ಅಚ್ಚುಗೇಡಿತನ

Update: 2023-07-30 12:22 GMT

ಜ್ಞಾಪಕ ಇರಲಿ, ನಮ್ಮ ಮೆದುಳು ಒಂದು ಸೆಕೆಂಡಿಗೆ 1,016 ಪ್ರೊಸೆಸ್ಸಿಂಗ್ ಮಾಡುವಷ್ಟು ಸಾಮರ್ಥ್ಯ ಹೊಂದಿದೆ. ಸದ್ಯಕ್ಕೆ ಯಾವ ಕಂಪ್ಯೂಟರ್ರೂ ಅದನ್ನು ಮೀರಿಸೋಕೆ ಆಗಲ್ಲ. ಆದರೂ ತೀರಾ ಕೆಳಮಟ್ಟದ ತಗಡು ಕ್ಯಾಲ್ಕ್ಯುಲೇಟರ್ ಹಾಕುವಂತಹ ಲೆಕ್ಕಾಚಾರವನ್ನು ನಮ್ಮ ಮೆದುಳು ಮಾಡಕ್ಕೆ ಆಗ್ತಿಲ್ಲ. ಚಿಕ್ಕಪುಟ್ಟ ಲೆಕ್ಕಾಚಾರ ಹಾಕೋಕೆ ಡಬ್ಬಾ ಕ್ಯಾಲ್ಕು ್ಯಲೇಟರ್ ಬಳಸ್ತಾರೆ. ಯಾಕೆ ಗೊತ್ತಾ? ಅಚ್ಚುಗೇಡಿತನ ಎಂಬೋ ಸಮಸ್ಯೆ.

ಪೂರ್ವಾಗ್ರಹ ಎನ್ನುವಂತಹ ಪೀಡೆಯೇ ಅಚ್ಚುಗೇಡಿತನ. ನೂರಾರು ಬಗೆಯಲ್ಲಿ ನಮ್ಮ ಅಚ್ಚುಗೇಡಿತನವನ್ನು ನಾವು ಒರೆ ಹಚ್ಚಿ ನೋಡಿಕೊಳ್ಳಬಹುದು.

ಸುಮ್ಮನೆ ಉದಾಹರಣೆಗೆ ಒಂದಷ್ಟು: ಯಾರಾದರೂ ಒಬ್ಬ ವ್ಯಕ್ತಿ ತಪ್ಪು ಮಾಡಿದಾಗ, ಉದಾಹರಣೆಗೆ ಕಳ್ಳತನ ಮಾಡಿದಾಗ, ಅವನು ಕಳ್ಳ, ಅವನ ಗುಣ ನಡವಳಿಕೆ ಸರಿ ಇಲ್ಲ, ಅವನಿಗೆ ನೈತಿಕತೆ ಇಲ್ಲ ಎಂದು ದೂರುವ ನಾವು ಒಂದುವೇಳೆ ನಾವೇ ಕಳ್ಳತನ ಮಾಡಿದರೆ, ಅದು ಸಾಂದರ್ಭಿಕ, ಆ ಸಿಚುಯೇಶನ್ ಹಾಗೆ ಮಾಡಿಸಿತು. ನಾನು ಹಾಗೆ ಮಾಡಿದ್ದಕ್ಕೆ ಕಾರಣ ಆ ಸಂದರ್ಭದ ಅಥವಾ ಸಮಯದ ಒತ್ತಡ ಎಂದರೆ, ಖಂಡಿತವಾಗಿಯೂ ನಾವು ಅಚ್ಚುಗೇಡಿಗಳು.

ಅಚ್ಚುಗೇಡಿಗಳು ಹಾಗೆಯೇ, ತಾವು ಗೆದ್ದಾಗ ತಮ್ಮ ಪರಿಶ್ರಮ ಮತ್ತು ಸಾಧನೆಯ ಫಲ ಎಂದುಕೊಳ್ಳುವರು. ಸೋತರೆ ‘ದುರಾದೃಷ್ಟ’ ಅಥವಾ ಅದೇನೋ ತೊಂದರೆ ಬಂದದ್ದಕ್ಕೆ ಹಾಗಾಯ್ತು ಎನ್ನುವರು.

ಈ ಅಚ್ಚುಗೇಡಿಗಳು ತಮಗೆ ಸಿಕ್ಕ ಮೊದಲ ಮಾಹಿತಿಯನ್ನೇ ಸರಿ ಎನ್ನುವವರು. ಸಿಗರೇಟು ಸೇದುವ ಅಚ್ಚುಗೇಡಿ ಸಿಗರೇಟು ಸೇದುವುದರಿಂದ ಕ್ಯಾನ್ಸರ್ ಬರತ್ತೆ ಅನ್ನೋದು ಸುಳ್ಳು.

ಈಗ ಯಾಕೆ ಹೆಂಗಸರಿಗೆ ಮತ್ತು ಮಕ್ಕಳಿಗೆ ಬರುತ್ತೆ? ಅವರೇನೂ ಸಿಗರೇಟು ಸೇದಲ್ವಲ್ಲಾ? ಸಿಗರೇಟು ಸೇದುವವರು ಎಷ್ಟು ವಯಸ್ಸಾದರೂ ಯಾವ ಕ್ಯಾನ್ಸರ್ರೂ ಬರದೇ ಇರೋದನ್ನ ನೋಡಿಲ್ವಾ ಎನ್ನುವವರು.

ವಾಸ್ತವತೆ ಏನೇ ಇರಲಿ, ತಾವು ಅಂದುಕೊಂಡಿರುವ ಅಥವಾ ತಮಗೆ ಆಗಿನಿಂದ ತಿಳಿದಿರುವು

ದನ್ನೇ ಸರಿ ಎಂದು ನಂಬುವ ಅಥವಾ ಅದು ಸರಿ ಇಲ್ಲ ಎಂದು ಒಪ್ಪಲು ಸಿದ್ಧವಿಲ್ಲದಿರುವ ಮನಸ್ಥಿತಿ ಈ ಅಚ್ಚುಗೇಡಿತನ. ಯಾವುದೋ ವ್ಯಕ್ತಿ ಜಿಪುಣ, ಅವನು ಪಡೆಯುವವನೇ ಹೊರತು ಕೊಡುವವನಲ್ಲ ಎಂದು ಮನಸ್ಸಿನಲ್ಲಿ ಅಚ್ಚೊತ್ತಿಸಿಕೊಂಡಿದ್ದಾರೆಂದಿಟ್ಟುಕೊಳ್ಳಿ. ಆತನೇನಾದರೂ ಕೊಟ್ಟರೆ ಏನೋ ಅಪ್ಪಿತಪ್ಪಿ ಕೊಟ್ಟಿದ್ದಾನೆಯೇ ಹೊರತು ಒಳ್ಳೆ ಮನಸ್ಸಿನಿಂದ ಅಲ್ಲ ಎನ್ನುವುದೋ ಅಥವಾ ಏನೋ ಲಾಭ ಬರೋದೇ ಇರತ್ತೆ ಅದಕ್ಕೆ ಕೊಟ್ಟಿರುತ್ತಾನೆ. ಅವನು ಕೊಡುವಂತಹ ಮನುಷ್ಯನೇ ಅಲ್ಲ ಎನ್ನುವುದು ಅಚ್ಚುಗೇಡಿಗಳ ತರ್ಕ ಮತ್ತು ವಾದವಾಗಿರುತ್ತದೆ.

ಯಾರು ಜಾತಿ ಬುದ್ಧಿ ಎಂಬ ಪದ ಬಳಸುತ್ತಾರೋ, ಆ ಧರ್ಮವೇ ಹೀಗೆ, ನಮ್ಮ ಧರ್ಮವೇ

ಹಾಗೆ, ಅವನಿಗೆ ನೀವು ಏನು ಮಾಡಿದರೂ ಬುದ್ಧಿ ಬರಲ್ಲ, ಹೆಂಗಸರು ಅಂದರೇನೇ ಹೀಗೆ,

ಗಂಡಸು ಯಾವಾಗಲೂ ಗಂಡಸೇ; ಇವೆಲ್ಲಾ ಅಚ್ಚುಗೇಡಿಗಳ ಸಾಮಾನ್ಯ ಆಡುಮಾತುಗಳು.

ಅಚ್ಚುಗೇಡಿಗಳ ಪ್ರಧಾನ ಲಕ್ಷಣವೆಂದರೆ ತಾವು ನಂಬಿರುವುದನ್ನು ಸಮರ್ಥಿಸುವುದು ಹಾಗೂ ನಿರ್ಣಾಯಕವಾಗಿ ವಿಷಯವನ್ನು ಹೇಳುವುದು. ಇಂತಹ ನಿರ್ಣಾಯಕ ಮನಸ್ಥಿತಿ ಬೇರೆ ವ್ಯಕ್ತಿಗಳ, ಪ್ರಸಂಗಗಳ ಮತ್ತು ವಿಷಯಗಳ ಬಗ್ಗೆ ಮಾತ್ರ ಇರುವುದಲ್ಲ, ತಮ್ಮ ಬಗ್ಗೆಯೂ ಹಾಗೆಯೇ ಹೊಂದಿರುತ್ತಾರೆ. ಆದ್ದರಿಂದಲೇ ಅವರ ಸಾಮರ್ಥ್ಯಗಳನ್ನು ಮತ್ತು ಇತಿಮಿತಿಗಳಾವುದನ್ನೂ ಅವರು ತುಲನೆ ಮಾಡಿಕೊಳ್ಳಲು ಮುಂದಾಗುವುದೇ ಇಲ್ಲ. ಅವರು ಸದಾ ಕೆಲವೊಂದು ಭ್ರಮೆಯಲ್ಲಿಯೇ ಇರುತ್ತಾರೆ. ಯಾವುದನ್ನು ನಂಬಬೇಕೋ ಅದನ್ನು ನಂಬುವುದಿಲ್ಲ. ಯಾವುದನ್ನು ನೆಚ್ಚಿಕೊಳ್ಳಬಾರದೋ ಅದನ್ನು ನಂಬುತ್ತಾರೆ. ತಮ್ಮ

ನಂಬಿಕೆಯನ್ನು ಪರೀಕ್ಷಿಸಿಕೊಳ್ಳುವುದಕ್ಕಿಂತ ಮಿಗಿಲಾಗಿ ಅದನ್ನು ಬಲಪಡಿಸಿಕೊಳ್ಳಲು ಸಂಗತಿಗಳನ್ನು ಮತ್ತು ವ್ಯಕ್ತಿಗಳನ್ನು ಬಳಸಿಕೊಳ್ಳುತ್ತಾರೆ.

ತಮ್ಮ ನಂಬಿಕೆಗೆ, ವಾದಕ್ಕೆ ಒಂದಿಷ್ಟು ಪೂರಕವಾದ ಘಟನೆಗಳು ನಡೆದರೂ ಅದನ್ನು ಜೀವನ ಪರ್ಯಂತ ಅಚ್ಚೊತ್ತಿಟ್ಟುಕೊಳ್ಳಲು ಸಿದ್ಧವಾಗಿರುತ್ತಾರೆ. ಅದೇ ವಿರುದ್ಧವಾಗಿ ನಡೆದರೆ ಏನೋ ಅಪ್ಪಿ ತಪ್ಪಿ ನಡೆದಿದೆ ಎನ್ನುವವರು ಇವರು. ಉದಾಹರಣೆಗೆ ಯಾವುದೋ ದೇವರಿಗೆ ಹರಕೆ ಹೊತ್ತಿಕೊಂಡಿರುತ್ತಾರೆ. ಎಷ್ಟೋ ಜನರು ತಮಗೆ ಬೇಕಾದ ಫಲವನ್ನು ಕಂಡಿದ್ದಾರೆಂಬುದು ಅವರ ಗ್ರಹಿಕೆ ಮತ್ತು ನಂಬಿಕೆ. ಸರಿ, ತಾವೆಂದುಕೊಂಡಂತೆ ಆದರೆ, ನೋಡಿದೆಯಾ, ನಾನು ಹೇಳಲಿಲ್ಲವಾ ಈ ದೇವರ ಶಕ್ತಿ ಎಂತಹುದೆಂದು ಎನ್ನುತ್ತಾರೆ. ಒಂದು ವೇಳೆ ಆಗಲಿಲ್ಲವೆಂದಿಟ್ಟುಕೊಳ್ಳಿ, ಬಹುಶಃ ತಾವೇನೋ ನೇಮದಲ್ಲಿ ತಪ್ಪು ಮಾಡಿರಬಹುದು ಅಥವಾ ನಮ್ಮ ಹಣೆಬರಹವೇ ಆ ರೀತಿ ಇರಬಹುದು ಅಥವಾ ನಮ್ಮ ಸಮಯ, ಗ್ರಹಗತಿ ಸರಿ ಇಲ್ಲದಿರಬಹುದು ಎಂದುಕೊಳ್ಳುತ್ತಾರೆಯೇ ಹೊರತು, ಆ ದೇವರ ಪವರ್ ಬಗ್ಗೆ ಅನುಮಾನ ಪಡುವುದಿಲ್ಲ. ಆ ದೇವರು ಸರಿ ಇಲ್ಲ ಎನ್ನುವುದಿಲ್ಲ.

ಇಂತಹ ಅಚ್ಚುಗೇಡಿತನವು ಬಹಳ ಸಾಮಾನ್ಯ ಸಮಸ್ಯೆಯಾಗಿರುವುದರಿಂದ ಎಷ್ಟೋ ರಾಜಕಾರಣಿಗಳು, ನಟರು, ಧಾರ್ಮಿಕ ಮುಖ್ಯಸ್ಥರು ತಾವು ಮೊದಲು ಜನ ಮಾನಸದಲ್ಲಿ ಅಚ್ಚೊತ್ತಿರುವ ಕಾರಣದಿಂದ ಏನೇ ತಪ್ಪುಗಳನ್ನು, ಅನಾಹುತಗಳನ್ನು ಮಾಡಿದರೂ ಬಚಾವ್ ಆಗುತ್ತಾ ಬರುತ್ತಿರುವುದು.

ವ್ಯಕ್ತಿಪೂಜೆ ಎನ್ನುವುದು ಅಚ್ಚುಗೇಡಿಗಳಿಗೆ ಬಲೇ ಪ್ರೀತಿ. ವ್ಯಕ್ತಿಗಳೇ ಅಲ್ಲ. ಯಾವುದೋ

ಒಂದು ಸಿದ್ಧಾಂತ, ಯಾವುದೋ ಒಂದು ವಾದ, ಯಾವುದೋ ಹೆಚ್ಚುಗಾರಿಕೆ, ಯಾವುದ ರದ್ದೋ ಮೇಲಿನ ದ್ವೇಷ; ಹೀಗೆ ಯಾವುದಾದರೊಂದು ಅಚ್ಚು ಹೊಡೆದುಕೊಂಡಿರಲೇ ಬೇಕು. ಇಲ್ಲವಾದರೆ ಜೀವನವೇ ಬೋಳುಬೋಳಾಗಿ ಅವರಿಗೆ ಕಾಣುತ್ತಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Contributor - ಯೋಗೇಶ್ ಮಾಸ್ಟರ್,

contributor

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು