ಬಿಲ್ಲವರು ಸರ್ವಧರ್ಮ ಸಮಭಾವ ಮಂತ್ರ ಮೈಗೂಡಿಸಿಕೊಳ್ಳುವುದು ಅಗತ್ಯ: ಬಿ.ಕೆ. ಹರಿಪ್ರಸಾದ್
ಉಡುಪಿ: ಜಾತಿ ಬೇಧ, ಧರ್ಮ ದ್ವೇಷ ಬಿಟ್ಟು ಸಹೋದರತೆ ಭಾವನೆಯ ಸರ್ವಧರ್ಮ ಸಮಭಾವ ಮಂತ್ರವನ್ನು ಪಠಿಸಿದ ನಾರಾಯಣ ಗುರುಗಳು ಮಹಾತ್ಮ ಗಾಂಧಿಜಿಗೂ ಪ್ರೇರಣೆ ಆಗಿದ್ದರು. ಮುಂದೆ ಗಾಂಧೀಜಿ ತಮ್ಮ ಸಿದ್ಧಾಂತದಲ್ಲಿ ಸರ್ವಧರ್ಮ ಸಮಭಾವ ಮಂತ್ರವನ್ನು ಅಳವಡಿಸಿ ಕೊಂಡಿದ್ದರು. ಗಾಂಧೀಜಿ ಪ್ರೇರಣೆಯಾಗಿದ್ದ ಈ ಮಂತ್ರವನ್ನು ಬಿಲ್ಲವರರು ಎಷ್ಟು ಪ್ರೇರಿತರಾಗಿದ್ದಾರೆ ಎಂಬುದನ್ನು ನಾವು ಪ್ರಶ್ನೆ ಮಾಡಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಸಮಾಜ ಸುಧಾರಣೆಯ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮದಿನದ ಪ್ರಯುಕ್ತ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ರವಿವಾರ ಬನ್ನಂಜೆ ಬಿಲ್ಲವ ಸೇವಾ ಸಂಘದಲ್ಲಿ ಹಮ್ಮಿಕೊಳ್ಳಲಾದ ’ಗುರು ಸಂದೇಶದ ಸಾಮರಸ್ಯ ಜಾಥಾ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ನಾರಾಯಣಗುರು ನೈರ್ಮಲ್ಯ ನಾಗಪೂಜೆ ಕಂದಾಚಾರ ಮೂಢನಂಬಿಕೆ, ಅಜ್ಞಾನದಿಂದ ಕೂಡಿರುವ ಅರ್ಥಹೀನ ಆಚರಣೆಗಳು, ಸಮಾಜಕ್ಕೆ ಅಂಟಿ ಕೊಂಡಿರುವ ಅನಗತ್ಯ ಸಂಪ್ರದಾಯಗಳನ್ನು ತೊಲಗಿಸಿ ಶಿಕ್ಷಣದ ಮೂಲಕ ನಮ್ಮ ಜನರ ಪರಿವರ್ತನೆ ಮಾಡಬೇಕೆಂಬ ಸಂದೇಶವನ್ನು ಸಾರಿದರು. ನಮ್ಮ ಮಕ್ಕಳು ಇಂದು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ನಮ್ಮ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದರು.
ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನಾರಾಯಣಗುರುಗಳು ಯಾವುದೇ ರೀತಿಯ ರಕ್ತ ಕ್ರಾಂತಿ ಇಲ್ಲದೆ ಸಾಮಾಜಿಕ ಸುಧಾರಣೆಗಳನ್ನು ತಂದರು. ಆ ಮೂಲಕ ಬಿಲ್ಲವ ಸಮುದಾಯ ಒಂದು ಶಕ್ತಿಯುತ ಸಮಾಜವಾಗಿ ಬೆಳೆದು ನಿಂತಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಎಂ. ಪೂಜಾರಿ ವಹಿಸಿದ್ದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಬನ್ನಂಜೆ ಬಿಲ್ಲವ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಪ್ರಮುಖರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಜಿ.ಸುವರ್ಣ, ಡಾ.ವಿನೋದ್ ಕುಮಾರ್, ಸುಭಾಸ್ ಸಾಲ್ಯಾನ್, ಶಿನೋದ್ ಟಿ.ಆರ್., ದಿನೇಶ್ ಜತ್ತನ್, ಶ್ರೀನಿವಾಸ ಪೂಜಾರಿ, ಭಾಸ್ಕರ ಜತ್ತನ್, ಸದಾಶಿವ ಅಮೀನ್, ಜಯಪ್ರಕಾಶ್ ಹೂಡೆ, ಪ್ರಭಾಕರ ಪೂಜಾರಿ,. ಚಂದ್ರಶೇಖರ್ ಸುವರ್ಣ ಉಪಸ್ಥಿತರಿದ್ದರು. ವೇದಿಕೆಯ ಉಪಾಧ್ಯಕ್ಷ ಮಹೇಶ್ ಸ್ವಾಗತಿಸಿದರು. ದಯಾನಂದ ಕಾರ್ಯಕ್ರಮ ನಿರೂಪಿಸಿದರು.
ಜಾಥಾಕ್ಕೆ ಚಾಲನೆ: ಸಮಾಜ ಸುಧಾರಣೆಯ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳು ಸಾರಿದ ಸಂದೇಶವನ್ನು ಜನಸಾಮಾನ್ಯರಿಗೆ ತಿಳಿಸಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಗುರುಗಳ 170ನೇ ಜನ್ಮದಿನದ ಪ್ರಯುಕ್ತ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ’ಗುರು ಸಂದೇಶದ ಸಾಮರಸ್ಯ ಜಾಥಾ’ಕ್ಕೆ ರವಿವಾರ ಬನ್ನಂಜೆ ಬಿಲ್ಲವ ಸೇವಾ ಸಂಘದಲ್ಲಿ ಚಾಲನೆ ನೀಡಲಾಯಿತು.
ಉಡುಪಿ ಶಾಸಕ ಯಶ್ಪಾಲ್ ಎ.ಸುವರ್ಣ, ಮಾಜಿ ಶಾಸಕ ಕೆ.ರಘುಪತಿ ಭಟ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು, ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಎಂ.ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು
ಜಾಥಾವು ಬನ್ನಂಜೆಯಿಂದ ಉಡುಪಿ ಸಿಟಿ ಬಸ್ ನಿಲ್ದಾಣ, ಕೋರ್ಟ್ ರೋಡ್, ಜೋಡುಕಟ್ಟೆ, ಬ್ರಹ್ಮಗಿರಿ, ಅಂಬಲಪಾಡಿ ಬೈಪಾಸ್, ಕರಾವಳಿ ಬೈಪಾಸ್, ಅಂಬಾಗಿಲು, ಗುಂಡಿಬೈಲು, ಕಲ್ಸಂಕ ಮಾರ್ಗವಾಗಿ ಬನ್ನಂಜೆ ಸಮಾಪ್ತಿಗೊಂಡಿತು.
ಶಾಲೆಗಳಲ್ಲಿ ನಾರಾಯಣಗುರು ಜಯಂತಿ ಆಚರಣೆಗೆ ಆಗ್ರಹ
ಸರಕಾರ ನಾರಾಯಣಗುರು ಜಯಂತಿಯನ್ನು ಕಾಟಾಚಾರಕ್ಕೆ ಆಚರಣೆ ಮಾಡುತ್ತಿದೆ. ಆದುದರಿಂದ ಮುಂದಿನ ವರ್ಷದಿಂದ ಪ್ರತಿ ಶಾಲೆಗಳಲ್ಲಿ ಗುರು ಗಳ ಆಚರಣೆ ಮಾಡುವ ಮೂಲಕ ಅವರ ಸಂದೇಶವನ್ನು ಮಕ್ಕಳಿಗೆ ಹೇಳಿ ಕೊಡುವ ಕಾರ್ಯ ಆಗಬೇಕು ಎಂದು ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಪೂಜಾರಿ ಆಗ್ರಹಿಸಿದರು.
ನಾರಾಯಣಗುರುಗಳ ಪುತ್ಥಳಿಯನ್ನು ವಿಧಾನಸೌಧದ ಎದುರು ಸ್ಥಾಪಿಸ ಬೇಕು. ನಾರಾಯಣಗುರು ನಿಗಮಕ್ಕೆ 500ಕೋಟಿ ರೂ. ಅನುದಾನ ಮೀಸ ಲಿರಿಸಬೇಕು. ಕಾರ್ಕಳದ ಕೋಟಿಚೆನ್ನಯ್ಯ ಥೀಮ್ ಪಾರ್ಕ್‌ಗೆ ನೀಡಿರುವ 99 ಎಕರೆ ಜಾಗದ ಪೈಕಿ ಪ್ರಸ್ತುತ 10 ಎಕರೆ ಜಾಗ ಮಾತ್ರ ಉಳಿದಿದೆ. ಉಳಿದ ಜಾಗ ಎಲ್ಲಿ ಹೋಯಿತು ಎಂಬುದರ ಬಗ್ಗೆ ಪರಿಶೀಲನೆ ಮಾಡಬೇಕು. ಕಳೆದ ಬಾರಿ ಪಠ್ಯಪುಸ್ತಕದಲ್ಲಿ ನಾರಾಯಣಗುರುಗಳಿಗೆ ಆಗಿರುವ ಅಗೌರವ ಮುಂದೆ ಆಗದಂತೆ ಸರಕಾರ ಎಚ್ಚರ ವಹಿಸಬೇಕು ಎಂದರು.
‘ಬಿಲ್ಲವ ಸಮುದಾಯ ದೇವರ ಮೇಲಿನ ನಂಬಿಕೆ ಜೊತೆ ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವ ಕಾರ್ಯ ಮಾಡಬೇಕು. ಪೂಜೆ ಪುರಸ್ಕಾರವನ್ನು ಬಿಟ್ಟು ಸರಸ್ವತಿಯ ಪೂಜೆ ಮಾಡಬೇಕು. ನಮ್ಮನ್ನು ದೇವಸ್ಥಾನದ ಒಳಗಡೆ ಹೋಗದಂತೆ ಮುಸ್ಲಿಮರು, ಕ್ರಿಶ್ಚಿಯನ್ನರು ತಡೆದಿಲ್ಲ. ಯಾರು ನಮ್ಮನ್ನು ದೇವಸ್ಥಾನದೊಳಗೆ ಪ್ರವೇಶಿಸಲು ಬಿಟ್ಟಿಲ್ಲವೋ ಅವರ ಹಿಂದೆಯೇ ನಾವು ಹೋಗುತ್ತಿದ್ದೇವೆ. ಆದುರಿಂದ ನಾವೆಲ್ಲ ನಾರಾಯಣಗುರುಗಳ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿ ಕೊಳ್ಳಬೇಕು’
-ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯರು