ಮಹಿಳೆ ಮೇಲೆ ಹಲ್ಲೆ ಘಟನೆ: ಮಲ್ಪೆ ಮೀನುಗಾರರ ಸಂಘದ ಸ್ಪಷ್ಟನೆ

Update: 2025-03-20 19:24 IST
ಮಹಿಳೆ ಮೇಲೆ ಹಲ್ಲೆ ಘಟನೆ: ಮಲ್ಪೆ ಮೀನುಗಾರರ ಸಂಘದ ಸ್ಪಷ್ಟನೆ
  • whatsapp icon

ಉಡುಪಿ, ಮಾ.20: ಮಲ್ಪೆ ಬಂದರು ಪ್ರದೇಶದಲ್ಲಿ ಮಾ.18ರಂದು ನಡೆದ ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಹಲ್ಲೆಯ ಘಟನೆಗೆ ಸಂಬಂಧಿಸಿದಂತೆ ಆದ ಬೆಳವಣಿಗೆಯಿಂದ ಮೀನುಗಾರರು ಹಾಗೂ ಸಮುದಾಯಕ್ಕೆ ಕಳಂಕ ಬರುವಂತಾಗಿದೆ. ಈ ಬಗ್ಗೆ ಮೀನುಗಾರಿಕಾ ಬಂದರಿನಲ್ಲಿ ಸ್ವಇಚ್ಛೆಯಿಂದ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಮಾ.22 ರಂದು ಬೆಳಗ್ಗೆ ಸಮಸ್ತ ಮೀನುಗಾರರಿಂದ ಪ್ರತಿಭಟನೆ ನಡೆಯಲಿದೆ. ಅಲ್ಲದೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯನ್ನೂ ಸಲ್ಲಿಸಲಾಗುವುದು ಎಂದು ಮಲ್ಪೆ ಮೀನುಗಾರರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ಮಾ.18ರಂದು ಮುಂಜಾನೆ ಮಲ್ಪೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ, ಸಾಮಾನ್ಯವಾಗಿ ಮಾಡು ವಂತೆ ನ್ಯಾಯ ಪಂಚಾಯಿತಿ ಮುಖಾಂತರ ಪರಿಹಾರ ಮಾಡಿಕೊಂಡಿದ್ದು, ಬಳಿಕ ಮಲ್ಪೆಯ ಠಾಣಾಧಿಕಾರಿ ಗಳ ಗಮನಕ್ಕೆ ತಂದು 2 ಪಾರ್ಟಿಯವರು ಹಾಗೂ ಮೀನುಗಾರ ಮುಖಂಡರ ಸಮಕ್ಷಮದಲ್ಲಿ ರಾಜಿ ಮಾಡಲಾಗಿತ್ತು. ಇಲ್ಲಿ ಎರಡು ಪಾರ್ಟಿಯವರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು. ಠಾಣಾಧಿಕಾರಿಗಳು 2 ಪಾರ್ಟಿಯವರದಿಂದ ತಪ್ಪೊಪ್ಪಿಗೆ ಹಿಂಬರಹ ಬರೆಸಿಕೊಂಡು ಇದನ್ನು ಇತ್ಯರ್ಥಗೊಳಿಸಿದ್ದರು ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದರೆ ಮಾ.19ರಂದು ಅಪರಾಹ್ನ 12:30ರ ಸುಮಾರಿಗೆ ಬೋಟಿನ ಮಾಲಕರನ್ನು ರಾಜಿ ಪಂಚಾಯಿತಿಗೆ ಸಹಿ ಹಾಕಲೆಂದು ಕರೆಸಿ, ಸತ್ಯಾಸತ್ಯತೆಯನ್ನು ಅರಿಯದೇ ಬಂಧಿಸಿದ್ದಾರೆ. ಹಿರಿಯ ಅಧಿಕಾರಿಗಳು ಹಿಂದಿನ ದಿನ ಠಾಣಾಧಿಕಾರಿಗಳು ಮಾಡಿರುವ ರಾಜಿ ಪಂಚಾಯಿತಿಗೆ ಮಾನ್ಯತೆ ನೀಡದೇ 4 ಜನರ ಮೇಲೆ ಕೇಸು ದಾಖಲಿಸಿ ಜಾಮೀನು ರಹಿತ ಎಫ್‌ಐಆರ್ ಹಾಕಿ ಬಂಧಿಸಿದ್ದಾರೆ. ಇದು ಮೇಲ್ನೋಟಕ್ಕೆ ಯಾರದೊ ಒತ್ತಡಕ್ಕೆ ಒಳಗಾಗಿ ಬಡ ಮೀನುಗಾರರನ್ನು ಬಂಧಿಸಿರುವಂತೆ ಕಾಣುತ್ತದೆ ಎಂದು ಅಧ್ಯಕ್ಷರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಮಲ್ಪೆ ಮೀನುಗಾರರ ಸಂಘ ಈ ಘಟನೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ಆದರೆ ಸ್ಥಳೀಯವಾಗಿ ನಮ್ಮ ಮೀನುಗಾರರ ಸಂಘಟನೆಗಳು ಎಲ್ಲರಿಗೂ ಸೌಹಾರ್ದಯುತವಾಗಿ ನ್ಯಾಯ ಕೊಡುವಲ್ಲಿ ಬದ್ಧವಾಗಿವೆ. ಅಲ್ಲದೇ ಈ ಘಟನೆಯಿಂದ ನಮ್ಮ ಮೀನುಗಾರ ಸಮುದಾಯಕ್ಕೆ ಕಳಂಕ ಬಂದಿದೆ. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಮಾ.22ರಂದು ಸ್ವಇಚ್ಛೆಯಿಂದ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಬೆಳಗ್ಗೆ 9 ಗಂಟೆಗೆ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರರ ಪ್ರತಿಭಟನೆ ನಡೆಯಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಘಟನೆಗೆ ವಿವರಣೆ: ಮಾ.18ರ ಮುಂಜಾನೆ ಬಂದರಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ಯಲ್ಲಿ ವಿವರಿಸಿರುವ ದಯಾನಂದ ಸುವರ್ಣ, ಅಂದು ಆರಾಧನಾ ಬೋಟಿನ ಮೀನು ಖಾಲಿ ಮಾಡುವ ಸಂದರ್ಭ ಮೀನು ಹೊರುವ ಮಹಿಳೆ ಒಂದು ಬುಟ್ಟಿ ಬೆಲೆಬಾಳುವ ಸಿಗಡಿ ಮೀನನ್ನು (ಸುಮಾರು 20ಕೆ.ಜಿ.-10,000ರೂ.ಮೌಲ್ಯದ) ಕದ್ದೋದ್ದಿದ್ದಾರೆ. ಈ ಬಗ್ಗೆ ಸಾರ್ವಜನಿಕವಾಗಿ ಸೇರಿದ ಜನರು ಆಕ್ರೋಶಿತರಾಗಿ ಈ ಘಟನೆ ನಡೆದಿದೆ. ಈ ಘಟನೆ ಉದ್ದೇಶಪೂರ್ವಕವಾಗಿರದೇ ಕ್ಷಣಿಕ ಸಿಟ್ಟಿನಿಂದ ನಡೆದ ಘಟನೆ ಯಾಗಿದೆ. ಬಳಿಕ ಅವರನ್ನು ಸಮಾಧಾನ ಪಡಿಸಿ ಕಳುಹಿಸಲಾಗಿತ್ತು ಎಂದಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ಮಕ್ಸ್ಯಕ್ಷಾಮದಿಂದ ಮೀನುಗಾರಿಕೆ ಕುಂಠಿತಗೊಂಡಿದ್ದು, ಬೋಟಿನವರು ಲಕ್ಷಾಂತರ ರೂ.ನಷ್ಟ ಅನುಭವಿಸಿಕೊಂಡು ಬರುತಿದ್ದಾರೆ. ಈ ಮಧ್ಯೆ ಬಹುಕಾಲದಿಂದ ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಸಲಕರಣೆಗಳಾದ ಬೋಟಿನ ಪ್ಯಾನ್, ಬ್ಯಾಟರಿ, ಜಿಪಿಎಸ್, ವೈಯರ್‌ಲೆಸ್, ಫಿಶ್‌ ಪೈಂಡರ್, ಬಲೆ ಸಾಮಗ್ರಿಗಳು ಹಾಗೂ ಮೀನುಗಳನ್ನು ಕಳ್ಳತನ ಮಾಡಿದ ಬಗ್ಗೆ ಸಾಕಷ್ಟು ದೂರುಗಳನ್ನು ಠಾಣೆಗೆ ನೀಡಿದ್ದರೂ ಯಾವುದೇ ನ್ಯಾಯ ಸಿಕ್ಕಿಲ್ಲ.

ಅಲ್ಲದೇ ಬಂದರು ನಿರ್ವಹಣೆಯ ಜವಾಬ್ದಾರಿ ವಹಿಸಿದವರು 30 ಮಂದಿ ಕಾವಲು ಸಿಬ್ಬಂದಿಗಳನ್ನು, ಎಲ್ಲಾ ಕಡೆಗಳಲ್ಲಿ ಸಿಸಿಕ್ಯಾಮರಾ ಅಳವಡಿಸಬೇಕೆಂದು ನಿಯಮವಿದ್ದರೂ, ಈ ಬಗ್ಗೆ ಎಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂಬ ಆಕ್ರೋಶ ಮೀನುಗಾರರಿಗೆ ಇತ್ತು ಎಂದೂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News