ವ್ಯಕ್ತಿ ಪೂಜಾಫಲ

Update: 2023-07-15 18:45 GMT

 ಮಗುವೊಂದು ಯಾವುದೋ ಒಂದು ಸಂದರ್ಭದಲ್ಲಿ ಯಾವುದೋ ಒಂದು ತಿಂಡಿಯನ್ನೋ ಅಥವಾ ಆಟಿಕೆಯನ್ನೋ ಬೇಡ ಎಂದಿರುತ್ತದೆ. ಆಗ ಪೋಷಕರು ಅದನ್ನು ಸಂದರ್ಭಾನುಸಾರವಾಗಿಯೇ ಪರಿಗಣಿಸಬೇಕೇ ಹೊರತು, ಆ ಮಗುವಿಗೆ ಆ ತಿಂಡಿ ಅಥವಾ ಆ ಆಟಿಕೆ ಇಷ್ಟವಿಲ್ಲ ಎಂದು ಹೇಳುತ್ತಾ ಇರಬಾರದೆಂದು ಉತ್ತಮ ಪೋಷಕತ್ವದ ಕಿವಿ ಮಾತಾಗಿ ಹೇಳುತ್ತಿರುತ್ತೇವೆ. ಅದೇ ರೀತಿಯಾಗಿ ಯಾವುದೇ ಒಂದು ಆಹಾರ ಇಷ್ಟಪಟ್ಟು ತಿಂದಾಗ, ಅದಕ್ಕೆ ಅದು ಇಷ್ಟ ಎಂದು ಹೇಳುತ್ತಾ, ಮುಂದೊಮ್ಮೆ ಅದಕ್ಕೆ ಇಷ್ಟವಾಗದಿದ್ದರೂ, ''ನೀನು ಅಷ್ಟು ಇಷ್ಟಪಟ್ಟು ತಿಂದೆ, ಈಗೇನಾಯ್ತು, ತಿನ್ನು'' ಎಂದು ಒತ್ತಾಯಿಸುವುದು ಇದೆಯಲ್ಲಾ ಅದು ತಿಳಿಗೇಡಿತನವೆಂದು ಹೇಳಲಾಗುವುದು. ಹಾಗೆಯೇ ಮಗುವಿಗೆ ಮುಂದೆ ನೀನು ಏನಾಗುತ್ತೀಯಾ ಎಂದು ಎಳೆಯ ಪ್ರಾಯದಲ್ಲೇ ಕೇಳಿದರೆ ಅದು ತನ್ನ ಇತಿಮಿತಿಯಲ್ಲಿ ಮತ್ತು ಆ ಹೊತ್ತಿಗೆ ಆಕರ್ಷಕವಾಗಿರುವುದನ್ನು ಮಾತ್ರ ಹೇಳುತ್ತದೆ. ವಾಸ್ತವವಾಗಿ ಅದಕ್ಕೆ ತನ್ನ ಇತಿಮಿತಿಯ ಬಗ್ಗೆ ಮತ್ತು ಸಾಮರ್ಥ್ಯದ ಬಗ್ಗೆ ಯಾವ ಅರಿವೂ ಇರುವುದಿಲ್ಲ. ಬದುಕಿನ ದಾರಿಯಲ್ಲಿ ಸಾಗುತ್ತಿದ್ದಂತೆ ಗುರಿಗಳೂ ಬದಲಾಗುತ್ತಿರುತ್ತವೆ. ಅದು ಸಹಜವೂ ಹೌದು ಮತ್ತು ತಿಳುವಳಿಕೆಯುಳ್ಳದ್ದೂ ಹೌದು.

ಈಗ ಮತ್ತೊಂದು ಅಂಶ. ಅದೇನೆಂದರೆ ಮಗುವೊಂದು ತಪ್ಪುಮಾಡಿದರೆ ಪೋಷಕರಾದವರು ಆ ತಪ್ಪನ್ನು ಖಂಡಿಸಬೇಕು. ಮಗುವನ್ನೇ ಅಲ್ಲ. ನಡೆಯುವ ಕಾಲು ಎಡವುವವು, ನುಡಿಯುವ ಬಾಯಿ ತೊದಲುವವು. ಮಗುವೊಂದು ತನ್ನದೇ ಕಾರಣಕ್ಕಾಗಿ ಸುಳ್ಳನ್ನು ಹೇಳಿದಾಗ, ಪೋಷಕರು ಇದು ಸುಳ್ಳು. ನನಗೆ ನೀನು ಸುಳ್ಳು ಹೇಳುವುದು ಇಷ್ಟವಾಗುವುದಿಲ್ಲ ಎಂದು ಗಂಭೀರವಾಗಿ ಎಚ್ಚರಿಸಬಹುದು ಮತ್ತು ಎಚ್ಚರಿಸಬೇಕು. ಆದರೆ ನೀನೇ ಸುಳ್ಳುಗಾರ ಎಂದು ಹಣೆಪಟ್ಟಿ ಕಟ್ಟುವುದು ತಪ್ಪು. ''ಯಾವಾಗಲೂ ಸುಳ್ಳು ಹೇಳುತ್ತಾನೆ'', ''ಬಾಯ್ಬಿಟ್ಟರೆ ಸುಳ್ಳು'' ಹೀಗೆಲ್ಲಾ ಮಗುವಿಗೆ ಹೆಜ್ಜೆ ಹೆಜ್ಜೆಗೂ ಕೆಣಕುವುದು ಮತ್ತು ಬಂದವರ ಬಳಿಯಲ್ಲೆಲ್ಲಾ ಹೇಳುತ್ತಿದ್ದರೆ; ಆ ಮಗು ತನ್ನ ಹಣೆಪಟ್ಟಿಯನ್ನು ಒಪ್ಪಿಕೊಳ್ಳುವುದು ಮಾತ್ರವಲ್ಲದೆ, ಆ ಪೋಷಕರು ತಾವು ಜೀವನ ಪೂರ್ತಿ ತಾವು ಕಟ್ಟಿದ ಹಣೆಪಟ್ಟಿಯ ಕಾರಣಕ್ಕೆ ಅವನ ಸುಳ್ಳಿನ ಪರಿಣಾಮಗಳನ್ನು ಎದುರಿಸುತ್ತಿರಬೇಕಾಗುವುದು. ಹಾಗೆಯೇ ಅವರು ಮಗುವು ನಿಜ ಹೇಳುವ ಸಮಯದಲ್ಲಿಯೂ ಕೂಡಾ ಅನುಮಾನವಾಗಿಯೇ ನೋಡುತ್ತಾ; ಅದರ ಪ್ರತಿಫಲಗಳನ್ನು ಸಂಬಂಧಗಳಲ್ಲಿ, ಪ್ರಸಂಗಗಳಲ್ಲಿ ಮತ್ತು ಕೌಟುಂಬಿಕ ಹಾಗೂ ಸಾಮಾಜಿಕ ವಾತಾವರಣಗಳಲ್ಲಿ ಎದುರಿಸಬೇಕಾಗುತ್ತದೆ. ಹಣೆಪಟ್ಟಿ ಕಟ್ಟುವ ಕೆಲಸವು ಪೂರ್ವಾಗ್ರಹವನ್ನು ಸೃಷ್ಟಿಸುವ, ಅದನ್ನು ಬಲಪಡಿಸುವ ಮತ್ತು ಅದನ್ನೇ ಸರಿಯೆಂದು ಸಮರ್ಥಿಸುವ ಹಟಕ್ಕೆ ಬೀಳುವ ಮನಸ್ಥಿತಿಯನ್ನು ಉಂಟುಮಾಡುತ್ತದೆ. ಇಲ್ಲಿ ಬಹಳ ಮುಖ್ಯವಾದ ಪಾತ್ರವಹಿಸುವುದು ಹಣೆಪಟ್ಟಿ ಮತ್ತು ಪೂರ್ವಾಗ್ರಹ. ಮಗುವಿನ ಪೋಷಣೆಯಲ್ಲಿಯೇ ಇಷ್ಟರ ಮಟ್ಟಿಗೆ ಪೂರ್ವಾಗ್ರಹದ ಎಡವಟ್ಟುಗಳನ್ನು ಮಾಡಿಕೊಳ್ಳುವ ನಮ್ಮ ಸಮಾಜಕ್ಕೆ ವ್ಯಕ್ತಿ ಪೂಜೆ ಎಂಬ ಇನ್ನೊಂದು ವಿಷಯ ಬಹಳ ಸಾಮಾನ್ಯ. ತಾವು ಇಷ್ಟಪಡುವ ಯಾವುದೋ ಒಂದು ವಿಷಯದೊಂದಿಗೆ ಆ ವ್ಯಕ್ತಿಯ ಚಟುವಟಿಕೆಯನ್ನು ಸಮೀಕರಿಸಿಕೊಂಡು ವ್ಯಕ್ತಿಯನ್ನೇ ಆರಾಧಿಸುವಂತೆ ಖಾಸಗೀಕರಣಗೊಳಿಸಿಕೊಂಡರೆ (ಪರ್ಸನಲೈಸ್ ಮಾಡಿಕೊಂಡರೆ) ವ್ಯಕ್ತಿ ಪೂಜೆಯ ಅನಾಹುತಗಳನ್ನು ಎದುರಿಸಬೇಕಾಗುವುದು. ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಆ ವ್ಯಕ್ತಿಯನ್ನು ಆರಾಧಿಸುವುದರಿಂದ ಮನಸ್ಸು ತನಗೆ ನಿರಾಶೆಯನ್ನು ಉಂಟು ಮಾಡಿಕೊಳ್ಳಲು ಇಷ್ಟಪಡದೆ, ಮುಂದೆ ಆ ವ್ಯಕ್ತಿ ಏನೇ ತಪ್ಪು ಮಾಡಿದರೂ ಸಮರ್ಥಿಸಿಕೊಳ್ಳಲು ಮುಂದಾಗುತ್ತಾರೆ. ಆ ವ್ಯಕ್ತಿಯ ಮೇಲಾಗುವ ಟೀಕೆಗಳನ್ನು ವ್ಯಕ್ತಿಗತವಾಗಿ ಸ್ವೀಕರಿಸಿ, ಟೀಕೆ ಮಾಡುವವರ ದೃಷ್ಟಿ ಕೋನದಿಂದ ನೋಡಲು ಹೋಗದೆ ಮತ್ತದೇ ವ್ಯಕ್ತಿಗತವಾಗಿಯೇ ವಿಷಯವನ್ನು ಗ್ರಹಿಸುತ್ತಾ ವಿರೋಧಿಸುತ್ತಾರೆ. ಅದೆಷ್ಟರ ಮಟ್ಟಿಗೆ ಹೋಗುತ್ತದೆ ಎಂದರೆ ಟೀಕಾಕಾರರಿಗೆ ವಿಷಯವನ್ನು ಮನದಟ್ಟು ಮಾಡಿಕೊಡುವ ಬದಲು ಅಥವಾ ಅವರ ಟೀಕೆಗಳನ್ನು ನಿರ್ಲಕ್ಷಿಸುವ ಬದಲು ವಾಗ್ದಾಳಿಗೆ, ದೈಹಿಕವಾದ ದಾಳಿಗೂ ಮುಂದಾಗುತ್ತಾರೆ. ಇಂತಹ ವಿಷಯಗಳಿಗೆ ಬೇಕಾದಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಸಿನೆಮಾ ಕಲಾವಿದರನ್ನು, ರಾಜಕಾರಣಿಗಳನ್ನು, ಚಿಂತಕರನ್ನು ಅನುಸರಿಸುವವರಲ್ಲಿ ವ್ಯಕ್ತಿಪೂಜೆ ರೋಗದ ಸೋಂಕೇನಾದರೂ ತಗಲಿಬಿಟ್ಟರೆ ಮುಗಿಯಿತು, ಅವರು ತಾವು ಆರಾಧಿಸುವವರೂ ಮನುಷ್ಯರೇ, ಅವರಲ್ಲಿಯೂ ಲೋಪದೋಷಗಳಿರುತ್ತವೆ, ಅವರಲ್ಲಿ ಬರಿಯ ಕಪ್ಪು ಬಿಳಿ ಮಾತ್ರವಲ್ಲ, ಆ ಅಂಚುಗಳ ನಡುವಿನ ಬೂದುವಲಯವೆನ್ನುವುದು (ಗ್ರೇ ಏರಿಯಾ) ಒಂದಿರುತ್ತದೆ, ಅದೇ ಬಹುದೊಡ್ಡ ಪ್ರಮಾಣದಲ್ಲಿ ಹರಡಿರುವುದು ಎಂಬ ಸತ್ಯವನ್ನೇ ಅವರು ಗಮನಿಸುವುದಿಲ್ಲ. ಇದೇ ಅಪಾಯಕರವಾದಂತಹ ಧೋರಣೆ. ತಾವು ಆರಾಧಿಸುವ ವ್ಯಕ್ತಿಯ ಎಲ್ಲವನ್ನೂ ಸಮರ್ಥಿಸಿಕೊಂಡು, ವಿರೋಧಿಸುವವರನ್ನೆಲ್ಲಾ ವಿರೋಧಿಸಿಕೊಂಡು ಹೋದರೆ ಅವರು ವಾಸ್ತವ ಸ್ಥಿತಿಯಿಂದ ಹೊರತಾದ ವ್ಯಕ್ತಿನಿಷ್ಠೆಯನ್ನು ಬೆಳೆಸಿಕೊಂಡು ತಮ್ಮ ಗ್ರಹಿಕೆಯ ಸಾಮರ್ಥ್ಯವನ್ನು, ಅರಿವಿನ ವಿಸ್ತಾರವನ್ನು, ಸಂವೇದನೆ ಮತ್ತು ವಿವೇಚನೆಯನ್ನು ಕುಗ್ಗಿಸಿಕೊಳ್ಳುತ್ತಾ ಕೊನೆಗೊಮ್ಮೆ ಕಳೆದುಕೊಂಡೇ ಬಿಡುತ್ತಾರೆ. ಯಾವುದೇ ನಮ್ಮ ನೆಚ್ಚಿನ ವ್ಯಕ್ತಿಯೇ ತಪ್ಪನ್ನು ಮಾಡಿದಾಗ ಅದನ್ನು ವಿಮರ್ಶಾತ್ಮಕವಾಗಿ ನೋಡುವುದೆಂದರೆ ಅದು ದ್ವೇಷಿಸುವುದು ಎಂದಲ್ಲ! ವಿರೋಧಕ್ಕೂ, ದ್ವೇಷಕ್ಕೂ ವ್ಯತ್ಯಾಸವಿದೆ. ತಪ್ಪನ್ನು ತಿಳಿಸುವುದು ಅಥವಾ ತಮ್ಮ ಗ್ರಹಿಕೆಯಲ್ಲಿ ತೋರಿದಂತೆ ವಿಷಯವನ್ನು ಪ್ರಸ್ತುತಪಡಿಸುವುದೆಂದರೆ ಅದು ವ್ಯಕ್ತಿಯನ್ನು ಅವಮಾನಿಸುವುದೆಂದೇನಲ್ಲ. ಆ ವ್ಯಕ್ತಿ ಅದಕ್ಕೆ ಉತ್ತರವನ್ನು ಕೊಡಬಹುದು. ಕೊಡಬೇಕು ಕೂಡಾ. ಯಾವ ವ್ಯಕ್ತಿಯೂ ಪ್ರಶ್ನಾತೀತನಲ್ಲ. ಸಮಾಜದ ವ್ಯವಸ್ಥೆಯ ಗಾಲಿಗಳು ಸರಿಯಾಗಿ ನಡೆಯಲು ವಿಮರ್ಶೆ, ಪ್ರಶ್ನೆ, ವಿರೋಧ, ಸಹಕಾರ, ಪ್ರಶಂಸೆ ಎಲ್ಲಾ ಬಗೆಯ ಕೀಲೆಣ್ಣೆಗಳೂ ಬೇಕಿವೆ. ವ್ಯಕ್ತಿಪೂಜಾಫಲದ ಅನಾಹುತವೆಂದರೇನೇ ಪ್ರಶಂಸೆ ಮಾತ್ರವೇ ಒಪ್ಪಿತ. ವಿರೋಧ ಸಲ್ಲ! ಎಷ್ಟೋ ಜನ ರಾಜಕಾರಣಿಗಳು, ಕಲಾವಿದರು ತಮ್ಮ ಆರಾಧಕರ ಸ್ತುತಿಯ ಅಮಲಿನಲ್ಲಿ ತಮ್ಮನ್ನು ತಾವು ಆತ್ಮಾವಲೋಕನವನ್ನೂ ಮಾಡಿಕೊಳ್ಳುವುದಿಲ್ಲ, ಸಮರ್ಥಿಸುವವರಿರುವ ಕಾರಣ ಸರಿಪಡಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ತಮ್ಮ ವಿರೋಧಿಗಳ ಬಾಯ್ಮುಚ್ಚಲು ತಮ್ಮ ಅಭಿಮಾನಿಗಳ ಪಡೆ ಇದೆಯೆಂಬ ಅಹಂಕಾರದಲ್ಲಿ ಮುಗುಮ್ಮಾಗಿದ್ದುಬಿಡುತ್ತಾರೆ. ಅಲ್ಲಿಗೆ ಮುಗಿಯಿತು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕತೆ. ಮೊದಲು ಹೇಳಿದ ಮಗುವಿನ ಮತ್ತು ಪೋಷಕರ ಕತೆ ಸುಮ್ಮನೆ ಅಲ್ಲ. ಕುಟುಂಬದ ಮಾನಸಿಕ ಪರಿಸರವೇ ಸಮಾಜದ ಸಂಕಲಿತ ಮನಸ್ಥಿತಿ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ಯೋಗೇಶ್ ಮಾಸ್ಟರ್,

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು