ಉಡುಪಿ: ಕನ್ನಡದ ಹಿರಿಯ ಸಾಹಿತಿ ಕೆ.ಶಾರದಾ ಭಟ್ ನಿಧನ

Update: 2024-01-02 17:33 GMT

ಉಡುಪಿ : ಕನ್ನಡದ ಹಿರಿಯ ಸಾಹಿತಿ, ಅಂಕಣಕಾರ್ತಿ ಕೆ.ಶಾರದಾ ಭಟ್ (75) ಸೋಮವಾರ ರಾತ್ರಿ ಕುಂದಾಪುರ ಸಮೀಪ ಕೊಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಶಾರದಾ ಭಟ್ ಅವರ ಪಯಣ, ಪಲಾಯನ, ಪರಿಭ್ರಮಣ, ಪದರಗಳು, ಸಾತತ್ತೆಗೊಂದು ಸನ್ಮಾನ, ಅಸ್ತಮಾನ (ಕೊಂಕಣಿ ಕಾದಂಬರಿ) ಸೇರಿದಂತೆ ಒಟ್ಟು ಸುಮಾರು 15 ಕಾದಂಬರಿ, ಕಥಾ ಸಂಕಲನ, ವಿಡಂಬನೆ-ವಾರನೋಟ, ಪಂಡಿತ ರಮಾಬಾಯಿ ಅವರ ಜೀವನಚರಿತ್ರೆ ಪ್ರಕಟಗೊಂಡಿವೆ. ಶಾರದಾ ಭಟ್ ಅತ್ಯುತ್ತಮ ಸಂಘಟಕರು, ಅಂಕಣ ಬರೆಹಗಾರರಾಗಿದ್ದರು. ಹತ್ತು ವರ್ಷಗಳ ಕಾಲ ಚಡಗ ಕಾದಂಬರಿ ಪ್ರಶಸ್ತಿ ಸಮಿತಿಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದರು.

ಶಾರದಾ ಭಟ್ ಅವರ ಹಿರಿಯ ಸಹೋದರಿ, ಲೇಖಕಿ ತಾರಾ ಭಟ್ ಕಳೆದ ನವೆಂಬರ್ ತಿಂಗಳ ಮೊದಲ ವಾರ ನಿಧನರಾಗಿದ್ದರು. ಶಾರದಾ ಭಟ್‌ರ ನಿಧನಕ್ಕೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೋಟೇಶ್ವರದ ಡಾ.ಆರ್.ಎನ್.ಆಚಾರ್ಯ ಸ್ಮಾರಕ ಆಸ್ಪತ್ರೆಯ ಡಾ.ಎನ್.ಭಾಸ್ಕರಾಚಾರ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

ಶಾರದಾ ಭಟ್ ಅವರ ಇಚ್ಛೆಯಂತೆ ಅವರ ದೇಹವನ್ನು ಸಂಶೋಧನೆಗಾಗಿ ಮಣಿಪಾಲ ಆಸ್ಪತ್ರೆಗೆ ನೀಡಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸ್ತ್ರೀವಾದ, ಸ್ತ್ರೀ ಸಮಾನತೆಯ ಪ್ರತಿಪಾದಕಿ

ಸ್ತ್ರೀವಾದ ಹಾಗೂ ಸ್ತ್ರೀಸಮಾನತೆಯ ಪ್ರತಿಪಾದಕಿಯಾಗಿದ್ದ ಶಾರದಾ ಭಟ್ ಅವರು ಜನಿಸಿದ್ದು ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ 1949ರ ಅ.24ರಂದು. ತಂದೆ ಕೆ. ವಿಠಲಭಟ್, ತಾಯಿ ಕಾವೇರಿಯಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ. ದೂರಸಂಪರ್ಕ ಇಲಾಖೆಯಲ್ಲಿ ಕೆಲಸ ದೊರೆತಿ ದ್ದರಿಂದ ಉದ್ಯೋಗದ ಜೊತೆಗೆ ಬೆಂಗಳೂರಿನ ಆಚಾರ್ಯ ಪಾಠಶಾಲಾ ಸಂಜೆ ಕಾಲೇಜಿನಿಂದ ಬಿ.ಎ. ಪದವಿಯೊಂದಿಗೆ ಬಾಹ್ಯ ವಿದ್ಯಾರ್ಥಿನಿಯಾಗಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನೂ ಪಡೆದರು.

ಚಿಕ್ಕಂದಿನಿಂದಲೇ ಸಾಹಿತ್ಯದತ್ತ ಒಲವು. ಮಹಿಳೆಯರ ಶೋಷಣೆಯ ಬಗ್ಗೆ ಅರಿವು ಮೂಡಿಸಲು ಹಲವಾರು ಮಹಿಳಾ ಸಂಘಟನೆಗಳೊಡನೆ ಸಂಪರ್ಕ. ಶೋಷಣೆ ಕುರಿತು ಆಕಾಶವಾಣಿಗಾಗಿ ಹಲವಾರು ನಾಟಕಗಳನ್ನು ಬರೆದು ನಿರ್ದೇಶನ. ಉದ್ಯೋಗದ ಜೊತೆಗೆ ರೂಢಿಸಿಕೊಂಡ ಮತ್ತೊಂದು ಹವ್ಯಾಸ ಪತ್ರಿಕೋದ್ಯಮ. ‘ಸದರ್ನ್ ಸ್ಪೀಕರ್’ ಎಂಬ ಆಂಗ್ಲ ಪತ್ರಿಕೆಯ ವರದಿಗಾರ್ತಿಯಾಗಿದ್ದ ಅವರು ನಂತರ ‘ಪೊಲಿಟಿಕಲ್ ವ್ಯೆ ಆ್ಯಂಡ್ ರಿವ್ಯೆ’ ಎಂಬ ಆಂಗ್ಲ ಪತ್ರಿಕೆಯ ಗೌರವ ಸಹ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದರು. ನಿವೃತ್ತಿಯ ಬಳಿಕ ಉಡುಪಿಯಲ್ಲಿದ್ದಾಗ ಅವರು ‘ವಾರ್ತಾಭಾರತಿ’ ದೈನಿಕದಲ್ಲಿ ‘ಉತ್ತರೆಯ ಅಳಲು’ ಎಂಬ ಜನಪ್ರಿಯ ಅಂಕಣವನ್ನು ಬರೆಯುತಿದ್ದರು.

ಹಲವಾರು ಪತ್ರಿಕೆಗಳಲ್ಲಿ ಇವರ ಕಥೆ, ಕವನ, ಲೇಖನಗಳು, ವಿಡಂಬನಾ ಲೇಖನಗಳು ಪ್ರಕಟಗೊಂಡಿವೆ. ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ವಧುದಹನ, ಅನಕ್ಷರತೆ ಮುಂತಾದ ಮಹಿಳೆಯರ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕಾಗಿ ‘ಅಭಿಯಾನ’ ಪ್ರತಿಷ್ಠಾನದ ಮೂಲಕ ಕ್ರಿಯಾಶೀಲರಾಗಿದ್ದರು. ಪ್ರತಿಷ್ಠಾನದಿಂದ ಯೋಗ ಶಿಬಿರ, ಫಿಲ್ಮ್ ಸ್ಕ್ರಿಪ್ಟ್ ರೈಟಿಂಗ್, ಸಾಹಿತ್ಯ ಸಂಕಿರಣ ಮುಂತಾದ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು. ಉಡುಪಿಯಲ್ಲಿದ್ದಾಗ ‘ನಡುಮನೆ’ ಎಂಬ ಮನೆಮನೆಯಲ್ಲಿ ತಿಂಗಳಿಗೊಮ್ಮೆ ಆಯೋಜಿಸುತಿದ್ದ ಕಾರ್ಯಕ್ರಮವೂ ಸಾಕಷ್ಟು ಜನಪ್ರಿಯಗೊಂಡಿತ್ತು.

ಸ್ತ್ರೀವಾದವೆಂದರೆ ಪುರುಷರೊಡನೆ ಸಂಘರ್ಷವೆಂದು ಕೆಲವರು ಅರ್ಥೈಸುವುದನ್ನು ಖಂಡಿಸುತಿದ್ದ ಶಾರದಾ ಭಟ್ ಅವರ ನಿಲುವು, ಸ್ತ್ರೀಯರ ಸಮಾನತೆಗಾಗಿ ಹಕ್ಕೊತ್ತಾಯವಾಗಿತ್ತು. ಮಹಿಳೆಯರ ಉನ್ನತಿಗಾಗಿ ಅವರು ನಿರಂತರವಾಗಿ ಶ್ರಮಿಸುತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News