ಕೋಡಿ ಬ್ಯಾರೀಸ್ ನಲ್ಲಿ ರೇಂಜರ್ಸ್ ರೋವರ್ಸ್ ಘಟಕ ಉದ್ಘಾಟನೆ

ಕುಂದಾಪುರ, ಮಾ.20: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ರೋವರ್ಸ್ ರೇಂಜರ್ಸ್ ಘಟಕವನ್ನು ಭಾರತ್ ಸ್ಕೌಟ್ ಎಂಡ್ ಗೈಡ್ಸ್ ನ ಕರ್ನಾಟಕದ ಮುಖ್ಯ ಆಯುಕ್ತ ಹಾಗೂ ಮಾಜಿ ಸಚಿವರಾದ ಪಿಜಿಆರ್ ಸಿಂಧ್ಯಾ ಅವರು ಗುರುವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪ್ರಕೃತಿಯ ಅಧ್ಯಯನವೇ ಈ ಕ್ಯಾಂಪಿನ ಮುಖ್ಯ ಉದ್ದೇಶವಾಗಿದೆ. ನಿರಂತರವಾಗಿ ಪರಿಸರ ಪ್ರಜ್ಞೆಯನ್ನು ಮೂಡಿಸುತ್ತಾ ಶಿಕ್ಷಣ ನೀಡುತ್ತಿರುವ ಈ ಪರಿಸರದಲ್ಲಿ ಅಧ್ಯಯನ ಮಾಡುವ ಸದಾವಕಾಶ ನಿಮಗೆ ಸಿಕ್ಕಿದೆ. ಕರ್ನಾಟಕವನ್ನು ಚಿನ್ನದ ನಾಡನ್ನಾಗಿ, ಗಂಧದ ಬೀಡನ್ನಾಗಿ ಮತ್ತು ಸದಾಕಾಲ ನೀರಿರುವ ನಾಡನ್ನಾಗಿ ಕಟ್ಟುತ್ತೇವೆ ಎಂಬ ಆಶಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ನೀವೆಲ್ಲರೂ ವಿಶಾಲ ಹೃದಯವಂತರಾಗಿರಿ ಎಂದು ಹಾರೈಸಿದರು.
ನಿರಂತರವಾಗಿ 38 ತಿಂಗಳುಗಳಿಂದ ಸ್ವಚ್ಛ ಹಸಿರು ಕೋಡಿ ಅಭಿಯಾನದಡಿ ಪ್ಲಾಸ್ಟಿಕ್ ಮುಕ್ತ ಕಡಲ ಕಡಲ ತೀರ ತೀರವನ್ನಾಗಿ ಮಾರ್ಪಡಿಸುವಲ್ಲಿ ನಿರಂತರವಾಗಿ ಶ್ರಮಿಸುವುದರ ಮೂಲಕ ಎಲ್ಲರಿಗೂ ಮಾದರಿಯಾಗಿರುವ ಬ್ಯಾರೀಸ್ ಸಂಸ್ಥೆಗೆ ಭಾರತ್ ಸೌಟ್ ಅಂಡ್ ಗೈಡ್ಸ್ ಘಟಕದ ವತಿಯಿಂದ ವಿಶೇಷ ಅಭಿನಂದನೆ ಸಲ್ಲಿಸಿದರು.
ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತುಗಳನ್ನಾನಾಡಿದ ಬ್ಯಾರೀಸ್ ವಿಶ್ವಸ್ಥ ಮಂಡಳಿಯ ಸದಸ್ಯರಾದ ಡಾ. ಆಸಿಫ್ ಬ್ಯಾರಿ ಅವರು, "ನಮ್ಮ ಸಂಸ್ಥೆ ಈಗಾಗಲೇ ಸ್ಕೌಟ್ಸ್ ಎಂಡ್ ಗೈಡ್ಸ್ ಘಟಕವನ್ನು ಹೊಂದಿದೆ. ಇಂದು ಕರ್ನಾಟಕದ ಸ್ಕೌಟ್ಸ್ ಎಂಡ್ ಗೈಡ್ಸ್ ಇದರ ಮುಖ್ಯ ಆಯುಕ್ತರಾದ ಪಿಜಿಆರ್ ಸಿಂಧ್ಯಾ ಇವರಿಂದ ರೋವರ್ಸ್ ರೇಂಜರ್ಸ್ ಘಟಕವು ಉದ್ಘಾಟನೆಗೊಂಡಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಚಾರ. ಈ ಘಟಕದ ಪ್ರಯೋಜನ ಪಡೆದು ಮುಂದಿನ ದಿನಗಳಲ್ಲಿ ಅತ್ಯುತ್ತಮ ಪ್ರಜೆಗಳಾಗಿ ಉತ್ತಮ ಚಾರಿತ್ರ್ಯ ಮತ್ತು ಬೌದ್ಧಿಕ ಸಾಮರ್ಥ್ಯಗಳನ್ನು ಬೆಳೆಸಿಕೊಂಡು ಜೀವನೋತ್ಸಾಹವನ್ನು ಹೆಚ್ಚಿಸುವಂತಹ ಕಾರ್ಯಗಳಲ್ಲಿ ತೊಡಗಿ" ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ರೀಫ್ ವಾಚ್ ಸಂಸ್ಥೆಯ ವೆಂಕಟೇಶ್ ಶೇರಿಗಾರ್ ಅವರು ಕಡಲಾಮೆಗಳ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ ಎಂ ಅಬ್ದುಲ್ ರಹ್ಮಾನ್ ಬ್ಯಾರಿ ಅವರು, "ಯುವಜನಾಂಗ ಮುಂದಿನ ದಿನಗಳಲ್ಲಿ ಜವಾಬ್ದಾರಿಯುತ ನಾಗರಿಕರಾಗಿ, ತಮ್ಮ ದೈಹಿಕ ಬೌದ್ಧಿಕ ಭಾವನಾತ್ಮಕ ಸಾಮಾಜಿಕ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನ, ಡೆಪ್ಯೂಟಿ ಆರ್‌ಎಫ್‌ಒ ಗುರುರಾಜ್, ಸ್ಕೌಟ್ಸ್ ನ ಲೀಡರ್ ಪ್ರವೀಣ್, ಭಾರತ್ ಸ್ಕೌಟ್ಸ್ ಎಂಡ್ ಗೈಡ್ಸ್ ನ ಜಿಲ್ಲಾ ಕಾರ್ಯದರ್ಶಿ ಆನಂದ ಅಡಿಗ ಉಪಸ್ಥಿತರಿದ್ದರು.
ಬ್ಯಾರೀಸ್ ಬಿಎಡ್ ಕಾಲೇಜ್ ನ ಪ್ರಾಂಶುಪಾಲ ಸಿದ್ಧಪ್ಪ ಕೆ ಎಸ್, ಬ್ಯಾರೀಸ್ ಪದವಿ ಕಾಲೇಜ್ ನ ಪ್ರಾಂಶುಪಾಲೆ ಶಬೀನಾ, ಬ್ಯಾರೀಸ್ ಡಿ ಎಡ್ ಕಾಲೇಜ್ ನ ಪ್ರಾಂಶುಪಾಲ ಡಾ. ಫಿರ್ದೌಸ್, ಬ್ಯಾರೀಸ್ ಪಿಯು ಕಾಲೇಜ್ ಹಾಗೂ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ, ಶೈಕ್ಷಣಿಕ ವಿಭಾಗದ ಮುಖ್ಯಸ್ಥೆ ಡಾ. ಪೂರ್ಣಿಮಾ ಶೆಟ್ಟಿ, ಬ್ಯಾರೀಸ್ ಬಿ ಎಡ್ ಕಾಲೇಜ್ ನ ಉಪ ಪ್ರಾಂಶುಪಾಲ ಹಾಗೂ ದಾಖಲಾತಿ ಅಧಿಕಾರಿ ಪ್ರವೀಣ್ ಕುಮಾರ್ ಕೆ ಪಿ , ರೇಂಜರ್ಸ್ ರೋವರ್ಸ್ ನ ಟ್ರೈನರ್ ಗಳಾದ ಶ್ರುತಿ, ಗೌರೀಶ್ ಶೆಟ್ಟಿ, ಶ್ರೀಲೇಖ ವೇದಿಕೆಯಲ್ಲಿದ್ದರು.
ಈ ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಊರಿನ ಗಣ್ಯರು, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಇಂಗ್ಲಿಷ್ ಉಪನ್ಯಾಸಕಿ ಪ್ರಿಯಾ ದೇಗೊ ಕಾರ್ಯಕ್ರಮ ನಿರೂಪಣೆ ಮಾಡಿದರು. ಡಾ. ಫಿರ್ದೌ ಸ್ ಸ್ವಾಗತಿಸಿದರು. ಮನಃಶಾಸ್ತ್ರ ಉಪನ್ಯಾಸಕಿ ಲಮಿಸ್ ಲರೈಬ್ ವಂದಿಸಿದರು.
ಇದೇ ಸಂದರ್ಭದಲ್ಲಿ ಪಿ ಜಿ ಆರ್ ಸಿಂಧ್ಯಾ , ಸಂಸ್ಥೆಗೆ ಭೇಟಿ ನೀಡಿದ್ದ ವಿದ್ಯಾರ್ಥಿಗಳು ಹಾಗೂ ರೇಂಜರ್ಸ್ ಅಂಡ್ ರೋವರ್ಸ್ ಸಿಬ್ಬಂದಿಗಳು ಕೋಡಿಯ ಪರಿಸರ ಸ್ನೇಹಿ ಮಸೀದಿಗೆ ಭೇಟಿ ನೀಡಿದರು. ಮಸೀದಿಯ ವಿಶಿಷ್ಟ, ಆಕರ್ಷಕ ವಿನ್ಯಾಸ, ಸೋಲಾರ್ ಹಾಗೂ ಗಾಳಿಯ ಹೈಬ್ರಿಡ್ ವಿದ್ಯುತ್ ಬಳಕೆ ಮೂಲಕ ನೆಟ್ ಝೀರೋ (ಶೂನ್ಯ ಇಂಗಾಲ ಹೊರಸೂಸುವ) ಪ್ರಪ್ರಥಮ ಆರಾಧನಾಲಯವಾಗಿ ನಿರ್ಮಿಸಿರುವುದನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ಪರಿಸರ ಸ್ನೇಹಿ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದು ಸಿಂಧ್ಯಾ ಅವರು ಕರೆ ನೀಡಿದರು.

