ತಿಂಗಳೊಳಗೆ ನೋಂದಣಿಗೆ ತಪ್ಪಿದರೆ ಹೋಮ್‌ಸ್ಟೇ ವಿರುದ್ಧ ಕ್ರಮ: ಉಡುಪಿ ಡಿಸಿ ವಿದ್ಯಾಕುಮಾರಿ ಎಚ್ಚರಿಕೆ

Update: 2025-03-20 20:21 IST
ತಿಂಗಳೊಳಗೆ ನೋಂದಣಿಗೆ ತಪ್ಪಿದರೆ ಹೋಮ್‌ಸ್ಟೇ ವಿರುದ್ಧ ಕ್ರಮ: ಉಡುಪಿ ಡಿಸಿ ವಿದ್ಯಾಕುಮಾರಿ ಎಚ್ಚರಿಕೆ
  • whatsapp icon

ಉಡುಪಿ, ಮಾ.20: ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಅವಕಾಶವನ್ನು ನೀಡಿದ್ದರೂ, ಕೇವಲ 200 ಹೋಮ್‌ಸ್ಟೇಗಳು ಮಾತ್ರ ನೋಂದಣಿಯಾಗಿದ್ದು, ಇನ್ನೊಂದು ತಿಂಗಳೊಳಗೆ ನೋಂದಣಿಯಾಗದ ಹಾಗೂ ಸರಕಾರಿ ಜಾಗ/ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ನಿರ್ಮಾಣ ಗೊಂಡಿರುವ ಹೋಮ್‌ಸ್ಟೇ/ರೆಸಾರ್ಟ್‌ ಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಗುರುವಾರ ಪ್ರವಾಸಿಗರಿಗೆ ಭದ್ರತೆ ನಿಟ್ಟಿನಲ್ಲಿ ನಡೆದ ಹೋಮ್‌ಸ್ಟೇ ಹಾಗೂ ರೆಸಾರ್ಟ್‌ಗಳ ಮಾಲಕರ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಈಗಾಗಲೇ ನೋಂದಣಿಯಾದವರು ಮುನ್ನೆಚ್ಚರಿಕೆ ಕ್ರಮದ ಕುರಿತು ಮುಂದಿನ 10 ದಿನಗಳೊಳಗೆ ಮುಚ್ಚಳಿಕೆ ಬರೆದು ಆನ್‌ಲೈನ್ ಮೂಲಕ ಸಲ್ಲಿಸಬೇಕು ಎಂದೂ ಜಿಲ್ಲಾಧಿಕಾರಿಗಳು ಸೂಚಿಸಿದರು.

ಹೋಮ್‌ಸ್ಟೇ ಹಾಗೂ ರೆಸಾರ್ಟ್‌ಗಳವರು ನಿರ್ಜನ ಪ್ರದೇಶಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಮೊದಲು ಪೊಲೀಸರಿಗೆ ಮಾಹಿತಿ ನೀಡಬೇಕು. ಪ್ರವಾಸಿಗರು ಈಜುವ ಸಂದರ್ಭ ತಜ್ಞ ಈಜುಗಾರರು ರಕ್ಷಣೆಗಿರ ಬೇಕು. ದಿನದ 24ಗಂಟೆಯೂ ಕಾರ್ಯನಿರ್ವಹಿಸುವಂತೆ ಹಾಗೂ ರಾತ್ರಿ ದೃಷ್ಟಿಯ ಸಿಸಿಟಿವಿಗಳನ್ನು ಅಳವಡಿಸಬೇಕು. ರಾತ್ರಿ 10ಗಂಟೆಯೊಳಗೆ ಎಲ್ಲಾ ಚಟುವಟಿಕೆಗಳನ್ನು ಮುಗಿಸಬೇಕು. ಏಕಾಂಗಿಯಾಗಿ ಬರುವ ಹೆಣ್ಮಕ್ಕಳ ರಕ್ಷಣೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಡಾ.ವಿದ್ಯಾಕುಮಾರಿ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಮಾತನಾಡಿ, ನೋಂದಾಯಿತ ಹೋಮ್‌ಸ್ಟೇಗಳಿಗೆ ಬರುವವರಲ್ಲಿ ಪಾನ್, ಆಧಾರ್ ಇಲ್ಲಾ ಚಾಲನಾ ಪರವಾನಗಿಯ ದಾಖಲೆ ಪ್ರತಿ ಪಡೆದುಕೊಳ್ಳಲು ತಪ್ಪಿದಲ್ಲಿ ಪ್ರವಾಸಿಗರು ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಹೋಮ್ ಸ್ಟೇ ಮಾಲಕರ ಸಹಿತ ಸಂಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಸೂಚನೆಗಳ ಫಲಕ ಅಳವಡಿಕೆ, ಪ್ರವಾಸಿಗರು ಮಾತು ಕೇಳದಿದ್ದರೆ ಇಲ್ಲಾ ಕೆಟ್ಟದಾಗಿ ನಡೆದುಕೊಂಡರೆ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಕೊಡಿ ಎಂದು ತಿಳಿಸಿದರು.

ಅನಧಿಕೃತ ಹೋಮ್‌ಸ್ಟೇ, ರೆಸಾರ್ಟ್‌ಗಳ ಪಟ್ಟಿ ಮಾಡಲಾಗುವುದು. ನಿಯಮ ಉಲ್ಲಂಘಿಸಿ ಯಾವುದೇ ಹೋಮ್‌ಸ್ಟೇ ಮಾಡಲು, ಮುಂದುವರಿ ಸಲು ಅವಕಾಶವಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಹೊರರಾಜ್ಯದ ಕಾರ್ಮಿಕರನ್ನು ಪೊಲೀಸ್ ವೆರಿಫಿಕೇಶನ್ ಬಳಿಕ ನಿಯೋಜಿಸಬೇಕು. ರೆಸಾರ್ಟ್‌ಗೆ ಬಂದವರಿಗೆ ಸಾಹಸ ಕ್ರೀಡೆಗಳ ಸಹಿತ ನಾನಾ ಚಟುವಟಿಕೆಗಳ ಅಪಾಯದ ಮಾಹಿತಿಯನ್ನೂ ನೀಡಬೇಕು ಎಂದರು.

ಜಿಲ್ಲೆಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ನೈತಿಕ, ಸಾಂಸ್ಕೃತಿಕ ನೆಲೆಯಲ್ಲಿ ವಸ್ತ್ರ ಸಂಹಿತೆ (ಡ್ರೆಸ್ ಕೋಡ್) ಬಗ್ಗೆ ತಿಳಿಸಬೇಕು. ನೈತಿಕ ಪೊಲೀಸ್‌ಗಿರಿ ಸಮಸ್ಯೆ ಉದ್ಭವಿಸದಂತೆ ಎಚ್ಚರಿಕೆ ವಹಿಸಬೇಕು. ಪ್ರವಾಸೋದ್ಯಮಕ್ಕೆ ಉತ್ತೇಜನದ ಜೊತೆಗೆ ಪ್ರವಾಸಿಗರ ರಕ್ಷಣೆಯೂ ಅತಿ ಮುಖ್ಯ ಎಂದು ಪ್ರತೀಕ್ ಬಾಯಲ್ ಹೇಳಿದರು.

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News