ಯುದ್ಧ ಮತ್ತು ಹಿಂಸೆ

ನಮ್ಮ ಮಣಿಪುರ ಹೊತ್ತಿ ಉರಿದಾಗಲೂ ಮೌನವಾಗಿದ್ದ ಪ್ರಧಾನಿ ತನ್ನ ಮಂಡೀಸಾಧನೆಗೆ ತಾನೇ ಚಪ್ಪಾಳೆ ತಟ್ಟಿ ಇಸ್ರೇಲಿಗೆ ಬೆಂಬಲ ಸೂಚಿಸಲು ಟ್ವಿಟರ್ ಮತ್ತು ಫೋನ್‌ಗಳ ಮೂಲಕ ದೌಡಾಯಿಸಿದ್ದಾರೆ. ಯಾವ ಋಣವನ್ನು ತೀರಿಸಲು ಈ ಅವಸರವೆಂಬುದು ಇನ್ನಷ್ಟೇ ಗೊತ್ತಾಗಬೇಕು. ಪ್ರಾಯಃ ಸ್ವಾತಂತ್ರ್ಯಪೂರ್ವದಲ್ಲಿ ಈ ಮನಸ್ಥಿತಿಯ ಅನೇಕರು ಭಾರತಮಾತೆ ಸ್ತ್ರೀಯಾಗಿರುವುದರಿಂದ ಆಕೆ ಸ್ವಾತಂತ್ರ್ಯಕ್ಕೆ ಅನರ್ಹಳೆಂಬ ಸನಾತನವಾದದ ಆಧಾರದಲ್ಲಿ ಬ್ರಿಟಿಷ್ ಸರಕಾರದ ವಸಾಹತುಶಾಹಿಯನ್ನು ಬೆಂಬಲಿಸಿದ್ದರೆಂಬುದನ್ನು ನೆನಪಿಟ್ಟರೆ ಈ ಬೆಳವಣಿಗೆ ಅಥರ್ವಾದೀತು.

Update: 2023-10-12 04:47 GMT

ರಶ್ಯ ಮತ್ತು ಉಕ್ರೇನ್ ನಡುವಣ ಯುದ್ಧ ನಿರ್ಣಾಯಕ ಹಂತಕ್ಕೆ ತಲುಪಿದೆಯೆಂದು ತಿಳಿದರೆ ಅದು ನಮ್ಮ ಮೂರ್ಖತನ. ಅದೀಗ ಟಿವಿ ಧಾರಾವಾಹಿಗಳಂತೆ ಬೆಳೆಯುತ್ತಲೇ ಇದೆ, ಕೆಲವೊಮ್ಮೆ ನಿಧಾನವಾಗಿ, ಇನ್ನು ಕೆಲವೊಮ್ಮೆ ವೇಗವಾಗಿ. ವೇಗದ ಓಟದ ಬದಲು ನಿಧಾನಗತಿಯ ಓಟದಂತೆ ಎಲ್ಲರೂ ಅದರಿಂದ ಅನಾಕರ್ಷಿತರಾಗಿ ತಮ್ಮ ತಮ್ಮ ಬದುಕಿಗೆ ಮರಳುವ ಹೊತ್ತಿಗೆ ಏನೋ ಒಂದು ನಡೆಯುವುದು ಕಷ್ಟಸಾಧ್ಯ; ಕುಂಟಬಹುದೇನೋ?

ಈಗ ಇಸ್ರೇಲ್ ಮತ್ತು ಹಮಾಸ್ ನಡುವಣ ಯುದ್ಧವೂ ಹೀಗೆಯೇ: ಹಲವು ದಶಕಗಳ ಇತಿಹಾಸವುಳ್ಳ ಈ ವೈರವು ಈಗ ಎಲ್ಲಿಗೆ ತಲುಪುತ್ತದೆಯೋ ಹೇಳಲಾಗದು. ಇಸ್ರೇಲ್ ಮತ್ತು ಅದನ್ನು ಬೆಂಬಲಿಸುವ ವ್ಯವಸ್ಥೆಯ ಭಾಗಗಳು ಫೆಲೆಸ್ತೀನ್‌ನ ಹಮಾಸ್ ಗುಂಪನ್ನು ಭಯೋತ್ಪಾದಕರೆಂದು ಹೇಳಿದರೆ ಫೆಲೆಸ್ತೀನನ್ನು ಬೆಂಬಲಿಸುವವರು ಇಸ್ರೇಲನ್ನು ವಸಾಹತುಶಾಹಿ ವಿಸ್ತಾರದಾಹಿ ಕೇಡೆಂದು ವಾದಿಸುತ್ತಾರೆ. ಭಾರತವು ಈಗಾಗಲೇ ಅಮೆರಿಕ, ಬ್ರಿಟನ್, ಫ್ರಾನ್ಸ್, ಕೆನಡಾ ಮುಂತಾದ ಪಾಶ್ಚಾತ್ಯ ಮತ್ತು ಯುಎಇಯಂತಹ ಮಧ್ಯಪ್ರಾಚ್ಯ ರಾಷ್ಟ್ರಗಳ ಜೊತೆಗೆ ಹೆಜ್ಜೆಹಾಕುತ್ತ ತಾನು ಇಸ್ರೇಲಿನೊಂದಿಗಿದ್ದೇನೆಂದು ಬಹಿರಂಗ ಹೇಳಿಕೆ ನೀಡಿದೆ. ಸೌದಿ ಅರೇಬಿಯ, ರಶ್ಯ, ಇರಾನ್, ಮುಂತಾದ ರಾಷ್ಟ್ರಗಳು ಫೆಲೆಸ್ತೀನನ್ನು ಬೆಂಬಲಿಸಿವೆ. ಯಾರು ಭಯೋತ್ಪಾದಕರು ಮತ್ತು ಯಾರು ದೇಶರಕ್ಷಕರು ಎಂಬುದು ಯುದ್ಧದ ಕೊನೆ ಯಾರ ಪರವಾಗಿರುತ್ತದೆಂಬುದರ ಮೇಲೆ ನಿಂತಿದೆ. ಎರಡು ಮಹಾಯುದ್ಧಗಳನ್ನು ಮಿತ್ರ ರಾಷ್ಟ್ರಗಳು ಗೆಲ್ಲದಿದ್ದರೆ ಏನಾಗುತ್ತಿತ್ತು? ಇದರ ಪರಿಣಾಮವೇನೆಂದು ಇತಿಹಾಸವು ಭವಿಷ್ಯದಲ್ಲಿ ಹೇಳಬಹುದು. ಬೇಟೆಗಾರನು ಇತಿಹಾಸ ಬರೆಯುವಾಗ ಆತನೇ ನಾಯಕ; ಬಲಿಪಶು ಅಪ್ರಸ್ತುತ.

ಈಗ ಯುದ್ಧಗಳೆಲ್ಲವೂ ‘ಯಾವ ಮಹಾ’ ಎಂದಾಗಿದೆ. ವಿಶ್ವದ ಯಾವುದೇ ಮೂಲೆಯಲ್ಲಿ ಯುದ್ಧದ ಕಿಡಿ ಹತ್ತಿಕೊಂಡರೂ ಅದು ವಿಶ್ವವ್ಯಾಪಿಯಾಗುತ್ತಿದೆ ಮಾತ್ರವಲ್ಲ, ವಿಶ್ವಾತ್ಮಕವಾಗುತ್ತಿದೆ. ಚೀನಾವು ತೈವಾನಿನ ವಿರುದ್ಧ, ಉತ್ತರ ಕೊರಿಯಾ ದಕ್ಷಿಣ ಕೊರಿಯಾದ ವಿರುದ್ಧ, ಹೀಗೆ ಬೇಕಷ್ಟು ಉದಾಹರಣೆಗಳು ಸಿಗುತ್ತವೆ. ವಿಷಾದ ಮತ್ತು ತಮಾಷೆಯ ಸಂಗತಿಯೆಂದರೆ ಇಂತಹ ಸಂದರ್ಭಗಳಲ್ಲಿ ಪ್ರಜ್ಞಾವಂತರೂ ಸೇರಿದಂತೆ ಜನರು ಯುದ್ಧ ಮತ್ತು ಅದು ಪ್ರತಿಪಾದಿಸುವ ಹಿಂಸೆಯನ್ನು ಪ್ರತಿಭಟಿಸುವ, ವಿರೋಧಿಸುವ ನೆಲೆಗಟ್ಟಿನಿಂದ ಅಭಿವ್ಯಕ್ತಿಸುವ ಬದಲಾಗಿ ತಾವು ಇವರ ಪರ, ಅವರ ಪರ ಎಂದು ನೆಗೆದಾಡುವುದು. ಇದಕ್ಕೆ ಅಪವಾದವಾಗಿರುವ ದೇಶವೊಂದು ಈಗಿಲ್ಲ. ಹಿಂಸೆ ಅನಿವಾರ್ಯ ಎಂಬ ಸ್ಥಿತಿಯಲ್ಲೇ ಎಲ್ಲರೂ- ಸಾಧು ಸನ್ಯಾಸಿಗಳೂ ಸೇರಿ- ಪ್ರಕಟವಾಗುವುದನ್ನು ನೋಡಿದರೆ ಹಿಂಸೆಗೂ ಒಬ್ಬ ದೇವರಿರಬೇಕಾಗಿತ್ತು ಮತ್ತು ಆತನಿಗೇ ಇತರ ಎಲ್ಲ ದೇವರುಗಳಿಗಿಂತ ಹೆಚ್ಚು ಪೂಜೆ, ಕಾಣಿಕೆ ಸಲ್ಲುತ್ತಿತ್ತು ಎಂದು ಅನ್ನಿಸುತ್ತದೆ. ಮಹಾಭಾರತದಲ್ಲಿ ಧೃತರಾಷ್ಟ್ರನೆಂಬ ಅಂಧನೃಪಾಲನು ಸಂಜಯನಲ್ಲಿ ‘‘ಧರ್ಮಕ್ಷೇತ್ರವಾದಂತಹ ಕುರುಕ್ಷೇತ್ರದಲ್ಲಿ ಪಾಂಡವರೂ ನನ್ನ ಮಕ್ಕಳೂ ಕೂಡಿಕೊಂಡು (!) ಏನು ಮಾಡಿದರು?’’ ಎಂಬ ಪ್ರಶ್ನೆಯನ್ನೆಸೆದನೆಂದು ಉಲ್ಲೇಖವಿದೆ. ಆತನಿಗೆ ಅದು ಸಹಜ. ಏಕೆಂದರೆ ಆತ ಕುರುಕ್ಷೇತ್ರವನ್ನು ಕಂಡವನಲ್ಲ; ಯುದ್ಧವನ್ನಂತೂ ಖಂಡಿತಾ ಅಲ್ಲ. ಆದ್ದರಿಂದ ಹಿಂಸೆಯ ಭಯಾನಕತೆ ಆತನಿಗೆ ಪ್ರತ್ಯಕ್ಷ ದರ್ಶನವಾಗದು. ಆದರೆ ಕಣ್ಣು ಕಾಣುವ ಸಂಜಯನೂ ಅದನ್ನು ಹೇಳಿ ಫಲವಿಲ್ಲವೆಂದು ಉಪದೇಶಿಸಲಿಲ್ಲ. ಬದಲಾಗಿ ವೀಕ್ಷಕ ವರದಿಯನ್ನು ನೀಡತೊಡಗಿದ. ಕಣ್ಣು ಕಾಣುವವರಿಗೆ ಈ ತೊಡಕು. ಇಂದು ನಾವೆಲ್ಲ ಯುದ್ಧದ ಅರ್ಥಾತ್ ಹಿಂಸೆಯ ಕುರಿತ ಮಾಧ್ಯಮ ವರದಿಗಾಗಿ ಕಾಯುತ್ತೇವೆ. ಅದನ್ನು ಕಂಡು, ಕೇಳಿ, ಓದಿ ಪುನೀತರಾಗುತ್ತೇವೆ; ಸಂತೋಷಪಡುತ್ತೇವೆ.

ಈ ಸಂತೋಷಿಸುವ ಅಭಿವ್ಯಕ್ತಿಯನ್ನು ಅವಕಾಶವಾದಿಗಳು ಮಂದಿ ಒಪ್ಪುವುದಿಲ್ಲ. ನಾವೇಕೆ ಸಂತೋಷಿಸಬೇಕು, ನಮಗೂ ಎಲ್ಲರಷ್ಟೇ ದುಃಖವಿದೆ ಎನ್ನುತ್ತಾರೆ. ಈ ಎಲ್ಲರೂ ಯಾರು? ಹೀಗೆಯೇ ಸಂತೋಷಿಸುವವರು. ಹೀಗಲ್ಲದಿದ್ದರೆ ಪ್ರಾಯಃ ಹಿಂಸೆಯೇ ಪ್ರಧಾನವಾಗಿ ನಮ್ಮ ಚಲನಚಿತ್ರಗಳು ಹಣ ದೋಚುತ್ತಿರಲಿಲ್ಲ. ಒಂದು ಕಾಲದಲ್ಲಿ ಮನೆಮಂದಿಯೆಲ್ಲ ಕುಳಿತು ನೋಡುವ ಸಿನೆಮಾಗಳಿದ್ದವು. ಅಲ್ಲಿನ ಕಷ್ಟಸುಖಗಳು ಸಾಮಾಜಿಕವಾಗಿದ್ದವು. ಅಲ್ಲೂ ದ್ವೇಷವಿತ್ತು; ದುಃಖವಿತ್ತು; ಕಷ್ಟಕೋಟಲೆಗಳಿದ್ದವು. ಆದರೆ ಅದನ್ನು ವೈಭವೀಕರಿಸುತ್ತಿರಲಿಲ್ಲ. ಭಾಷಣಗಳೂ ಇದೇ ರೀತಿಯ ಪ್ರಚೋದನೆಯ ಹಾದಿ ಹಿಡಿದಿವೆ. ಇಂದು ಹಿಂಸೆಯ ಪ್ರದರ್ಶನವು ಅಶ್ಲೀಲತೆಯ ಹಂತ ತಲುಪಿದೆ. ಅತೀ ರಂಜನೀಯವಾಗುತ್ತಿದೆ. ನಮ್ಮ ಮಕ್ಕಳು ಇದನ್ನೇ ಕಲಿತು ಖಳನಾಯಕರನ್ನೇ ಆರಾಧಿಸಲು ತೊಡಗುತ್ತಾರೆ. ಆದರೆ ಅವರಿಗೆ ಆಯ್ಕೆಯಿಲ್ಲ. ಏಕೆಂದರೆ ನಾಯಕನೂ ಹಿಂಸೆಯ ಅವತಾರಪುರುಷನೇ. ಅದಕ್ಕೆ ಅನೇಕ ಮುಖಗಳು; ಸ್ವರೂಪಗಳು. ಕಾನೂನನ್ನು ಕೈಗೆತ್ತಿಕೊಳ್ಳುವವರು; ಏಕಾಂಗಿಯಾಗಿ ಸೇಡು ತೀರಿಸಿಕೊಳ್ಳುವವರು. ಅದಕ್ಕಾಗಿ ವಿವಿಧ ತಂತ್ರಗಳನ್ನು ಹೆಣೆಯುವವರು.

ಪ್ರಕೃತ ರಶ್ಯ-ಉಕ್ರೇನ್, ಇಲ್ಲವೇ ಇಸ್ರೇಲ್-ಹಮಾಸ್ ಯುದ್ಧಗಳಲ್ಲಿ ಪ್ರಕಟವಾಗುತ್ತಿರುವ ವೀರೋಚಿತ ಹೇಳಿಕೆಗಳಲ್ಲಿ ನಾಗರಿಕತೆಯ, ಶಾಂತಿಪಾಲನೆಯ ಪ್ರಜ್ಞೆ ಎಳ್ಳಷ್ಟೂ ಇಲ್ಲ. ಇದೇನೂ ಹೊಸದಲ್ಲ. ಪೂರ್ವ-ಪಶ್ಚಿಮ ಭೇದವಿಲ್ಲದೆ ಪುರಾಣಗಳಲ್ಲಿ ಕಂಡುಬರುವ, ಹಿಂಸೆಯ ಪರಾಕಾಷ್ಠೆಯ ಪೂರ್ಣರೂಪದಂತಿರುವ ಯುದ್ಧದಲ್ಲಿ, ದೇವತೆಗಳೂ ಉಭಯತರ ಪರವಾಗಿ ಸಂದಣಿಯಾಗಿ ಮೆರೆದರೆಂಬ ಉಲ್ಲೇಖಗಳನ್ನು ಕಾಣುತ್ತೇವೆ. ಯಾರೂ ಯುದ್ಧವನ್ನು ಕೊನೆಗಾಣಿಸುವ ಅಥವಾ ಶಾಂತಿಪಾಲನೆಗಾಗಿ ದುಡಿದ ನಿದರ್ಶನಗಳೇ ಇಲ್ಲ. ದುಡಿದವರೂ ಕೈಸೋತ ವ್ಯಾಸರು, ಭೀಷ್ಮರೇ ಹೆಚ್ಚು. ಈ ಪರಿಪಾಠ ಮುಂದುವರಿದು ಚರಿತ್ರೆಗಳಲ್ಲಿ ದೇಶವಿದೇಶಗಳ ಆಡಳಿತಗಾರರು ಈ ಪೈಕಿ ಒಬ್ಬರನ್ನು ಆಯ್ಕೆ ಮಾಡಿಕೊಂಡು ತಮಗಮ ದ್ವೇಷ-ವಿದ್ವೇಷಗಳ ಪೋಷಕಪಾತ್ರವನ್ನು ನಿರ್ವಹಿಸುತ್ತಾರೆ. ಹೀಗೆ ಮಧ್ಯಪ್ರವೇಶಿಸುವುದು ತಪ್ಪೆನ್ನಲಾಗದು. ಏಕೆಂದರೆ ಸುಮ್ಮನಿದ್ದರೆ ಜಾಗತಿಕ, ಸಾಮಾಜಿಕ, ಚಾರಿತ್ರಿಕ, ರಾಜಕೀಯ ಆತಂಕಗಳಿದ್ದಾಗ ತನ್ನ ಪಾಡಿಗೆ ತಾನು ಸುಮ್ಮನಿರುವುದು ಸರಿಯೇ, ಇದೊಂದು ಉಷ್ಟ್ರಪಕ್ಷಿತನವಲ್ಲವೇ ಅವಕಾಶವಾದವಲ್ಲವೇ ಎಂದು ತರ್ಕಿಸಬಹುದು. ಸುಮ್ಮನಿದ್ದರೂ ತಪ್ಪು, ಮಾತನಾಡಿದರೂ ತಪ್ಪು ಎಂಬ ಸ್ಥಿತಿಯನ್ನು ಕಾಲ ನಿರ್ಣಯಿಸಿದೆ.

ಇಂತಹ ಯುದ್ಧ ಸಂದರ್ಭಗಳಲ್ಲಿ ವಿಶ್ವಸಂಸ್ಥೆಯು ಏನು ಮಾಡುತ್ತಿದೆ? ಏನೂ ಮಾಡುತ್ತಿಲ್ಲವೆಂದು ಹೇಳಲಾಗದು. ಅದು ಪ್ರಬಲ ದೇಶಗಳ ಕೈಂಕರ್ಯವನ್ನು ಮಾಡುತ್ತಿದೆ. ಮಧ್ಯೆ ಪ್ರವೇಶಿಸಿ ಯುದ್ಧವನ್ನು ನಿಲ್ಲಿಸುವ ಶಕ್ತಿಯನ್ನು ಅದು ಹೊಂದಿಲ್ಲದಿರುವುದೂ ಇದಕ್ಕೆ ಕಾರಣ. ಅದೀಗ ಸರ್ವರಿಗೂ ಮುಕ್ತ (free for all) ವೇದಿಕೆಯಂತೆ ಕೆಲಸಮಾಡುತ್ತಿದೆ. ಅಲ್ಲಿ ಪರಸ್ಪರ ಬೈದಾಡಿಕೊಳ್ಳಬಹುದು; ತಮ್ಮ ತಮ್ಮ ದೇಶಗಳ ಮಾಧ್ಯಮಗಳಲ್ಲಿ ಬೆನ್ನುತಟ್ಟಿಸಿಕೊಳ್ಳಬಹುದು. ಕೊನೆಗೆ ಬರಿಗುಲ್ಲು, ನಿದ್ರೆಗೇಡು ಎಂಬ ಸ್ಥಿತಿಯನ್ನು ತಲುಪಿ ಮುಸುಕು ಹಾಕಿ ಮಲಗಿಕೊಳ್ಳಬಹುದು. ನಾಳಿನ ಚಿಂತೆಯಿಲ್ಲದಿದ್ದರೆ ನಿದ್ರಿಸಬಹುದು. ಅದೀಗ ರೋಟರಿ, ಲಯನ್ಸ್ ಕ್ಲಬ್‌ಗಳಂತೆ ಜಾಗತಿಕ ಸೇವಾ ಸಂಸ್ಥೆಯಾಗಿದೆ.

ಜನಸಾಮಾನ್ಯರ ಪ್ರತಿಕ್ರಿಯೆಗಳೇನು? ಇಸ್ರೇಲ್-ಹಮಾಸ್ ನಡುವಣ ಯುದ್ಧ ಹೊಸ ಪ್ರಮೇಯವನ್ನು, ಪ್ರಶ್ನೆಗಳನ್ನು, ಸಮೀಕರಣವನ್ನು ಹಾಕಿಕೊಟ್ಟಿದೆ. ಫೆಲೆಸ್ತೀನ್ ಬೇರೆ, ಹಮಾಸ್ ಬೇರೆ ಎಂಬ ಹಾಗೆ ಒಂದು ವಾದವಿದೆ. ಹಾಗಾದರೆ ಫೆಲೆಸ್ತೀನ್ ಮತ್ತು ಹಮಾಸ್ ನಡುವಣ ಸಂಬಂಧವೇನು? ಇಸ್ರೇಲ್ ಯಾರ ವಿರುದ್ಧ ಯುದ್ಧ ಘೋಷಿಸಿದೆ? ನಮ್ಮ ಅಯೋಧ್ಯೆಯ ವಿವಾದದಂತೆ ಇಲ್ಲೂ ಇತಿಹಾಸ ಏನು ಹೇಳುತ್ತದೆ? ಹಲವು ದಶಕಗಳಿಂದ ಇಸ್ರೇಲ್ ಫೆಲೆಸ್ತೀನ್‌ನ ಭೂಭಾಗಗಳನ್ನು ಒಂದೊಂದಾಗಿ ಕಿತ್ತು ತಿನ್ನುವಾಗ ಜಗತ್ತು ಏನು ಮಾಡುತ್ತಿತ್ತು? ಒಂದು ವೇಳೆ ಈಗ ನಡೆಯುತ್ತಿರುವ ಯುದ್ಧವು ಇಸ್ರೇಲ್ ಮತ್ತು ಹಮಾಸ್ ನಡುವೆ ಮಾತ್ರವಾದರೆ ಅದಕ್ಕೆ ಫೆಲೆಸ್ತೀನ್ ಎಷ್ಟು ಜವಾಬ್ದಾರ? ಮತ್ತು ಈಗ ನಡೆದ, ನಡೆಯುತ್ತಿರುವ ಉಭಯ ಪಕ್ಷಗಳ ಹತ್ಯಾಕಾಂಡದಲ್ಲಿ ಸಾಯುತ್ತಿರುವವರು ಯಾರು?

ಈ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭವಲ್ಲ. ನೊಂದವರ ನೋವನ್ನು ನೋಯದವರೆತ್ತ ಬಲ್ಲರು? ಈ ಮತ್ತು ಇಂತಹ ವಿವಾದಗಳಿಗೆ ಶಾಶ್ವತ ಪರಿಹಾರವೆಂಬುದೇ ಇರದು. ಮನುಷ್ಯನೇ ಶಾಶ್ವತವಲ್ಲದ ಮೇಲೆ ಪರಿಹಾರಗಳು ಶಾಶ್ವತವಾದಾವು ಹೇಗೆ? ೨ನೇ ಮಹಾಯುದ್ಧದ ಬಳಿಕ ಯೆಹೂದಿಗಳಿಗೆ ಸ್ವಂತ ನೆಲೆಯನ್ನು ಕಲ್ಪಿಸಲು ವಿಶ್ವಸಂಸ್ಥೆ ಮತ್ತು ‘ಮಿತ್ರರಾಷ್ಟ್ರಗಳು’ ಫೆಲೆಸ್ತೀನ್‌ನ ನೆಲ-ನೆಲೆಯನ್ನು ಒದಗಿಸಲು ಯೋಜಿಸಿದಲ್ಲಿಂದಲೇ ಈ ಸಮಸ್ಯೆ ಸೃಷ್ಟಿಯಾಗಿತ್ತು. ಖರೀದಿಸಿದ ಮಾತೃಭೂಮಿಯಂತಿದ್ದ ಈ ನೆಲದ ಸಮಸ್ಯೆ ಬಿಗಡಾಯಿಸಿದ್ದು ಇಸ್ರೇಲ್ ತನ್ನ ಅರಬನ ಒಂಟೆಯಂತೆ ಸರಹದ್ದಿನಲ್ಲಿದ್ದ ಫೆಲೆಸ್ತೀನ್‌ನ ಇಂಚಿಂಚೇ ಭಾಗವನ್ನು ಆಕ್ರಮಿಸಿಕೊಂಡು ಬಂದಲ್ಲಿಂದ. ‘ಮಿತ್ರ’ ರಾಷ್ಟ್ರಗಳು ಇವನ್ನು ಕಂಡೂ ಕಾಣದಂತೆ ಕಾಲಕಳೆದವು. ಈಗ ಅದು ಇಸ್ರೇಲನ್ನು ಭೌಗೊಳಿಕವಾಗಿ ವಿಸ್ತರಿಸಿ, ಫೆಲೆಸ್ತೀನನ್ನು ಇದ್ದೂ ಇಲ್ಲದಂತಾಗಿಸಿದೆ. ಈ ಹಲವು ದಶಕಗಳಿಂದ ಫೆಲೆಸ್ತೀನ್ ಮಾಡಿದ ಅಹವಾಲಿಗೆ ಕವಡೆಪಾಲೂ ಮಾನ್ಯತೆ ಸಿಕ್ಕಿಲ್ಲ. ಇದು ಅದನ್ನು ಹತಾಶವಾಗಿಸಿದೆ. ಇಸ್ರೇಲ್ ‘‘ನಾನು ನಿನ್ನನ್ನು ಆಕ್ರಮಿಸುತ್ತಿರುವಾಗ ನೀನೇಕೆ ಮಧ್ಯೆ ಪ್ರವೇಶಿಸುವೆ?’’ ಎಂದು ಫೆಲೆಸ್ತೀನನ್ನು ಅಣಕಿಸಿದಂತಿದೆ. ಹಿರಿಯರೆಲ್ಲ ಈ ದ್ರೌಪದಿ ವಸ್ತ್ರಾಪಹರಣವನ್ನು ನೋಡಿಯೂ ಮೌನವಾಗಿದ್ದಾರೆ. ಅವರಿಗೆ ಅವರದೇ ಶಸ್ತ್ರ, ತೈಲ, ಮುಂತಾದ ವ್ಯಾಪಾರದ ಚಿಂತೆ.

ಯುಗೋಸ್ಲಾವಿಯಾದ ಮಾರ್ಶಲ್ ಟಿಟೋ, ಭಾರತದ ನೆಹರೂ, ಈಜಿಪ್ಟಿನ ನಾಸಿರ್ ಮುಂತಾದವರು ಅನುಸರಿಸಿದ ಅಲಿಪ್ತ ಚಳವಳಿ ಪ್ರಬಲವಾಗಿದ್ದಾಗ ಶೀತಲ ಸಮರದಲ್ಲೂ ಶಾಂತಿಪಾಲನೆಗಾಗಿ ಉಭಯ ಪಕ್ಷಗಳೊಂದಿಗೆ ಮಾತನಾಡಿದ ನಿದರ್ಶನಗಳಿವೆ. ವಿಶ್ವಸಂಸ್ಥೆ ಮಾಡಲಾಗದ ಕಾರ್ಯವನ್ನು ಇಂತಹ ಚಳವಳಿಗಳು ನಿರ್ವಹಿಸಿವೆ. ಈಗ ಅಲಿಪ್ತ ಚಳವಳಿಯೇ ಇಲ್ಲವಾಗಿದೆ. ಎಲ್ಲರೂ ಲಿಪ್ತ. ಭಾರತವು ಈ ವರೆಗೂ ಫೆಲೆಸ್ತೀನನ್ನು ಬೆಂಬಲಿಸುತ್ತಿತ್ತು. ಈಗ ಭಾರತದ ವಿದೇಶಾಂಗ ನೀತಿ ತನ್ನದೇ ಆಂತರಿಕ ಮತೀಯ ರಾಜಕಾರಣಕ್ಕಾಗಿ ಉಲ್ಟಾ ಹೊಡೆದಿದೆ. ಅಮೆರಿಕ, ಫ್ರಾನ್ಸ್ ಮತ್ತು ಇಸ್ರೇಲಿನೊಂದಿಗೆ ಶಸ್ತ್ರಾಸ್ತ್ರ ಖರೀದಿಯ ಒಪ್ಪಂದದ ಸಂಬಂಧದಿಂದಾಗಿ ಅವೀಗ ಭಾರತದ ಬೀಗರಂತಿವೆ. ತಮಗಾದ ಲಾಭದಿಂದ ಅವು ಬೀಗುತ್ತಿವೆ. ಭಾರತದ ಹಣಕಾಸಿನ ಬೀಗ ಅವರಲ್ಲಿದೆಯೆಂದೇ ಕಾಣಿಸುತ್ತಿದೆ.

ಕಳೆದ ಕೆಲವು ವರ್ಷಗಳಿಂದ ‘ರಾಮರಾಜ್ಯ’ದಲ್ಲಿ ಅಹಿಂಸೆಗೆ ಸ್ಥಾನವಿಲ್ಲದಾಗಿದೆ. ನಮ್ಮ ಮಣಿಪುರ ಹೊತ್ತಿ ಉರಿದಾಗಲೂ ಮೌನವಾಗಿದ್ದ ಪ್ರಧಾನಿ ತನ್ನ ಮಂಡೀಸಾಧನೆಗೆ ತಾನೇ ಚಪ್ಪಾಳೆ ತಟ್ಟಿ ಇಸ್ರೇಲಿಗೆ ಬೆಂಬಲ ಸೂಚಿಸಲು ಟ್ವಿಟರ್ ಮತ್ತು ಫೋನ್‌ಗಳ ಮೂಲಕ ದೌಡಾಯಿಸಿದ್ದಾರೆ. ಯಾವ ಋಣವನ್ನು ತೀರಿಸಲು ಈ ಅವಸರವೆಂಬುದು ಇನ್ನಷ್ಟೇ ಗೊತ್ತಾಗಬೇಕು. ಪ್ರಾಯಃ ಸ್ವಾತಂತ್ರ್ಯಪೂರ್ವದಲ್ಲಿ ಈ ಮನಸ್ಥಿತಿಯ ಅನೇಕರು ಭಾರತಮಾತೆ ಸ್ತ್ರೀಯಾಗಿರುವುದರಿಂದ ಆಕೆ ಸ್ವಾತಂತ್ರ್ಯಕ್ಕೆ ಅನರ್ಹಳೆಂಬ ಸನಾತನವಾದದ ಆಧಾರದಲ್ಲಿ ಬ್ರಿಟಿಷ್ ಸರಕಾರದ ವಸಾಹತುಶಾಹಿಯನ್ನು ಬೆಂಬಲಿಸಿದ್ದರೆಂಬುದನ್ನು ನೆನಪಿಟ್ಟರೆ ಈ ಬೆಳವಣಿಗೆ ಅಥರ್ವಾದೀತು.

ಟಾಲ್‌ಸ್ಟಾಯ್ ಈಗ ತನ್ನ ಮಹತ್ ಮತ್ತು ಬೃಹತ್ ಕೃತಿ ಯುದ್ಧ ಮತ್ತು ಶಾಂತಿ (War and Peace)ಯನ್ನು ಮತ್ತೆ ಬರೆಯುವುದಿದ್ದರೆ ಶಾಂತಿ ಎಂಬ ಪದವನ್ನು ಕೈಬಿಡುತ್ತಿದ್ದನೇನೋ? ಹಾಗೆ ಯೋಚಿಸುವುದು ಆ ಮಹಾನ್ ಲೇಖಕನಿಗೆ ಅವಮಾನವೆಸಗಿದಂತಾಗುತ್ತದೆಂದು ತಿಳಿದರೂ ಯಾವನೇ ವ್ಯಕ್ತಿ ಆತ ಎಂತಹ ಮಹಾನುಭಾವನಾದರೂ ಪರಿಸ್ಥಿತಿಯ ಮತ್ತು ಪರಿಸರದ ಕೈಗೊಂಬೆಗಳೆಂದೇ ತಿಳಿಯಬೇಕಾಗುತ್ತದೆ. ಸ್ವತಃ ಟಾಲ್‌ಸ್ಟಾಯ್ ಚರಿತ್ರೆಯನ್ನು ನೋಡಿದ ದೃಷ್ಟಿಯೇ ‘ಚರಿತ್ರೆ ತನ್ನ ಪಟ್ಟುಹಿಡಿದ ಕೊನೆಯನ್ನು ತಲುಪುತ್ತದೆ ಮತ್ತು ಮನುಷ್ಯಕುಲ ಈ ಚಾರಿತ್ರಿಕ ಪ್ರಕ್ರಿಯೆಯ ಒಂದು ಅನಿಶ್ಚಿತ ಪರಿಕರವಾಗಿ ಗೋಚರಿಸುತ್ತಾನೆ’ ಎಂಬುದಾಗಿ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಬದುಕಿನ ದೊಡ್ಡಸ್ತಿಕೆಯನ್ನಷ್ಟೇ ಪ್ರಸಾರ ಮಾಡುವ ಎಲ್ಲ ಕಾಲದ ಬರಹಗಳೂ ಮನುಷ್ಯನ ವೈಫಲ್ಯಗಳನ್ನು ಮೌಲ್ಯಗಳಾಗಿ ಸ್ವೀಕರಿಸಿವೆ; ಸಮೀಕರಿಸಿವೆ. ಆದ್ದರಿಂದಲೇ ತನ್ನದೇ ದೋಷಗಳಿಂದ, ತಪ್ಪುಗಳಿಂದ ತಲುಪುವ ದುರಂತದಲ್ಲೂ ಒಬ್ಬ ವ್ಯಕ್ತಿ ನಾಯಕನಾಗುತ್ತಾನೆ. ಶೇಕ್ಸ್‌ಪಿಯರ್ ಹ್ಯಾಮ್ಲೆಟ್, ಒಥೆಲ್ಲೋ, ಕಿಂಗ್‌ಲಿಯರ್, ಮ್ಯಾಕ್‌ಬೆತ್ ಮುಂತಾದ ತನ್ನ ದುರಂತ ನಾಟಕಗಳಲ್ಲೂ ಇದನ್ನು ಸಾಧಿಸಿದ್ದಾನೆ.

ಮನುಷ್ಯನಿಗಿರುವ ರಾಗದ್ವೇಷಗಳನ್ನು ಯಾವ ಹೊಸದೂ ಅಳಿಸಲಾರ ದೆಂಬುದು ನಮ್ಮ ಕಣ್ಣ ಮುಂದಿದೆ. ಇತರರಿಗಿಂತ ಹೆಚ್ಚಿನವನಾಗುವುದು, ಮುಂದೆ ನಿಲ್ಲುವುದಕ್ಕಾಗಿ ಇತರರನ್ನು ಹೊಸಕಿ ಹಾಕುವುದು ಕಾಡಿಗಿಂತ ನಾಡಿನಲ್ಲಿ ಹೆಚ್ಚಾಗಿದೆ. ‘ವೈಲ್ಡ್‌ಲೈಫ್’ನ್ನು ನೋಡಲು ಕ್ರೂರ ಕಾಡುಪ್ರಾಣಿಗಳ ಜೀವನವನ್ನು ಹುಡುಕಬೇಕಾಗಿಲ್ಲ. ನಮ್ಮ ಸುತ್ತಲಿನ ನಡಾವಳಿಗಳನ್ನು, ದಿನ ನಿತ್ಯ ಕೇಳುವ, ಓದುವ, ಕಾಣುವ ಘಟನಾವಳಿಗಳೇ ಸಾಕು.

ಇತಿಹಾಸದಲ್ಲಿ ಶಾಂತಿಯ ಯುಗ ಹೆಚ್ಚು ಕಡಿಮೆ ಮುಗಿದಂತಿದೆ. ಕತ್ತಲಿನ ಯುಗದಿಂದ ಬೆಳಕಿಗೆ ಹರಿದು ಬಂದ ಕಾಲಮಾನವು ಈಗ ಪೌರಾಣಿಕ ಕಲ್ಪನೆಯಾದ ಪ್ರಳಯ ಅಥವಾ ಯುಗಾಂತದ ಭೀತಿಯನ್ನು ಹುಟ್ಟುಹಾಕಿದೆ. ನಮ್ಮ ಮುಂದಿನ ಪೀಳಿಗೆಯು ನಮಗಿಂತ ಹೆಚ್ಚು ಆಧುನಿಕವಾಗಿ ನಮಗಿಂತ ಹೆಚ್ಚು ಸೌಕರ್ಯಗಳನ್ನು ಹೊಂದಿ, ನಮಗಿಂತ ಹೆಚ್ಚು ಅರಿವಿನ ಬೆಳಕನ್ನು ಪಡೆಯಬಲ್ಲುದೆಂದು ಖಾತ್ರಿ ನೀಡುವ ಕಾಲ ಮುಗಿಯುತ್ತಿದೆ. ಇಂದು ಆವಿಷ್ಕಾರವಾಗುವ ಯಾವ ಹೊಸತನವೂ ಮನುಷ್ಯನಿಗೆ ಸುರಕ್ಷತೆಯ ಭಾವವನ್ನು ಕೊಡದು; ಪ್ರಾಯಃ ಜಗತ್ತಿನ ಯಾವ ಸರಕಾರವೂ ತನ್ನ ಪ್ರಜೆಗಳಿಗೆ, ಪ್ರಾಣಿ-ಪಕ್ಷಿಗಳಿಗೆ, ಗಿಡಮರಗಳಿಗೆ, ಜಲ-ನೆಲ-ಆಕಾಶಕ್ಕೆ, ಕೊನೆಗೆ ಗಾಳಿಗೂ ಸಹಜ ಬದುಕಿನ ಗ್ಯಾರಂಟಿಯನ್ನು ನೀಡದು.

ಬೈಬಲ್‌ನಲ್ಲಿ ‘ನಗರವನ್ನು ದೇವರು ಕಾಯದಿದ್ದರೆ, ಕಾವಲುಗಾರನು ಎಚ್ಚರವಾಗಿದ್ದರೂ ಫಲವಿಲ್ಲ’ ಎಂಬ ಮಾತಿದೆ. ಫೆಲೆಸ್ತೀನ್‌ಗೆ ಪ್ರಾಯಃ ಇದೇ ಹಣೆಬರಹವೆಂದು ಕಾಣುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Contributor - ಬಾಲಸುಬ್ರಮಣ್ಯ ಕಂಜರ್ಪಣೆ

contributor

Similar News