ಉಡುಪಿ ಜಿಲ್ಲೆಯಲ್ಲಿ ವಿಷದ ಹಾವು ಕಡಿತ ಪ್ರಕರಣ ಹೆಚ್ಚಳ!
ಉಡುಪಿ: ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶಗಳನ್ನೊಂಡ ಉಡುಪಿ ಜಿಲ್ಲೆಯಲ್ಲಿ ವಿಷಕಾರಿ ಹಾವು ಕಡಿತ ಪ್ರಕರಣಗಳು ಈ ಬಾರಿ ಏರಿಕೆ ಕಂಡು ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 2023ನೇ ಸಾಲಿನಲ್ಲಿ ಪ್ರಕರಣ ಜಾಸ್ತಿಯಾಗಿದೆ.
ಆರೋಗ್ಯ ಇಲಾಖೆಯ ಕಣ್ಗಾವಲು ಘಟಕದ ಅಂಕಿ-ಅಂಶಗಳ ಪ್ರಕಾರ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ 572 ಹಾವು ಕಡಿತ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಓರ್ವ ಮೃತಪಟ್ಟಿದ್ದಾರೆ. 2021ರಲ್ಲಿ 38, 2022ರಲ್ಲಿ 260 ಹಾಗೂ 2023ರಲ್ಲಿ 274 ಮಂದಿ ವಿಷ ಪೂರಿತ ಹಾವಿನ ಕಡಿತಕ್ಕೆ ಒಳಗಾಗಿದ್ದು, 2023ರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಹಾವಿನ ಕಡಿತಕ್ಕೆ ಸಂಬಂಧಿಸಿ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿ ದಾಸ್ತಾನು ಹಾಗೂ ಸೂಕ್ತ ಚಿಕಿತ್ಸೆ ಇರುವುದರಿಂದ ಕಳೆದ ಮೂರು ವರ್ಷಗಳಲ್ಲಿ ಕೇವಲ ಒಂದೇ ಒಂದು ಸಾವಿನ ಪ್ರಕರಣ ವರದಿಯಾಗಿದೆ. ಅಲ್ಲದೆ ಇಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳು ಇರುವುದರಿಂದ ಹೆಚ್ಚಿನವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
4 ವಿಷಕಾರಿ ಹಾವುಗಳು: ಉಡುಪಿ ಜಿಲ್ಲೆಯಲ್ಲಿ ನಾಗರಹಾವು, ಕಡಂಬಲ (ಕಟ್ಟು ಹಾವು), ಕನ್ನಡಿ ಹಾವು ಹಾಗೂ ಗರಗಸ ಹುರುಪೆಯ ಮಂಡಲ ಹಾವು ವಿಷಕಾರಿಯಾಗಿದೆ. ಇವು ನಾಲ್ಕು ಹಾವು ಕಚ್ಚಿದರೆ ವೈದ್ಯಕೀಯ ವಲಯದಲ್ಲಿ ಅದಕ್ಕೆ ಬೇಕಾದ ಔಷಧಿ ಇದೆ.
ಪಶ್ಚಿಮಘಟ್ಟದಲ್ಲಿ ಕಂಡುಬರುವ ಕಾಳಿಂಗ ಸರ್ಪ ಕಡಿತಕ್ಕೆ ಯಾವುದೇ ಔಷಧಿ ಈವರೆಗೆ ಕಂಡು ಹಿಡಿದಿಲ್ಲ. ಯಾಕೆಂದರೆ ಈ ಹಾವು ಜನಸಾಮಾನ್ಯರಿಗೆ ಕಚ್ಚುವುದು ತೀರಾ ಅಪರೂಪ. ಕಾಳಿಂಗ ಸರ್ಪದ ವಿಷದ ಸಾಮರ್ಥ್ಯ ನಾಗರ ಹಾವಿಗಿಂತ ಕಡಿಮೆ ಇದ್ದರೂ ವಿಷದ ಪ್ರಮಾಣ ಮಾತ್ರ ಹೆಚ್ಚಿರುತ್ತದೆ ಎನ್ನುತ್ತಾರೆ ಉರಗ ತಜ್ಞ ಅಜಯಗಿರಿ.
ಕನ್ನಡಿ ಹಾವು ಜಾಸ್ತಿ ಮಳೆಗಾಲದಲ್ಲಿ ಚಟುವಟಿಕೆಯಿಂದ ಇರುತ್ತದೆ. ತರಗೆಲೆ ಗಳ ಮಧ್ಯೆ ಬೇಟೆಗಾಗಿ ಕಾಯುತ್ತಿರುತ್ತದೆ. ಹಲವು ದಿನಗಳ ಕಾಲ ಒಂದೇ ಕಡೆ ನಿಂತಿರುತ್ತದೆ. ಆ ಸಂದರ್ಭದಲ್ಲಿ ಸೌದೆಗಾಗಿ ಬರುವವರು ತುಳಿದರೆ ಅದು ತನ್ನ ರಕ್ಷಣೆಗಾಗಿ ದಾಳಿ ನಡೆಸುತ್ತದೆ. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗಿ ವರದಿಯಾಗಿದೆ. ಬಹುತೇಕ ಹಾವುಗಳ ಸಂತಾನೋತ್ಪತ್ತಿಯು ಡಿಸೆಂಬರ್‌ನಿಂದ ಫ್ರೆಬವರಿ ತಿಂಗಳಲ್ಲಿ ನಡೆಯುತ್ತದೆ. ಆ ಸಂದರ್ಭದಲ್ಲಿ ಓಡಾಟ ಜಾಸ್ತಿ ಕೂಡ ಇರುತ್ತದೆ ಎಂದು ಉರಗ ತಜ್ಞರು ಮಾಹಿತಿ ನೀಡಿದರು.
‘ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾವು ಕಡಿತಕ್ಕೆ ಸಂಬಂಧಿಸಿ ಔಷಧಗಳ ದಾಸ್ತಾನು ಸಾಕಷ್ಟು ಇದೆ. ಅಲ್ಲದೆ ಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆ ನಮ್ಮಲ್ಲಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡ ಸಭೆ ಕರೆದು ಮಾಹಿತಿ ಪಡೆದು ಕೊಂಡಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಹಾವು ಕಡಿತ ಪ್ರಕರಣಗಳು ಕಂಡು ಬಂದರೂ ಕೇವಲ ಒಂದೇ ಒಂದು ಸಾವು ಆಗಿದೆ. ಅದು ಕೂಡ ಮಾನಸಿಕ ಸಮಸ್ಯೆ ಇರುವ ವ್ಯಕ್ತಿ ಹಾವು ಕಚ್ಚಿದ್ದು, ಅವರ ಕೊನೆಯ ಕ್ಷಣದವರೆಗೆ ಮನೆಯವರಿಗೆ ಹೇಳದ ಸಾವು ಸಂಭವಿಸಿದೆ’
-ಡಾ.ಐ.ಪಿ.ಗಡಾಧ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
‘ಹಾವುಗಳು ಸುಮ್ಮನೆ ಯಾರಿಗೂ ಕಚ್ಚಕ್ಕೆ ಹೋಗುವುದಿಲ್ಲ. ನಾಗರಹಾವು ಕಚ್ಚುವ ಮೊದಲು ಬೇರೆ ಬೇರೆ ವಿಧದಲ್ಲಿ ಎಚ್ಚರಿಕೆಗಳನ್ನು ಕೊಡುತ್ತದೆ. ಯಾಕೆಂದರೆ ಕಚ್ಚಿದರೆ ಅದಕ್ಕೆ ಹೆಚ್ಚು ನಷ್ಟ. ಕಾಳಿಂಗ ಸರ್ಪ ಜನಸಾಮಾನ್ಯರಿಗೆ ಕಚ್ಚಿದ ಪ್ರಕರಣಗಳು ವರದಿಯಾಗಿಲ್ಲ. ಅದನ್ನು ಹಿಡಿದು ಹಿಂಸೆ ನೀಡಿದವರಿಗೆ ಮಾತ್ರ ಕಚ್ಚಿದೆ’
-ಅಜಯ್ ಗಿರಿ, ಉರಗ ತಜ್ಞರು