ಹುಸಿ ನಂಬುಗೆಗಳೇಕೆ?

Update: 2024-04-28 05:09 GMT

ತಮ್ಮನ್ನು ತಾವು ರಾಜ ಎಂದೋ, ರಾಜಕುಮಾರಿ ಎಂದೋ, ಹುಲಿಯೆಂದೋ, ಸಿಂಹವೆಂದೋ ಕರೆದುಕೊಳ್ಳುವ ಜನರನ್ನು ನಾವು ನಮ್ಮ ಸುತ್ತಮುತ್ತ ಕಾಣುತ್ತೇವೆ. ದೊರೆಯಂತೆ ಬಾಳಬೇಕು ಎಂದು ಅಭಿಮಾನ ಪಡುವುದು ಒಂದಾದರೆ, ರಾಜಕುಮಾರಿಯಂತೆ ಸುಂದರವಾಗಿರಬೇಕು ಎಂದು ಭ್ರಮಿಸುವುದು ಇನ್ನೊಂದು. ದೊರೆಗಳು ಹೇಗೆ ಬಾಳುತ್ತಾರೆಂದು, ಅವರಿಗೆ ಏನೇನೆಲ್ಲಾ ತಾಪತ್ರಯಗಳು ಇರುತ್ತವೆ ಎಂದು ಕೂಡಾ ಯೋಚಿಸದ ಸಾಮಾನ್ಯರು ರಾಜನೆಂದ ಕೂಡಲೇ ಅವನಿಗೆ ಏನು ಬೇಕಾದರೂ ಮಾಡಿಸುವಷ್ಟು ಜನ ಮತ್ತು ಧನಬಲದೊಂದಿಗೆ ಅಧಿಕಾರ ಇರುತ್ತದೆ ಎಂಬ ಭಾವ. ಅವನು ಆಜ್ಞೆ ನೀಡಿದ ಕೂಡಲೇ ಅವನ ಅಪ್ಪಣೆಯನ್ನು ಶಿರಸಾವಹಿಸಿ ಇತರರು ಮಾಡುತ್ತಾರೆ ಎಂಬ ಊಹೆ. ಲೌಕಿಕ ಮನುಷ್ಯನ ಅಧಿಕಾರದಲ್ಲಿ ರಾಜನೇ ಪ್ರಾಪಂಚಿಕವಾಗಿ ಶಕ್ತಿಶಾಲಿ ಎಂಬ ಆಲೋಚನೆ ಪ್ರಜಾಪ್ರಭುತ್ವದ ಸಮಾಜದಲ್ಲಿಯೂ ಕೂಡಾ ಆಳವಾಗಿ ಬೇರೂರಿರುತ್ತವೆ.

ಕರಾಟೆ ಕಿಂಗ್, ಆಟೋ ರಾಜ, ಸಾಹಸ ಸಿಂಹ, ಕೆರಳಿದ ಸಿಂಹ, ಮೈಸೂರು ಹುಲಿ, ನಾದ ಬ್ರಹ್ಮ, ಕಲಾ ಸರಸ್ವತಿಯೇ ಮೊದಲಾದ ಬಿರುದುಗಳನ್ನು ಗಮನಿಸಿ. ಮನುಷ್ಯ ತಾನು ಮಾಡಿದ ಕೆಲಸವನ್ನು ಮುಂದಿಡುವಾಗಲೂ ಯಾವುದೋ ಒಂದು ಪೌರಾಣಿಕವಾದುದನ್ನು ಅಥವಾ ನಿಸರ್ಗದಲ್ಲಿ ಮನುಷ್ಯನಿಗಿಂತ ಬಲವಾಗಿರುವ ಪ್ರಾಣಿ ಅಥವಾ ಪ್ರಾಕೃತಿಕ ಅಂಶವನ್ನು ಆರೋಪಿಸಿ, ಬಹು ಉತ್ಪ್ರೇಕ್ಷೆಯಿಂದ ವಾಸ್ತವಾಂಶ ಹೇಳುತ್ತಾನೆ. ಉತ್ಪ್ರೇಕ್ಷೆಯಿಂದ ಪ್ರಶಂಸೆ ಮಾಡುವಾಗ ಅದು ವಾಸ್ತವದಿಂದ ದೂರವಾಗುತ್ತಾ ಹೋಗುತ್ತಿದೆ ಎಂಬುದನ್ನು ವ್ಯಕ್ತಿ ಗಮನಿಸುವುದೇ ಇಲ್ಲ. ಉತ್ಪ್ರೇಕ್ಷೆಯಿಂದ ವಿಷಯಗಳನ್ನು ಹೇಳುವುದರಲ್ಲಿ ಅವನಿಗೆ ಅತೀವ ಆನಂದ. ಆ ಆನಂದ ಅಮಲಾಗುತ್ತಾ ಬಂದಂತೆ ವಾಸ್ತವವನ್ನು, ಅಂದರೆ ನಿಜವನ್ನು ಸಂಪೂರ್ಣ ಕಡೆಗಣಿಸಿ ಹುಸಿಯನ್ನೇ ಭಾವಿಸಿ ಮಾತಾಡುತ್ತಾರೆ ಅಥವಾ ನಡೆದುಕೊಳ್ಳುತ್ತಾರೆ.

ಹುಸಿಮನೋಭಾವ ಎಂಬುದು ಕೂಡಾ ಗಮನಿಸಬೇಕಾದ ವಿಷಯವೇ. ಮನುಷ್ಯನ ಮನಸ್ಸನ್ನು ಆಳವಾಗಿ ಪ್ರಭಾವಿಸುವಲ್ಲಿ ಕಲ್ಪನೆಗಳು ಮತ್ತು ಉತ್ಪ್ರೇಕ್ಷಿತ ವಿಚಾರಗಳು, ಪರಿಕಲ್ಪನೆಗಳು ಮತ್ತು ಭ್ರಮೆಗಳು ವಾಸ್ತವದ ಅಂಶಗಳಿಗಿಂತ Why false beliefs?ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ದಿಟಕ್ಕಿಂತ ಸಟೆ ಆಕರ್ಷಕ ಮತ್ತು ಸಂಮೋಹಕ. ಅದಕ್ಕೋ ಏನೋ ಎಷ್ಟೋ ನಿಜದ ವಿಚಾರಗಳನ್ನು ಕೂಡಾ ಪುರಾಣಗಳ, ಕಾಲ್ಪನಿಕ ಕತೆಗಳ, ಕಾವ್ಯಗಳ, ಉತ್ಪ್ರೇಕ್ಷೆಗಳ, ರೂಪಕಗಳ ಮೂಲಕವೇ ಹೇಳುವ ಪ್ರಯತ್ನಗಳಾಗಿವೆ. ಇಂತಹ ಪುರಾಣಗಳ, ರೂಪಕಗಳ ಮತ್ತು ಭ್ರಾಮಕ ಹೊದಿಕೆಗಳಿಂದ ಮುಚ್ಚಿರುವ ವಿಷಯಗಳು, ಕತೆಗಳ ರೂಪದಲ್ಲಿ ಇಂದಿಗೂ ನಮ್ಮ ಸಮಕಾಲೀನ ವಿಷಯಗಳ ಮೇಲೂ ಗಾಢವಾದ ಪರಿಣಾಮವನ್ನು ಬೀರುತ್ತಿರುತ್ತವೆ. ಇಂತಹ ಸಂಮೋಹಕ, ಉತ್ಪ್ರೇಕ್ಷಿತ ಮತ್ತು ಮರುಳುಗೊಳಿಸುವ ಕಥನದ ರೀತಿಯನ್ನು ನಮ್ಮ ಸಾಧಾರಣ ಅರ್ಥದ ವ್ಯಾಪ್ತಿಯಲ್ಲಿ ಅಥವಾ ಪದ ಪ್ರಯೋಗದಲ್ಲಿ ಮಿಥಾಲಜಿ ಅಥವಾ ಪೌರಾಣಿಕತೆಗಳೆಂದೇ ಕರೆಯೋಣ.

ಇಂತಹ ಪೌರಾಣಿಕ ಕತೆಗಳಲ್ಲಿ ಮನುಷ್ಯನ ಆಸೆ, ಅಗತ್ಯ, ಇತಿಮಿತಿಯನ್ನು ಮೀರುವ ಬಯಕೆ, ಮಹತ್ವಾಕಾಂಕ್ಷೆ ಮತ್ತು ಅತೃಪ್ತ ಬಯಕೆಗಳ ದಾಹವೆಲ್ಲವೂ ಅಡಗಿರುತ್ತವೆ. ಅವುಗಳೆಲ್ಲವೂ ಮುಂದೆಂದಾದರೂ ಈಡೇರಬಹುದೆಂಬ ಭರವಸೆಯೂ ಸುಪ್ತವಾಗಿ ಅಡಕವಾಗಿರುತ್ತದೆ. ಅಸ್ತಿತ್ವದಲ್ಲಿರುವ ಜೀವಿಗಳಲ್ಲಿ ಸಹಜವಾಗಿರುವ ಉಳಿಯುವ ಬಯಕೆ, ನಾಶವಾಗುವ ಭಯವೂ ಈ ಪೌರಾಣಿಕ ಕತೆಗಳಲ್ಲಿ ಇರುತ್ತವೆ.

ಮನುಷ್ಯ ತಾನು ನಿಸರ್ಗದಲ್ಲಿ ತನಗೆ ಇಲ್ಲದ ಶಕ್ತಿ ಸಾಮರ್ಥ್ಯವನ್ನು ಇತರ ಜೀವಿಗಳಲ್ಲಿ ಮತ್ತು ನಿಸರ್ಗದ ಇತರ ಭಾಗಗಳಲ್ಲಿ ಕಾಣುತ್ತಿರುತ್ತಾನೆ. ತನಗೆ ಅದ್ಭುತ ಎನಿಸುವ, ಅಮೋಘ ಎನಿಸುವ ಹಾಗಿದ್ದರೆ ಎಷ್ಟು ಚೆನ್ನು ಎನಿಸುವ, ಹಾಗೇನಾದರೂ ಇದ್ದಿದ್ದರೆ ತಾನು ಇನ್ನೇನಾದರೂ ಮಾಡಬಹುದಿತ್ತೆನಿಸುವ ಸುಪ್ತವಾದ ಆಲೋಚನೆಗಳೆಲ್ಲಾ ಗುಪ್ತಗಾಮಿನಿಯಾಗಿ ಹರಿಯುತ್ತಾ ಅವು ನಾನಾ ರೀತಿಗಳಲ್ಲಿ ಇಂತಹ ಮಿಥಿಕಗಳಲ್ಲಿ ಅಥವಾ ಪುರಾಣಗಳಲ್ಲಿ ಅಭಿವ್ಯಕ್ತವಾಗುತ್ತಿರುತ್ತವೆ.

ನಿಸರ್ಗದ ಇತರ ಜೀವಿಗಳಲ್ಲಿ ಸಾಮಾನ್ಯವಾಗಿರದ ಒಂದು ಗುಣ ಮನುಷ್ಯನ ಮನಸ್ಸಿನ ಸ್ವಭಾವದಲ್ಲಿ ತುಂಬಾ ಸಾಮಾನ್ಯವಾಗಿರುತ್ತದೆ. ಅದೇನೆಂದರೆ ತನ್ನನ್ನು ಮತ್ತು ಇತರ ವಿಷಯ ವಸ್ತುಗಳನ್ನು ಹೋಲಿಸಿಕೊಳ್ಳುವುದು ಮತ್ತು ತಾನು ಪ್ರಶಂಸಿಸುವ ಎಲ್ಲವನ್ನೂ ತನ್ನದಾಗಿಸಿಕೊಳ್ಳಲು ಆಸೆ ಪಡುವುದು. ಅದು ತೀವ್ರವಾದಂತೆ ವಾಸ್ತವವಾಗಿ ಅದನ್ನು ಪೂರೈಸಿಕೊಳ್ಳಲಾಗದಿದ್ದರೂ ಹುಸಿಯಾಗಿಯಾದರೂ ಅದನ್ನು ಪೂರೈಸಿಕೊಳ್ಳಲು ಹಾತೊರೆಯುತ್ತಾನೆ. ಹಾಗಾಗಿಯೇ ಮನುಷ್ಯ ತನ್ನದನ್ನು ಆನೆ ನಡಿಗೆ ಎಂದುಕೊಳ್ಳುತ್ತಾನೆ. ತನ್ನ ಧ್ವನಿ ಸಿಂಹದಂತೆ ಗರ್ಜಿಸುತ್ತಿದೆ ಎಂದು ಬೀಗುತ್ತಾನೆ. ತಾನು ಹುಲಿಯಂತೆ ಹೋರಾಡುತ್ತೇನೆ ಎಂದು ಕೊಚ್ಚಿಕೊಳ್ಳುತ್ತಾನೆ. ತನ್ನನ್ನು ತಾನು ರಾಜನೆಂದುಕೊಳ್ಳುತ್ತಾನೆ.

ಪ್ರಕೃತಿಯಲ್ಲಿ ಮನುಷ್ಯನೂ ಸೇರಿದಂತೆ ಎಲ್ಲಾ ಜೀವಿಗಳು ಸ್ವಾತಂತ್ರ್ಯ ಪ್ರೇಮಿಗಳು ಮತ್ತು ಯಾವುದರದ್ದೇ ಅತಿಕ್ರಮಣ ಪ್ರವೇಶವನ್ನು ಸಹಿಸುವುದಿಲ್ಲ. ಆದರೆ ಮನುಷ್ಯ ಇದರೊಟ್ಟಿಗೆ ತಾನು ಇತರರ ಸ್ವಾತಂತ್ರ್ಯ ಹರಣ ಮಾಡಿ ತನ್ನ ಅಧೀನದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾನೆ. ಹಾಗೆಯೇ ಇತರರ ವಿಷಯದಲ್ಲಿ, ವಲಯದಲ್ಲಿ ಅತಿಕ್ರಮಣವನ್ನು ಸಲೀಸಾಗಿ ಮಾಡುತ್ತಾನೆ. ಅವನ ಮನಃಸ್ಥಿತಿಯ ವಿಪರ್ಯಾಸವಿರುವುದೇ ಇದರಲ್ಲಿ. ತಾನು ಸ್ವತಂತ್ರವಾಗಿರಬೇಕು, ಆದರೆ ಇತರರು ತನ್ನ ಅಧೀನದಲ್ಲಿ ಇರಬೇಕು. ತನ್ನ ವಿಷಯದಲ್ಲಿ ಯಾರೂ ಅತಿಕ್ರಮಣ ಪ್ರವೇಶ ಮಾಡಬಾರದು, ಆದರೆ ತಾನು ಇತರ ವಿಷಯಗಳಲ್ಲಿ ಮಧ್ಯೆ ಪ್ರವೇಶಿಸಲು ಸಂಪೂರ್ಣ ಹಕ್ಕು ಇದೆ ಎಂದೇ ಭಾವಿಸುವನು. ತಾನು ಯಾರದನ್ನಾದರೂ ಮುಕ್ತವಾಗಿ ಬಳಸಬಹುದು. ಆದರೆ ಇತರರು ತನ್ನ ವಿಷಯದಲ್ಲಿ ಹಾಗೆ ಮಾಡಕೂಡದು. ಹೀಗೆ ಮನುಷ್ಯ ಹಲವು ದ್ವಂದ್ವ ಮುಖಗಳ ಮನಸ್ಥಿತಿಯನ್ನು ಹೊಂದಿರುತ್ತಾನೆ. ಇಂತಹ ಅವನ ಎಲ್ಲಾ ಅತೃಪ್ತ ಬಯಕೆಗಳನ್ನು ವಾಸ್ತವ ಜಗತ್ತಿನಲ್ಲಿ ಪೂರೈಸಿಕೊಳ್ಳಲಾಗದ ಇತಿಮಿತಿ ಮತ್ತು ಸಾಮಾಜಿಕ ವ್ಯವಸ್ಥೆಯು ಇರುವುದರಿಂದ ಅವನು ತನ್ನಲ್ಲಿ ಸುಪ್ತವಾಗಿರುವ ಗುಪ್ತಗಾಮಿನಿಯ ಹರಿವನ್ನು ಪೌರಾಣಿಕ ಕಥನಗಳ ಮೂಲಕ, ತಾನೇ ಸೃಷ್ಟಿಸಿರುವ ಮಿಥ್ ಅಥವಾ ಮಿಥಿಕಗಳ ಮೂಲಕ ಬಚ್ಚಿಟ್ಟುಕೊಂಡಿರುವ ಬಯಕೆಗಳನ್ನು ಪೂರೈಸಿಕೊಳ್ಳುತ್ತಿರುತ್ತಾನೆ.

ಮನುಷ್ಯನ ಸ್ವಾಭಾವಿಕವಾಗಿರುವ ಮನಸ್ಥಿತಿ ಮತ್ತು ಹೊರಗಿನ ಪ್ರಕೃತಿಯಲ್ಲಿ ಕಾಣುವ ತನ್ನಿಂದ ಸಾಧ್ಯವಾಗದ ಮಹಾಶಕ್ತಿ, ಅದ್ಭುತ, ಅಮೋಘ ಮತ್ತು ವಿಸ್ಮಯಕಾರಿ ವಿಷಯಗಳೆಲ್ಲಾ ಅವನ ಪೌರಾಣಿಕ ಕತೆಗಳಲ್ಲಿ ಅಥವಾ ಮಿಥಿಕದ ವಿಚಾರಗಳಲ್ಲಿ ಹೆಣೆದುಕೊಂಡುಬಿಡುತ್ತವೆ. ಆಯಾ ಕಾಲದ ಪುರಾಣ, ಕಾವ್ಯ, ಜಾನಪದ ಕತೆಗಳನ್ನೆಲ್ಲಾ ಗಮನಿಸಿದರೆ, ಅವು ಹುಟ್ಟಿದ ಕಾಲದ ಸಮಾಜೋ-ಮಾನಸಿಕ ಪರಿಸ್ಥಿತಿಗಳನ್ನು ತಿಳಿಯಬಹುದಾಗಿರುತ್ತದೆ. ಆದರೆ ಅವನ್ನು ತನ್ನ ಕಾಲದಲ್ಲೂ ನಂಬುತ್ತಾ ತನ್ನ ಅಡಗಿರುವ ಅತೃಪ್ತ ಬಯಕೆಗಳನ್ನು ಪೂರೈಸಿಕೊಳ್ಳುತ್ತಿರುತ್ತಾನೆ. ತನ್ನ ಮನೆಯನ್ನು ಹಸಿರಿನ ಸೊಬಗಿನಿಂದ ತುಂಬಬೇಕು ಎಂದು ಬಯಸುವ ಮನೆಯ ಮಾಲಕ ನಿಜವಾದ ಸಸ್ಯಗಳನ್ನು ಹೊಂದಿರದೇ ಪ್ಲಾಸ್ಟಿಕ್‌ನ ಗಿಡ, ಬಳ್ಳಿ ಮತ್ತು ಹೂಗಳನ್ನು ಹೊಂದಿರುವಂತೆ. ಕೃತಕದಿಂದ ನೈಜತೆಯನ್ನೇ ಹೊಂದಿರುವಂತೆ ಆ ಭ್ರಮೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಶ್ ಮಾಸ್ಟರ್

contributor

Similar News

ಅತಿಶಯಕಾರರು
ಮೌನದ ಬಲ
ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು