ಎ.10ಕ್ಕೆ ಉಡುಪಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ; ಎ.6 ರಂದು ಬಿಜೆಪಿ ಸ್ಥಾಪನಾ ದಿನಾಚರಣೆ

ಉಡುಪಿ, ಎ.4: ಬಿಜೆಪಿ ಸ್ಥಾಪನಾ ದಿನಾಚರಣೆಯ ಅಂಗವಾಗಿ ಎ.6 ರಂದು ಜಿಲ್ಲೆಯ ಎಲ್ಲಾ 1,112 ಬೂತ್‌ಗಳಲ್ಲಿ ಮತ್ತು ಪಕ್ಷದ ಕಾರ್ಯಕರ್ತರ ಮನೆಗಳಲ್ಲಿ ಪಕ್ಷದ ಧ್ವಜಾರೋಹಣ ನಡೆಯಲಿದೆ. ಪಕ್ಷದ ಸೂಚನೆಯಂತೆ ಎ.10ರಂದು ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಜನಾಕ್ರೋಶ ಯಾತ್ರೆ ನಡೆಯಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.
ಕಡಿಯಾಳಿಯಲ್ಲಿರುವ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಿಜೆಪಿ ಸ್ಥಾಪನಾ ದಿನಾಚರಣೆಯ ಪ್ರಯುಕ್ತ ಜಿಲ್ಲೆ ಮತ್ತು ಮಂಡಲಗಳ ಮಟ್ಟದಲ್ಲಿ ಪಕ್ಷದ ಧ್ವಜಾರೋಹಣ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಎ.10ರಂದು ಬೆಳಿಗ್ಗೆ ಗಂಟೆ 9:30ಕ್ಕೆ ಜನಾಕ್ರೋಶ ಯಾತ್ರೆಯ ಬೃಹತ್ ಜಾಥಾ ಉಡುಪಿಯ ಪಾರ್ಕಿಂಗ್ ಏರಿಯಾ ಬಳಿ ಪ್ರಾರಂಭಗೊಂಡು ಕಲ್ಸಂಕ ಮಾರ್ಗವಾಗಿ ಸಾಗಿ ಕಡಿಯಾಳಿಯಲ್ಲಿ ಸಮಾಪನಗೊಳ್ಳಲಿದೆ ಎಂದರು.
ಬೆಳಗ್ಗೆ 10:30ಕ್ಕೆ ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪಕ್ಷದ ರಾಜ್ಯ ಮತ್ತು ಜಿಲ್ಲಾ ನಾಯಕರು, ಜಿಲ್ಲೆಯ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಸಮಾಗಮದೊಂದಿಗೆ ಬೃಹತ್ ಜನಾಕ್ರೋಶ ಸಮಾವೇಶ ನಡೆಯಲಿದೆ. ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಜನಾಕ್ರೋಶ ಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದವರು ಕರೆ ನೀಡಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ ಹಾಗೂ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರೇಷ್ಮಾ ಉದಯ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಬೈಲೂರು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸುರೇಶ್ ಶೆಟ್ಟಿ ಕಾಡೂರು, ಮಹಾವೀರ ಹೆಗ್ಡೆ, ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಕೋಶಾಧಿಕಾರಿ ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಕುಂದರ್, ಶ್ರೀಕಾಂತ್ ನಾಯಕ್, ಪ್ರಿಯದರ್ಶಿನಿ ದೇವಾಡಿಗ, ಶಿವಕುಮಾರ್ ಅಂಬಲಪಾಡಿ, ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಗಿರೀಶ್ ಎಂ. ಅಂಚನ್ ಉಪಸ್ಥಿತರಿದ್ದರು.