ಮಹಿಳೆಯೊಬ್ಬರಿಗೆ ಆಹಾರ ನೀಡಲು ಮೂರು ಕಿ.ಮೀ ನಡೆದ ಸ್ವಿಗ್ಗಿ ಡೆಲಿವರ್ ಬಾಯ್

ಆಹಾರ ಪೂರೈಕೆ ಸಿಬ್ಬಂದಿಗಳೊಂದಿಗೆ ಹಲವಾರು ಗ್ರಾಹಕರು ಅನುಚಿತವಾಗಿ ವರ್ತಿಸಿರುವ ಘಟನೆಗಳು ಈ ಹಿಂದೆ ವರದಿಯಾಗಿವೆ, ವರದಿಯಾಗುತ್ತಲೇ ಇವೆ. ಆದರೆ, ಇಲ್ಲೊಂದು ಹೃದಯಸ್ಪರ್ಶಿ ಘಟನೆಯಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬನ ಪ್ರಯಾಸಕಾರಿ ಬದುಕಿನ ಕತೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Update: 2023-06-14 13:26 GMT

ಸಾಹಿಲ್ ಸಿಂಗ್‌ | Photo: Linkedin

ಹೊಸ ದಿಲ್ಲಿ: ಆಹಾರ ಪೂರೈಕೆ ಸಿಬ್ಬಂದಿಗಳೊಂದಿಗೆ ಹಲವಾರು ಗ್ರಾಹಕರು ಅನುಚಿತವಾಗಿ ವರ್ತಿಸಿರುವ ಘಟನೆಗಳು ಈ ಹಿಂದೆ ವರದಿಯಾಗಿವೆ, ವರದಿಯಾಗುತ್ತಲೇ ಇವೆ. ಆದರೆ, ಇಲ್ಲೊಂದು ಹೃದಯಸ್ಪರ್ಶಿ ಘಟನೆಯಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬನ ಪ್ರಯಾಸಕಾರಿ ಬದುಕಿನ ಕತೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವೈರಲ್ ಕತೆಯ ಕೇಂದ್ರ ವ್ಯಕ್ತಿ 30 ವರ್ಷದ ಸಾಹಿಲ್ ಸಿಂಗ್.

ತಂತ್ರಜ್ಞಾನ ಕಂಪನಿಯಾದ FLASHನಲ್ಲಿ ಮಾರುಕಟ್ಟೆ ಅಧಿಕಾರಿಯಾದ ಪ್ರಿಯಾಂಶಿ ಚಾಂದೆಲ್ ಇತ್ತೀಚೆಗೆ ಆಹಾರ ಸರಬರಾಜಿಗಾಗಿ ಸ್ವಿಗ್ಗಿ ಕಂಪನಿಗೆ ಆರ್ಡರ್ ನೀಡಿದ್ದರು. ಆ ಆರ್ಡರ್ ಅನ್ನು ತಲುಪಿಸಲು ಸಾಹಿಲ್ ಸಿಂಗ್ ಬರೋಬ್ಬರಿ ಮೂರು ಕಿಮೀ ದೂರ ನಡೆದು ಅವರ ನಿವಾಸದ ಬಳಿ ತಲುಪಿದ್ದ. ಹೀಗೆ ತಲುಪಿದ್ದ ಸಾಹಿಲ್ ಸಿಂಗ್ ಏದುಸಿರು ಬಿಡುತ್ತಾ ಆಕೆಯ ಫ್ಲ್ಯಾಟ್ ಹೊರಗಿದ್ದ ಮೆಟ್ಟಿಲಿನ ಮೇಲೆ ಸುಧಾರಿಸಿಕೊಳ್ಳುತ್ತಿದ್ದರು.

ಮನೆಯ ಬಾಗಿಲು ತೆರೆದು ಆತನಿಂದ ಆಹಾರ ಪೊಟ್ಟಣ ಸ್ವೀಕರಿಸಿರುವ ಪ್ರಿಯಾಂಶಿ ಚಾಂದೆಲ್, ಆತನಿಗೆ ನೀರು ಹಾಗೂ ರೂ. 500 ಭಕ್ಷೀಸು ನೀಡಿದ್ದಾರೆ. ಈ ಹಂತದಲ್ಲೇ ಸಾಹಿಲ್ ಸಿಂಗ್‌ರ ಪ್ರಯಾಸಕರ ಬದುಕಿನ ಅನಾವರಣಗೊಂಡಿರುವುದು. ಆಗ ಪ್ರಿಯಾಂಶಿ ಚಾಂದೆಲ್‌ರನ್ನು ಅವರನ್ನು ಉದ್ದೇಶಿಸಿ ಮಾತನಾಡಿರುವ ಆತ, "ಮೇಡಂ, ನನ್ನ ಬಳಿ ಪ್ರಯಾಣ ಮಾಡಲು ಯಾವುದೇ ಸ್ಕೂಟರ್ ಅಥವಾ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಮೂರು ಕಿ.ಮೀ. ನಡೆದುಕೊಂಡು ಬಂದೇ ನಿಮ್ಮ ಆರ್ಡರ್ ತಲುಪಿಸುತ್ತಿದ್ದೇನೆ. ನಾನು ಸಂಪೂರ್ಣವಾಗಿ ಹಣವಿಲ್ಲದ ಸ್ಥಿತಿ ತಲುಪಿದ್ದು, ಇದ್ದ ಸ್ವಲ್ಪ ಹಣವನ್ನು ನನ್ನ ರೂಂಮೇಟ್‌ ತೆಗೆದುಕೊಂಡಿದ್ದಾರೆ. ಇದರಿಂದ ನನ್ನ ಯುಲು ಸ್ಕೂಟರ್ ಅನ್ನು ರೀಚಾರ್ಜ್ ಮಾಡಿಸಲು ಸಾಧ್ಯವಾಗಿಲ್ಲ. ನಾನು ನನ್ನ ಮಾಲಕನಿಗೆ ಪಾವತಿಸಲು ನನ್ನ ಬಳಿ ಏನೂ ಉಳಿದಿಲ್ಲ. ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ನಿಮಗನ್ನಿಸುತ್ತಿರಬಹುದು. ಆದರೆ, ನಾನು ಇಸಿಇ ಪದವೀಧರನಾಗಿದ್ದು, ನಾನು ಕೋವಿಡ್ ಸಂದರ್ಭದಲ್ಲಿ ಜಮ್ಮುವಿನ ನನ್ನ ನಿವಾಸಕ್ಕೆ ಮರಳುವ ಮುನ್ನ ನಿಂಜಾಕಾರ್ಟ್ ಹಾಗೂ ಬೈಜು ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದೆ. ಈ ಡೆಲಿವರಿಯಿಂದಲೂ ನಾನು ಪಡೆಯುವುದು ರೂ. 20-25 ಮಾತ್ರ. ಹನ್ನೆರಡು ಗಂಟೆಯ ಒಳಗೆ ನಾನು ಮತ್ತೊಂದು ಡೆಲಿವರಿ ಮಾಡದಿದ್ದರೆ ಅವರು ನನ್ನನ್ನು ಡೆಲಿವರಿಗೆ ದೂರ ಕಳಿಸುತ್ತಾರೆ. ಆದರೆ, ನನ್ನ ಬಳಿ ಯಾವುದೇ ಬೈಕ್ ಇಲ್ಲ. ನಾನು ಕಳೆದ ಒಂದು ವಾರದಿಂದ ಸರಿಯಾಗಿ ಏನೂ ತಿಂದಿಲ್ಲ. ಕೇವಲ ನೀರು ಹಾಗೂ ಟೀ ಕುಡಿದು ದಿನ ದೂಡುತ್ತಿದ್ದೇನೆ.‌ ಹೀಗಾಗಿ ನೀವು ನನಗೆ ರೂ. 25,000 ಸಂಬಳದ ಉದ್ಯೋಗ ದೊರಕಿಸಿಕೊಡಲು ಸಾಧ್ಯವೆ? ನನಗೀಗ 30 ವರ್ಷ ವಯಸ್ಸಾಗಿದ್ದು, ವಯಸ್ಸಾಗಿರುವ ನನ್ನ ಪೋಷಕರ ಬಳಿ ಪದೇ ಪದೇ ಹಣ ಕೇಳಲು ಸಾಧ್ಯವಿಲ್ಲ" ಎಂದು ಮನವಿ ಮಾಡಿಕೊಂಡಿದ್ದಾನೆ.

ಕೂಡಲೇ ಆತನ ಭಾವಚಿತ್ರ, ಇಮೇಲ್ ವಿಳಾಸ, ಅಂಕಪಟ್ಟಿಗಳು, ಪ್ರಮಾಣ ಪತ್ರಗಳು ಹಾಗೂ ದಾಖಲೆಗಳನ್ನು LinkedInನಲ್ಲಿ ಅಪ್ಲೋಡ್ ಮಾಡಿರುವ ಪ್ರಿಯಾಂಶಿ ಚಾಂದೆಲ್, "ಜವಾನ, ಆಡಳಿತಾತ್ಮಕ ಕೆಲಸ, ಗ್ರಾಹಕರ ಸಹಾಯ ಇತ್ಯಾದಿ ಉದ್ಯೋಗಗಳು ಖಾಲಿ ಇದ್ದರೆ ಈ ವ್ಯಕ್ತಿಗೆ ದಯವಿಟ್ಟು ನೆರವು ನೀಡಿ" ಎಂದು ಮನವಿ ಮಾಡಿದ್ದಾರೆ.

ಈ ಪೋಸ್ಟ್ ನೋಡಿ ಕೆಲವು ಬಳಕೆದಾರರು ಸಾಹಿಲ್ ಸಿಂಗ್‌ರ ಯುಲು ಸ್ಕೂಟರ್ ರೀಚಾರ್ಜ್ ಮಾಡಿಸಿದ್ದರೆ, ಮತ್ತೆ ಕೆಲವರು ಆತನಿಗೆ ಆಹಾರವನ್ನು ಆತನ ನಿವಾಸಕ್ಕೇ ತಲುಪಿಸಿದ್ದಾರೆ.

ಇತ್ತೀಚಿನ ವರದಿ ಪ್ರಕಾರ, ಪ್ರಿಯಾಂಶಿ ಚಾಂದೆಲ್ ಅವರು ಸಾಹಿಲ್ ಸಿಂಗ್‌ಗೆ ಉದ್ಯೋಗ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಹೀಗಾಗಿ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಹೊಂದಿರುವ ಕಚೇರಿಯಲ್ಲಿ ಕುಳಿತು ನಿಮ್ಮ ಉದ್ಯೋಗ ಪರಿಸರದ ಕುರಿತು ಅಸಮಾಧಾನ ವ್ಯಕ್ತಪಡಿಸುವ ಮುನ್ನ ಅಥವಾ ನೀವು ಆರ್ಡರ್ ಮಾಡಿದ ಆಹಾರವು ಸೂಕ್ತ ಸಮಯಕ್ಕೆ ತಲುಪಿಸಲಿಲ್ಲ ಎಂದು ಡೆಲಿವರಿ ಬಾಯ್ ಜೊತೆ ಅನುಚಿತವಾಗಿ ವರ್ತಿಸುವ ಮುನ್ನ ನಿಮ್ಮ ಸುತ್ತ ಇಂತಹ ನತದೃಷ್ಟ ವ್ಯಕ್ತಿಗಳು ತಮ್ಮ ಜೀವನ ನಿರ್ವಹಣೆಗಾಗಿ ಎಷ್ಟು ಪ್ರಯಾಸ ಪಡುತ್ತಿದ್ದಾರೆ ಎಂಬ ಸಂಗತಿಯೂ ನಿಮಗೆ ತಿಳಿದಿರಲಿ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News