ರಾಹುಲ್ ಗಾಂಧಿ ಎಂಬ ಹ್ಯಾಮ್ಲೆಟ್

ರಾಹುಲ್ ಸಾಂಸ್ಥಿಕವಾಗಿ, ರಾಜಕೀಯವಾಗಿ, ಸಾರ್ವಜನಿಕವಾಗಿ ತಾನು ಚಿಂತಕನೋ, ರಾಜಕಾರಣಿಯೋ, ಮುತ್ಸದ್ದಿಯೋ ಎಂಬುದನ್ನು ಗ್ರಹಿಸಿಕೊಳ್ಳದಿದ್ದರೆ ಕಾಂಗ್ರೆಸಿಗೆ ಅದರ ಪರಿಣಾಮ ಭೀಕರವಾದೀತು. ಪರಂಪರೆಯ ಕೊನೆಯ ಕೊಂಡಿಯಾಗಿರುವ ರಾಹುಲ್ ತಾನು ಮುಖ್ಯವೋ, ಪಕ್ಷ ಮುಖ್ಯವೋ, ದೇಶ ಮುಖ್ಯವೋ ಎಂಬುದನ್ನು ಜನರೆದುರು ಹೇಳದಿದ್ದರೆ ಕೊನೆಗೆ ಎಲ್ಲೂ ಹೊಂದದ ಮುಖವಾಗಬಹುದು.

Update: 2024-03-21 04:16 GMT

ದೇಶದ ಉದ್ದಗಲವನ್ನು ನೋಡದೆಯೇ ಭಾರತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೆಂಬುದಕ್ಕಾಗಿ ಗೋಪಾಲಕೃಷ್ಣ ಗೋಖಲೆಯವರು ಗಾಂಧಿಯನ್ನು ದೇಶ ಸುತ್ತುವ ಕಾಯಕಕ್ಕೆ ಹಚ್ಚಿದ್ದರು. ಅದನ್ನು ರಾಜಕೀಯವಾಗಿ ಮಾಡಿರಲಿಲ್ಲ. ಬದಲಾಗಿ ಬಹಳ ಕಾಲದ ಆನಂತರ ತನ್ನದೇ ದೇಶದ ಮಣ್ಣಿಗಿಳಿದಾಗ ಮತ್ತು ಅಲ್ಲಿ ಅನೇಕ ಸಮಸ್ಯೆಗಳಿದ್ದಾಗ ಅದನ್ನು ಅರ್ಥಮಾಡಿಕೊಳ್ಳಬೇಕೆಂಬ ಗಾಂಧಿಯ ತವಕ ಈ ಯಾತ್ರೆಗೆ ಇಂಬು ಕೊಟ್ಟಿತ್ತು.

ಒಂದು ಹಿರಿಯ ರಾಜಕಾರಣದ ಕುಟುಂಬದಲ್ಲಿ ಹುಟ್ಟಿ, ದೇಶದ ರಾಜಕಾರಣದಲ್ಲಿರುವ ಆತಂಕ, ಅಪಾಯಗಳನ್ನು ತೀರಾ ಸನಿಹದಿಂದ ನೋಡಿ ದೇಶದ ಕಾಯಿಲೆಯನ್ನು ಅರ್ಥಮಾಡಿಕೊಂಡವರಂತೆ ಓಡಾಡುವ ಆದರೆ ಅದರ ಚಿಕಿತ್ಸೆ ಗೊತ್ತಿಲ್ಲದವರಂತೆ ತಪ್ಪು ಪ್ರಯೋಗ ಮಾಡುವ ಒಬ್ಬ ರಾಜಕಾರಣಿಯಿದ್ದರೆ ಆತ-ರಾಹುಲ್‌ಗಾಂಧಿ. ಅವರ ಶಿಕ್ಷಣ, ಅರ್ಹತೆ ಇವ್ಯಾವುದೂ ಭಾರತದಲ್ಲಿ ಮುಖ್ಯವೇ ಅಲ್ಲ. (ಇಷ್ಟಕ್ಕೂ ಭಾರತದಲ್ಲಿ ರಾಜಕಾರಣಿಗಳ ಶಿಕ್ಷಣ ಮತ್ತು ಅರ್ಹತೆ ಎಂಬುದೇ ಒಂದು ಹಾಸ್ಯಾಸ್ಪದ ವಿಚಾರವಾಗುತ್ತಿದೆ!) ಒಂದು ಭಾರತ ಜೋಡೊವನ್ನು 2023ರಲ್ಲಿ ಕೈಗೊಂಡು 2024ರಲ್ಲಿ ಭಾರತ ಜೋಡೊವಿನ ಎರಡನೇ ಹಂತವನ್ನೂ ಮುಗಿಸಿದ ರಾಹುಲ್ ಗಾಂಧಿ ಹೇಳುವ ಆದರ್ಶ ರಾಜಕೀಯೇತರವಾದದ್ದು. ಪ್ರಾಯಃ ಗಾಂಧಿಯ ಹಾಗೆ, ಜಯಪ್ರಕಾಶ ನಾರಾಯಣರ ಹಾಗೆ, ಲಭ್ಯವಿದ್ದ ಎಲ್ಲ ಸಾಧ್ಯತೆಗಳ ಅವಕಾಶವನ್ನು ಪಡೆದ ಈ ನಾಯಕ ಜನರ ನಡುವೆ ಮಿಳಿತವಾದಾಗ ಅವರ ಸಮಸ್ಯೆಗೆ ಕಣ್ಣಾಗಿ, ಕಿವಿಯಾಗಿ, ಅವರ ಆತ್ಮದ ಭಾಗವಾಗಿ ನಡೆಯಬಹುದಾಗಿತ್ತು. ಆದರೆ ರಾಹುಲ್ ಮತ್ತು ಆತ ಪ್ರತಿನಿಧಿಸುವ ರಾಜಕೀಯ ಪಕ್ಷದ ಕಾರ್ಯಸೂಚಿ ಇದು ತನ್ನ ಆದರ್ಶವನ್ನು ಸಾಧಿಸುವತ್ತ ವಿಶೇಷ ಗಮನ ನೀಡಿದಂತಿಲ್ಲ. ಮೊದಲ ಭಾರತ ಜೋಡೊ ನಡೆದಾಗ ಕೆಲವು ರಾಜ್ಯಗಳ ಚುನಾವಣೆಗಳು ನಡೆಯುತ್ತಿದ್ದರೂ ರಾಹುಲ್ ಅದರಲ್ಲಿ ಭಾಗವಹಿಸಿರಲಿಲ್ಲ. ಅಂದರೆ ರಾಜಕೀಯವನ್ನು ಮೀರಿದ ಸೈದ್ಧಾಂತಿಕ ಹೋರಾಟಕ್ಕೆ ರಾಹುಲ್ ಇಳಿದರೇನೋ ಅನ್ನಿಸುವಂತಿತ್ತು. ಇದಕ್ಕೆ ಪೂರಕವಾಗಿ ಆತ ಪಕ್ಷದ ಎಲ್ಲ ಹೊರೆಯನ್ನು ಕಳಚಿಕೊಂಡಿದ್ದರು. (ಆದರೆ ಆತನ ಬದಲಿಗೆ ಆತನ ಕುಟುಂಬದ ನಿಷ್ಠಾವಂತರೆನಿಸಿದ್ದ ಖರ್ಗೆ ಅಧ್ಯಕ್ಷರಾದರು; ಸ್ವತಂತ್ರರಾಗಿ ಯೋಚಿಸಬಲ್ಲ ಶಶಿ ತರೂರ್ ಸೋತರು. ಪರಿಣಾಮ: ಕಾಂಗ್ರೆಸ್ ಅದೇ ಮರದ ಬಿಳಲಾಯಿತು!) ಎರಡನೇ ಹಂತದ ಭಾರತ ಜೋಡೊ ಸಂದರ್ಭದಲ್ಲಿ 2024ರ ಮಹಾಚುನಾವಣೆ ಕಣ್ಣೆದುರಿತ್ತು. ಮಾತ್ರವಲ್ಲ ಕಾಂಗ್ರೆಸ್ ಪ್ರಣೀತ ‘ಇಂಡಿಯಾ’ ಒಕ್ಕೂಟ ಸ್ಥಾಪಿತವಾಗಿತ್ತು. ಆತನ ಜೊತೆಗೆ ಆತನ ಪಕ್ಷದ ಮತ್ತು ಸಹಪಕ್ಷಗಳ ಸಹಚರ್ಯವಿತ್ತು. ಅವರೆಲ್ಲ ಅಲ್ಲಲ್ಲಿ ಆತನ ಜೊತೆ ಸೇರುತ್ತಿದ್ದರು. ಹೀಗೆ ಸೇರುವ ಮೊದಲು ಕೆಲವರಾದರೂ ಮಹಾಚುನಾವಣೆಯ ಬಿಸಿಯನ್ನು ಆತನ ಮೂಲಕ ಕಾಂಗ್ರೆಸಿಗೆ ಮುಟ್ಟಿಸಿ ಸ್ಥಾನ ಹೊಂದಾಣಿಕೆಯಾದರೆ ಮಾತ್ರ ಭಾರತವನ್ನು ಜೋಡಿಸುವ ಚಾಣಾಕ್ಷತನವನ್ನೂ ತೋರಿದರು. ಸಮಾಜವಾದಿ ಪಕ್ಷ ಇದಕ್ಕೊಂದು-ಪ್ರಾಯಃ ಒಂದೇ-ಉದಾಹರಣೆ. ತಕ್ಷಣ ಎಚ್ಚೆತ್ತ ಕಾಂಗ್ರೆಸ್ ಸ್ಥಾನ ಹೊಂದಾಣಿಕೆ ಮಾಡಿಕೊಂಡಿತು. ಇಲ್ಲಿಗೆ ಭಾರತ ಜೋಡೊ ತನ್ನ ವೈಚಾರಿಕತೆಯನ್ನು, ಸಾಮಾಜಿಕತೆಯನ್ನು ಕಳೆದುಕೊಂಡು, ರಾಜಕೀಯವಾಯಿತು.

ಭಾರತ ಜೋಡೊ ವೈಯಕ್ತಿಕ ಅಥವಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸಿತೆಂಬುದು ಅವಸರದ ಮತ್ತು ಒಲವಿನ ವಿಮರ್ಶೆಯಾದೀತು. ಮೊದಲ ಹಂತದಲ್ಲಿ ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಗೆದ್ದಿದ್ದರೆ ಅದರಲ್ಲಿ ರಾಜ್ಯದ ನಾಯಕರ ಸಾಧನೆಯೇ ಹೆಚ್ಚು. ರಾಷ್ಟ್ರೀಯ ವಿಚಾರಗಳ ಆಧಾರದಲ್ಲಿ ಆ ಚುನಾವಣೆ ನಡೆದಿರಲಿಲ್ಲ. ಹಾಗೊಂದು ವೇಳೆ ನಡೆದಿದ್ದರೆ ಮೋದಿ-ಶಾದ್ವಯರ ರ್ಯಾಲಿಗಳು ಜನರ ಮೇಲೆ ಪರಿಣಾಮ ಬೀರಬೇಕಿತ್ತು. ರಾಜ್ಯದ ಜನತೆ ಪಂಚ ಗ್ಯಾರಂಟಿಗಳ ಆಧಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆನ್ನುವುದೂ ಸರಿಯಲ್ಲ. ಏಕೆಂದರೆ ಅದೇ ರೀತಿಯ ಭರವಸೆಯು ಆನಂತರ ನಡೆದ ಇತರ ರಾಜ್ಯಗಳ ಚುನಾವಣೆಗಳಲ್ಲಿ ಫಲಕೊಡಲಿಲ್ಲ. ಹಾಗಾದರೆ ಈ ಗೆಲುವಿಗೇನು ಕಾರಣ? ಒಂದೇ ಒಂದು ಕಾರಣಕ್ಕಾಗಿ ಯಾವ ಪಕ್ಷವೂ ಗೆದ್ದುಬರುವುದಿಲ್ಲವಾದರೂ ಕರ್ನಾಟಕದ ಜನರು ಪರಮ ಮತೀಯತೆಯನ್ನು ಸಹಿಸಲಿಲ್ಲವೆಂದು ಕಾಣಿಸುತ್ತದೆ. ಇದಕ್ಕೆ ಪೋಷಕವಾಗಿ ರಾಜ್ಯದಲ್ಲಿ ಭಾಜಪದ ವರ್ಚಸ್ವೀ ನಾಯಕರಿಲ್ಲದಿರುವುದು, (ಮೋದಿ-ಶಾ ಕರ್ನಾಟಕಕ್ಕೆ ಬರಬೇಕಾದ ಅನಿವಾರ್ಯತೆ ಉಂಟಾದದ್ದೂ ಇದರಿಂದಾಗಿಯೇ!) ಮತ್ತು ಸಿದ್ದರಾಮಯ್ಯ-ಡಿಕೆಶಿದ್ವಯರು ಪರಿಣಾಮಕಾರೀ ತಂತ್ರಗಾರಿಕೆ ಮತ್ತು ಪ್ರಚಾರ ನಡೆಸಿದ್ದೂ ಸೇರಿಕೊಂಡವು.

ರಾಜಕಾರಣಿ ರಾಹುಲ್ ಕಾಂಗ್ರೆಸ್ ಕಾರಣವಾಗಿ ಸಂಸದರಾಗಿ ದ್ದಾರೆಯೇ ವಿನಾ ತನ್ನ ವೈಯಕ್ತಿಕ ವರ್ಚಸ್ಸಿನಿಂದಲ್ಲವೆಂಬುದು ಅವರ ಚುನಾವಣಾ ಯಾತ್ರೆಯನ್ನು ಗಮನಿಸಿದರೆ ಅರ್ಥವಾದೀತು. ಇದರಿಂದಾಗಿಯೇ ಕೇರಳದ ವಯನಾಡಿನಿಂದ ಆತ ಸ್ಪರ್ಧಿಸಬೇಕಾದ ಅನಿವಾರ್ಯತೆ. ಅಮೇಠಿಯಿಂದ ಆತ ಸ್ಪರ್ಧಿಸಿದಾಗ ಆತನನ್ನು ಸೋಲಿಸಿದ್ದು ಸ್ಥಳೀಯ ಅಭ್ಯರ್ಥಿಯಲ್ಲ. ಬದಲಿಗೆ ಸ್ಮತಿ ಇರಾನಿ ಎಂಬ ಇನ್ನೊಬ್ಬ ಪಕ್ಷನಿಮಿತ್ತ ರಾಜಕೀಯ ಎಳಸು! ಆದರೂ ಕಾಂಗ್ರೆಸಿನ ಒಂದು ವರ್ಗ ಆತನೇ ಭವಿಷ್ಯದ ನಾಯಕನೆಂದು ಬಿಂಬಿಸುತ್ತಿದೆ. ಇರಬಹುದು; ಯಾರು ಏನೂ ಆಗಬಹುದು. ರಾಜಕೀಯದ ಸುಳಿವೇ ಇಲ್ಲದ ರಾಜೀವ್ ಗಾಂಧಿ ಇಂದಿರಾ ನಂತರ ಅಧಿಕಾರಸೂತ್ರ ಹಿಡಿದು ತಕ್ಕಮಟ್ಟಿಗೆ ಯಶಸ್ವಿಯಾಗಿದ್ದರು. ಪತ್ರಿಕಾಗೋಷ್ಠಿಗಳಲ್ಲಿ ಪ್ರತ್ಯುತ್ಪನ್ನಮತಿಯನ್ನು ಪ್ರದರ್ಶಿಸುತ್ತಿದ್ದರು. ಅವರ ಅಕಾಲ ಮರಣದಿಂದಾಗಿ ಕಾಂಗ್ರೆಸ್ ನಿರ್ವಾತವನ್ನು ಎದುರಿಸಿತ್ತಾದರೂ ಸೋನಿಯಾ ಕೈಗೆ ಚುಕ್ಕಾಣಿ ನೀಡಿ ಪಕ್ಷದ ಏಕತೆಯನ್ನು ಕಾಪಾಡಿಕೊಂಡಿತು. ಇದು ಕುಟುಂಬ ರಾಜಕೀಯ ಎನ್ನುವುದಕ್ಕಿಂತಲೂ ಆಗ ಇದ್ದ ಕಾಂಗ್ರೆಸ್‌ನ ಇತರ ಪ್ರಬಲ ರಾಜಕಾರಣಿಗಳ ಪಟ್ಟಭದ್ರ ಹಿತಾಸಕ್ತಿ ಮತ್ತು ಚಾಣಾಕ್ಷತನ ಎನ್ನಬಹುದು. 2004-2014ರಲ್ಲಿ ಕಾಂಗ್ರೆಸ್ ಯುಪಿಎ ಎಂಬ ಒಕ್ಕೂಟವನ್ನು ಮಾಡಿಕೊಂಡು ಅಧಿಕಾರದಲ್ಲಿ ಮುಂದುವರಿದದ್ದು ಮತ್ತು ಆನಂತರ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗ ಅನೇಕರು ಬಿಜೆಪಿ ಸೇರಿದ್ದು ಮತ್ತು ಕೆಲವೊಂದು ಹಿರಿಯ ನಾಯಕರು ಕಾಂಗ್ರೆಸಿನ ವಿರುದ್ಧ ಮಾತನಾಡಿದ್ದು, ಮಾತನಾಡುತ್ತಿರುವುದು ಇದಕ್ಕೆ ಸಾಕ್ಷಿ. ಕಾಂಗ್ರೆಸಿನಲ್ಲಿ ಅಂತಲ್ಲ ಎಲ್ಲ ರಾಜಕೀಯ ಪಕ್ಷಗಳಲ್ಲೂ ಯೋಗ್ಯತೆಗಿಂತ ನಿಷ್ಠೆ, ಬದ್ಧತೆ ಇವೇ ಒಬ್ಬ ರಾಜಕಾರಣಿಯ ಉಳಿವು-ಅಳಿವಿಗೆ ಮುಖ್ಯ ಅಂಶಗಳು. ಕೆಲವರು ಪಕ್ಷಾಂತರ, ಸಮಯಸಾಧಕತನ ಮುಂತಾದ ಆಮ್ಲಜನಕಗಳ ಮೂಲಕ ಒಂದಷ್ಟು ಕಾಲ ಉಸಿರೆಳೆಯುತ್ತಾರೆ. ಆದರೆ ರಾಹುಲ್ 5 ವರ್ಷಗಳ ವಯನಾಡಿನ ಬೆಂಬಲದ ಬಳಿಕವೂ ತನ್ನ ಸ್ವಂತ ಕ್ಷೇತ್ರವನ್ನು ಹುಡುಕದೇ ಇರುವುದು ಅಪಾಯದ ಚಿಹ್ನೆ.

10 ವರ್ಷಗಳ ಮೋದಿ ಆಡಳಿತವನ್ನು ಬಿಜೆಪಿ ಒಂದು ಸಾಧನೆಯೆಂದು ಬೀಗುತ್ತಿದೆ. 10 ವರ್ಷಗಳ ಕಾಂಗ್ರೆಸ್ ಆಡಳಿತದ ಬಳಿಕ 10 ವರ್ಷಗಳ ಮೋದಿ ಆಡಳಿತವನ್ನು ಕಂಡಿದ್ದೇವೆ. 10 ವರ್ಷ ಏನೂ ಅಲ್ಲ ಎಂಬುದಕ್ಕಾಗಿ ಈ ಸಮೀಕರಣ. ಇದು ಬಿಜೆಪಿ ಸರಕಾರ ಎನ್ನುವುದಕ್ಕಿಂತಲೂ ಮೋದಿ-ಆರೆಸ್ಸೆಸ್ ಆಡಳಿತವೆನ್ನಬಹುದು. ಶಾ ಕೇಂದ್ರದಲ್ಲಿ ವರ್ಚಸ್ಸನ್ನು ಹೊಂದಿದ ನಾಯಕರೆಂದು ತಿಳಿದರೂ ಸೂಕ್ಷ್ಮವಾಗಿ ಪರಿಶೀಲಿಸಿದರೆ ಆತ ಜನನಾಯಕನಲ್ಲ; ಮೋದಿಯ (ಕರಿ)ನೆರಳು. ಇನ್ನುಳಿದ ನಿತಿನ್ ಗಡ್ಕರಿ, ರಾಜನಾಥ ಸಿಂಗ್ ಹಿರಿತನದಿಂದಾಗಿ ಉಳಿದರೆ, ನಿರ್ಮಲಾ ಸೀತಾರಾಮನ್, ಸ್ಮತಿ ಇರಾನಿ, ಜೈಶಂಕರ್ ಮುಂತಾದವರು ಮೋದಿಯ ಕೃಪಾಕಟಾಕ್ಷದಿಂದ ಉಳಿದವರು. ಭಾಜಪದ ಇತರ ನಾಯಕರ ಕುರಿತು ಹೇಳುವುದಕ್ಕೆ ಏನೂ ಇಲ್ಲ.

ಇಂತಹ ಸಂದರ್ಭದಲ್ಲಿ ರಾಜಕೀಯವಾಗಿಯೇ ಬೆಳೆಯುವುದು ರಾಹುಲ್ ಗಾಂಧಿಗೆ ಸಾಧ್ಯವಿತ್ತು. ಆದರೆ ಆರೋಪಿತ ಅಥವಾ ಹೇರಲ್ಪಟ್ಟ ನಾಯಕತ್ವ ಎಂದಿಗೂ ‘ಕಟ್ಟಿಕೊಟ್ಟ ಬುತ್ತಿ, ಹೇಳಿಕೊಟ್ಟ ಬುದ್ಧಿ’. ಎಷ್ಟೇ ಅವಕಾಶಗಳು ಈ ರಾಜಕುಮಾರನಿಗೆ ದಕ್ಕಿದರೂ ಸ್ವತಂತ್ರವಾಗಿ ಮಾತನಾಡಬೇಕಾದಾಗ ಬಾಲಿಶವಾಗಿ, ಅಪಕ್ವ ವಿಚಾರಗಳನ್ನು, ಟೀಕೆಗಳನ್ನು ಮಾಡುವ ಮೂಲಕ ಅಪಹಾಸ್ಯಕ್ಕೆ, ಅನಗತ್ಯ ಕ್ರಿಮಿನಲ್ ಪ್ರಕರಣಗಳಿಗೆ ಈಡಾಗುತ್ತಿದ್ದಾರೆ. ‘ಭಾರತ ಜೋಡೊ’ದಂತಹ ಮಹಾನ್ ಕಾರ್ಯಕ್ರಮದಲ್ಲಿ ಅಥವಾ ಆದಾದ ನಂತರ ವೈಯಕ್ತಿಕ ಟೀಕೆಗಳಿಗೆ ಅವಕಾಶಕೊಡಬಾರದು. ರಾಜಕೀಯ ಬೇರೆ, ಮುತ್ಸದ್ದಿತನ ಬೇರೆ. ರಾಹುಲ್ ಮಾತಿನ ಮಟ್ಟ ಬಹಳ ಎತ್ತರದ್ದೇನೂ ಅಲ್ಲ. ತಾನು ಪ್ರಬುದ್ಧ ರಾಜಕಾರಣಿಯೆಂದು ತೋರಿಸಿಕೊಳ್ಳಬೇಕಾದರೆ ಇತರ ರಾಜಕೀಯ ಪಕ್ಷಗಳು, ರಾಜಕಾರಣಿಗಳು ತನ್ನ ಬಗ್ಗೆ ಏನು ಟೀಕೆ ಮಾಡುತ್ತಾರೆ ಎಂಬುದನ್ನು ಅಲಕ್ಷಿಸಿ ಜನರು ತನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ನಡೆನುಡಿಯಲ್ಲಿ ತೋರಿಸಿಕೊಳ್ಳಬೇಕು. ಎಲ್ಲ ಸರಿಹೋಯಿತೆಂಬ ಸಂದರ್ಭದಲ್ಲಿ ರಾಹುಲ್ ಗಾಂಧಿ ರಾಜಕೀಯದ ಕೀಳು ಅಭಿರುಚಿಯನ್ನು ತೋರಿಸುತ್ತಾರೆ. ಕೀಳುಮಟ್ಟದ ರಾಜಕೀಯವನ್ನು ಪ್ರಧಾನಿಯೇ ಪ್ರದರ್ಶಿಸಲಿ, ತಾನು ಆತನಿಗಿಂತ ಎತ್ತರದಲ್ಲಿದ್ದೇನೆಂಬ ಹಾಗೆ ರಾಹುಲ್ ಸುಮ್ಮನಿರಬಹುದಿತ್ತು. ಒಂದು ವೇಳೆ ಅದೇ ಮಟ್ಟದಲ್ಲಿ ವ್ಯವಹರಿಸಬೇಕಾದರೆ ಅದಕ್ಕೆ ಪಕ್ಷದ ಇತರರನ್ನು ಛೂಬಿಡಬಹುದಿತ್ತು. (ಇಂತಹ ರಾಜಕಾರಣ ಭಾರತದೆಲ್ಲೆಡೆ ಇದೆ!) ಇದರಿಂದಾಗಿಯೇ ರಾಹುಲ್ ಸಂಸತ್ ಸದಸ್ಯತನವನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದು. ಅಷ್ಟೇ ಅಲ್ಲ, ಗಾಜಿನ ಮನೆಯಲ್ಲಿರುವವರು ಇತರರೆಡೆಗೆ ಕಲ್ಲೆಸೆಯಬಾರದಲ್ಲ! ಅದಾನಿ-ಅಂಬಾನಿಗಳ ಕುರಿತು ರಾಹುಲ್ ಮಾತನಾಡದಿದ್ದ ದಿನಗಳೇ ಇಲ್ಲವೇನೋ? ಇಷ್ಟಕ್ಕೂ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳೂ ಅದಾನಿ-ಅಂಬಾನಿಗಳಿಗೆ, ಟಾಟಾಗಳಿಗೆ ಕೆಂಪು ಜಮಖಾನ ಹಾಸಿದ ಉದಾಹರಣೆಗಳಿವೆ. ಗೀತೆ ಓದಬೇಕಾದರೆ ಆತ ದೇವರಾಗಿರಬೇಕಾಗಿಲ್ಲ, ಮನುಷ್ಯನಾಗಿದ್ದರೆ ಸಾಕು; ಭೂತವಲ್ಲ.

ರಾಹುಲ್‌ಗಾಂಧಿ ತನ್ನ ಭಾಷಣವೊಂದರಲ್ಲಿ ಹಿಂದೂಧರ್ಮದ ಬಗ್ಗೆ, ‘ಶಕ್ತಿ’ ಎಂಬ ಉಲ್ಲೇಖದ ಬಗ್ಗೆ ಅನಗತ್ಯವೆಂಬ ಹಾಗೆ ಟೀಕಿಸಿದರು. ಚುನಾವಣಾ ಸಮಯ. ಎಲ್ಲರ ಹೃದಯಬಡಿತ, ಉಷ್ಣತೆ ಹೆಚ್ಚಿರುತ್ತದೆ. ತಾನು ಮೋದಿಗಿಂತ ಅಥವಾ ಹಿಂದುತ್ವವಾದಿಗಳಿಗಿಂತ ಹೆಚ್ಚು ಪ್ರಮಾಣದ ಹಿಂದೂವೆಂದು ತೋರಿಸಿಕೊಡಲು ರಾಹುಲ್ ಗಾಂಧಿ ಶ್ರಮಿಸುತ್ತಿರುವುದು ಅವರ ದೇವಾಲಯ ಭೇಟಿಯಲ್ಲಿ, ಮೋದಿಯಷ್ಟಲ್ಲದಿದ್ದರೂ ಸಾಕಷ್ಟು ವರ್ಣರಂಜಿತ ನಾಮ, ಉಡುಪುಗಳಿಂದ ಗೊತ್ತಾಗುತ್ತದೆ. ಇಂತಹ ಸಂದರ್ಭದಲ್ಲಿ ಒಬ್ಬ ನಾಯಕ ತನ್ನ ಸ್ಥಾಯೀಭಾವವಾಗಿ ಒಂದು ಆಕಾರ, ಸ್ವರೂಪವನ್ನು ಇಟ್ಟುಕೊಳ್ಳಬೇಕಾಗುತ್ತದೆ; ರಸಭಾವಕ್ಕೋ, ಪಾತ್ರಕ್ಕೋ ಹೊಂದುವಂತಹ ದಿರಿಸಿನ ಸಿನೆಮಾ ನಟರಂತಲ್ಲ. ನಿಶ್ಚಲವಾದ ಧೋರಣೆಯಿಲ್ಲದಿದ್ದರೆ ಜನಾಭಿಪ್ರಾಯ ಸೊರಗುತ್ತದೆ. ಇಷ್ಟಕ್ಕೂ ರಾಹುಲ್ ಸೆಣಸುತ್ತಿರುವುದು ಮೋದಿಯೆಂಬ ನವರಸಪ್ರವೀಣನ ಎದುರು. ಮೋದಿ ಈ ಸಂದರ್ಭವನ್ನು ಬಿಟ್ಟುಕೊಡುವವರಲ್ಲ. ತಕ್ಷಣ ಹಿಂದೂಗಳನ್ನು ಕೆರಳಿಸುವಂತೆ ಪ್ರಚೋದನಾತ್ಮ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಅವರ ಪಡೆಗಳು ಭಾರತೀಯ ನಾರಿಯರಿಗೆ, ದೇವಿದೇವತೆಗಳಿಗೆ ಅಪಚಾರವಾಯಿತೆಂದು ಲಬೋಲಬೋ ಎಂದು ಊಳಿಟ್ಟಿದ್ದಾರೆ. ಅನೇಕರು ಈ ಭಾವನಾತ್ಮಕ ಸಂದೇಶಕ್ಕೆ ಕಿವಿಗೊಟ್ಟಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಆಳುವ ಪಕ್ಷದ ಅಧಿಕಾರಶಕ್ತಿ ಎಲ್ಲವನ್ನೂ ನಿಯಂತ್ರಿಸುತ್ತಿದೆ. ಅದರ ಬೆಂಬಲಿಗರಿಗೆ ಈ ಗುಟ್ಟು ಗೊತ್ತಿದೆ. ಅದಕ್ಕೇ ಅವರು ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಕೇಳುವವರಿಲ್ಲ. ಇಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿ ಏನೇ ತಪ್ಪಿನುಡಿದರೂ ಅದರ ವಿರುದ್ಧ ದೇಶಾದ್ಯಂತ ಪ್ರತಿಭಟನೆ, ಗುಲ್ಲೇಳುತ್ತಿದೆ. ಅಂತಹ ಕಾರ್ಯಕರ್ತರ ದಂಡು ಕಾಂಗ್ರೆಸ್‌ಗಿಲ್ಲ.

ಇಷ್ಟೇ ಅಲ್ಲ, ರಾಹುಲ್ ತನಗೆ ಅಧಿಕಾರ ಬೇಕೇ ಬೇಡವೇ ಎಂಬ ಬಗ್ಗೆ ನಿಶ್ಚಿತ ಧೋರಣೆಯನ್ನು ಪ್ರಕಟಿಸುತ್ತಿಲ್ಲ. ಪಕ್ಷಾಧ್ಯಕ್ಷತೆಯನ್ನು ಬಿಟ್ಟುಕೊಟ್ಟ ಬಳಿಕ ಹೊಸ ಅಧ್ಯಕ್ಷರಿಗೆ ಎಲ್ಲಾ ನಿರ್ಧಾರಗಳನ್ನೂ ತೆಗೆದುಕೊಳ್ಳಲು ಅವಕಾಶ, ಅಧಿಕಾರಕೊಡಬೇಕು. ಆದರೆ ಕಾಂಗ್ರೆಸಿನಲ್ಲಿ ಖರ್ಗೆಯವರು ಅಧ್ಯಕ್ಷರಾದರೂ ಸೋನಿಯಾ, ರಾಹುಲ್, ಪ್ರಿಯಾಂಕಾ ಹೀಗೆ ಇಡೀ ಕುಟುಂಬವೇ ವಿವಿಧ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಕರ್ನಾಟಕದ ಗ್ಯಾರಂಟಿಗಳನ್ನು ಘೋಷಿಸಿದ್ದು ಖರ್ಗೆಯವರಲ್ಲ. ರಾಹುಲ್, ಪ್ರಿಯಾಂಕಾ ಮತ್ತಿತರರು. ಈಗ ಸ್ಥಾನ ಹಂಚಿಕೆಯಲ್ಲೂ ಅಧ್ಯಕ್ಷರು ನೇಪಥ್ಯದಲ್ಲಿದ್ದಾರೆ. ಸ್ವತಃ ಅವರೇ ಸ್ಪರ್ಧಿಸುತ್ತಿಲ್ಲ. ಇತರ ಹಿರಿಯರು ಅವರ ಭವಿಷ್ಯವೇನೆಂದು ಪ್ರಕಟಿಸಿಲ್ಲ. ಒಂದೆಡೆ ಕೆಲವು ಕಾಂಗ್ರೆಸಿಗರು ಖರ್ಗೆಯವರು ಮುಂದಿನ ಪ್ರಧಾನಿ ಅಭ್ಯರ್ಥಿಯೆಂದರೆ, ಇನ್ನು ಕೆಲವರು ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎನ್ನುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟತೆಯಿಲ್ಲ. ‘ಇಂಡಿಯಾ’ ಬ್ಲಾಕಿನೊಳಗೆ ಯಾರ ಬಗ್ಗೆ ಸಹಮತವೆಂಬುದೂ ಗೊತ್ತಿಲ್ಲ. ಸ್ವತಃ ರಾಹುಲ್ ‘ತಾನಲ್ಲ’ ಎನ್ನುತ್ತಿಲ್ಲ. ಅನೇಕರು ಪಕ್ಷ ತೊರೆದು ಹೋಗುತ್ತಿದ್ದಾರೆ. ಈ ಬಗ್ಗೆ ಯಾವ ನಿಶ್ಚಿತ ಧೋರಣೆಯೂ ಇಲ್ಲ. ಬಿಜೆಪಿ ಬಿಟ್ಟವರಿಗೆ ಕಾಂಗ್ರೆಸ್ ಟಿಕೆಟ್ ಎಂದಾದರೆ, ಮಾನವಂತರಿಗೆ ಏನನ್ನಿಸಬಹುದು?

ಹೀಗೆ ಸಾಂಸ್ಥಿಕವಾಗಿ, ರಾಜಕೀಯವಾಗಿ, ಸಾರ್ವಜನಿಕವಾಗಿ ತಾನು ಚಿಂತಕನೋ, ರಾಜಕಾರಣಿಯೋ, ಮುತ್ಸದ್ದಿಯೋ ಎಂಬುದನ್ನು ಗ್ರಹಿಸಿಕೊಳ್ಳದಿದ್ದರೆ ಕಾಂಗ್ರೆಸಿಗೆ ಅದರ ಪರಿಣಾಮ ಭೀಕರವಾದೀತು. ಪರಂಪರೆಯ ಕೊನೆಯ ಕೊಂಡಿಯಾಗಿರುವ ರಾಹುಲ್ ತಾನು ಮುಖ್ಯವೋ, ಪಕ್ಷ ಮುಖ್ಯವೋ, ದೇಶ ಮುಖ್ಯವೋ ಎಂಬುದನ್ನು ಜನರೆದುರು ಹೇಳದಿದ್ದರೆ ಕೊನೆಗೆ ಎಲ್ಲೂ ಹೊಂದದ ಮುಖವಾಗಬಹುದು.

ಇದೆಲ್ಲದರ ಮೂಲಕ ಏನು ಹೇಳಬೇಕೆಂದಿದ್ದೇನೋ ಅದನ್ನು ಶೀರ್ಷಿಕೆಯಲ್ಲೇ ಸೂಚಿಸಿದ್ದೇನೆ. ‘to be or not to be'!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News