ಎನಗಿಂತ ಹಿರಿಯರಿಲ್ಲ
ಬೇಕಾದರೆ ಬರಲಿ ಎಂಬಂತೆ ‘ಇಂಡಿಯಾ’ ಸಭೆಗಳು ನಡೆದರೆ ಪ್ರತಿಪಕ್ಷಗಳಿಗೆ ಮುಖ್ಯವಾಗಿ ಕಾಂಗ್ರೆಸಿಗೆ ಉಳಿಗಾಲವಿಲ್ಲ. ಈಗ ಅದು ಎಲ್ಲ ಪ್ರತಿಪಕ್ಷಗಳೊಂದಿಗೆ ಸಮಾನ ಸುಖ- ದುಃಖಗಳನ್ನು ಹಂಚಿಕೊಳ್ಳದೆ ವಿಧಿಯಿಲ್ಲ. ಪ್ರತಿಪಕ್ಷಗಳ ನಾಯಕರು ಯಾರಾಗಬೇಕು ಎಂಬ ಪ್ರಶ್ನೆ ಬಂದಾಗಲೆಲ್ಲ ‘ನಾವೇ ಆಗಬೇಕು’ ಎಂದು ಕಾಂಗ್ರೆಸ್ ಹೇಳುವಂತಿಲ್ಲ; ಮತ್ತು ‘ನಾನೇ ಆಗಬೇಕು’ ಎಂದು ಕಾಂಗ್ರೆಸ್ ನಾಯಕರ್ಯಾರೂ ಹೇಳುವಂತಿಲ್ಲ. ಈ ಪ್ರಶ್ನೆ ಈಗಲೇ ಉದ್ಭವಿಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈಗಷ್ಟೇ ನಡೆದ ವಿಧಾನಸಭಾ ಚುನಾವಣೆಗಿಂತಲೂ ಕಳಪೆ ಫಲಿತಾಂಶ ಕಾಂಗ್ರೆಸಿಗೆ ಲಭಿಸುವ ಸಾಧ್ಯತೆಯಿದೆ.
ದೇಶದ ರಾಜಕೀಯವು ಪ್ರಜೆಗಳ, ಪ್ರಜಾಪ್ರಭುತ್ವದ ತಳವನ್ನೇ ಅಲುಗಾಡಿಸತೊಡಗಿದಾಗ ಪ್ರತಿಯೊಬ್ಬನೂ ರಾಜಕೀಯವಾಗಿ ಪ್ರಜ್ಞಾವಂತನಾಗಬೇಕೆಂದು ಚಿಂತಕರು ಬಯಸಿದರೆ ತಪ್ಪಿಲ್ಲ. ಅದಲ್ಲದಿದ್ದರೆ ನಾಳೆ ನಮ್ಮ ಸಾಹಿತಿಗಳಿಗೆ ಬರೆಯಲು ಪೆನ್ನು, ಕಾಗದ, ಚಿತ್ರಗಾರರಿಗೆ ಚಿತ್ರಿಸಲು ಬಣ್ಣ, ಬ್ರಷ್, ಕಲಾವಿದರಿಗೆ ನುಡಿಸಲು ಸಾಧನಗಳು ದುರ್ಲಭವಾಗಬಹುದು; ಉಪನ್ಯಾಸಕರಿಗೆ ಮಾತನಾಡಲು, ಸಂಗೀತಕಾರರಿಗೆ ಹಾಡಲು ಸಾಧ್ಯವಾಗದಂತೆ ನೇಣಿನ ಹಗ್ಗ ಬಿಗಿದು ಉಸಿರುಗಟ್ಟಬಹುದು. ಯಾವುದು ದೇಶಕ್ಕೆ ಮಾರಕ, ಯಾವುದು ಪೂರಕ ಎಂದು ಚಿಂತಿಸುವ ಹೊಣೆ ಪ್ರಜೆಗಳದ್ದಾದರೂ ಭಾರತವೆಂಬ ಈ ಭೂಬಾಗದ ವೈಚಿತ್ರ್ಯವೆಂದರೆ ಪ್ರತಿಯೊಬ್ಬನೂ ತನ್ನ ಲಾಭ, ಸ್ವಾರ್ಥವನ್ನೇ ಗಮನಿಸುತ್ತಾನೆಯೇ ಹೊರತು ಇತರರ ಹಿತವನ್ನಲ್ಲ; ತನ್ನ ಪೀಳಿಗೆಯ ಭವಿಷ್ಯವನ್ನಲ್ಲ.
ದಿನದಲ್ಲಿ ಸಿಕ್ಕಿದ ಭಿಕ್ಷೆಯನ್ನು ಸಂಗ್ರಹಿಸಿ ಬದುಕು ಸಾಗಹಾಕುವವನಿಗೆ, ದಿನಗೂಲಿಗೆ ನಾಳೆಯ ಚಿಂತೆಯಿಲ್ಲ. ನಾಳೆಯಿದ್ದರೆ, ನಾಳೆ ತನ್ನ ಬದುಕಿಗೆ ಅಗತ್ಯವಾದ ಕೂಳು ಸಿಕ್ಕಿದರೆ ಬದುಕು. ಇಲ್ಲದಿದ್ದರೆ ಅದೇ ಕೊನೆ. ಇಂಥವರು ವರ್ತಮಾನದ ಪ್ರತೀಕ. ಆದರೆ ಬದುಕುವುದಕ್ಕೆ ಅಪೇಕ್ಷೆಯ ಬೇಕಷ್ಟಲ್ಲದಿದ್ದರೂ ಅಗತ್ಯದ ಸಾಕಷ್ಟು ಇರುವ ವಿದ್ಯಾವಂತರೂ ವರ್ತಮಾನ ಪತ್ರಿಕೆಗಳಾಗಿರುವುದು ಕಾಲದ ದುರಂತ. ಶಾಲೆಯ ಗಂಟೆಗಿಂತ ಪೂಜಾಸ್ಥಾನಗಳ ಗಂಟೆ ಸುಮಧುರವಾಗಿ ಕಾಣುವವರಿಗೆ ಮರುಳಾಗಲು ಬೇಕಾದ (ಕು)ತಂತ್ರಗಳು ನಮ್ಮ ರಾಜಕೀಯದಲ್ಲಿವೆ.
ಈಗಷ್ಟೇ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು 2024ರ ಲೋಕಸಭಾ ಚುನಾವಣೆಯ ಉಪಾಂತ್ಯ ಪಂದ್ಯವೆಂದು ಬಣ್ಣಿಸಲಾಗಿತ್ತು. ಈಗ ಅದರ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಬಿಜೆಪಿ ಯಶಸ್ಸಿನ ಮುಗಿಲ ಮೇಲೆ ನಿಂತರೆ, ಕಾಂಗ್ರೆಸ್ ತೆಲಂಗಾಣವನ್ನು ಗೆದ್ದರೂ ತಾನು ಕಳೆದುಕೊಂಡ ಎರಡು ರಾಜ್ಯಗಳಲ್ಲಿ ಆಗಿರುವ ಗಾಯಗಳನ್ನು ನೆಕ್ಕುತ್ತ ಕುಳಿತಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಹಾಸ್ಯಾಸ್ಪದವಾಗುತ್ತಿವೆ.
ವಿಶೇಷವೆಂದರೆ, ಈ ಬಾರಿಯ ಫಲಿತಾಂಶಗಳು ಯಾವ ತರ್ಕಕ್ಕೂ ಬಲಿಬಿದ್ದಿಲ್ಲ. ರಾಜಸ್ಥಾನ, ಛತ್ತೀಸ್‌ಗಡ, ತೆಲಂಗಾಣಗಳಲ್ಲಿ ಆಳಿದ ಪಕ್ಷ ಸೋತಿದೆ. ಆದರೆ ಮತದಾರರದ್ದು ಸ್ಥಾನಿಕ ವಿರೋಧಿ ನಿರ್ಧಾರವೆನ್ನುವಂತಿಲ್ಲ. ಏಕೆಂದರೆ ಮಧ್ಯಪ್ರದೇಶದಲ್ಲಿ ಆಳಿದ ಪಕ್ಷವೇ ಮತ್ತೆ ಅಧಿಕಾರಕ್ಕೆ ಬಂದಿದೆ. ಭಾಜಪಪರ ಮತವೆಂದು ಸ್ವತಹ ಆ ಪಕ್ಷದ ಧುರೀಣರೇ ಹೇಳುತ್ತಿಲ್ಲ. ಅವರೆಲ್ಲರೂ ಇದು ಮೋದಿ ಚಂಡಮಾರುತವೆನ್ನುತ್ತಾರೆ. ಹಾಗೆಂದು ತೆಲಂಗಾಣದಲ್ಲಿ, ಮಿಜೋರಾಂನಲ್ಲಿ ಈ ಚಂಡಮಾರುತ ಯಾವ ಪರಿಣಾಮವನ್ನೂ ಬೀರಲಿಲ್ಲ. ಇವಿಎಂ ಎಂಬ ಮತಯಂತ್ರದ ಕಿತಾಪತಿ ಎಂದು ಕಾಂಗ್ರೆಸ್ ಮತ್ತು ಶಿವಸೇನೆಯ ಉದ್ಧವ್ ಠಾಕ್ರೆ ಹೇಳಿದರೂ ಹಾಗಾದರೆ ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲಲು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ಸಮರ್ಥನೆಯಿಲ್ಲ. ಒಟ್ಟಾರೆ ಮತಸಂಖ್ಯೆಗಳನ್ನು ಗಣಿಸಿದರೆ ಒಟ್ಟು ಭಾಜಪಕ್ಕೆ ಬಿದ್ದ ಮತಗಳಿಗಿಂತ ಹೆಚ್ಚು ಕಾಂಗ್ರೆಸಿಗೆ ಬಿದ್ದಿದೆ. ಇದೂ ಇವಿಎಂ ಯಂತ್ರದಲ್ಲೇ. ಅಂದರೆ ಒಟ್ಟರ್ಥದಲ್ಲಿ, ಗಣಿತದ ಪ್ರಶ್ನೆಪತ್ರಿಕೆಯನ್ನು ಉತ್ತರಿಸಿದಂತೆ, ಉತ್ತರವಿದೆ, ಅದು ಹೇಗೆ ಬಂತೆಂದು ಯಾರಿಗೂ ಅರಿವಿಲ್ಲ. ಮತದಾರರೇ ಇವಿಎಂ ಯಂತ್ರದಂತೆ ಗುಟ್ಟನ್ನು ಬಿಟ್ಟುಕೊಡದೆ ಫಲಿತಾಂಶವನ್ನು ನೀಡಿದ್ದಾರೆ.
ಆದರೆ ಒಂದು ವಿಚಾರ ಸ್ಪಷ್ಟವಾಗಿದೆ: ಕಾಂಗ್ರೆಸ್ ಊರುಗೋಲಿಲ್ಲದೆ ನಡೆಯಲಾರದು. ಅದು ಇತರ ಪ್ರಾದೇಶಿಕ ಪಕ್ಷಗಳ ರೂಪದಲ್ಲಿ ಕಾಂಗ್ರೆಸಿಗೆ ನೆರವಾಗಬಹುದಿತ್ತು. ಕರ್ನಾಟಕದಲ್ಲಿ ಗಳಿಸಿದ ಗೆಲುವು ಗ್ಯಾರಂಟಿಗಳ ಅಥವಾ ರಾಹುಲ್ ಗಾಂಧಿಯ ‘ಭಾರತ್ ಜೋಡೊ’ ಮೂಲಕ ಎಂಬ ಲಕ್ಷಣಗಳು ಇಲ್ಲೆಲ್ಲೂ ನಡೆಯಲಿಲ್ಲ. ಸಾಮಾನ್ಯವಾಗಿ ಅಧಿಕಾರದ ಸ್ಥಾನಿಕ ವ್ಯವಸ್ಥೆಯು ಜನರ ಸಹನೆಯನ್ನು ಪರೀಕ್ಷಿಸಿದಾಗ ಜನರು ಬದಲಾವಣೆಗೆ ಹಪಹಪಿಸುತ್ತಾರೆ. ಕರ್ನಾಟಕವು ಭಾಜಪಕ್ಕೆ ದಕ್ಷಿಣಭಾರತಕ್ಕೆ ಪ್ರವೇಶದ್ವಾರವೆಂಬಂತಿದ್ದ ರಾಜ್ಯ. ಇದಕ್ಕೆ ಪ್ರಜಾತಂತ್ರ ವ್ಯವಸ್ಥೆಯ ಕಾರಣಗಳು ಇಲ್ಲದಿದ್ದರೂ ಪಕ್ಷಾಂತರ ಮುಂತಾದ ಆಪರೇಷನ್‌ಗಳು ಕಾರಣವಾದವು. ಇಲ್ಲಿನ ಮತದಾರರು ಮತೀಯ ಶಕ್ತಿಗಳನ್ನು ಬೆಂಬಲಿಸಿದ್ದು ಕಡಿಮೆ. ಆದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾಜಪಕ್ಕೆ ಗೆಲುವು ತಂದಿದ್ದರೆ ಅದಕ್ಕೆ ಕಾರಣ ಮೋದಿಯೆಂಬ ಮಾಯಾಕಿನ್ನರಿ, ಕಾಂಗ್ರೆಸಿನ ಕ್ಷೀಣ ಸಾಂಸ್ಥಿಕ ಚೌಕಟ್ಟು ಮತ್ತು ಪಕ್ಷಕ್ಕೆ ಹೆಸರನ್ನು ಗೆಲುವನ್ನು ತರಬಲ್ಲ ಹಿರಿಮೆಯ ಗರಿಯೊಂದೂ ಇರದೇ ಇದ್ದದ್ದು. ಮತೀಯವಾಗಿ ಒಂದು ಪಕ್ಷ ಎಷ್ಟೇ ಧ್ರುವೀಕರಣವನ್ನು ಮಾಡಿದರೂ ಅದನ್ನು ಮೀರಿದ ಮತದಾರರು ಸಾಕಷ್ಟಿದ್ದಾರೆ. ಹೀಗೆ ಮತೀಯ ಶಕ್ತಿಗಳಿಗೆ ವಿರುದ್ಧವಾಗಿ ನಿಂತ ಮತದಾರರೆಲ್ಲ ಪ್ರಜ್ಞಾವಂತರೆಂದು, ಜಾತ್ಯತೀತರೆಂದು, ವಿದ್ಯಾವಂತರೆಂದು ಹೇಳುವಂತಿಲ್ಲ. ಅವರವರಿಗೆ ಅವರವರ ವೈಯಕ್ತಿಕ, ಸಾಮುದಾಯಿಕ, ಜಾತೀಯ, ಮತೀಯ ಕಾರಣಗಳು, ನೆಪಗಳು, ಇರುತ್ತವೆ. ಕೆಲವು ಬಾರಿ ಅಧಿಕಾರ ಲಾಲಸೆ, ಲೋಭ, ಸ್ವಾರ್ಥಪರ ಕಾರಣಗಳೂ ಇರುತ್ತವೆ. ಹೀಗಾಗಿ ಯಾವುದೇ ಪಕ್ಷವು ಅಧಿಕಾರಕ್ಕೆ ಬಂದರೂ ಅದು ಜನಹಿತವನ್ನು ಸಾಧಿಸಲು ಅಧಿಕಾರಕ್ಕೆ ಬಂದಿದೆಯೆಂದು ತಿಳಿಯುವುದು ಮೂರ್ಖತನವಾಗುತ್ತದೆ.
ಕಾಂಗ್ರೆಸ್ ಬಹಳ ಕಷ್ಟಪಟ್ಟು ಒಂದಷ್ಟು ‘ವಿರೋಧ’ ಪಕ್ಷಗಳೊಂದಿಗೆ ಹಾಗೂ ಹೀಗೂ ನಂಟು ಬೆಳೆಸಿ, ತನ್ನ ಹಿರಿತನವನ್ನು ಬಳಸಿ, ‘ಇಂಡಿಯಾ’ ಎಂಬ ಒಕ್ಕೂಟವನ್ನು ಸ್ಥಾಪಿಸಿತು. ಇದನ್ನು ಸೇರಿದವರಿಗೆಲ್ಲ ಒಂದೇ ಉದ್ದೇಶ, ಗುರಿ ಇದ್ದಂತಿರಲಿಲ್ಲ. ಪರಿಸ್ಥಿತಿಯ ಒತ್ತಡ, ಭಾಜಪವನ್ನು ವಿರೋಧಿಸಲೇಬೇಕಾದ ಅಧಿಕಾರಮೂಲ ಅನಿವಾರ್ಯತೆ (ಅಂದರೆ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಲು ಅಸಮರ್ಥವಾಗಿರುವುದು), ಇಂತಹ ಸ್ವಕಾರಣದಿಂದಾಗಿ ಈ ‘ಇಂಡಿಯಾ’ ರಚನೆಯಾಯಿತು. ಮಹಾಭಾರತದಲ್ಲಿ ಅಶ್ವಸೇನನೆಂಬ ಉರಗ ಅರ್ಜುನನನ್ನು ಕೊಲ್ಲಲು ಕರ್ಣನ ಬತ್ತಳಿಕೆಯನ್ನು ಸೇರಿದ ಕಥೆ ನೆನಪಾಗುತ್ತದೆ! ಆದರೆ ಒಳಗಿನ ಮುಳ್ಳುಗಳು, ಪೈಪೋಟಿ, ಹಾಗೇ ಉಳಿದವು. ಬಹುತೇಕ ಪ್ರಾದೇಶಿಕ ಪಕ್ಷಗಳು ಏಕವ್ಯಕ್ತಿ ಸೇನೆಗಳೇ. ಅಲ್ಲಿನ ನಲಿವುಗಳು ಆಯಾಯ ನಾಯಕರುಗಳ ಒಲವು-ನಿಲುವುಗಳನ್ನು ಆಧರಿಸಿವೆ. ಆಪ್ ಪಕ್ಷದ ನಡವಳಿಕೆಗಳನ್ನು ಗಮನಿಸಿದರೆ ಅದು ತನಗೆ ನಿತ್ಯ ಕಿರುಕುಳ ನೀಡುವ ಭಾಜಪವನ್ನಾದರೂ ಸಹಿಸಿಕೊಳ್ಳಬಲ್ಲುದು ಎಂಬ ಪಾತಿವ್ರತ್ಯದೊಂದಿಗೆ, ಕಾಂಗ್ರೆಸನ್ನು ಸಹಿಸಿಕೊಳ್ಳದು ಎಂಬಂತಿದೆ. ಬಿಎಸ್‌ಪಿ ನಿಜಕ್ಕೂ ಬ್ರಾಹ್ಮಣ ಸೇವಾ ಪಕ್ಷವೆಂಬಂತಿದೆ. ಸಮಾಜವಾದಿ ಪಕ್ಷವು ಈ ರಾಜ್ಯಗಳಲ್ಲಿ ಗೆಲ್ಲುವ ಶಕ್ತಿ ಹೊಂದಿಲ್ಲವಾದರೂ ಯಾವುದೇ ಪ್ರತಿಪಕ್ಷದ ಗೆಲುವನ್ನು ತಡೆಹಿಡಿಯಲು ಅಗತ್ಯ ಶಕ್ತಿಯನ್ನು ಹೊಂದಿದ ತನ್ನದೇ ಆದ ವರ್ಚಸ್ಸನ್ನು ಹೊಂದಿದೆ. ಉದ್ಧವ್ ಠಾಕ್ರೆಯಂತಹ ರಾಜಕಾರಣಿಗಳು ನಿತ್ಯ ಕೋಮುವಾದವನ್ನು ಜಪಿಸುತ್ತಲೇ ಅಧಿಕಾರಕ್ಕಾಗಿ ಮಾತ್ರ ಹೊಂದಾಣಿಕೆಯನ್ನು ಮಾಡುತ್ತ ದೇಶಕ್ಕಾಗಿ, ಪ್ರಜೆಗಳಿಗಾಗಿ ಏನನ್ನೂ ನೀಡಲು ಇಲ್ಲವೇ ಪಡೆಯಲು ಸಿದ್ಧರಿಲ್ಲ. ಶರದ್‌ಪವಾರ್ ಅವರ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ತಾನು ಎಲ್ಲವೂ ಸರಿ, ಆದರೆ ವಿಶ್ವಾಸಾರ್ಹವಲ್ಲ ಎಂಬುದನ್ನು ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ತೋರಿಸಿಕೊಟ್ಟಿದೆ. ತೃಣಮೂಲ ಕಾಂಗ್ರೆಸ್ ಬಹುತೇಕ ಮಮತಾ ಬ್ಯಾನರ್ಜಿಯವರಿಗೆ ‘ಇಂಡಿಯಾ’ದಲ್ಲಿ ಯಾವ ಪ್ರಮುಖ ಸ್ಥಾನ ಸಿಗಬಹುದು ಎಂಬ ಬಯಕೆಯಲ್ಲೇ ದಾಳಗಳನ್ನು ಆಡುತ್ತಿದೆ. ಜೆಡಿಯುವಿನ ನಿತೀಶ್‌ಕುಮಾರ್ ಯಾವಾಗ ಜಾತ್ಯತೀತರು, ಯಾವಾಗ ಮತೀಯರು ಎಂಬುದನ್ನು ಹೇಳಲಾಗದ ಸ್ಥಿತಿಗೆ ತಮ್ಮನ್ನು ತಾವೇ ತಳ್ಳಿಕೊಂಡಿದ್ದಾರೆ. ಇನ್ನು ಎಡಪಕ್ಷಗಳು ಸೈದ್ಧಾಂತಿಕವಾಗಿ ದೃಢವಾಗಿದ್ದರೂ ಸಾಂಘಿಕವಾಗಿ ದುರ್ಬಲವಾಗಿವೆ. ಅವಕ್ಕೆ ತಮ್ಮ ನೈಜ ಎದುರಾಳಿ ಕಾಂಗ್ರೆಸೇ, ತೃಣಮೂಲವೇ, ಭಾಜಪವೇ ಎಂಬುದರ ಬಗ್ಗೆ ಸ್ಪಷ್ಟತೆಯಿದ್ದಂತಿಲ್ಲ. ಹೇಗೇ ನೋಡಿದರೂ ಪ್ರತಿಪಕ್ಷಗಳ ಒಕ್ಕೂಟವು ಪ್ರತೀ ಪಕ್ಷಗಳ ಷಡ್ವೈರಿಗಳ ಕೂಟವಾಗಿದೆ. ಗರ್ಭದಲ್ಲೇ ಚೂರುಚೂರಾದಂತಿರುವ ಈ ಪಿಂಡಗಳು ಹುಟ್ಟಿದರೂ ಅವು ಜನಹಿತಕ್ಕೆ ಒಟ್ಟಾಗುವ ಸಾಧ್ಯತೆ ಕಡಿಮೆಯೇ.
ಕಾಂಗ್ರೆಸ್ ಈ ಒಕ್ಕೂಟದ ಕೇಂದ್ರಬಿಂದುವಾಗಬೇಕಾಗಿತ್ತು. ಭಾಜಪವನ್ನು ವಿರೋಧಿಸುವುದು, ಅದನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿಯಂತ್ರಿಸುವುದು ಅದರ ಆದ್ಯ ಧ್ಯೇಯೋದ್ದೇಶವಾಗಿರಬೇಕಿತ್ತು. ಆದರೆ ಅದು ಸ್ವಂತ ಪ್ರತಿಷ್ಠೆಗೆ ಬ್ಯಾಟ್ ಮಾಡುವ ಕ್ರಿಕೆಟ್ ಆಟಗಾರನಂತೆ ತನ್ನ ಒಲವು-ನಿಲುವುಗಳನ್ನು ಮಿತಿಮೀರಿ ಮಾತ್ರವಲ್ಲ ಮತಿಮೀರಿ ಹಿಗ್ಗಿಸುತ್ತಿದೆ. ಅಗತ್ಯ ಬಿದ್ದಾಗ ಅದು ಈ ಪ್ರತಿಪಕ್ಷಗಳ ಪೈಕಿ ಯಾವುದಾದರೊಂದು ಪಕ್ಷದ ವಿರುದ್ಧ ಭಾಜಪದೊಂದಿಗೆ ಕೈಜೋಡಿಸುವುದಕ್ಕೆ ಹಿಂಜರಿಯದು. ಕಳೆದ ಈ ಚುನಾವಣೆಯಲ್ಲಿ ಅದು ವಿಫಲವಾಗಲು ಕಾರಣವೆಂದರೆ ಯಾವ ಈ ಸೋದರಪಕ್ಷಗಳನ್ನೂ ವಿಶ್ವಾಸದ ತೆಕ್ಕೆಗೆ ತೆಗೆದುಕೊಳ್ಳದೇ ಇದ್ದದ್ದು. ಸಮಾಜವಾದಿ ಪಕ್ಷವಾಗಲೀ ಇತರ ಯಾವುದೇ ಪಕ್ಷವಾಗಲೀ ಗೆಲ್ಲುವ ಪಕ್ಷವಾಗಿಲ್ಲದೇ ಹೋದರೂ ಈ ದೃಷ್ಟಿಯಲ್ಲಿ ಭಾಜಪದಿಂದ ಕಾಂಗ್ರೆಸ್ ಕಲಿಯುವುದು ಬೇಕಷ್ಟಿದೆ.
ಕಾಂಗ್ರೆಸಿನ ಈ ಎಲ್ಲ ದೋಷಗಳನ್ನು ‘ಹಿರಿಯಣ್ಣ’ನ ನೆಲೆಯಲ್ಲಿ ಗುರುತಿಸಲಾಗಿದೆ. ಪ್ರತಿಪಕ್ಷಗಳ ಒಕ್ಕೂಟದಲ್ಲಿ ರಾಷ್ಟ್ರೀಯ ವ್ಯಾಪ್ತಿಯನ್ನು ಹೊಂದಿರುವುದು ಕಾಂಗ್ರೆಸ್ ಒಂದೇ. ಆದರೆ ಭಾರತದ ರಾಜಕೀಯ ಎಷ್ಟು ಬದಲಾಗಿದೆಯೆಂದರೆ ಇಂದು ಯಾವೊಂದು ಪಕ್ಷವೂ ತಾನೇ ತಾನಾಗಿ ದೇಶವಿಡೀ ಒಂದು ಶಕ್ತಿಯಾಗಿ ಹಬ್ಬಲಾರದು. ಇದಕ್ಕೆ ಅಧಿಕಾರಸ್ಥ ಭಾಜಪ ಕೂಡಾ ಹೊರತಲ್ಲ. ಮಿಜೋರಾಂನಲ್ಲಿ ನಲ್ವತ್ತು ಸ್ಥಾನಗಳ ವಿಧಾನಸಭೆಯಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆದ್ದ ಭಾಜಪವು ತಾನು ಅಲ್ಲಿ ಆಳುವ ಪಕ್ಷದೊಂದಿಗೆ ಸೇರುವ ಇಂಗಿತವನ್ನು ವ್ಯಕ್ತಪಡಿಸಿದೆ. ತಾನೇ ಸರ್ವಸ್ವವೆಂದು ತಿಳಿಯುವ ಅಹಮಿಕೆಯ ವ್ಯರ್ಥವ್ಯಾಯಾಮದ ಫಲವನ್ನು ಭಾಜಪ ತಿಳಿದಂತಿದೆ. ಇದರಿಂದಾಗಿಯೇ ಕಳೆದ ಹಲವು ಚುನಾವಣೆಗಳಲ್ಲಿ ಕಡಿಮೆ ಮತ ಪಡೆದೂ ಹೆಚ್ಚು ಸ್ಥಾನಗಳನ್ನು ಗಳಿಸುವ ಅದೃಷ್ಟ ಅದಕ್ಕೆ ಲಭಿಸಿದೆ.
ಒಕ್ಕೂಟವಾದಾಗ ಹಿರಿಯಣ್ಣನಂತೆ ಗುರುತಿಸಿಕೊಂಡವರು ಅಥವಾ ಹಾಗೆ ಗುರುತಿಸಿಕೊಳ್ಳಬೇಕೆಂದು ಬಯಸುವವರು ತನ್ನ ಸಹಪಾಠಿ ಪಕ್ಷಗಳನ್ನು ಅವರ ನಾಯಕರನ್ನು ತನ್ನ ಕುಟುಂಬದಂತೆ, ಸೋದರ-ಸೋದರಿಯರಂತೆ ನೋಡಿಕೊಳ್ಳಬೇಕಾಗುತ್ತದೆ. ಕಾಂಗ್ರೆಸ್ ಪಕ್ಷವನ್ನು ವಂಶ ಪಾರಂಪರ್ಯ ಒಂದೇ ಕುಟುಂಬದ ಪಕ್ಷವೆಂದು ಉಲ್ಲೇಖಿಸುವುದು ಅದರ ವಿರೋಧೀ ಪಕ್ಷಗಳು ಮಾತ್ರವಲ್ಲ, ಅದರ ಸಹಪಾಠಿ ಪಕ್ಷಗಳು ಕೂಡಾ. ಆದರೆ ಇಂದು ಭಾರತದಲ್ಲಿ ವಂಶಪರಂಪರೆಯಿಲ್ಲದ ಪಕ್ಷವು ಯಾವುದೂ ಇಲ್ಲ. ಹಾಗೆ ನೋಡಿದರೆ ಕಾಂಗ್ರೆಸ್ ಒಂದು ಕುಟುಂಬದ ಹೊರತಾಗಿಯೂ ಸ್ವಲ್ಪ ಮಟ್ಟಿನ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಮನೋವೃತ್ತಿಯಿದೆ. ಇದರಿಂದಾಗಿ ತನ್ನ ಕೌಟುಂಬಿಕ ಇತಿಹಾಸದ ಹೊರತಾಗಿಯೂ ಅದು ಸಮಾಜದ ಎಲ್ಲ ನೆಲೆಗಳಲ್ಲಿ ಗುರುತಿಸಿಕೊಂಡಿದೆ. ಇತರ ಪಕ್ಷಗಳಲ್ಲಿ ಏಕವ್ಯಕ್ತಿ ಪ್ರದರ್ಶನಗಳೇ ಜಾಸ್ತಿ. ಈ ಅಪವಾದಗಳನ್ನು ದೂರವಾಗಿಸುವಂತೆ ಕಾಂಗ್ರೆಸ್ ಖರ್ಗೆಯವರನ್ನು ಅಧ್ಯಕ್ಷಗಿರಿಗೇರಿಸಿತು. ಆದರೆ ಅವರು ಕೂಡಾ ಮತ್ತೆ ನೆಹರೂ ಕುಟುಂಬದ ಪ್ರತಿನಿಧಿಯೆಂಬಂತೆ ಆಯ್ಕೆಯಾದರು. ಪರಿಣಾಮವಾಗಿ ಒಂದೆಡೆ ಅವರು ಅಧ್ಯಕ್ಷರಾಗಿ ಪ್ರತಿಷ್ಠಾಪನೆಯಾದರೂ ಇನ್ನೊಂದೆಡೆ ರಾಹುಲ್‌ಗಾಂಧಿ ಸಂವಿಧಾನೇತರ ಅಧಿಕಾರಿಯಂತೆ ತನ್ನ ಪಾಡಿಗೆ ಸಕ್ರಿಯರಾಗಿದ್ದಾರೆ. ಅವರಿಗೆ ಖರ್ಗೆಯವರ ಅಥವಾ ಇತರ ‘ಹೈಕಮಾಂಡ್’ಗಳ ನಿಯಂತ್ರಣವೇ ಇಲ್ಲ. ರಾಹುಲ್ ಏನು ಬೇಕಾದರೂ ಮಾಡಲಿ ಎಂಬಂತೆ ಎಲ್ಲ ಪ್ರಮುಖರೂ ಸುಮ್ಮನಿದ್ದಾರೆ ಮತ್ತು ಅವಕಾಶ ಸಿಕ್ಕಲ್ಲೆೆಲ್ಲ ರಾಹುಲ್ ಪ್ರಧಾನಿಯಾಗಬೇಕು ಎಂಬ ಬಯಕೆಯನ್ನು ಪ್ರಕಟಿಸುತ್ತಾರೆ. ಖರ್ಗೆ ಯಾಕಾಗಬಾರದು ಎಂದು ಅವರ ಪಕ್ಷದ ವೇದಿಕೆಯಲ್ಲೇ ಯಾರೂ ಚರ್ಚಿಸುವುದಿಲ್ಲ. ಈ ಸಂದಿಗ್ಧವನ್ನು ಭಾಜಪ ಮತ್ತು ಇತರ ಪಕ್ಷಗಳು ಸರಿಯಾಗಿಯೇ ಬಳಸುತ್ತಿವೆ. ಪ್ರಜಾಪ್ರಭುತ್ವದ ಹಾದಿಯಲ್ಲಿ ಕಾಂಗ್ರೆಸ್ ಸಾಗಿದರೆ ಅದಕ್ಕಿನ್ನೂ ಭವಿಷ್ಯವಿದೆ. ಆದರೆ ಸದ್ಯಕ್ಕೆ ಅದು ಇತರ ಪ್ರತಿಪಕ್ಷಗಳನ್ನು ಕಡೆಗಣಿಸುವ ಶಕ್ತಿಯನ್ನು ಹೊಂದಿಲ್ಲ. ಬೇಕಾದರೆ ಬರಲಿ ಎಂಬಂತೆ ‘ಇಂಡಿಯಾ’ ಸಭೆಗಳು ನಡೆದರೆ ಪ್ರತಿಪಕ್ಷಗಳಿಗೆ ಮುಖ್ಯವಾಗಿ ಕಾಂಗ್ರೆಸಿಗೆ ಉಳಿಗಾಲವಿಲ್ಲ. ಈಗ ಅದು ಎಲ್ಲ ಪ್ರತಿಪಕ್ಷಗಳೊಂದಿಗೆ ಸಮಾನ ಸುಖ-ದುಃಖಗಳನ್ನು ಹಂಚಿಕೊಳ್ಳದೆ ವಿಧಿಯಿಲ್ಲ. ಪ್ರತಿಪಕ್ಷಗಳ ನಾಯಕರು ಯಾರಾಗಬೇಕು ಎಂಬ ಪ್ರಶ್ನೆ ಬಂದಾಗಲೆಲ್ಲ ‘ನಾವೇ ಆಗಬೇಕು’ ಎಂದು ಕಾಂಗ್ರೆಸ್ ಹೇಳುವಂತಿಲ್ಲ; ಮತ್ತು ‘ನಾನೇ ಆಗಬೇಕು’ ಎಂದು ಕಾಂಗ್ರೆಸ್ ನಾಯಕರ್ಯಾರೂ ಹೇಳುವಂತಿಲ್ಲ. ಈ ಪ್ರಶ್ನೆ ಈಗಲೇ ಉದ್ಭವಿಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈಗಷ್ಟೇ ನಡೆದ ವಿಧಾನಸಭಾ ಚುನಾವಣೆಗಿಂತಲೂ ಕಳಪೆ ಫಲಿತಾಂಶ ಕಾಂಗ್ರೆಸಿಗೆ ಲಭಿಸುವ ಸಾಧ್ಯತೆಯಿದೆ.
ಕಾಂಗ್ರೆಸ್ ಎಲ್ಲ ಪಕ್ಷಗಳಿಗಿಂತ ಹಳತು. ಅದೀಗ ಬಿಳಲು ಬಿಟ್ಟಿದೆ. ಮಮತಾ ಬ್ಯಾನರ್ಜಿ, ಶರದ್ ಪವಾರ್ ಮುಂತಾದ ಅದರ ಜೊತೆಗಿದ್ದವರೇ ಹೊಸ ಪಕ್ಷಗಳನ್ನು ಕಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಳಲುಗಳನ್ನು ಕತ್ತರಿಸುವ ಪ್ರಯತ್ನವನ್ನು ಬಿಟ್ಟು ಅದು ಕೇಂದ್ರದಲ್ಲಿರುವ ಕಾಂಗ್ರೆಸ್ ಮರಕ್ಕೆ ಇನ್ನಷ್ಟು ಶಕ್ತಿಯನ್ನು ನೀಡುವ ರೀತಿಯಲ್ಲಿ ಸಹಕಾರಿಯಾಗಲು ಬಯಸುವುದು ಕಾಂಗ್ರೆಸಿಗೆ ಆದ್ಯತೆಯಾಗಬೇಕು. ಒಂದು ಕಾಲಕ್ಕೆ ಕಾಂಗ್ರೆಸ್ ಬಿಟ್ಟರೆ ಬೇರೆ ಗತಿಯಿಲ್ಲ ಎಂಬಂತಿತ್ತು. ಆಗಲೇ ಮತದಾರರು ವ್ಯಕ್ತಿತ್ವವನ್ನು ಲೆಕ್ಕಿಸದೆ ಕಾಂಗ್ರೆಸನ್ನು ಬೆಂಬಲಿಸಿದ್ದರು. ಮೊದಲ ಚುನಾವಣೆಯಲ್ಲೇ ಕಾಂಗ್ರೆಸನ್ನು ತ್ಯಜಿಸಿ ಪ್ರತ್ಯೇಕವಾಗಿ ಸ್ಪರ್ಧಿಸಿದ ಮಹಾನ್ ನಾಯಕರುಗಳೆಲ್ಲ ಸೋತಿದ್ದರು. ಡಾ.ಅಂಬೇಡ್ಕರ್ ಕೂಡಾ ಕಾಂಗ್ರೆಸಿನ ವಿರುದ್ಧ ಸ್ಪರ್ಧಿಸಿ ಸೋತದ್ದನ್ನು ಗಮನಿಸಿದರೆ ಕಾಂಗ್ರೆಸ್ ಎಷ್ಟು ಆಳವಾಗಿ ಬೇರೂರಿತ್ತು ಎಂಬುದು ಮನವರಿಕೆಯಾದೀತು.
ಕಾಂಗ್ರೆಸ್ ತನ್ನ ‘ಎನಗಿಂತ ಹಿರಿಯರಿಲ್ಲ’ ಎಂಬ ಅಹಮಿಕೆಯನ್ನು ತ್ಯಜಿಸಿ ಪ್ರಜಾಪ್ರಭುತ್ವದ ಅಗತ್ಯಗಳಿಗೆ ಸೂಕ್ತವಾಗಿ ಸ್ಪಂದಿಸಿದರೆ ಮಾತ್ರ ಅಪೇಕ್ಷಿತ ಫಲಿತಾಂಶ ಬಂದೀತು. ಇಲ್ಲವಾದರೆ ಪರಿಣಾಮ ಭೀಕರವಾದೀತು.