ಅಕ್ಕಿ ಸಂಗ್ರಹ ಇದ್ದರೂ ಕೇಂದ್ರ ಸರಕಾರ ಪೂರೈಕೆ ಮಾಡುತ್ತಿಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ
ಬೆಂಗಳೂರು, ಜೂ.14: ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಸರಕಾರ ರಾಜಕೀಯ ನಿರ್ಧಾರ ಕೈಗೊಂಡು ಕನ್ನಡಿಗರ ಪಾಲನ್ನು ಕಸಿದುಕೊಂಡಿದೆ. ಕೇಂದ್ರ ಎಷ್ಟೇ ಷಡ್ಯಂತ್ರ ಮಾಡಿದರೂ ರಾಜ್ಯದ ಜನರಿಗೆ ಅಕ್ಕಿ ನೀಡುವುದು ನಮ್ಮ ಗ್ಯಾರಂಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಬುಧವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಶಕ್ತಿ ಭವನದಲ್ಲಿ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ತುರ್ತು ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಬಡವರ ವಿರೋಧಿಗಳು. ಕಾಂಗ್ರೆಸ್ ಸರಕಾರಕ್ಕೆ ಕೆಟ್ಟ ಹೆಸರು ತರಲು ಈ ರೀತಿಯ ಷಡ್ಯಂತ್ರಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರಕಾರ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ತಿಂಗಳು ತಲಾ 10 ಕೆಜಿ ಅಕ್ಕಿ ನೀಡಲು ತೀರ್ಮಾನಿಸಿದ್ದ ಹಿನ್ನೆಲೆ, ಭಾರತೀಯ ಆಹಾರ ನಿಗಮಕ್ಕೆ ಪ್ರತಿ ತಿಂಗಳಿಗೆ 2.28 ಲಕ್ಷ ಮೆ.ಟನ್ ಅಕ್ಕಿಯ ಅಗತ್ಯವಿದೆ ಎಂದು ಕೋರಿ ಜೂ.9 ರಂದು ಪತ್ರ ಬರೆಯಲಾಗಿತ್ತು. ಇದಕ್ಕೆ ಜೂ.12ರಂದು ಭಾರತೀಯ ಆಹಾರ ನಿಗಮವು ಒಪ್ಪಿಗೆ ಸೂಚಿಸಿ ಕ್ವಿಂಟಾಲ್‍ಗೆ 3400 ರೂ.ದರದಲ್ಲಿ ಅಕ್ಕಿ ಪೂರೈಕೆ ಮಾಡುವುದಾಗಿ ನಮಗೆ ಪತ್ರ ಬರೆದಿತ್ತು. ಇದಾದ ನಂತರ ಕೇಂದ್ರ ಸರಕಾರ ರಾಜಕೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಜೂ.13 ರಂದು ಕೇಂದ್ರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯವು ಭಾರತೀಯ ಆಹಾರ ನಿಗಮಕ್ಕೆ ಪತ್ರ ಬರೆದು 15 ಲಕ್ಷ ಮೆ.ಟನ್ ಗೋಧಿ ಹಾಗೂ ಅಕ್ಕಿಯನ್ನು ತೆರೆದ ಮಾರುಕಟ್ಟೆಯಲ್ಲಿ ಮಾರಾಟ ಯೋಜನೆಯಡಿ ಮಾರಾಟ ಮಾಡಲು ಸೂಚಿಸಿದೆ. ಅಲ್ಲದೆ ಈಶಾನ್ಯ ರಾಜ್ಯಗಳನ್ನು ಹೊರತು ಪಡಿಸಿ, ಇತರ ರಾಜ್ಯಗಳಿಗೆ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಇದು ಕೇಂದ್ರದಿಂದ ಆಗುತ್ತಿರುವ ದೊಡ್ಡ ಮೋಸ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಎಫ್.ಸಿ.ಐ. ಒಪ್ಪಿಗೆ ಪತ್ರದ ಆಧಾರದ ಮೇಲೆ ಜುಲೈ 1 ರಿಂದ ಜಾರಿ ಮಾಡಲಾಗುವುದು ಎಂದು ಘೋಷಿಸಿದೆವು. ಎಫ್.ಸಿ.ಐನ ಪ್ರಧಾನ ವ್ಯವಸ್ಥಾಪಕ ಹರೀಶ್ ಎಂಬುವರು 7 ಲಕ್ಷ ಟನ್ ಅಕ್ಕಿ ಸಂಗ್ರಹ ಇದೆ ಎಂದು ತಿಳಿಸಿದ್ದರು. ಅನ್ನಭಾಗ್ಯ ಕಾರ್ಯಕ್ರಮವನ್ನು ಜಾರಿಗೊಳಿಸದೆ ಇರುವಂತೆ ಅಡ್ಡಿಪಡಿಸುವುದು ಇದರ ಹಿಂದಿನ ಉದ್ದೇಶ ಎಂದು ಸಿದ್ದರಾಮಯ್ಯ ದೂಷಿಸಿದರು.
ಅಕ್ಕಿ ಬೆಳೆಯುವ ರಾಜ್ಯಗಳಾದ ಪಂಜಾಬ್, ತೆಲಂಗಾಣ, ಆಂಧ್ರ, ಛತ್ತಿಸ್‍ಗಡ, ಹರಿಯಾಣದವರಿಗೆ ಈಗಾಗಲೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿದ್ದಾರೆ. ಜೂ.15ಕ್ಕೆ ಸಚಿವ ಕೆ.ಎಚ್.ಮುನಿಯಪ್ಪ ತೆಲಂಗಾಣ ಮುಖ್ಯಮಂತ್ರಿಯನ್ನು ಭೇಟಿಯಾಗಲಿದ್ದಾರೆ. ಅಂತೆಯೆ ಛತ್ತೀಸ್‍ಗಢದಿಂದಲೂ ಲಭ್ಯವಿರುವ ಅಕ್ಕಿಯ ಮಾಹಿತಿ ಪಡೆಯುತ್ತೇವೆ. ಒಟ್ಟಿನಲ್ಲಿ ಜನರಿಗೆ ಅನ್ನಭಾಗ್ಯ ದೊರೆಯುವಂತೆ ಮಾಡುವುದು ನಮ್ಮ ಗುರಿ ಎಂದು ಸಿದ್ದರಾಮಯ್ಯ ತಿಳಿಸಿದರು.
ಅಕ್ಕಿ ಇಟ್ಟುಕೊಂಡು ಕೊಡಲಾಗುವುದಿಲ್ಲ ಎನ್ನುವ ಕೇಂದ್ರ ಸರಕಾರವನ್ನು ಬಡವರ ವಿರೋಧಿಗಳು ಎನ್ನಬೇಕು. ಅವರು ಉಚಿತವಾಗಿ ಅಕ್ಕಿ ನೀಡುವುದಿಲ್ಲ. ನಾವು ಹಣ ನೀಡಿ ಪಡೆಯುವುದು. ಇತರರಿಗೆ ಕೊಡುವ ರೀತಿಯಲ್ಲಿ ನಮಗೂ ಕೊಡುತ್ತಿದ್ದರು. ಆದರೆ ಈಗ ಕರ್ನಾಟಕಕ್ಕೆ ನೀಡುವುದಿಲ್ಲ ಎನ್ನುವ ತೀರ್ಮಾನಕ್ಕೆ ಕೇಂದ್ರ ಬಂದಿದೆ. ಈಗಲೂ ನಾವು ಪ್ರಯತ್ನ ಮಾಡುತ್ತಿದ್ದೇವೆ. ಪುನಃ ಕೇಂದ್ರಕ್ಕೆ ಮನವಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆಹಾರ ಮಾತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಉಪಸ್ಥಿತರಿದ್ದರು.
''ಹೆಚ್ಚುವರಿ ಅಕ್ಕಿ ಖರೀದಿಗೆ ಹಣದ ಸಮಸ್ಯೆ ಇಲ್ಲ''
''ಅಕ್ಕಿ ಪೂರೈಕೆ ಮಾಡದಂತೆ ಕೇಂದ್ರ ಸರಕಾರ ಷಡ್ಯಂತ್ರ ಮಾಡಿದರೂ ಅಕ್ಕಿ ವಿತರಿಸಲು ಪ್ರಯತ್ನ ಮಾಡುತ್ತೇವೆ. ಹೆಚ್ಚುವರಿ ಅಕ್ಕಿ ಖರೀದಿಗೆ ರಾಜ್ಯ ಸರಕಾರಕ್ಕೆ ಹಣದ ಸಮಸ್ಯೆ ಇಲ್ಲ. ಈ ಹಿಂದೆ ಅಕ್ಕಿ ಕೊಡುತ್ತಿರುವುದಕ್ಕೆ ಯಾವುದೆ ಸಮಸ್ಯೆ ಇಲ್ಲ''
-ಸಿದ್ದರಾಮಯ್ಯ, ಮುಖ್ಯಮಂತ್ರಿ.