ಅರ್ಧದಲ್ಲೇ ನಿಂತ ಪರ್ಕಳ ಕೆರೆ ಅಭಿವೃದ್ಧಿ ಕಾಮಗಾರಿ

ಉಡುಪಿ, ಎ.4: ಉಡುಪಿ ನಗರಸಭಾ ವ್ಯಾಪ್ತಿಯ ಮಣಿಪಾಲ ಸಮೀಪ ದಲ್ಲಿರುವ ಪರ್ಕಳ ಮಹಾ ಲಿಂಗೇಶ್ವರ ಮಹಾಗಣಪತಿ ಮಹಿಷಮರ್ದಿನಿ ದೇವಸ್ಥಾನದ ಎದುರಿಗಿರುವ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಇದೀಗ ಗ್ರಹಣ ಹಿಡಿದಿದೆ. ಕಾಮಗಾರಿ ಅರ್ಧದಲ್ಲೇ ನಿಂತಿದೆ.
ಸಣ್ಣ ನೀರಾವರಿ ಇಲಾಖೆ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಈ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿತ್ತು. ಪ್ರಮೋದ್ ಮಧ್ವರಾಜ್ , ಸಿದ್ಧರಾಮಯ್ಯ ಸರಕಾರದಲ್ಲಿ ಸಚಿವರಾಗಿದ್ದಾಗ ಮುತವರ್ಜಿ ಯಿಂದ 60 ಲಕ್ಷ ರೂ. ಬಿಡುಗಡೆ ಮಾಡಿ ಕಾಮಗಾರಿಯನ್ನು ಆರಂಭಿಸಿದ್ದರು.
ಕಾಮಗಾರಿಯೇನೋ ಉತ್ಸಾಹದಿಂದ ಆರಂಭಗೊಂಡರೂ ಈಗಲೂ ಅದು ಮುಕ್ತಾಯಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇಡೀ ಕಾಮಗಾರಿಗೆ ಗ್ರಹಣ ಹಿಡಿದಂತೆ ಕಂಡುಬರುತ್ತಿದೆ. ಈ ಕೆರೆ ಕಾಮಗಾರಿ ಆರಂಭಗೊಂಡ ನಂತರ ಐದಾರು ಬಾರಿ ಅಲ್ಲಲ್ಲಿ ಕುಸಿದಿದೆ.
ಇತ್ತೀಚೆಗೆ ಉಡುಪಿಯ ಶಾಸಕರು, ಸ್ಥಳೀಯ ನಗರಸಭಾ ಸದಸ್ಯರು, ಜನಪ್ರತಿನಿಧಿಗಳು ಉಡುಪಿಯ ಸಣ್ಣನೀರಾವರಿ ಇಲಾಖೆಯ ಅಧಿಕಾರಿ ಗಳೊಂದಿಗೆ ಇಲ್ಲಿಗೆ ಭೇಟಿ ನೀಡಿ ಕೆರೆಯನ್ನು ವಿವರವಾಗಿ ಪರಿಶೀಲಿ ಸಿದ್ದರು. ಆದರೂ ಕಾಮಗಾರಿ ಮುಂದುವರಿಯುವ ಯಾವುದೇ ಸೂಚನೆ ಇಲ್ಲವಾಗಿದೆ.
ದೇವಸ್ಥಾನದ ಜೀರ್ಣೋದ್ಧಾರ ಇದೇ ಬರುವ ಎಪ್ರಿಲ್ 27ರಿಂದ ಪ್ರಾರಂಭಗೊಳ್ಳಲಿದೆ. ಆದರೆ ಇದೇ ವೇಳೆ ದೇವಸ್ಥಾನದ ಎದುರಿನಲ್ಲಿಯೇ ಇರುವ ಕೆರೆ ಮಾತ್ರ ಅಭಿವೃದ್ಧಿ ಕಾಣದೆ ಹಾಗೆ ಉಳಿದು ಮಣ್ಣು, ಪೊಟ್ಟು ಕಲ್ಲು ತುಂಬಿಸುವ ಡಂಪಿಂಗ್ ಯಾರ್ಡ್ ಆಗಿ ಕಂಡುಬರುತ್ತಿದೆ.
ಕೂಡಲೇ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಿದ್ದೇನೆ ಎಂದ ಉಡುಪಿ ಶಾಸಕರು ಈಗಾಗಲೇ ತಿಳಿಸಿದ್ದರೂ, ಕಾಮಗಾರಿ ಇನ್ನೂ ಕೂಡಾ ಪ್ರಾರಂಭಗೊಂಡಿಲ್ಲ. ಮತ್ತೊಂದು ಮಳೆಗಾಲ ಆರಂಭವಾಗುವ ಮೊದಲಾ ದರೂ ಈ ಕೆರೆ ಅಭಿವೃದ್ಧಿಗೊಳ್ಳುತ್ತದೆಯೇ ಎಂದು ಭಕ್ತರು ಕಾದು ಕುಳಿತಿದ್ದಾರೆ ಎನ್ನುತ್ತಾರೆ ಪರ್ಕಳದ ಸಾಮಾಜಿಕ ಕಾರ್ಯಕರ್ತ ಗಣೇಶ್ ಸರಳೆಬೆಟ್ಟು.
ಸಾರ್ವಜನಿಕರ ಮುತುವರ್ಜಿಯಿಂದ ದೇವಸ್ಥಾನ ಅಭಿವೃದ್ಧಿಗೊಳ್ಳಲು ಕ್ಷಣಗಣನೆ ಪ್ರಾರಂಭಗೊಂಡರೂ ಸರಕಾರದ ಸ್ವಾಮ್ಯಕ್ಕೆ ಒಳಪಟ್ಟ ಈ ಕೆರೆ ಮಾತ್ರ ಅಭಿವೃದ್ಧಿಗೊಳ್ಳುವುದು ಯಾವಾಗ ಎಂಬುದು ಸ್ಥಳೀಯರಿಗೆ ಬಿಡಿಸಲಾಗದ ಒಗಟಾಗಿದೆ. ಹಂತ ಹಂತವಾಗಿ ಹಣ ಬಿಡುಗಡೆಯಾದರೂ ಗುಣಮಟ್ಟದ ಕಾಮಗಾರಿ ಇಲ್ಲಿ ನಡೆದಿಲ್ಲ. ಹೀಗಾಗಿ ಅಲ್ಲಲ್ಲಿ ಕುಸಿಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.