ವ್ಯವಸ್ಥೆಗಳೇಕೆ ವಿಫಲವಾಗುವವು?

Update: 2023-12-03 03:17 GMT

ದೇಹದಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆ ಮೊದಲಾದ ಮೂಲ ಸಮಸ್ಯೆಗಳಿದ್ದು, ಆ ಕಾರಣದಿಂದ ಅನೇಕ ಉಪಸಮಸ್ಯೆಗಳು ಎದುರಾಗುವಂತೆ ಮನಸ್ಸಿಗೂ ಕೂಡಾ ಕೆಲವು ಮೂಲ ಸಮಸ್ಯೆಗಳಿರುತ್ತವೆ. ಆ ಸಮಸ್ಯೆಗಳೆಲ್ಲವೂ ವ್ಯಕ್ತಿಯ ನಡವಳಿಕೆಗಳಲ್ಲಿ, ನೀಡುವ ಪ್ರತಿಕ್ರಿಯೆಗಳಲ್ಲಿ, ಮೂಡುವ ಭಾವನೆಗಳಲ್ಲಿ ಪ್ರತಿಫಲಿಸುತ್ತಿರುತ್ತವೆ. ಸಮಸ್ಯೆಗಳನ್ನು ತಿಳಿಯ ಬೇಕಾದರೆ ಈ ಲಕ್ಷಣಗಳ ಕಡೆಗೆ ಲಕ್ಷ್ಯ ಕೊಡಬೇಕಾಗುತ್ತದೆ.

ಮಾನಸಿಕ ಸಮಸ್ಯೆಗಳು ಆಯಾ ವ್ಯಕ್ತಿಯ ಬದುಕಿನ, ಸಂಬಂಧದ ಮತ್ತು ಚಟುವಟಿಕೆಗಳ ಆಶಯಗಳನ್ನು, ಉದ್ದೇಶಗಳನ್ನು, ಸ್ವರೂಪವನ್ನು ಮತ್ತು ಪಡೆಯಬಹುದಾದ ಫಲವನ್ನು ನಾಶ ಪಡಿಸುವುದು. ಸಾಲದಕ್ಕೆ ವ್ಯಕ್ತಿಯ ಸಮಯ, ಸಂಪನ್ಮೂಲ, ಶ್ರಮ, ಆರೋಗ್ಯ ಮತ್ತು ನೆಮ್ಮದಿಯನ್ನು ಹಾಳು ಮಾಡುವುದು.

ಉದಾಹರಣೆಗೆ ಮದುವೆ. ಒಂದು ಗಂಡು ಮತ್ತು ಹೆಣ್ಣು ಪರಸ್ಪರ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಮದುವೆಯ ಉದ್ದೇಶ. ವ್ಯಕ್ತಿಗತವಾದ, ಕೌಟುಂಬಿಕವಾದ ಮತ್ತು ಸಾಮಾಜಿಕವಾದ ಬದುಕಿನಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿದ್ದುಕೊಂಡು ವೈವಾಹಿಕ ಹಕ್ಕು ಮತ್ತು ಕರ್ತವ್ಯಗಳನ್ನು ಪೂರೈಸುತ್ತಾ ತಮ್ಮ ಮುಂದಿನ ಪೀಳಿಗೆಯನ್ನು ಬೆಳೆಸಲು ಸಂತಾನೋತ್ಪತ್ತಿ ಮಾಡುವುದು. ವಿವಾಹಿತ ಗಂಡು ಮತ್ತು ಹೆಣ್ಣು ಇಬ್ಬರೂ ಸಮಾಜದ ಮುಂದೆ ಮುಕ್ತವಾಗಿ ತೆರೆದುಕೊಳ್ಳದೆ ಇರುವಂತಹ ವಿಷಯಗಳಲ್ಲೂ ತಮ್ಮ ಏಕಾಂತದಲ್ಲಿ ರಹಸ್ಯ ಮತ್ತು ನಿರ್ಬಂಧವೇನೂ ಇಲ್ಲದೆ ತೆರೆದುಕೊಳ್ಳುವುದನ್ನು ಒಪ್ಪಿಕೊಳ್ಳುವಂತಹ ಸ್ವಾತಂತ್ರ್ಯ ಅವರಿಗಿದೆ. ವಿಶೇಷವಾಗಿ ಏನೂ ಮುಚ್ಚಿಟ್ಟುಕೊಳ್ಳುವ ಅಗತ್ಯವಿಲ್ಲದಂತಹ ಸಂಪೂರ್ಣ ಮುಕ್ತ ಸಂಬಂಧ ಅವರದ್ದು. ಆದರೆ ವ್ಯಕ್ತಿಗಳಲ್ಲಿ ಅಥವಾ ಸಮಾಜದ ವ್ಯವಸ್ಥೆಯಲ್ಲಿ ದೋಷವೇನಾದರೂ ಇದ್ದಲ್ಲಿ ಈ ಎಲ್ಲಾ ಆಶಯ ಮತ್ತು ಫಲಗಳನ್ನು ಗಂಡ ಮತ್ತು ಹೆಂಡತಿ ಕಾಣದೇ ಹೋಗುವರು. ವ್ಯಕ್ತಿಯಲ್ಲಿ ನಡವಳಿಕೆಯ ದೋಷ, ಹೊಂದಾಣಿಕೆ ದೋಷ, ಭೂತ ಬಾಧೆ (ಹಿಂದಿನ ಅನುಭವಗಳ ನೋವಿನ ಒತ್ತಡ), ಅನುಮಾನ ಪ್ರವೃತ್ತಿ, ಮೇಲರಿಮೆ, ಹಠಾತ್ ಪ್ರವೃತ್ತಿ, ವ್ಯಸನಗಳು, ಗೀಳು ಅಥವಾ ಅತಿಗೇಡಿತನಗಳಂತಹ ಯಾವುದೇ ಸಮಸ್ಯೆಗಳು ಇದ್ದರೂ ಅವರು ಸುಖಿಸುವ ಬದಲು ನರಳುವರು.

ಸಮಸ್ಯೆಗಳು ವ್ಯಕ್ತಿಗಳಲ್ಲಿ ತೋರುವ ವರ್ತನೆಗಳು, ಅವರು ಮಾಡುವ ಚಟುವಟಿಕೆಗಳು, ಅವು ಇತರರಲ್ಲಿ ಉಂಟು ಮಾಡುವ ಪ್ರತಿಕ್ರಿಯೆಗಳು; ಎಲ್ಲವೂ ಮದುವೆಯ ಮೂಲಭೂತವಾದ ಆಶಯವನ್ನು ಪೂರೈಸಿಕೊಳ್ಳಲು ಮತ್ತು ಫಲವನ್ನು ಕಂಡುಕೊಳ್ಳಲು ಬಿಡುವುದೇ ಇಲ್ಲ. ಏಕೆಂದರೆ ಸಮಸ್ಯೆಗಳು ಹುಟ್ಟುಹಾಕುವ ಕ್ರಿಯೆಗೆ ತಕ್ಕ ಪ್ರತಿಕ್ರಿಯೆಗಳೂ ಹುಟ್ಟುತ್ತಿರುತ್ತವೆ. ಅವೂ ಸಮಸ್ಯಾತ್ಮಕವಾಗಿಯೇ ಇರುತ್ತವೆ. ಸಮಸ್ಯೆಗಳು ಉದ್ದೇಶವನ್ನು ಮರೆಸುವ ಕಾರಣದಿಂದ ಫಲಗಳನ್ನು ಪಡೆಯುವುದೇ ಇಲ್ಲ. ವ್ಯಕ್ತಿಯ ಮನಸ್ಸು ಈಗೋ ಅಥವಾ ಅಹಂಕಾರದ ಮಟ್ಟಿಗೇ ವ್ಯವಹರಿಸುವುದಾದರೆ ಅದು ಸದಾ ಕ್ರಿಯೆ ಮತ್ತು ಪ್ರತಿಕ್ರಿಯೆ ಅಥವಾ ಪ್ರಚೋದನೆ ಮತ್ತು ಪ್ರತಿಕ್ರಿಯೆ; ಈ ಮಟ್ಟದಲ್ಲೇ ಕೆಲಸ ಮಾಡಿಕೊಂಡಿದ್ದು ವ್ಯಕ್ತಿಯ, ವ್ಯವಸ್ಥೆಯ, ಸಂಬಂಧದ ಆಂತರ್ಯವನ್ನು ನೋಡಲು ಸಮಯ ತೆಗೆದುಕೊಳ್ಳುವುದೇ ಇಲ್ಲ. ಸಮಸ್ಯೆಯಿಂದ ಹುಟ್ಟುವ ಸಂಘರ್ಷದಲ್ಲಿ ವಿಜಯ ಸಾಧಿಸಬೇಕೆಂಬ ಹಟದಿಂದ ತನ್ನ ಹೋರಾಟದ ಶಕ್ತಿಯನ್ನು ಅಲ್ಲಿಯೇ ವಿನಿಯೋಗ ಮಾಡುತ್ತಿರುತ್ತದೆ, ತನ್ನ ಎದುರಿಗಿನ ವ್ಯಕ್ತಿಯನ್ನು ಮಣಿಸಲು ತನ್ನ ಎಲ್ಲಾ ಸಮಯವನ್ನು ವ್ಯಯ ಮಾಡುತ್ತಿರುತ್ತದೆ. ಇದರಿಂದಾಗಿ ವ್ಯಕ್ತಿಗಳ ಮಾತ್ರವಲ್ಲ ಅವರು ಸಂಬಂಧಿಸಿರುವ ಕುಟುಂಬದ ಇತರ ಸದಸ್ಯರು, ಕುಟುಂಬ ಮತ್ತು ಕಿರಿಯ ಪೀಳಿಗೆಗಳು ಕೂಡಾ ಸಂಘರ್ಷದಲ್ಲಿ ಸಿಕ್ಕು ನಲಗುತ್ತವೆ. ಯಾವ ವ್ಯವಸ್ಥೆಯಿಂದ ಸುಖಿಸಬೇಕಾಗಿರುವುದೋ, ಅರಳ ಬೇಕಾಗಿರುವುದೋ, ಬಾಳನ್ನು ಹಸನು ಮಾಡಿಕೊಳ್ಳಬೇಕಾಗಿರುವುದೋ ಅದೇ ವ್ಯವಸ್ಥೆಯ ಕಾರಣದಿಂದ ನರಳುತ್ತಾರೆ.

ಕುಟುಂಬದ ಮತ್ತು ಸಮಾಜದ ಯಾವುದೇ ವ್ಯವಸ್ಥೆಯ ಉನ್ನತ ಆಶಯಗಳು ವಿಫಲವಾಗಿ ವ್ಯಕ್ತಿಗಳು ಅದರ ಫಲವನ್ನು ಅನುಭವಿಸದೆ ಇರಲು ಕಾರಣವೇ ವ್ಯಕ್ತಿಗಿರುವಂತಹ ಮಾನಸಿಕ ಸಮಸ್ಯೆಗಳು. ಏಕೆಂದರೆ ಈ ಸಮಸ್ಯೆಗಳು ಸಾಂಕ್ರಾಮಿಕ. ವೈರಸ್ಸಿನಿಂದ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿರುತ್ತದೆ.

ವೈವಾಹಿಕ ವ್ಯವಸ್ಥೆ, ಕುಟುಂಬ ವ್ಯವಸ್ಥೆ, ರಾಜಕೀಯ ವ್ಯವಸ್ಥೆ, ಧಾರ್ಮಿಕ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ; ಹೀಗೆ ನೀವು ಯಾವುದೇ ಸಾಮಾಜಿಕ ವ್ಯವಸ್ಥೆಯನ್ನು ಗಮನಿಸಿದರೂ ಅವೆಲ್ಲವೂ ನೈಸರ್ಗಿಕವಾಗಿರುವ ಜೈವಿಕ ವ್ಯವಸ್ಥೆಗಿಂತ ಭಿನ್ನವಾಗಿದ್ದು, ಅವು ಮನುಷ್ಯ ತನ್ನ ಸಂಘಜೀವನದಲ್ಲಿ ಸುಖವನ್ನು ಸಾಧಿಸಲು, ತೊಡಕಿಲ್ಲದೇ ಸರಾಗವಾಗಿ ಬದುಕನ್ನು ನಡೆಸಲು ತಾನೇ ನಿರ್ಮಿಸಿಕೊಂಡಿರುವಂತಹ ವ್ಯವಸ್ಥೆಗಳು. ಈ ವ್ಯವಸ್ಥೆಗಳ ಗುರಿಯೇ ಮನುಷ್ಯನ ಬದುಕಿನ ಅಗತ್ಯಗಳನ್ನು ಪೂರೈಸಿ ಸುಖವಾಗಿರುವುದು.

ವ್ಯಕ್ತಿಗಳ ಮಾನಸಿಕ ಸಮಸ್ಯೆಯು ವ್ಯವಸ್ಥೆಗಳಿಗೆ ಅದೆಷ್ಟು ಮಾರಕವೆಂದರೆ, ಸಂಘಜೀವಿ ಮನುಷ್ಯನು ಪರಸ್ಪರ ಅವಲಂಬಿತ, ಸಹಕಾರ ಮತ್ತು ಒಡಂಬಡಿಕೆಗಳ ಮೂಲಕ ಒಬ್ಬರಿಗೊಬ್ಬರು ಸುಖ ಮತ್ತು ನೆಮ್ಮದಿಯನ್ನು ಹಂಚಿಕೊಳ್ಳಬೇಕು ಎಂಬ ಮೂಲ ಉದ್ದೇಶವನ್ನೇ ಮರೆ ಮಾಡಿಬಿಡುತ್ತದೆ. ವ್ಯವಸ್ಥೆಯು ನಿಂತಿರುವುದೇ ಪರಸ್ಪರ ಅವಲಂಬನದ ಅರಿವಿನಿಂದ. ಈ ವ್ಯವಸ್ಥೆಯಲ್ಲಿ ವ್ಯಕ್ತಿಯು ತನ್ನೊಡನೆ ಇರುವ ಯಾವುದೇ ವ್ಯಕ್ತಿಗೆ ಸುಖವನ್ನು ಅಥವಾ ಹಿತವನ್ನು ನೀಡುವ ಉದ್ದೇಶವನ್ನು ಹೊಂದದೆಯೇ ತಾನು ಸುಖಿಸಲು, ಹಿತವನ್ನು ಹೊಂದಲು ಸಾಧ್ಯವೇ ಇಲ್ಲ. ಅದು ವೈವಾಹಿಕ ವ್ಯವಸ್ಥೆಯಲ್ಲೇ ಇರಲಿ, ವಾಣಿಜ್ಯ ವ್ಯವಸ್ಥೆಯಲ್ಲೇ ಇರಲಿ. ವೈವಾಹಿಕ ವ್ಯವಸ್ಥೆಯಲ್ಲಿ ಸಂಗಾತಿಗಳು ತಮ್ಮ ಕೊಡುಕೊಳ್ಳುವಿಕೆಯಲ್ಲಿ ಸುಖ ಮತ್ತು ನೆಮ್ಮದಿಯನ್ನೇ ಗುರಿಯನ್ನಾಗಿಸಿಕೊಂಡಿರುವುದು. ಹಾಗೆಯೇ ಗ್ರಾಹಕ ಮತ್ತು ಮಾರಾಟಗಾರನಲ್ಲಿಯೂ ಕೂಡಾ ಕೊಡುಕೊಳ್ಳುವಿಕೆ ಹಿತ ಮತ್ತು ಸಮಾಧಾನದಲ್ಲಿಯೇ ಪರ್ಯವಸಾನವಾಗಬೇಕು.

ಮನುಷ್ಯ ತಾನು ಸುಖವಾಗಿರಲು ತಾನೇ ನಿರ್ಮಿಸಿಕೊಂಡಿರುವ ವ್ಯವಸ್ಥೆಯ ಮೂಲ ಅರಿವು ಪರಸ್ಪರ ಅವಲಂಬನ. ಪರಸ್ಪರ ಅವಲಂಬಿತರಾಗಿರುವ ಕಾರಣದಿಂದ ಕೊಡುಕೊಳ್ಳುವಿಕೆಯು ಒಡಂಬಡಿಕೆಯನ್ನು ಆಧರಿಸಿದ್ದು, ಅವು ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿರುತ್ತವೆ. ಅವನ್ನು ಪೂರೈಸಲು ವ್ಯಕ್ತಿಗಳು ಒಡಂಬಡಿಕೆಗೆ ಬದ್ಧವಾಗಿದ್ದು ಒಬ್ಬರಿಗೊಬ್ಬರು ಸಂತೋಷವನ್ನು, ಸುಖವನ್ನು ನೀಡುವುದರಿಂದ, ತಾವೂ ಅವನ್ನು ಪಡೆಯುತ್ತಾ ವ್ಯವಸ್ಥೆಯನ್ನು ಯಶಸ್ವಿಗೊಳಿಸುವುದು. ತನ್ಮೂಲಕ ತಾವು ಸುಖವಾಗಿರುವುದು. ಆದರೆ ವ್ಯಕ್ತಿಗಳು ತಮಗಿರುವ ಸಮಸ್ಯೆಗಳ ಕಾರಣದಿಂದ ಮನುಷ್ಯನ ಸಂಘ ಜೀವನದ ಉದ್ದೇಶಕ್ಕೆ ಅಸಹಜವಾಗಿ ವರ್ತಿಸುತ್ತಾರೆ. ಅಹಮಿಕೆ ಮತ್ತು ಅತಿರೇಕತೆಗಳೇ ಮೊದಲಾದ ವ್ಯಕ್ತಿಗತವಾದ ಸಮಸ್ಯೆಗಳಿಂದ ಇಡೀ ವ್ಯವಸ್ಥೆಯನ್ನು ವಿಫಲಗೊಳಿಸುತ್ತಾರೆ.

ಆದ್ದರಿಂದಲೇ ಸಾಂಕ್ರಮಿಕವಾಗಿ ವ್ಯವಸ್ಥೆಯನ್ನು ವಿಫಲಗೊಳಿಸುವ ಸಮಸ್ಯೆಗಳನ್ನು ನಾವು ಗುರುತಿಸಬೇಕು ಮತ್ತು ಅದಕ್ಕೆ ಅಗತ್ಯವಿರುವ ಚಿಕಿತ್ಸಕಾ ಕ್ರಮದ ಬಗ್ಗೆ ಎಚ್ಚೆತ್ತುಕೊಳ್ಳಬೇಕು.

ಮೂಲ ಸಮಸ್ಯೆಯ ಹುಟ್ಟಿಗೆ ಕಾರಣಗಳನ್ನು ಕೆಲವೊಮ್ಮೆ ಗುರುತಿಸಬಹುದು, ಕೆಲವೊಮ್ಮೆ ಗುರುತಿಸಲಾಗದು. ಸಂಪೂರ್ಣವಾಗಿ ತಿಳುವಳಿಕೆಗೆ ಅಥವಾ ಸಂಶೋಧನೆಗೆ ಮೀರಿರುತ್ತದೆ. ಹಾಗಾಗಿ ಸಮಸ್ಯೆಯ ಮೂಲವನ್ನು ಹುಡುಕಿಕೊಂಡು ಹೋಗುವುದರಲ್ಲಿಯೇ ಸಮಯವನ್ನು ವ್ಯರ್ಥ ಮಾಡುವುದಕ್ಕಿಂತ, ಕಾಣುವ ಗುಣ ಲಕ್ಷಣಗಳನ್ನು ಗುರುತಿಸಿ ಅವುಗಳ ಹತೋಟಿ, ನಿರ್ವಹಣೆ, ನಿಯಂತ್ರಣ ಮತ್ತು ಪರಿಣಾಮಗಳ ಬಗ್ಗೆ ಎಚ್ಚರ ವಹಿಸಬೇಕು. ವ್ಯಕ್ತಿಯ ನಡವಳಿಕೆ, ಪ್ರತಿಕ್ರಿಯೆ ಮತ್ತು ಹುಟ್ಟುವ ಭಾವನೆಗಳು ಇತರರ ಮೇಲೆ ಪ್ರಭಾವಗಳನ್ನು ಬೀರುತ್ತವೆ. ಅವರಲ್ಲಿ ಕ್ರಿಯೆಯನ್ನು ಮಾಡಲು ಅಥವಾ ಪ್ರತಿಕ್ರಿಯೆಗಳನ್ನು ನೀಡಲು ಪ್ರಚೋದನೆಗಳನ್ನು ಕೊಡುತ್ತವೆ. ಇವುಗಳನ್ನು ಆಧರಿಸಿ ಸಂಬಂಧಗಳಲ್ಲಿ ಅಥವಾ ಸಮೂಹಗಳಲ್ಲಿ ವ್ಯಕ್ತಿಗಳ ಮಾನಸಿಕ ಸ್ಥಿತಿಯು ಸಹಜವಾಗಿದೆಯೋ ಅಥವಾ ಅಸಹಜವಾಗಿದೆಯೋ ಎಂದು ಗುರುತಿಸಬಹುದು.

ಮನುಷ್ಯನ ವ್ಯವಸ್ಥೆಯನ್ನು ಕಾಪಾಡುವ ದಿಕ್ಕಿನಲ್ಲಿ ಇದು ಪ್ರಾಥಮಿಕ ಹಂತವಷ್ಟೇ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಶ್ ಮಾಸ್ಟರ್,

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು