ಮಲ್ಪೆಯಲ್ಲಿ ಮಹಿಳೆಯ ಮೇಲಿನ ಗುಂಪು ಹಲ್ಲೆ: ಸಿಪಿಎಂ ಖಂಡನೆ

ಉಡುಪಿ, ಮಾ.20: ಮಲ್ಪೆ ಬಂದರು ಪ್ರದೇಶದಲ್ಲಿ ಮೀನು ಕಳವು ಮಾಡಿದ ಆರೋಪದ ಮೇಲೆ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿ ಸಾರ್ವಜನಿಕವಾಗಿ ಹಲ್ಲೆ ಮಾಡಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಉಡುಪಿ ಜಿಲ್ಲಾ ಸಮಿತಿ ಬಲವಾಗಿ ಖಂಡಿಸಿದೆ.
ಹಲ್ಲೆ ಮಾಡಿದವರ ಮೇಲೆ ಕಠಿಣಕ್ರಮ ಕೈಗೊಳ್ಳುವಂತೆ ಪಕ್ಷ ಒತ್ತಾಯಿಸಿದೆ. ಆರೋಪಗಳೇನೆ ಇದ್ದರೂ ತಪ್ಪಿತಸ್ಥ ಮಹಿಳೆಯನ್ನು ಕಾನೂನು ಕ್ರಮಕ್ಕಾಗಿ ಪೊಲೀಸರಿಗೆ ಒಪ್ಪಿಸಬಹುದಿತ್ತು. ತಾವೇ ಕಾನೂನು ಕೈಗೆತ್ತಿಕೊಂಡು ಪೊಲೀಸರಂತೆ ಶಿಕ್ಷೆ ನೀಡುವುದು ನಿಲ್ಲಬೇಕಾಗಿದೆ.ಈ ಹಿಂದೆ ಜಿಲ್ಲೆಯಲ್ಲಿ ನಡೆದ ಹಾಜಬ್ಬ ಹಸನಬ್ಬ ಗೋಸಾಗಾಟ ಆರೋಪದಲ್ಲಿ ಸಾರ್ವಜನಿಕ ಥಳಿತ ವನ್ನು ಇದು ನೆನಪಿಸುವಂತಿದೆ ಎಂದು ಸಿಪಿಎಂ ಪತಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಈ ರೀತಿಯ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತವು ಹಲ್ಲೆ ಮಾಡಿದವರ ಮೇಲೆ ಹಾಗೂ ಇದನ್ನು ಪ್ರೋತ್ಸಾಹಿಸಿದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸಿಪಿಐ(ಎಂ) ಪಕ್ಷ ಒತ್ತಾಯಿಸಿದೆ. ಅಲ್ಲದೇ ಬಂದರು ಪ್ರದೇಶದಲ್ಲಿ ಇತರ ಜಿಲ್ಲೆಯಿಂದ ಬಂದು ಕೆಲಸ ಮಾಡುವ ಮಹಿಳೆಯರಿಗೆ ಸೂಕ್ತ ಭದ್ರತೆಯ ಭರವಸೆ ನೀಡಬೇಕಾಗಿ ಪಕ್ಷ ಒತ್ತಾಯಿಸಿದೆ.
ಇಂಥ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದರೂ, ಶಾಸಕರು ಮತ್ತು ಸಂಸದರು ಮೌನವಾಗಿರು ವುದನ್ನು ಎಂದು ಸಿಪಿಎಂ ಪಕ್ಷ ಪ್ರಶ್ನಿಸುತ್ತದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ.
ಯುವಕಾಂಗ್ರೆಸ್ ಖಂಡನೆ: ಮಲ್ಪೆಯಲ್ಲಿ ಮೀನು ಕದ್ದ ಆರೋಪ ಹೊರಿಸಿ ದಲಿತ ಮಹಿಳೆಯೋರ್ವರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಅಮಾನುಷ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದು ಉಡುಪಿ ಜಿಲ್ಲಾ ಯುವಕಾಂಗ್ರೆಸ್ ಮಾಜಿ ಅಧ್ಯಕ್ಷ ದೀಪಕ್ ಕೋಟ್ಯಾನ್ ಹೇಳಿದ್ದಾರೆ.
ಉಡುಪಿಯಂತಹ ಸುಶಿಕ್ಷಿತ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿರುವುದು ಅತ್ಯಂತ ಕಳವಳಕಾರಿಯಾಗಿದ್ದು ಮಾನವೀಯತೆ ಮರೆತು ಮೃಗಗಳಂತೆ ಹಲ್ಲೆ ಮಾಡಿದ್ದಾರೆ ಎಂದಿರುವ ಕೋಟ್ಯಾನ್, ದೇಶದ ಯಾವುದೇ ಮೂಲೆಯಲ್ಲಿ ಏನೇ ಘಟನೆಗಳಾದರೂ ತಕ್ಷಣ ಪತ್ರಿಕಾ ಹೇಳಿಕೆ ನೀಡುವ ಉಡುಪಿಯ ಶಾಸಕರು ತನ್ನದೇ ಕ್ಷೇತ್ರದಲ್ಲಿ ನಡೆದಿರುವ ಅಮಾನವೀಯ ಘಟನೆ ಬಗ್ಗೆ ಮೌನ ತಾಳಿರುವುದು ಸಂಶಯಕ್ಕೆ ಎಡೆ ಮಾಡಿ ಕೊಟ್ಟಿದೆ ಎಂದಿದ್ದಾರೆ.
ಮಾನಿನಿ ಮಹಿಳಾ ಒಕ್ಕೂಟ ಖಂಡನೆ: ಮೀನು ಕದ್ದ ಆರೋಪದಲ್ಲಿ ದಲಿತ ಮಹಿಳೆಯನ್ನು ಅಮಾನುಷ ರೀತಿಯಲ್ಲಿ ಮರಕ್ಕೆ ಕಟ್ಟಿ ಥಳಿಸಿದ ಘಟನೆ ಹಾಗೂ ಅಲ್ಲಿ ನೆರೆದ ಜನರ ಮನೋಸ್ಥಿತಿಯು ಅನಾಗರಿಕ ಸಮಾಜಕ್ಕೆ ಹಿಡಿದ ಕನ್ನಡಿಯಾಗಿದೆ. ಒರ್ವ ಮಹಿಳೆಯ ಮೇಲೆ ಹಲ್ಲೆ ನಡೆದಾಗ ಅಲ್ಲಿ ನೆರೆದ ಯಾರೊ ಬ್ಬರೂ ಸಂತ್ರಸ್ತ ಮಹಿಳೆಯ ನೆರವಿಗೆ ಬಾರದೆ ಇರುವುದು ನಾಚಿಕೆ ಗೇಡಿನ ವಿಷಯ ಎಂದು ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ಸ್ಥಾಪಕಾಧ್ಯಕ್ಷೆ ಹಾಗೂ ಮಾನಿನಿ ರಾಜ್ಯ ಮಹಿಳಾ ಒಕ್ಕೂಟದ ಜಾನೆಟ್ ಬಾರ್ಬೋಜಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ ತಿಂಗಳು ಮಹಿಳೆಯರಿಗಾಗಿ ಮೀಸಲಿಟ್ಟು ಎಲ್ಲೆಡೆ ಮಹಿಳಾ ದಿನಾಚರಣೆ ಆಚರಿಸುವ ಸಂದರ್ಭದಲ್ಲಿ ಮಹಿಳೆಯೇ ಇತರರೊಂದಿಗೆ ಸೇರಿ ಹಲ್ಲೆ ನಡೆಸಿದ್ದು ಸಮಾಜವೇ ತಲೆತಗ್ಗಿಸುವಂತಾಗಿದೆ. ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆಯಾಗಲಿ,ಮುಂದೆ ಎಂದೂ ಇಂತಹ ಅಮಾನುಷ, ಕೀಳು ಮಟ್ಟದ ಘಟನೆಗಳು ನಡೆಯದಿರಲು ಸಮಾಜವು ತನ್ನ ಜವಾಬ್ದಾರಿಯನ್ನು ಮೆರೆಯಲಿ ಎಂದು ಅವರು ಹೇಳಿದ್ದಾರೆ.
ಖಂಡನೆ: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿರುವ ಘಟನೆಯನ್ನು ಕಾಪು ಬ್ಲಾಕ್ ಕಾಂಗ್ರೆಸ್ ಉತ್ತರ ವಲಯ ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ತೀವ್ರವಾಗಿ ಖಂಡಿಸಿದ್ದಾರೆ.
ಈ ಘಟನೆ ಉಡುಪಿ ಜಿಲ್ಲೆಗೆ ಮಾಡಿದ ಅವಮಾನವಾಗಿದ್ದು, ಪೊಲೀಸ್ ಇಲಾಖೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.