ, ಕಲ್ಪಿಸಿಕೊಳ್ಳುತ್ತಾನೆ, ಸ್ಮರಿಸಿಕೊಳ್ಳುತ್ತಾನೆ, ಉದ್ದೇಶಿಸುತ್ತಾನೆ, ಗ್ರಹಿಸುತ್ತಾನೆ, ಭಾವಿಸುತ್ತಾನೆ, ಪ್ರತಿಫಲಿಸುತ್ತಾನೆ ಮತ್ತು ಪ್ರಕಟಿಸುತ್ತಾನೆ. ವ್ಯಕ್ತಿಯ ಬಯಕೆ ಹಾಗೂ ಭಯಗಳು, ಸ್ವೀಕಾರ ಹಾಗೂ ನಿರಾಕರಣೆಗಳು ಮತ್ತು ಸಂಭ್ರಮ ಹಾಗೂ ವಿಷಾದಗಳು ಕೂಡಾ ವ್ಯಕ್ತಿಯ ವೈಯಕ್ತಿಕ ಮನಸ್ಥಿತಿ, ಅವನ ಕುಟುಂಬದ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಪರಿಸ್ಥಿತಿ, ಅವನ ಸಂಪರ್ಕ ಮತ್ತು ಹೊರಜಗತ್ತಿಗೆ ತೆರೆದುಕೊಳ್ಳುವ ಸಾಧ್ಯತೆಗಳ ಸಂಪನ್ಮೂಲಗಳನ್ನು ಅವಲಂಬಿಸುವುದು ಮತ್ತು ಅವುಗಳ ಪ್ರಭಾವಗಳಿಗೆ ಒಳಗಾಗಿ ಒಂದು ರೂಢಿಗತ ಆಲೋಚನಾಕ್ರಮದಲ್ಲಿ ಬಂಧಿತವಾಗಿರುವುದು. ಹಾಗಾಗಿ ಸಹಜ ಮನಸ್ಸು ಎಂಬುವುದನ್ನು ಸಹಜವಾಗಿ ತಿಳಿಯಲು ಪ್ರಯತ್ನಿಸಿದಾಗ ವ್ಯಕ್ತಿಯು ತನ್ನ ಎಲ್ಲಾ ಪೂರ್ವಾಗ್ರಹಗಳಿಂದ ಹೊರತಾಗಿ; ಪ್ರಾದೇಶಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಭಾವಗಳಿಂದಲೂ ಹೊರತಾಗಿರುವ ವಿವೇಕ ಮತ್ತು ಎಚ್ಚರಿಕೆಯಿಂದ ವಿಷಯಗಳನ್ನು ಗ್ರಹಿಸಬೇಕು. ಗ್ರಹಿಸುವಿಕೆ ಎಂಬುದು ಒಂದು ಕೌಶಲ್ಯ. ಒಟ್ಟಾರೆ ವ್ಯಕ್ತಿಯು ಸಮಭಾವ ಮತ್ತು ಅತಿರೇಕತೆಗಳಿಲ್ಲದ ಮನಸ್ಥಿತಿಯಿಂದ ವಿಷಯವನ್ನು ಗುರುತಿಸಬೇಕು ಮತ್ತು ವಿಷಯದ ಆಂತರ್ಯವನ್ನು ಗ್ರಹಿಸಬೇಕು.

ಒಬ್ಬ ವ್ಯಕ್ತಿಯು ತನ್ನನ್ನು ತಾನು ಹೇಗೆ ನೋಡಿಕೊಳ್ಳುತ್ತಾನೆ ಅಥವಾ ಗ್ರಹಿಸುತ್ತಾನೆ, ಮತ್ತೊಬ್ಬ ವ್ಯಕ್ತಿಯ ಜೊತೆಗೆ ಎಂತಹ ಸಂಬಂಧವನ್ನು ಹೊಂದಿರುತ್ತಾನೆ, ಸಮಾಜದ ವಿಷಯಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದೆಲ್ಲವೂ ಮನಸ್ಸಿನ ಸಹಜತೆ ಮತ್ತು ಅಸಹಜತೆಯನ್ನು ನಿರ್ಧರಿಸುವ ಮುಖ್ಯವಾದ ವಿಷಯಗಳೇ.

ಆಲೋಚಿಸುವ, ಭಾವಿಸುವ, ಗ್ರಹಿಸುವ, ಪ್ರತಿಕ್ರಿಯಿಸುವ ರೀತಿಗಳಲ್ಲಿ ಅತಿರೇಕತೆ ಇಲ್ಲದಿರುವುದು, ಹಾಗೆಯೇ ಹೊಂದಿಕೊಳ್ಳುವ, ಸಹಕರಿಸುವ, ಒಬ್ಬರನ್ನೊಬ್ಬರು ಅಂಗೀಕರಿಸುವ, ಮನ್ನಿಸುವ ವಿಷಯಗಳಲ್ಲಿ ಸ್ವಾಭಾವಿಕ ಸಮ್ಮತಿ ಇರುವುದು ಸಹಜ ಮನಸ್ಸಿನ ಪ್ರಮುಖ ಗುಣಲಕ್ಷಣಗಳೇ ಆಗಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಯೋಗೇಶ್ ಮಾಸ್ಟರ್

contributor

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು