ಮಾ.13: ಉಡುಪಿಯಲ್ಲಿ 'ಗ್ಯಾರಂಟಿ ಸಮಾವೇಶ'ಕ್ಕೆ ಸಿಎಂ ಸಿದ್ದರಾಮಯ್ಯ

Update: 2024-03-08 13:21 GMT

ಉಡುಪಿ: ರಾಜ್ಯ ಸರಕಾರ ತನ್ನ 5 ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಶಕ್ತಿಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಯುವ ನಿಧಿ ಇವೆಲ್ಲವನ್ನು ಅತ್ಯಂತ ಯಶಸ್ವಿಯಾಗಿ ರಾಜ್ಯದ ಪ್ರತಿಯೊಬ್ಬ ಜನಸಾಮಾನ್ಯ ನಿಗೂಈ ತಲುಪಿಸಿ ನುಡಿದಂತೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಇದೇ ಮಾ.13ರ ಬುಧವಾರ ಉಡುಪಿ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು ತಿಳಿಸಿದ್ದಾರೆ.

ಬ್ರಹ್ಮಗಿರಿ ನಾಯರ್‌ಕೆರೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಪ್ರಕಟಿಸಿದ ಕೊಡವೂರು, ಕಾರ್ಯಕರ್ತರು ಬೂತು ಮಟ್ಟದಲ್ಲಿ ಫಲಾನುಭವಿಗಳನ್ನು ಗುರುತಿಸಿ ಸಮಾವೇಶದಲ್ಲಿ ಭಾಗವಹಿಸು ವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ಬಡವರಿಗೆ ಆರ್ಥಿಕ ಶಕ್ತಿ ನೀಡುವ ಸಾಮಾಜಿಕ ಹಾಗೂ ಶೈಕ್ಷಣಿಕ ಉನ್ನತಿಗೆ ನೆರವಾಗುವ ಕಾರ್ಯಕ್ರಮಗಳನ್ನು ಜಾರಿ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯ. ಇಂಥಹ ಬದ್ಧತೆ ಇರುವುದು ನಮ್ಮ ಪಕ್ಷಕ್ಕೆ ಮಾತ್ರ. ಗ್ಯಾರಂಟಿ ಯೋಜನೆಗಳನ್ನು ಲೇವಡಿಮಾಡುತ್ತಾ ಈ ಯೋಜನೆಯಿಂದ ಆರ್ಥಿಕತೆ ನಾಶ ಹೊಂದುತ್ತದೆ ಎಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿಯೇ ಈಗ ಮೋದಿ ಗ್ಯಾರಂಟಿ ಎಂದು ಜಪ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷದ ಯೋಜನೆಗಳು ಜನರ ಬದುಕಿಗೆ ಆಸರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರ ಆಯೋಜಿಸಿದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮುಖಂಡರಾದ ಎಂ. ಎ.ಗಪೂರ್, ಹಿರಿಯಣ್ಣ್ವ, ಮಲ್ಯಾಡಿ ಶಿವರಾಮ ಶೆಟ್ಟಿ, ದಿನೇಶ್ ಪುತ್ರನ್, ರಾಜು ಪೂಜಾರಿ, ನೀರೆ ಕೃಷ್ಣಶೆಟ್ಟಿ, ಎ.ಹರೀಶ್ ಕಿಣಿ, ಬಿಪಿನ್‌ಚಂದ್ರ ಪಾಲ್ ನಕ್ರೆ, ವೆರೋನಿಕಾ ಕರ್ನೆಲಿಯೋ, ಗೀತಾ ವಾಗ್ಳೆ, ಸರಸು ಬಂಗೇರ, ನವೀನ್‌ಚಂದ್ರ ಶೆಟ್ಟಿ, ನವೀನ್‌ಚಂದ್ರಸುವರ್ಣ, ರಮೇಶ್ ಕಾಂಚನ್, ಪ್ರಖ್ಯಾತ ಶೆಟ್ಟಿ, ಮಹಾಬಲ ಕುಂದರ್, ಡಾ.ಸುನಿತಾ ಶೆಟ್ಟಿ, ರೋಶನಿ ಒಲಿವರಾ, ಮಮತಾ ಶೆಟ್ಟಿ, ಕೀರ್ತಿ ಶೆಟ್ಟಿ, ದಿವಾಕರ ಕುಂದರ್, ಉದ್ಯಾವರ ನಾಗೇಶ್ ಕುಮಾರ್, ವಿಶ್ವಾಸ್ ಅಮೀನ್, ಯತೀಶ್ ಕರ್ಕೆರ ಮುಂತಾದವರು ಉಪಸ್ಥಿತರಿದ್ಧರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕುಶಲ ಶೆಟ್ಟಿ ಸ್ವಾಗತಿಸಿದರು.ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಹೆಬ್ಬಾರ್ ವಂದಿಸಿ, ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಅಣ್ಟಯ್ಯ ಸೇರಿಗಾರ್ ಮತ್ತು ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News