ಮಹಾರಾಷ್ಟ್ರದಲ್ಲಿ ಭಾರೀ ಮಳೆ, ಇಬ್ಬರು ನೀರು ಪಾಲು, ಧರೆಗುರುಳಿದ ಮರಗಳು
ಥಾಣೆ/ಪಾಲ್ಘರ್: ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದ ಥಾಣೆ ಹಾಗೂ ನೆರೆಯ ಪಾಲ್ಘರ್ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ಹಲವು ಪ್ರದೇಶಗಳಲ್ಲಿ ನೀರು ನಿಂತಿದೆ ಮತ್ತು ಹಲವಾರು ಮರಗಳು ಬಿದ್ದ ಘಟನೆಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಇಬ್ಬರು ವ್ಯಕ್ತಿಗಳು ನೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅವರಲ್ಲಿ ಒಬ್ಬನ ಶವ ಪತ್ತೆಯಾಗಿದ್ದು, ಮತ್ತೊಬ್ಬನ ಪತ್ತೆಗೆ ಪ್ರಯತ್ನ ನಡೆಯುತ್ತಿದೆ ಎಂದು ಅವರು ಹೇಳಿದರು.
ಥಾಣೆ ಜಿಲ್ಲೆಯಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಹಲವಾರು ಕಾರುಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಥಾಣೆ ಜಿಲ್ಲೆಯ ನವಿ ಮುಂಬೈ ಟೌನ್ ಶಿಪ್ ನಲ್ಲಿರುವ ಉನ್ನತ ಮಟ್ಟದ ಎನ್ಆರ್ಐ ಕಾಂಪ್ಲೆಕ್ಸ್ ನ ಕಾಂಪೌಂಡ್ ಗೋಡೆಯ ಒಂದು ಭಾಗವು ಭಾರೀ ಮಳೆಯ ನಂತರ ಬುಧವಾರ ರಾತ್ರಿ ಕುಸಿದಿದೆ ಎಂದು ನವಿ ಮುಂಬೈ ಮಹಾನಗರ ಪಾಲಿಕೆಯ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಡಾ.ಬಾಬಾಸಾಹೇಬ್ ರಾಜಾಲೆ ಗುರುವಾರ ಪಿಟಿಐಗೆ ತಿಳಿಸಿದರು.
ಘಟನೆಯಲ್ಲಿ ಯಾವುದೇ ವ್ಯಕ್ತಿ ಗಾಯಗೊಂಡಿಲ್ಲ, ಕಾಂಪ್ಲೆಕ್ಸ್ ನಲ್ಲಿ ನಿಲ್ಲಿಸಿದ್ದ ಕೆಲವು ಕಾರುಗಳಿಗೆ ಹಾನಿಯಾಗಿದೆ ಎಂದು ಅವರು ಹೇಳಿದರು.
ಥಾಣೆ ನಗರದ ದಿವಾದಿಂದ 16 ವರ್ಷದ ಬಾಲಕ ಬುಧವಾರ ರಾತ್ರಿ ಉಕ್ಕಿ ಹರಿಯುತ್ತಿದ್ದ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದು, ಆತನ ಪತ್ತೆಗೆ ಇನ್ನೂ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ