ಡಿ.14: ಅಂ.ರಾ.ಜಾದು ಕಲಾವಿದ ಪ್ರೊ.ಶಂಕರ್‌ಗೆ ಅಭಿನಂದನೆ
ಉಡುಪಿ, ಡಿ.11: ಉಡುಪಿಯ ಅಂತಾರಾಷ್ಟ್ರೀಯ ಖ್ಯಾತಿಯ ಜಾದು ಕಲಾವಿದ ಪ್ರೊ. ಶಂಕರ್ ಅವರನ್ನು ಅಭಿನಂದಿಸುವ ಕಾರ್ಯಕ್ರಮವೊಂದು ಪ್ರೊ.ಶಂಕರ್ ಅಭಿನಂದನ ಸಮಿತಿಯ ವತಿಯಿಂದ ಡಿ.14ರ ಶನಿವಾರ ಅಪರಾಹ್ನ 3:30ಕ್ಕೆ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಹವಾ ನಿಯಂತ್ರಿತ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1960ರ ದಶಕದಲ್ಲಿ ದಕ್ಷಿಣ ಭಾರತದಲ್ಲಿ ತೀರಾ ಅಪರಿಚಿತವಾಗಿದ್ದ ಜಾದೂ ಕಲೆಯನ್ನು ಅಭ್ಯಸಿಸಿ ಅದಕ್ಕೊಂದು ಮಾನ್ಯತೆಯನ್ನು ತಂದುಕೊಟ್ಟವರು ಪ್ರೊ.ಶಂಕರ್ ಎಂದು ಅವರು ವಿವರಿಸಿದರು.
ಅಭಿನಂದನ ಕಾರ್ಯಕ್ರಮವನ್ನು ಸಂಜೆ 4 ಗಂಟೆಗೆ ಧರ್ಮದರ್ಶಿ ಹರಿಕೃಷ್ಣ ಪುನರೂರು ಉದ್ಘಾಟಿಸಲಿದ್ದಾರೆ. ಸಮಿತಿಯ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಬಯಿ ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಯ ತೋನ್ಸೆ ಜಯಕೃಷ್ಣ ಶೆಟ್ಟಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್ ಉಪಸ್ಥಿತರಿರುತ್ತಾರೆ.
4:35ರಿಂದ ಪ್ರೊ.ಶಂಕರ್ ಜಾದೂ ಜಗತ್ತು ಕುರಿತ ವಿಡಿಯೋ ತುಣುಕು ಅನಾವರಣಗೊಳ್ಳಲಿದೆ. ಸಂಜೆ 5:00ಕ್ಕೆ ಶಂಕರ್ ಕುರಿತು ಪ.ರಾಮಕೃಷ್ಣ ಶಾಸ್ತ್ರಿ ರಚಿಸಿದ ಪುಸ್ತಕವನ್ನು ನಾಡೋಜ ಪ್ರೊ. ಕೆ.ಪಿ.ರಾವ್ ಲೋಕಾರ್ಪಣೆ ಗೊಳಿಸಲಿದ್ದಾರೆ. 5:30ರಿಂದ ಪ್ರೊ.ಶಂಕರ್ ಬಗ್ಗೆ ಪುತ್ರ ತೇಜಸ್ವಿ ಶಂಕರ್ ಮಾತನಾಡಲಿದ್ದಾರೆ. ಬಳಿಕ ಪ್ರೊ.ಶಂಕರ್ ಒಡನಾಡಿಗಳು ಅವರ ಕುರಿತು ಅನಿಸಿಕೆ ಹಂಚಿಕೊಳ್ಳಲಿದ್ದು, ಆಸ್ಟ್ರೋಮೋಹನ್ ಸಮನ್ವಯಕಾರರಾಗಿರುವರು.
ಸಂಜೆ 7:10ರಿಂದ ಪ್ರೊ. ಶಂಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಇಂದ್ರಜಾಲ ಪ್ರವೀಣ ಓಂಗಣೇಶ್ ಉಪ್ಪುಂದ ಅಭಿನಂದನ ಭಾಷಣ ಮಾಡಲಿ ದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ಮನೋರೋಗ ತಜ್ಞ ಡಾ. ಪಿ .ವಿ ಭಂಡಾರಿ ಹಾಗೂ ಇತರರು ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ಅಭಿನಂದನ ಸಮಿತಿಯ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ, ಕಾರ್ಯದರ್ಶಿ ಜನಾರ್ದನ ಕೊಡವೂರು, ಸಂಚಾಲಕ ರವಿರಾಜ್ ಹೆಚ್.ಪಿ., ಕೋಶಾಧಿಕಾರಿ ಪ್ರೊ. ಸದಾಶಿವ ರಾವ್ ಉಪಸ್ಥಿತರಿದ್ದರು.