ಪ್ರಚೋದಿತ ಪ್ರತಿಕ್ರಿಯೆ
ತಾಯಿಯೊಬ್ಬಳು ಸಂಕಟ ತೋಡಿಕೊಳ್ಳುತ್ತಿದ್ದಳು.
‘‘ನಾನು ಏನು ಮಾತಾಡಿಸಿದರೂ ನನ್ನ ಮಗಳು ಸಿಡಿದು ಬೀಳ್ತಾಳೆ. ಹಂಗಲ್ಲಮ್ಮಾ ಹಿಂಗೆ ಅಂತ ನಯವಾಗಿ ಹೇಳಿದರೂ ಕೂಡಾ ಒರಟಾಗಿ ಜವಾಬು ಕೊಡ್ತಾಳೆ. ಕೆಲವು ಸಲ ಏನೂ ಹೇಳೋದೇ ಬೇಡ. ನೋಡಿದರೇನೇ ಸಿಡಿಮಿಡಿಗೊಳ್ಳುತ್ತಾಳೆ. ಯಾಕೆ ಹೀಗೆ?’’
‘‘ಈ ಹಿಂದೆ ನೀವು ಅವಳನ್ನು ಬೈದಿದ್ದೀರಾ ಅಥವಾ ಹೊಡೆದಿದ್ದೀರಾ?’’ ಎಂಬ ಪ್ರಶ್ನೆಗೆ, ‘‘ಚಿಕ್ಕ ಹುಡುಗರಾಗಿದ್ದಾಗ ಏನಾದರೂ ತಪ್ಪು ಮಾಡಿದಾಗ ಅಥವಾ ಬೇಡಾಂತ ಅಂದಿದ್ದನ್ನು ಮಾಡಿದಾಗ ಕೆಲವು ಸಲ ಬೈದಿದ್ದೇನೆ, ಒಂದೆರಡು ಏಟೂ ಕೊಟ್ಟಿದ್ದೇನೆ’’ ಎಂಬ ಉತ್ತರ ಬಂದಿತು.
ಕೆಲವು ಸಲ ಎಂದರೆ ನಮ್ಮ ಲಘುವಾದ ಭಾಷೆಯಲ್ಲಿ ಹಲವು ಸಲವೆಂದೂ, ಅವಾಗವಾಗ ಎಂದರೆ ಯಾವಾಗಲೂ ಎಂದೂ ಅರ್ಥ ಮಾಡಿಕೊಳ್ಳಬೇಕು.
ಅದೇ ಸಮಸ್ಯೆ ಆಗಿರುವುದು.
ರಶ್ಯ ದೇಶದಲ್ಲಿ ಇವಾನ್ ಪಾವ್ಲಾವ್ ಎಂಬ ಮನೋವಿಜ್ಞಾನಿ ನಾಯಿಯ ಮೇಲೆ ಮಾಡಿರುವ ಒಂದು ಪ್ರಯೋಗದಿಂದ ಈ ಸಮಸ್ಯೆಯನ್ನು ತಿಳಿದುಕೊಳ್ಳಬಹುದು.
ನಾಯಿಯ ಮೆಚ್ಚಿನ ಆಹಾರವಾದ ಮಾಂಸವನ್ನು ಅದರ ಮುಂದಿಟ್ಟಾಗ ಅದರ ಬಾಯಲ್ಲಿ ನೀರೂರುವುದು. ಅದೇ ನಾಯಿಯ ಮುಂದೆ ಗಂಟೆ ಬಾರಿಸಿದಾಗ ಅದರ ಬಾಯಲ್ಲಿ ನೀರೇನೂ ಸುರಿಯುವುದಿಲ್ಲ. ಏಕೆಂದರೆ ಬಾರಿಸುವ ಗಂಟೆಯಾಗಲಿ, ಅದರ ಸದ್ದಾಗಲಿ ನಾಯಿಯ ಇಷ್ಟದ ಆಹಾರವೇನಲ್ಲ.
ಆದರೆ ಗಂಟೆ ಬಾರಿಸಿದ ನಂತರ ನಾಯಿಗೆ ಮಾಂಸದ ಊಟವಿಡಲು ತೊಡಗಿದರು ಎಂದು ಇಟ್ಟುಕೊಳ್ಳಿ. ಪ್ರತಿ ಸಲ ಗಂಟೆ ಬಾರಿಸುವುದು ನಂತರ ನಾಯಿಗೆ ಊಟವಿಡುವುದು; ಹೀಗೆ ಒಂದಷ್ಟು ಕಾಲ ನಡೆದ ಮೇಲೆ, ಊಟವಿಡದೆಯೇ ಗಂಟೆ ಬಾರಿಸಿದರೂ ನಾಯಿಯ ಬಾಯಿಯಲ್ಲಿ ನೀರೂರುವುದು.
ಇಲ್ಲಿ ಸಹಜವಾದ ಪ್ರತಿಕ್ರಿಯೆ, ಪ್ರಚೋದಿತ ಪ್ರತಿಕ್ರಿಯೆ ಮತ್ತು ವಸ್ತು ಹಾಗೂ ಪ್ರತಿಕ್ರಿಯೆಗೆ ಇರುವ ಸಂಬಂಧವನ್ನು ಗಮನಿಸೋಣ.
ತನ್ನ ಊಟವನ್ನು ಕಂಡಾಗ ನಾಯಿಯ ಬಾಯಲ್ಲಿ ನೀರೂರುವುದು ಅದು ಸಹಜವಾದ ಪ್ರತಿಕ್ರಿಯೆ. ಅದಕ್ಕೇನೂ ಪೂರ್ವಪ್ರೇರಿತ ಪ್ರಚೋದನೆ ಏನೂ ಇಲ್ಲ.
ಹಾಗೆಯೇ ಗಂಟೆ ಬಾರಿಸಿದಾಗ ನಾಯಿಯ ಬಾಯಲ್ಲಿ ನೀರೂರಬೇಕಾಗಿರುವ ಪ್ರಮೇಯವೇ ಇಲ್ಲ. ಆದರೆ ಪ್ರಯೋಗದ ಮೂರನೆಯ ಹಂತವಾಗಿ ಗಂಟೆ ಬಾರಿಸುವುದು ಮತ್ತು ತಕ್ಷಣವೇ ಆಹಾರವನ್ನು ನೀಡುವುದು. ಆಗ ಮೊದಲಿನ ಹಂತದಂತೆ ಪೂರ್ವಪ್ರೇರಣೆ ಏನೂ ಇಲ್ಲದೆ ಸಹಜವಾಗಿ ಬಾಯಲ್ಲಿ ನೀರೂರುತ್ತದೆ. ಆದರೆ ಈ ಗಂಟೆ ಹೊಡೆಯುವುದು ಮತ್ತು ತಕ್ಷಣ ಆಹಾರ ನೀಡುವುದು ಮುಂದುವರಿದಂತೆ ನಾಯಿಗೆ ಗಂಟೆ ಹೊಡೆದಾಗ, ‘ಓ, ಈಗ ನನಗೆ ನನ್ನ ಆಹಾರ ಸಿಗುವುದು’ ಎಂಬ ಖಚಿತವಾದ ನಿರೀಕ್ಷೆ ಉಂಟಾಗುತ್ತದೆ. ಅದರಂತೆ ಆಹಾರವೂ ಸಿಗುತ್ತಿರುತ್ತದೆ.
ಆದರೆ ಪ್ರಯೋಗದ ಕೊನೆಯ ಹಂತವಾಗಿ ಈಗ ಗಂಟೆ ಹೊಡೆದರೂ ಸಾಕು, ಆಹಾರ ಕೊಡದಿದ್ದರೂ ನಾಯಿಯ ಬಾಯಲ್ಲಿ ನೀರೂರುತ್ತದೆ. ಇದೇ ಪೂರ್ವಪ್ರೇರಿತ ಅಥವಾ ನಿರ್ಬಂಧಿತ ಪ್ರಚೋದನೆ. ಗಂಟೆಯಲ್ಲಿ ಆಹಾರವಿಲ್ಲ. ಆದರೆ ಗಂಟೆ ಹೊಡೆದಾಗೆಲ್ಲಾ ಆಹಾರ ಸಿಗುತ್ತಿದ್ದುದರಿಂದ ನಾಯಿಗೆ ಗಂಟೆಗೂ ಮತ್ತು ಆಹಾರಕ್ಕೂ ಸಂಬಂಧ ಮಾನಸಿಕವಾಗಿ ಜೋಡಣೆಯಾಗಿತ್ತು. ಹಾಗಾಗಿ ಈಗ ಆಹಾರ ಕೊಡದಿದ್ದರೂ ಗಂಟೆಯ ಸದ್ದು ಕೇಳಿದ ತಕ್ಷಣ ಬಾಯಲ್ಲಿ ನೀರೂರುತ್ತದೆ.
ಹಿಂದೆ ನಾಯಿ ಕಚ್ಚಿರುವ ಭಯದಿಂದ ಯಾವ ನಾಯಿಯನ್ನು ನೋಡಿದರೂ, ಅದು ಸಾದುವಾಗಿದ್ದರೂ ಕೆಲವರು ಹೆದರುವುದು ಇದಕ್ಕೆಯೇ. ಎಷ್ಟೋ ಬಗೆಯ ಭೀತಿಗಳು, ಆತಂಕಗಳಿಗೆ ಇಂತಹ ಪೂರ್ವಪ್ರೇರಿತ ಪ್ರಚೋದನೆಗಳೇ ಕಾರಣ.
ಒಂದು ಮಗುವಿಗೆ ಯಾವ್ಯಾವ ವಿಷಯಗಳಿಗೆ ತಾನು ಬೈಸಿಕೊಳ್ತಾಯಿರುತ್ತೇನೆ ಎಂದು ಅನುಭವಕ್ಕೆ ಬಂದಿರುತ್ತದೆ. ಗದರಿಸಿಕೊಳ್ಳುವ ಅಥವಾ ಶಿಕ್ಷೆಗೆ ಒಳಗಾಗುವ ಅನುಭವಗಳು ಪದೇ ಪದೇ ಆ ವಿಷಯಗಳಲ್ಲಿ ಆದಂತೆಲ್ಲಾ ಆ ವಿಷಯ ಬಂತೆಂದರೆ ಭಯಪಡುತ್ತಾರೆ ಅಥವಾ ಎದುರಿಸಲು ಸಿದ್ಧರಾಗುತ್ತಾರೆ.
ಪದೇ ಪದೇ ಬೈಯುವ, ಎಲ್ಲದಕ್ಕೂ ದಂಡಿಸುವ ವ್ಯಕ್ತಿಯನ್ನು ಕಂಡಕೂಡಲೇ ಅವರು ಈಗ ಬೈಯದೇ ಇದ್ದರೂ ಅಥವಾ ದಂಡಿಸದೇ ಇದ್ದರೂ ಪೂರ್ವಪ್ರೇರಿತ ಪ್ರತಿಕ್ರಿಯೆ ಅಥವಾ ಪ್ರಚೋದಿತ ಪ್ರತಿಕ್ರಿಯೆ ಉಂಟಾಗಿಬಿಡುತ್ತದೆ. ಮಗುವು ಭಯ ಪಡುವ ಅಥವಾ ಎದುರಾಡುವ ಪ್ರತಿಕ್ರಿಯೆಯನ್ನು ರೂಢಿಯಾಗಿರುವಂತೆ ವ್ಯಕ್ತಪಡಿಸಿಬಿಡುತ್ತದೆ.
ತಾಯಿಗೆ ಮಾತ್ರ ಸಂಕಟ, ಈಗ ತಾನು ಬೈಯದೇ ಇದ್ದರೂ ದಂಡಿಸದೇ ಇದ್ದರೂ ಮಗಳು ಜಗಳವಾಡುತ್ತಾಳೆಂದು.
ಮೊದಲೇ ಪೂರ್ವಪ್ರೇರಿತ ಪ್ರಚೋದನೆಯಿಂದ ಪ್ರತಿಕ್ರಿಯೆ ಉಂಟಾಗುತ್ತದೆ. ಅದರ ಜೊತೆಗೆ ಜಿದ್ದುಗೇಡಿತನವೇನಾದರೂ ಇದ್ದರೆ, ಅಥವಾ ಇತರ ನಡವಳಿಕೆಯ ದೋಷ ಅಥವಾ ಅನುಸರಣಿಕೆಯ ದೋಷಗಳಂತಹ ಸಮಸ್ಯೆಗಳೇನಾದರೂ ಇದ್ದರೆ ಬೆಂಕಿಗೆ ತುಪ್ಪ ಸುರಿದಂತೆ. ಹಾಗಾಗಿಯೇ ಮನಶಾಸ್ತ್ರೀಯ ಜಾಗೃತಿ ಅಥವಾ ಸೈಕಾಲಜಿಕಲ್ ಅವೇರ್ನೆಸ್ ಇರಬೇಕಾಗಿರುವುದು ಒಂದು ಸಾಮಾನ್ಯ ಅಗತ್ಯ. ಮನುಷ್ಯರ ಜೊತೆಗೆ ನಾವು ನಡೆದುಕೊಳ್ಳುತ್ತಿದ್ದೇವೆಂದರೆ ಅವರ ಮನಸ್ಸಿನ ಮೇಲೆ ಪ್ರಭಾವ ಬೀರುವ ಪ್ರಕ್ರಿಯೆಯ ಭಾಗವಾಗುತ್ತಿರುತ್ತೇವೆ ಎಂಬ ಎಚ್ಚರ ಇರಲೇಬೇಕು.