ಫಲಿತಾಂಶದ ಬಳಿಕ...

ಗಾಳಿಪಟ ಎಷ್ಟು ಎತ್ತರಕ್ಕೇರಿದರೂ ದಾರದ ಇನ್ನೊಂದು ತುದಿ ಸೂತ್ರಧಾರರಲ್ಲಿ ಇದ್ದರಷ್ಟೇ ಗಾಳಿಪಟಕ್ಕೊಂದು ಗುರಿ; ಲಕ್ಷಣ. ಅದನ್ನು ಕತ್ತರಿಸಿಕೊಂಡು ಮೇಲೆ ಹೋದರೆ ಏನಾಗುತ್ತದೆಂಬುದಕ್ಕೆ ಮೋದಿ ಒಳ್ಳೆಯ ಉದಾಹರಣೆ/ನಿದರ್ಶನ. ಮತದಾರರು ಅವರು ಇನ್ನಷ್ಟು ಎತ್ತರಕ್ಕೆ ಅನಿಯಂತ್ರಿತವಾಗಿ ಏರದಂತೆ, ಹಾರದಂತೆ, ಅವರ ರೆಕ್ಕೆಗಳನ್ನು ಕತ್ತರಿಸಿಹಾಕಿದ್ದಾರೆ.

Update: 2024-06-06 05:39 GMT

‘ಎಕ್ಸಿಟ್‌ಪೋಲ್’ (ಇದಕ್ಕೆ ಕನ್ನಡದಲ್ಲಿ ‘ಚುನಾವಣೋತ್ತರ ಸಮೀಕ್ಷೆ’ ಎನ್ನುತ್ತಾರಂತೆ. ನಾನು ಸುಲಭವಾದ ಪದವನ್ನು ಆಯ್ಕೆ ಮಾಡಿಕೊಂಡಿದ್ದೇನೆ.) ಗಳಿಂದ ಗಾಬರಿಯಾದವರಲ್ಲಿ ನಾನೂ ಒಬ್ಬ. ಸಹಜವೇ. ಗೋದಿ ಮೀಡಿಯಾ ಎಂದೆಲ್ಲ ದೂಷಿಸುತ್ತಿದ್ದರೂ ಈ ಮಾಧ್ಯಮ ಮಿತ್ರರಿಗೆ ಕನಿಷ್ಠ ಸೌಜನ್ಯ, ಔದಾರ್ಯ, ಲಜ್ಜೆ ಮತ್ತು ಪ್ರಜ್ಞೆ ಇರಬಹುದೆಂಬ ನಿರೀಕ್ಷೆಯನ್ನಿಟ್ಟುಕೊಂಡವನು ನಾನು. ಆದ್ದರಿಂದ ಚುನಾವಣೆಯ ಬೆಳಗು ನನಗೆ ಯಾವ ತ್ರಾಸವನ್ನೂ ನೀಡದೆ ನನ್ನ ಪಾಡಿಗೆ ನನ್ನ ವೃತ್ತಿಯಲ್ಲಿದ್ದೆ. ಫಲಿತಾಂಶದ ದಿನವು ಕೆಲಸದ ದಿನವಾದ್ದರಿಂದ ಬಿಡುವೂ ಇರಲಿಲ್ಲವೆನ್ನಿ. ಆದರೆ ಅಪರಾಹ್ನದ ಹೊತ್ತಿಗೆ ಇತರರಿಂದ ಸ್ವಲ್ಪ ವಾರ್ತೆ ಸಿಕ್ಕಿತು. ಮಿಶ್ರ ಪ್ರತಿಕ್ರಿಯೆಗಳು ಬಂದವು. ನನ್ನ ಸ್ನೇಹಿತರನೇಕರು ಮೋದಿಯ ಖಾಸಾ ಭಕ್ತರು. ‘ನಿಮ್ಮ ಸ್ನೇಹಿತರು ಯಾರೆಂದು ಹೇಳಿ, ನೀವೇನು ಎಂದು ಹೇಳುತ್ತೇವೆ’ ಎಂಬ ಸೂಕ್ತಿ ಇಲ್ಲಿಗೆ ಅನ್ವಯಿಸಲಾರದೆಂದುಕೊಂಡಿದ್ದೇನೆ. ಏಕೆಂದರೆ ಕಳೆದ ಹತ್ತು ವರ್ಷಗಳಲ್ಲಿ ಅಖಂಡತೆಯ ಬದಲು, ಛಿದ್ರತೆ ಎಲ್ಲಿಯ ವರೆಗೆ ವ್ಯಾಪಿಸಿದೆಯೆಂದರೆ ಜಾತಿ, ಮತ, ಧರ್ಮ, ಸಮಾಜ, ಕುಟುಂಬ, ಸ್ನೇಹ ಇವೆಲ್ಲ ರಾಜಕೀಯದ ಆಟದಲ್ಲಿ ಒಡೆದುಹೋಗಿದೆ. ಈಗ ಏನಿದ್ದರೂ ಪರಸ್ಪರ ದ್ವೇಷ, ಕೊನೆಗೆ ಏನಿಲ್ಲವೆಂದರೂ ಸಂಶಯ.

ಹಾಗಾದರೆ ಈ ಎಕ್ಸಿಟ್‌ಪೋಲ್‌ನ ಕಥೆಯೇನು? ಸಮೀಕ್ಷೆಗೂ ಫಲಿತಾಂಶಕ್ಕೂ ಅಲ್ಪಸ್ವಲ್ಪ ವ್ಯತ್ಯಾಸವಿರುವುದು ಮಾಮೂಲು. ಮಾಧ್ಯಮಿಗಳೂ ಮಧ್ಯಮರೇ. ಅವರ ಅಂದಾಜು ತಪ್ಪಿರಬಹುದು ಅಥವಾ ಅದೃಶ್ಯ ಮತದಾರರನ್ನು ಅವರು ತಲುಪುವಲ್ಲಿ ಎಡವಿರಬಹುದು, ಎಂದೆಲ್ಲ ಗ್ರಹಿಸಬಹುದು. ರಹಸ್ಯ ತಾನು ಯಾವ ಪಕ್ಷಕ್ಕೆ ಮತದಾನಮಾಡಿದ್ದೇನೆಂದು ಯಾರೂ ಹೇಳಿಕೊಳ್ಳುವ ಹಾಗಿಲ್ಲ. ಹೀಗಾದರೂ ಮಾಧ್ಯಮಧರ್ಮವನ್ನು ನಡೆಸಿದರಲ್ಲ; ಆದ್ದರಿಂದ ನಡೆವವರೆಡಹದೆ ಕುಳಿತವರೆಡಹುವರೇ ಎಂದು ಸಮಾಧಾನಪಟ್ಟುಕೊಳ್ಳಬಹುದಿತ್ತು!

ಆದರೆ ಸಂಜೆಯ ಹೊತ್ತಿಗೆ ಯಾವೊಂದು ಪಕ್ಷಕ್ಕೂ ಬಹುಮತವಿಲ್ಲವೆಂಬುದು ಸ್ಪಷ್ಟವಾಯಿತು. ಈ ಗೋದಿ ಮೀಡಿಯಾಗಳ ಕಥೆಯೇನು? ಅವು ಮೋದಿಮೀಡಿಯಾಗಳೆಂಬ ಪದಕ್ಕೆ ಸಮರ್ಥನೆಯನ್ನೊದಗಿಸಿದರೇ? ಅಥವಾ ಷೇರುಪೇಟೆ ಬೀಳದಂತೆ ತತ್ಕಾಲೀನ ಸುಳ್ಳು ಸಮಜಾಯಿಷಿಕೆ ನೀಡಿದರೇ? ಇವೆಲ್ಲ ಅರ್ಥವಾಗಬೇಕಾದರೆ 2ಜಿ, ರಫೇಲ್ ಮುಂತಾದ ಅವ್ಯವಹಾರಗಳಂತೆ ಈ ಬಗ್ಗೆಯೂ ತನಿಖೆಯಾಗಬೇಕು. ಅದು ಅಸಾಧ್ಯ ಮತ್ತು ರಾಜಕಾರಣದಲ್ಲಿ ಅಗ್ರಾಹ್ಯ. ಮಾಧ್ಯಮಗಳಿಂದಾಗಿಯೇ ಸಂವಿಧಾನ ಉಳಿದಿದೆ ಎಂದು ನಮ್ಮೊಬ್ಬ ಶಾಸಕರು ಸಾರ್ವಜನಿಕವಾಗಿ ಹೇಳಿ ಮಾಧ್ಯಮಗಳ ಕೈಚಪ್ಪಾಳೆಗೆ ಪಾತ್ರರಾದರು. ಈ ನಡುವೆಯೂ ಒಂದು ಚಾನೆಲ್‌ನ ಮುಖ್ಯಸ್ಥರು ಅತ್ತರೆಂದು ವರದಿಯಾಗಿದೆ. ಈ ಅಳುವಿನ ಕಾರಣಕರ್ತರಿಗೆ ಎಷ್ಟು ಹಣ, ಪ್ರಭಾವ ಹರಿದಿದೆಯೋ ಗೊತ್ತಿಲ್ಲ. ಉಳಿದವರು ಒಂದೋ ಚುನಾವಣಾ ಅಭ್ಯರ್ಥಿಗಳೋ ಅಥವಾ ರಾಜಕಾರಣಿಗಳ ಜೊತೆಗೆ ಸಕ್ರಿಯರಾದ್ದರಿಂದಲೋ, ಅಳುವುದಕ್ಕೆ ವ್ಯವಧಾನವಿದ್ದಿರಲಿಕ್ಕಿಲ್ಲ. ರಜಪೂತರ ಇತಿಹಾಸದಲ್ಲಿ ಮಾನನಿಧಿ ಮಾನಿನಿಯರು ಯುದ್ಧದಲ್ಲಿ ತಮ್ಮವರಿಗೆ ಸೋಲಾದಾಗ ಸಾಮೂಹಿಕ ಸಹಗಮನ ಮಾಡುತ್ತಿದ್ದರಂತೆ. ಈ ಆದರ್ಶವನ್ನು ಪಾಲಿಸುವುದಾದರೆ ಮತ್ತು ಆತ್ಮಸಾಕ್ಷಿಯೆಂಬುದು ಇದ್ದರೆ ನಮ್ಮ ಬಹುಪಾಲು ಮಾಧ್ಯಮ ಮಿತ್ರರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು! ಅಥವಾ ಕನಿಷ್ಠ ಪುಟಗಟ್ಟಲೆ ಮತ್ತು ದಿನಗಟ್ಟಲೆ ಜಾಹೀರಾತು ಹಾಕಿ ದೇಶದ ಕ್ಷಮೆಕೇಳಬೇಕಾದೀತು!

ಭಾರತೀಯ ಜನತಾಪಕ್ಷವು ಮೋದಿಯವರ 400ರ ಬದಲು 240 ಸ್ಥಾನಗಳಿಗೆ ತೃಪ್ತಿಪ ಡಬೇಕಾಯಿತು. ಭಾರತದಲ್ಲಿ ಅಧಿಕಾರದತ್ತ ನಾವೇ ಹೆಣೆದ (ಕು)ತಂತ್ರವಿದೆ: ಒಂದು ಪಕ್ಷವಲ್ಲದಿದ್ದರೆ ಮೈತ್ರಿಕೂಟ. ಚುನಾವಣಾಪೂರ್ವ ಅಥವಾ ಅಧಿಕಾರ ಬೇಕೇಬೇಕೆಂದಾದಲ್ಲಿ ಚುನಾವಣೋತ್ತರ. ಈ ಪ್ರಸಂಗದಲ್ಲಿ ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಎನ್‌ಡಿಎ ಕೂಟವು 292 ಸ್ಥಾನಗಳೊಂದಿಗೆ ಬಹುಮತ ಸ್ಥಾಪಿಸಿದರೆ, ಇಂಡಿಯಾ ಬ್ಲಾಕ್ 234 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ವೈಯಕ್ತಿಕವಾಗಿ ಬಿಜೆಪಿ 240 ಸ್ಥಾನಗಳ ನಂತರದ ಅತೀ ದೊಡ್ಡ ಪಕ್ಷವಾಗಿ ಕಾಂಗ್ರೆಸ್ 99 ಸ್ಥಾನಗಳನ್ನು ಪಡೆದಿದೆ. ಇನ್ನುಳಿದಂತೆ ಸಮಾಜವಾದಿ ಪಕ್ಷವು 37 ಸ್ಥಾನಗಳನ್ನೂ ತೃಣಮೂಲ ಕಾಂಗ್ರೆಸ್ 29 ಸ್ಥಾನಗಳನ್ನೂ ಡಿಎಂಕೆ 22 ಸ್ಥಾನಗಳನ್ನೂ ಪಡೆದಿವೆ. ಇಕ್ಕಡೆಯ ಉಳಿದ ಪಕ್ಷಗಳು ಇನ್ನೂ ಕಡಿಮೆ ಸ್ಥಾನಗಳನ್ನು ಪಡೆದಿವೆ.

ಈ ಅಂಕಿ-ಅಂಶಗಳು ಏನನ್ನೂ ಹೇಳವು. ಎನ್‌ಡಿಎ ಸರಕಾರ ಅಧಿಕಾರಕ್ಕೆ ಮರಳುತ್ತದೆಯೆಂದು ಹೇಳಬಹುದಷ್ಟೇ ಹೊರತು ಮೋದಿ ಸರಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆಯೆಂದು ಹೇಳುವಂತಿಲ್ಲ. ‘ಇನ್ನೂ ಕಡಿಮೆ ಸ್ಥಾನಗಳನ್ನು’ ಪಡೆದ, ಸಾಮಾನ್ಯ ಪರಿಸ್ಥಿತಿಯಲ್ಲಿ ‘ನಗಣ್ಯ’ವಾಗಬೇಕಾಗಿದ್ದ ಮಿಣಿಮಿಣಿ ಬೆಳಕಿನ ಪಕ್ಷಗಳು, ವಾಮನ ಸಂಸದರು ಈಗ ಇದ್ದಕ್ಕಿದ್ದಂತೇ ತ್ರಿವಿಕ್ರಮರಾಗಿ ಗೋಚರಿಸುತ್ತಿದ್ದಾರೆ. ಅಧಿಕಾರಕ್ಕೇರಲು ಬಿಜೆಪಿಗೆ 33 ಸ್ಥಾನಗಳು ಬೇಕಾಗಿವೆಯಾದ್ದರಿಂದ ಅದು ಎನ್‌ಡಿಎಯ ತಪ್ಪಲಲ್ಲೇ ವಿಹರಿಸುವುದು ಅನಿವಾರ್ಯ. ಈ ಪೈಕಿ ಮುಖ್ಯ ಪಾಲುದಾರರು ಮೇಲ್ನೋಟಕ್ಕೆ ನಗಣ್ಯ ಪಕ್ಷಗಳಾದ ಚಂದ್ರಬಾಬು ನಾಯ್ಡುವಿನ ಟಿಡಿಪಿಯ 16 ಮತ್ತು ನಿತೀಶ್‌ಕುಮಾರ್ ಅವರ ಜೆಡಿಯುವಿನ 12 ಸ್ಥಾನಗಳು. ಅಲ್ಲಿಗೆ 268 ಆಯಿತು. (ಶಿಂದೆ) ಶಿವಸೇನೆಯ 7 ಸ್ಥಾನಗಳೊಂದಿಗೆ ಹಾಗೂ ಹೀಗೂ ಬಹುಮತ ಲಭ್ಯ. ಎಲ್‌ಜೆಪಿ (ಆರ್‌ವಿ)ಯ 5 ಮತ್ತು ಇತರ ಪಾಲುದಾರರ ಒಟ್ಟಾರೆ 13 ಸ್ಥಾನಗಳೊಂದಿಗೆ ಈ ಅಧಿಕಾರ ಭದ್ರ. ಈ ಪೈಕಿ ಟಿಡಿಪಿ ಮತ್ತು ಜೆಡಿಯು ನಿಜವಾದ ಸೂತ್ರಧಾರರು. ಏಕೆಂದರೆ ಅವು ಇನ್ನೂ ತಮ್ಮ ಸ್ವತಂತ್ರ ಅಸ್ತಿತ್ವವನ್ನು ಮತ್ತು ವ್ಯವಹಾರ ಕುದುರಿಸುವ ಜಾಣ ಹಕ್ಕನ್ನುಳಿಸಿಕೊಂಡಿವೆ. ಈಗ ಇರುವ ವರದಿಗಳಂತೆ ಅವು ಸಭಾಪತಿ ಮತ್ತು ಬಹುಮುಖ್ಯ ಖಾತೆಗಳನ್ನು (ಉಪಪ್ರಧಾನಿ ಹುದ್ದೆಯೂ ಸೇರಿ) ಬಯಸಿದರೆ ತಪ್ಪಲ್ಲ; ತಪ್ಪಿಲ್ಲ. ಬಾಲವೇ ತಲೆಯನ್ನು ಅಲ್ಲಾಡಿಸುವುದೆಂದರೆ ಇದೇ. (ಚಂದ್ರಶೇಖರ್, ತ್ರಿಪಾಠಿ, ವಾಜಪೇಯಿ, ದೇವೇಗೌಡ ಮುಂತಾದವರು ಪ್ರಧಾನಿಗಳಾದ ಹಾಗೆ; ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾದ ಹಾಗೆ.) ಇದು ಒಂದು ರೀತಿಯಲ್ಲಿ ಇಚ್ಛಿಸಿದಾಗ ಒಟ್ಟಿಗೆ ಇರುವ ಬೇಡವಾದಾಗ ಬೀಳಿಸುವ, ಬಿಟ್ಟುಹೋಗುವ, ಸಂಬಂಧ! ಲಿವ್ ಇನ್ ರಿಲೇಷನ್‌ಶಿಪ್! ಯಾವಾಗ ಬೇಕಾದರೂ ಮುಳುಗಬಲ್ಲ ಹಡಗು!

ಇದು ಮೋದಿಯವರಿಗೆ ಸಹಜ. ಈಗ ಮೋದಿ ಆರ್ತರಾಗಿ ತನ್ನ ಬಳಗವನ್ನೆೆಲ್ಲ ಕರೆಯುವುದು ಅನಿವಾರ್ಯವಾಗಿದೆ. ನಗಣ್ಯರೆಲ್ಲ ಈಗ ಅವರಿಗೆ ‘ಯೋಗಕ್ಷೇಮ ವಹಾಮ್ಯಹಂ’ ಎಂದು ಹೇಳಬೇಕಾಗಿದೆ. ಸ್ವಲ್ಪ ವ್ಯತ್ಯಾಸವಾಯಿತೋ ಇಳಿಜಾರುವಿನಲ್ಲಿ ಜಾರುವುದು ಖಂಡಿತ. ಕಾದು ನೋಡೋಣ.

ಹಿರಿಯರನ್ನು ಮಾರ್ಗದರ್ಶಕ ಮಂಡಳಿಗೆ ರಫ್ತುಮಾಡಿ ಪಕ್ಷದೊಳಗಿನ ಇತರರನ್ನು ತಮ್ಮ ಗಣಗಳಾಗಿ ಮಾಡಿಕೊಂಡು ಮೋದಿ ಒಂದು ದಶಕವನ್ನು ದಾಟಿದರು. ಅವರ ಜೊತೆಗೆ ಹೋದವರಿಗಾದ ಗತಿಯನ್ನು ಗಮನಿಸಬೇಕಾದರೆ ಆಂಧ್ರಪ್ರದೇಶದ ಜಗನ್ಮೋಹನ್ ರೆಡ್ಡಿ, ಒಡಿಶಾದ ನವೀನ್ ಪಟ್ನಾಯಕ್ ಇವರು ಸಂಸತ್ತಿನಲ್ಲಿ ಸಾಂವಿಧಾನಿಕ ತಿದ್ದುಪಡಿಗಳಿಗೆ ಅಗತ್ಯ ಬಹುಮತ ಕೊರತೆಯಾದಾಗ ಎನ್‌ಡಿಎಗೆ ನೀಡಿದ ಬೆಂಬಲವನ್ನು ನೆನಪಿಸಬೇಕು!

ಅಧಿಕಾರವೇನೋ ಬಹುತೇಕ ಭದ್ರವಾಯಿತು. ಆದರೆ ಮೋದಿ ಸರಕಾರವೆಂಬ ನಾಮಧೇಯ ಅನ್ವರ್ಥವಾಗಲಿಲ್ಲ; ಅಂಕಿತನಾಮಕ್ಕೆ ಕುಸಿದುಹೋಯಿತು. ಕಳೆದ ಹತ್ತು ವರ್ಷಗಳ ವಿಕಾಸವನ್ನು ಗಮನಿಸಿದರೆ ಸೇವಕ, ಚೌಕಿದಾರ ಎಂದು ಘೋಷಿಸಿಕೊಳ್ಳುತ್ತಿದ್ದ ಮೋದಿ ಈ ಚುನಾವಣಾ ಪೂರ್ವದಲ್ಲಿ ತಾನು ದೇಶದ ನಿರ್ಮಾಪಕ, ದ್ರಷ್ಟಾರ, ದೈವಾಂಶಸಂಭೂತ, ದೇವರೇ ಕಳುಹಿಸಿದವನು ಎಂದೆಲ್ಲ ಬೀಗಿದರು. ಸಂಸತ್ತಿನ ಮೆಟ್ಟಲುಗಳಿಗೆ ನಮಸ್ಕರಿಸಿ ಪ್ರವೇಶಿಸಿದರು. ಆದರೆ ಬರಬರುತ್ತ ಸಂಸತ್ತಿನ ಬಾಗಿಲಿನಿಂದಲೂ ಪಕ್ಷಕ್ಕಿಂತಲೂ ದೊಡ್ಡವರಾಗಿ ಬೆಳೆದರು. ಬಿಜೆಪಿಗೆ ಮತಹಾಕದಿದ್ದರೂ ಪರವಾಗಿಲ್ಲ ಮೋದಿಗೆ ಮತನೀಡಿ ಎಂದು ಕರೆಕೊಟ್ಟರು. ಬಿಜೆಪಿಗೆ ಮಾತೃಸಂಸ್ಥೆ ಆರೆಸ್ಸೆಸ್‌ನ ಅಗತ್ಯವಿಲ್ಲವೆಂಬ ಸೂಚನೆಯನ್ನು ಪಕ್ಷಾಧ್ಯಕ್ಷ ನಡ್ಡಾ ಅವರ ಮೂಲಕ ದೇಶಕ್ಕೆ ನೀಡಿದರು. ಗಾಳಿಪಟ ಎಷ್ಟು ಎತ್ತರಕ್ಕೇರಿದರೂ ದಾರದ ಇನ್ನೊಂದು ತುದಿ ಸೂತ್ರಧಾರರಲ್ಲಿ ಇದ್ದರಷ್ಟೇ ಗಾಳಿಪಟಕ್ಕೊಂದು ಗುರಿ; ಲಕ್ಷಣ. ಅದನ್ನು ಕತ್ತರಿಸಿಕೊಂಡು ಮೇಲೆ ಹೋದರೆ ಏನಾಗುತ್ತದೆಂಬುದಕ್ಕೆ ಮೋದಿ ಒಳ್ಳೆಯ ಉದಾಹರಣೆ/ನಿದರ್ಶನ. ಮತದಾರರು ಅವರು ಇನ್ನಷ್ಟು ಎತ್ತರಕ್ಕೆ ಅನಿಯಂತ್ರಿತವಾಗಿ ಏರದಂತೆ, ಹಾರದಂತೆ, ಅವರ ರೆಕ್ಕೆಗಳನ್ನು ಕತ್ತರಿಸಿಹಾಕಿದ್ದಾರೆ. ಈಗ ಧೊಪ್ಪನೆ ನೆಲಕ್ಕೆ ಕುಸಿಯುವುದು ಮೋದಿಯ ಸರದಿ. ಇದು ಅವರ ಪ್ರಧಾನಿ ಹುದ್ದೆಯಷ್ಟೇ ಅಲ್ಲ, ರಾಜಕೀಯ ಜೀವನದ ಮೊದಲ ಸವಾಲು. ನಕಲು ಹೊಡೆದಾದರೂ ಪ್ರಥಮದರ್ಜೆಯಲ್ಲಿ ತೇರ್ಗಡೆಯಾಗುತ್ತಿದ್ದ ವಿದ್ಯಾರ್ಥಿ ಒಮ್ಮೆಗೇ 35 ಶೇ. ಅಂಕ ಗಳಿಸಿದಂತೆ ಮೋದಿಯವರ ವಿಧಿ. ಈಗ ಅವರು ಪ್ರಧಾನಿಯಾಗುತ್ತಾರೆಯೇ ಎಂಬ ಪ್ರಶ್ನೆ ಅಸಾಧುವಲ್ಲ.

ಆದರೆ ಆಸಕ್ತಿದಾಯಕ ಅಂಶವೆಂದರೆ ಕಾಂಗ್ರೆಸ್ ಪಕ್ಷ ತನ್ನ ಸ್ಥಾನಗಳನ್ನು 99ಕ್ಕೆ (ಅದು ನಿರೀಕ್ಷಿಸಿದಷ್ಟಲ್ಲದಿದ್ದರೂ) ವೃದ್ಧಿಸಿಕೊಂಡಿದೆ; ನೂರರ ಗಡಿ ದಾಟಿಲ್ಲ; ಇದರಲ್ಲಿ ರಾಹುಲ್ ಗಾಂಧಿ ಗೆದ್ದ 2 ಕ್ಷೇತ್ರಗಳೂ ಸೇರಿಕೊಂಡದ್ದನ್ನು ನೆನಪಿಸಿಕೊಂಡರೆ ಒಟ್ಟು ಸ್ಥಾನಗಳು 98! ಉಳಿದೆಲ್ಲ ಪ್ರತಿಪಕ್ಷಗಳು ವೈಯಕ್ತಿಕವಾಗಿ ಮತ್ತು ತಮೊಳಗೆ ಭಿನ್ನಾಭಿಪ್ರಾಯಗಳನ್ನ್ನುಟ್ಟುಕೊಂಡು ಸ್ಪರ್ಧಿಸಿದರೆ ಮೋದಿಪಕ್ಷವನ್ನು ಸೋಲಿಸುವುದು ಸಾಧ್ಯವಿಲ್ಲ ಎಂಬುದನ್ನು ವಿವೇಕಯುತವಾಗಿ ಗ್ರಹಿಸಿ ಜೊತೆಯಾಗಿ ಸ್ಫರ್ಧಿಸಿದರು. ತಾವು ಬಹುಮತ ಪಡೆಯದಿದ್ದರೂ ಮೋದಿಯವರ ‘400’ನ್ನು ಮಣಿಸಿದರು. ಮೋದಿಯವರು ಈ ಅಂಶವನ್ನು ಗ್ರಹಿಸಿರಬಹುದು. ಆದರೂ ಇವರೆಲ್ಲ ಒಟ್ಟು ಸೇರಿ ಗಳಿಸಿದ ಸ್ಥಾನಕ್ಕಿಂತ ಹೆಚ್ಚು ತಮ್ಮ ಪಕ್ಷ ಗಳಿಸಿದೆ ಎಂದು ಹೇಳುವ ಮೂಲಕ ನೆಲಕ್ಕೆ ಬಿದ್ದರೂ ಮೀಸೆಯ ಮಣ್ಣನ್ನು ಒರೆಸಿಕೊಂಡರು; ಮತ್ತು ಮುಖ್ಯವಾಗಿ ಬಹಳಕಾಲದ ಬಳಿಕ ತನ್ನ ಪಕ್ಷವನ್ನು ನೆನಪಿಸಿದರು. ಅಧಿಕಾರಕ್ಕೆ ಬಾರದಿರುವ ಮೂಲಕ ಇಂಡಿಯಾ ಬ್ಲಾಕ್ ತಮ್ಮ ಒಗ್ಗಟ್ಟನ್ನು ಉಳಿಸಿಕೊಳ್ಳುವ ಸದವಕಾಶವನ್ನು ಪಡೆದರು.

ಮತದಾರರಿಗೂ ಮತನೀಡದ ಇತರ ಪ್ರಜೆಗಳಿಗೂ ಫಲಿತಾಂಶದ ಬಳಿಕ ಯಾವ ವ್ಯತ್ಯಾಸವೂ ಇಲ್ಲ. ಯಾವ ರಾಜ ಬಂದರೂ ರಾಗಿಬೀಸುವ ಶ್ರೀಸಾಮಾನ್ಯನಿಗೆ ತನ್ನ ಬೇಕುಬೇಡಗಳಷ್ಟೇ ಮುಖ್ಯವಾಗುತ್ತವೆ. ರಾಜಕಾರಣದ ತಮಾಷೆಗಳೆಲ್ಲ ಒಂದು ಪ್ರಹಸನದಂತೆ ಅವನ ಕಣ್ಣಮುಂದೆ ದಾಟಿಹೋಗುತ್ತವೆ. ಆದರೆ ಇವನ್ನು ಪ್ರಜ್ಞಾಪೂರ್ವಕವಾಗಿ ಮತ್ತು ಉದ್ದೇಶಪೂರ್ವಕವಾಗಿ, ನೋಡಿದವರಿಗೆ, ರಾಮಾ(ನು)ಗ್ರಹದ ಅಯೋಧ್ಯೆಯಲ್ಲಿ ಮತ್ತು ಕನ್ಯಾಕುಮಾರಿಯ ಧ್ಯಾನದಲ್ಲಿ ಭಾಜಪ ತಮಿಳುನಾಡಿನ ಅಷ್ಟೂ ಸ್ಥಾನಗಳನ್ನು ಸೋತದ್ದು, ಹೈದರಾಬಾದಿನ ಭಾಜಪ ಅಭ್ಯರ್ಥಿ ಬಾಹುಬಲಿ ಸಿನೆಮಾದ ನಾಯಕಿಯಂತೆ ಬಾಣವನ್ನು ಬಿಲ್ಲ್‌ಗೆ ಹೆದೆಯೇರಿಸಿ ಮಸೀದಿಯತ್ತ ಗುರಿಯಿಟ್ಟದ್ದು ಮತ್ತು ಅದನ್ನು ನೋಡಿ ನಮ್ಮ ಮೋದಿಮೀಡಿಯಾಗಳು ಸಂಭ್ರಮಿಸಿದ್ದು, ಮೋದಿ ಯವರು ಹೆಚ್ಚುಮಕ್ಕಳ ಕುಟುಂಬಗಳಿಗೆ ಕಾಂಗ್ರೆಸ್ ಒಕ್ಕೂಟವು ಹಿಂದೂಗಳ ತೆರಿಗೆ ಹಣವನ್ನು ಹಂಚುತ್ತದೆಂದು ಹೇಳಿದ್ದು, ಕ್ರಿಕೆಟ್‌ನಂತಹ ಕ್ರೀಡೆಗೂ ಕೇಸರಿಬಣ್ಣ ಹಚ್ಚಿದ್ದು, ತಾನು ಯಾವ ಜಾತಿ-ಮತ-ಧರ್ಮದ ಹೆಸರನ್ನೂ ಹೇಳಲಿಲ್ಲವೆಂದು ಆನಂತರ ಅತ್ತುಕೊಂಡದ್ದು, ಮಂಗಳಸೂತ್ರವೇ ಮುಂತಾದ ಮತೀಯ ರೂಪಕಗಳನ್ನು ಸೃಷ್ಟಿಸಿದ್ದು, 370ರಿಂದ 420ರ ವರೆಗೆ ಮೋದಿಭಕ್ತರು ಲೆಕ್ಕಹಾಕುತ್ತಲೇ ಜಪದ ಮಣಿ ಪೋಣಿಸಿದ್ದು, ಇವನ್ನು ಮರೆಯಲು ಸಾಧ್ಯವಿಲ್ಲ. ವರದಿಯಾಗಬೇಕಾದ್ದು ವರದಿಯಾಗದೆ, ವರದಿಯಾಗಬಾರದ್ದು ವರದಿಯಾದಾಗ ದೇಶದ, ಮತ್ತದರ ಪ್ರಜೆಗಳ ಭವಿಷ್ಯವು ಭಯಾನಕವಾಗುವುದು ಅನಿವಾರ್ಯ. (ಈ ನಡುವೆ ಅಧಿಕಾರ ರಾಜಕೀಯದ ನಂಟಿನಲ್ಲಿ ಮೋದಿಯವರ ಸಹವ್ಯಸನಿಯಾಗಿರುವ ಚಂದ್ರಬಾಬು ನಾಯ್ಡು ಮುಸ್ಲಿಮರಿಗೆ 5ಶೇ. ಮೀಸಲಾತಿಯನ್ನು ಘೋಷಿಸಿದ್ದಾರಂತೆ!)

ಈ ಎಲ್ಲ ಬೆಳವಣಿಗೆಗಳ ನಡುವೆಯೂ ಫಲಿತಾಂಶ ಹೀಗೆ ಬಂದದ್ದನ್ನು ಸ್ವಾಗತಿಸಲೇಬೇಕು. ತುಂಬಾ ವೇಗವಾಗಿ ಓಡುವ ಬಸ್ಸಿಗೆ ವೇಗನಿಯಂತ್ರಕವಾದ ‘ಗವರ್ನರ್’ ಎಂಬ ಸಾಧನವನ್ನು ಅಳವಡಿಸುವ ಪದ್ಧ್ದತಿಯಿದೆ.

ಈಗ ಎಕ್ಸಿಟ್ ಆಗುವ ಕೆಲಸವನ್ನು ಪ್ರಧಾನಿಯವರ ಖಾಸಾ ಮಾಧ್ಯಮಮಿತ್ರರು ಆರ್ನಬ್ ಗೋಸ್ವಾಮಿಯವರ ನಾಯಕತ್ವದಲ್ಲಿ ಮಾಡಬೇಕಾದ್ದು ನ್ಯಾಯ. ಮೋದಿಯವರೇ ಅದನ್ನು ಉದ್ಘಾಟಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News