ಝುಕರ್ ಬರ್ಗ್- ಮಸ್ಕ್ ನಡುವಿನ ‘ಕಾದಾಟಕ್ಕೆ’ ದಿನಾಂಕ ನಿಗದಿಯಾಗಿಲ್ಲ ಏಕೆ?
ಮೆಟಾ ಸಿಇಒ ಮಾರ್ಕ್ ಝುಕರ್ ಬರ್ಗ್ ಮತ್ತು ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಜತೆಗಿನ ಕೇಜ್ ಫೈಟ್‍ಗೆ ವೇದಿಕೆ ಸಜ್ಜಾಗಿದ್ದರೂ ಇನ್ನೂ ದಿನ ನಿಗದಿಯಾಗಿಲ್ಲ. ನಾನು ಸದಾ ಇದಕ್ಕೆ ಸಿದ್ಧ; ಆದರೆ ಟ್ವಿಟರ್ ಮಾಲಕರು ಇನ್ನೂ ದಿನ ನಿಗದಿಪಡಿಸಿಲ್ಲ ಎಂದು ಝುಕರ್ ಬರ್ಗ್ ಸ್ಪಷ್ಟಪಡಿಸಿದ್ದಾರೆ. ಝುಕರ್ ಬರ್ಗ್ ಜಿಯು-ಜಿತ್ಸು ತರಬೇತಿ ಪಡೆದಿದ್ದು, ಈ ಕಾದಾಟಕ್ಕೆ ಆಗಸ್ಟ್ 26 ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಇನ್ನೂ ದಿನಾಂಕ ನಿಗದಿಪಡಿಸದಿರುವುದು ಯಾವ ಕಾರಣಕ್ಕೆ ಎಂದು ಮಸ್ಕ್ ಈಗ ಬಹಿರಂಗಪಡಿಸಿದ್ದಾರೆ. ಝುಕರ್ ವಿರುದ್ಧದ ಕಾದಾಟಕ್ಕೆ ಮುನ್ನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ಟೆಸ್ಲಾ ಮುಖ್ಯಸ್ಥ ಸ್ಪಷ್ಟಪಡಿಸಿದ್ದಾರೆ.
ತಮ್ಮ ಥ್ರೆಡ್ ಪೋಸ್ಟ್‍ನಲ್ಲಿ ಝುಕರ್ ಬರ್ಗ್ ಆಗಸ್ಟ್ 26ರ ದಿನವನ್ನು ಪ್ರಸ್ತಾಪಿಸಿದ್ದನ್ನು ಟ್ವಿಟರ್ ಬಳಕೆದಾರರೊಬ್ಬರು ಷೇರ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಸ್ಕ್, ಇದಕ್ಕೆ ಮುನ್ನ ನನ್ನ ಎಂಆರ್‍ಐ ತಪಾಸಣೆ ಮತ್ತು ಬಹುಶಃ ಶಸ್ತ್ರಚಿಕಿತ್ಸೆ ಬೇಕಾಗಬಹುದು ಎಂಬ ಸ್ಪಷ್ಟನೆ ನೀಡಿದ್ದಾರೆ.
"ನಿಶ್ಚಿತ ದಿನಾಂಕ ಇನ್ನೂ ತೂಗಾಟದಲ್ಲಿದೆ. ನಾಳೆ ನನ್ನ ಕೊರಳಿನ ಮತ್ತು ಬೆನ್ನಿನ ಎಂಆರ್‍ಐ ಸ್ಕ್ಯಾನಿಂಗ್ ಆಗಬೇಕು. ಈ ಕಾದಾಟಕ್ಕೆ ಮುನ್ನ ಶಸ್ತ್ರಚಿಕಿತ್ಸೆ ಬೇಕಾಗಬಹುದು. ಈ ವಾರ ಗೊತ್ತಾಗಲಿದೆ" ಎಂದು ಟ್ವೀಟ್ ಮಾಡಿದ್ದಾರೆ.