ನಬಾರ್ಡ್ ಸಹಕಾರದೊಂದಿಗೆ ನೇಕಾರ ಮಹಿಳೆಯರಿಗೆ ಹೆಚ್ಚಿನ ತರಬೇತಿ: ಡಿಸಿ ಡಾ.ವಿದ್ಯಾ ಕುಮಾರಿ

Update: 2023-08-07 13:01 GMT

ಉಡುಪಿ, ಆ.7: ಜಿಲ್ಲಾಧಿಕಾರಿ ಕಚೇರಿಯ ಮಾನವ ಸಂಪನ್ಮೂಲ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಈ ವೃತ್ತಿಯನ್ನು ಮುಂದುವರೆಸಿ ಕೊಂಡು ಹೋಗಲು ಜಿಲ್ಲಾಡಳಿತದಿಂದ ಸಹಕಾರ ನೀಡುವ ಕುರಿತು ಚರ್ಚೆಗಳು ನಡೆಯು ತ್ತಿವೆ. ಅಲ್ಲದೆ ಈ ಮಹಿಳೆಯರಿಗೆ ಹೆಚ್ಚಿನ ತರಬೇತಿ ನೀಡುವ ಬಗ್ಗೆ ಸಹಕಾರ ನೀಡಲು ನಬಾರ್ಡ್ ಕೂಡ ಮುಂದೆ ಬಂದಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಹೇಳಿದ್ದಾರೆ.

ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ, ಉಡುಪಿ, ತಾಳಿಪಾಡಿ, ಶಿವಳ್ಳಿ, ಬ್ರಹ್ಮಾವರ, ಪಡುಪಣಂಬೂರು, ಮಂಗಳೂರು, ಬಸ್ರೂರು ಮತ್ತು ಮಿಜಾರು ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘಗಳ ಸಹಭಾಗಿತ್ವದಲ್ಲಿ ಸೋಮವಾರ ಉಡುಪಿ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಆಯೋಜಿಸಲಾದ ‘ರಾಷ್ಟ್ರೀಯ ಕೈಮಗ್ಗ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ನಶಿಸಿ ಹೋಗುತ್ತಿರುವ ಕೈಮಗ್ಗ ನೇಕಾರಿಕೆಯನ್ನು ಉಳಿಸಿ ಪುನಶ್ಚೇತನ ಗೊಳಿಸುವ ಬಗ್ಗೆ ಪದ್ಮಶಾಲಿ ಸಮುದಾಯ ಪಣ ತೊಟ್ಟಿದ್ದು, ಇದಕ್ಕೆ ಜಿಲ್ಲಾಡಳಿತ ಸಂಪೂರ್ಣ ನೆರವು ನೀಡಲಿದೆ. ಕೈಮಗ್ಗ ಪುನಶ್ಚೇತನಕ್ಕೆ ಸರಕಾರದ ಹಲವು ಯೋಜನೆ ಗಳು ಸೌಲಭ್ಯಗಳಿದ್ದು, ನೇಕಾರ ಸಮಾಜದ ಮಹಿಳೆಯರನ್ನು ಗುರುತಿಸಿ ಸವಲತ್ತು, ತರಬೇತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ನಿರಂತರ ಸಹಕಾರ ನೀಡಲಿದೆ ಎಂದರು.

ಉಡುಪಿ ಸೀರೆ ಜಿಲ್ಲೆಯ ಹೆಮ್ಮೆ ಹಾಗೂ ಗೌರವದ ಪ್ರತೀಕ. ಈ ಸೀರೆಯನ್ನು ಉಳಿಸುವುದು ನಮ್ಮೆಲರ ಜವಾಬ್ದಾರಿ ಯಾಗಿದೆ. ಹಿರಿಯರ ಕೈಮಗ್ಗ ಎಂಬ ಈ ಅದ್ಭುತ ಕಲೆಯನ್ನು ಮುಂದಿನ ಪೀಳಿಗೆ ಕೊಡಬೇಕಾಗಿದೆ. ಅಲ್ಲದೆ ಈ ಸೀರೆ ವಿಶ್ವಾದ್ಯಂತ ಬಳಕೆ ಆಗಬೇಕು. ಆ ಮೂಲಕ ಇದರ ಮಹತ್ವ ಹಾಗೂ ಘನತೆ ಎಲ್ಲರಿಗೂ ಗೊತ್ತಾಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಲದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಕೈಮಗ್ಗದ ಸೀರೆಗೆ ಹಿಂದೆ ಇದ್ದ ಗೌರವ ಮತ್ತೆ ಸಿಗುವಂತೆ ಆಗಬೇಕು. ಆ ನಿಟ್ಟಿನಲ್ಲಿ ಪಾರಂಪರಿಕ, ಶ್ರೀಮಂತ ಕಸುಬು ಆಗಿರುವ ಕೈಮಗ್ಗ ಉತ್ಪನ್ನಗಳ ಪುನಶ್ಚೇತನಕ್ಕೆ ಎಲ್ಲರು ಒಂದಾಗಿ ಕೈಜೋಡಿಸಬೇಕು ಎಂದು ಹೇಳಿದರು.

ರಾಜ್ಯ ನೇಕಾರ ಸಮುದಾಯದ ಒಕ್ಕೂಟ ಅಧ್ಯಕ್ಷ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಉಡುಪಿ ಪ್ರಾಥಮಿಕ ನೇಕಾರರ ಸಹಕಾರ ಸಂಘದ ಬ್ಯಾಂಕಿಂಗ್ ಸೇವೆ ಮತ್ತು ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಯಿತು.

ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಸಂಸದ ಕೆ.ಸಿ.ಕೊಂಡಯ್ಯ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಕೈಮಗ್ಗ ದಿನಾಚರಣೆ ಆಯೋಜನಾ ಸಮಿತಿ ಗೌರವಾಧ್ಯಕ್ಷ ಡಾ.ಜಗದೀಶ್ ಶೆಟ್ಟಿ ಆತ್ರಾಡಿ, ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಎಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ರಾಜೇಶ್ ರಾವ್ ಪಾಂಗಳ, ಅಶೋಕ್ ಕುಮಾರ್ ಶೆಟ್ಟಿ , ಜವಳಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಶಿವಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ರ್ಪೂಮಾ, ನಬಾರ್ಡ್ ಸಂಗೀತಾ ಕರ್ತ, ಸಹಕಾರ ಸಂಘಗಳ ಉಪ ನಿಬಂಧಕ ಅರುಣ್ ಕುಮಾರ್ ಎಸ್.ವಿ., ನಗರಸಭೆ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಪ್ರಭಾಕರ್ ಪೂಜಾರಿ, ಲಯನ್ಸ್ ಜಿಲ್ಲಾ ಗವರ್ನರ್ ನೇರಿ ಕರ್ನೇಲಿಯೋ, ಪ್ರಭಾಶಂಕರ್ ಕಿನ್ನಿಮೂಲ್ಕಿ, ನೇಕಾರ ಸೇವಾ ಸಹಕಾರ ಸಂಘದ ಪ್ರಮುಖರಾದ ದಿನೇಶ್ ಕುಮಾರ್, ಶಶಿಕಾಂತ್, ಸುರೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಪದ್ಮಶಾಲಿ ನೇಕಾರ ಪ್ರತಿಷ್ಠಾನ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಸ್ವಾಗತಿಸಿದರು. ಪ್ರತಿಷ್ಠಾನದ ಗೌರವ ಸಲಹೆಗಾರ ವಿಶ್ವನಾಥ ಶೆಟ್ಟಿಗಾರ್ ದೇರೆಬೈಲು ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಮಂಜುನಾಥ್ ಮಣಿಪಾಲ ಕಾರ್ಯಕ್ರಮ ನಿರೂಪಿಸಿದರು.

‘25 ಮಹಿಳೆಯರ ನಾಲ್ಕು ತಿಂಗಳ ತರಬೇತಿಗಾಗಿ ಜಿಲ್ಲಾಡಳಿತವು ಇಲಾಖೆ ಯೊಂದರ ನಿಧಿಯಿಂದ 15ಲಕ್ಷ ರೂ. ನೀಡಿತ್ತು. ಅದೇ ರೀತಿ ಹೆಣ್ಣು ಮಕ್ಕಳ ಇನ್ನೊಂದು ತಂಡದ ತರಬೇತಿಗೆ ಸಿಆರ್‌ಎಸ್ ಫಂಡ್‌ಗೆ ಪ್ರಯತ್ನ ಮಾಡಲಾಗು ತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ನೇಕಾರರ ಉತ್ಪನ್ನಗಳ ಮಾರಾಟ ಮಳಿಗೆ ಒದಗಿಸಲು ಪ್ರಯತ್ನ ಮಾಡಲಾಗುವುದು’

-ಡಾ.ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News