ಉಡುಪಿ: ವೀಡಿಯೊ ಚಿತ್ರೀಕರಣ ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರ
ಉಡುಪಿ, ಆ.7: ಉಡುಪಿ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜು ವೀಡಿಯೊ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿ ರಾಜ್ಯ ಸರಕಾರ ಇಂದು ಆದೇಶ ನೀಡಿದೆ.
ಜು.18ರಂದು ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಶೌಚಾಲಯಕ್ಕೆ ಹೋದ ಅದೇ ವರ್ಷದ ವಿದ್ಯಾರ್ಥಿನಿಯೊಬ್ಬಳ ವೀಡಿಯೊ ಚಿತ್ರೀಕರಣ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿ ವಿವಾದ ಸೃಷ್ಠಿಸಿತ್ತು. ಈ ಸಂಬಂಧ ವಾರದ ಬಳಿಕ ಮಲ್ಪೆ ಪೊಲೀಸರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದರು.
ಇದೇ ವಿಚಾರ ಇಟ್ಟುಕೊಂಡು ಬಿಜೆಪಿ, ಎಬಿವಿಪಿ ಹಾಗೂ ಸಂಘಪರಿವಾರ ಪ್ರತಿಭಟನೆಗಳನ್ನು ನಡೆಸಿ ಉನ್ನತ ಮಟ್ಟದ ತನಿಖೆಗೆ ಒತ್ತಾಯಸಿದ್ದವು. ಬಳಿಕ ತನಿಖಾಧಿಕಾರಿಯನ್ನು ಬದಲಾಯಿಸಿ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ರಾಜ್ಯ ಸರಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿ ಆದೇಶ ನೀಡಿದೆ.
ಈ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸ್ ತಂಡವು ಮಂಗಳವಾರ ಉಡುಪಿಗೆ ಆಗಮಿಸಿ, ಎಸ್ಪಿ ಹಾಗೂ ತನಿಖಾಧಿಕಾರಿಯೊಂದಿಗೆ ಚರ್ಚಿಸಿ ಎಲ್ಲ ದಾಖಲೆ ಗಳನ್ನು ಪಡೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.