ವಕ್ಫ್ ತಿದ್ದುಪಡಿ ಕಾಯ್ದೆಗೆ ವಿವಿಧ ಮುಸ್ಲಿಮ್ ಸಂಘಟನೆಗಳಿಂದ ಒಕ್ಕೋರಲಿನ ವಿರೋಧ

Update: 2025-04-05 17:18 IST
ವಕ್ಫ್ ತಿದ್ದುಪಡಿ ಕಾಯ್ದೆಗೆ ವಿವಿಧ ಮುಸ್ಲಿಮ್ ಸಂಘಟನೆಗಳಿಂದ ಒಕ್ಕೋರಲಿನ ವಿರೋಧ
  • whatsapp icon

ಉಡುಪಿ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಉಡುಪಿಯಲ್ಲಿ ನಡೆದ ಸಭೆ ಯಲ್ಲಿ ಕೇಂದ್ರ ಸರಕಾರ ಅಂಗೀಕರಿಸಿದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿವಿಧ ಮುಸ್ಲಿಮ್ ಸಂಘಟನೆ ಗಳು ಒಕ್ಕೋರಲಿನಿಂದ ಖಂಡಿಸಿದ್ದು, ಈ ಸಂಬಂಧ ಸಮನ್ವಯ ಸಮಿತಿಯನ್ನು ರಚಿಸಿಕೊಂಡು, ಕಾಯ್ದೆ ವಾಪಾಸ್ಸು ಪಡೆಯುವ ನಿಟ್ಟಿನಲ್ಲಿ ಹೋರಾಟಕ್ಕೆ ಸಜ್ಜಾಗಿವೆ.

ಒಕ್ಕೂಟದ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಸಂಯುಕ್ತ ಸುನ್ನೀ ಜಮಾಅತ್, ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ ಮುಸ್ಲಿಮ್ ಜಮಾತ್, ಜಮಾಅತೇ ಅಹ್ಲೇ ಹದೀಸ್, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ತಬ್ಲಿಗ್ ಜಮಾತ್, ಕಾಂಗ್ರೆಸ್ ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವಿಭಾಗ, ಜಮಿಯ್ಯತುಲ್ ಫಲಾಹ್ ಉಡುಪಿ, ಎಸ್‌ಐಓ, ಎಸ್‌ಎಸ್‌ಎಫ್, ಉಡುಪಿ ಜಿಲ್ಲಾ ಸುನ್ನೀ ಹನಫೀ ಕಮಿಟಿ, ಮುಸ್ಲಿಂ ಬಾಂಧವ್ಯ ವೇದಿಕೆ, ನಮ್ಮ ನಾಡ ಒಕ್ಕೂಟ, ಎಪಿಸಿಆರ್, ಸಾಲಿಡಾರಿಟಿ ಮೂವ್‌ಮೆಂಟ್ ಸಂಘಟನೆಗಳು ಈ ಹೋರಾಟದಲ್ಲಿ ಕೈಜೋಡಿಸಿವೆ.

ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ದರು. ಈ ಕಾಯಿದೆ ಬಗ್ಗೆ ಅರಿವು ಹಾಗೂ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಪ್ರತಿ ಜಮಾತ್ ಮಟ್ಟದಲ್ಲಿ ಮಾಹಿತಿ ಕಾರ್ಯಾ ಗಾರವನ್ನು ಹಮ್ಮಿಕೊಳ್ಳಬೇಕು. ಅದರೊಂದಿಗೆ ವಕ್ಫ್ ಆಸ್ತಿಯ ಕುರಿತ ಅಪಪ್ರಚಾರ ಹಾಗೂ ತಪ್ಪು ಮಾಹಿತಿಗಳಿಗೆ ಸರಿಯಾದ ಉತ್ತರ ಕೊಡಬೇಕು. ಮುಸ್ಲಿಮ್ ಸಮುದಾಯ ಮಾತ್ರವಲ್ಲ ಜಾತ್ಯತೀತ ಮನೋಭಾವದ ಎಲ್ಲ ಸಮುದಾಯವನ್ನು ಈ ಹೋರಾಟದಲ್ಲಿ ಸೇರಿಸಿಕೊಂಡು ಮುನ್ನಡೆಯಬೇಕು. ಇದರೊಂದಿಗೆ ಕಾನೂನು ಹೋರಾಟ ಕೂಡ ಮಾಡಬೇಕು ಎಂಬ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾದವು.

ಈ ಹಿನ್ನೆಲೆಯಲ್ಲಿ ಈ ಕರಾಳ ಕಾಯಿದೆ ವಿರುದ್ಧ ಹೋರಾಟಕ್ಕೆ ಸಜ್ಜಾಗಲು ಎಲ್ಲ ಸಂಘಟನೆಗಳನ್ನು ಒಳ ಗೊಂಡ ಸಮನ್ವಯ ಸಮಿತಿ ರಚಿಸುವ ಬಗ್ಗೆ ಸಭೆಯಲ್ಲಿ ಒಮ್ಮತದ ನಿರ್ಧಾರವನ್ನು ಮಾಡಲಾಯಿತು. ಅದಕ್ಕೆ ವಿವಿಧ ಸಂಘಟನೆಗಳ ಪ್ರಮುಖರನ್ನು ನೇಮಕ ಮಾಡಲಾಯಿತು. ಮುಂದೆ ಸಮಿತಿಯ ಸಭೆ ಕರೆದು, ಸಂಚಾಲಕರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಉಡುಪಿ ಜಿಲ್ಲಾ ಸಂಯುಕ್ತ ಸುನ್ನೀ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ನೇಜಾರು, ಮುಸ್ಲಿಮ್ ಬಾಂಧವ್ಯ ವೇದಿಕೆಯ ಮುಷ್ತಾಕ್ ಹೆನ್ನಾಬೈಲ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್, ಮಾಜಿ ಅಧ್ಯಕ್ಷ ಯಾಸೀನ್ ಮಲ್ಪೆ, ವಿವಿಧ ಸಂಘಟನೆಗಳ ಪ್ರಮುಖರಾದ ಆಸೀಫ್ ಕೋಟೇಶ್ವರ್, ಅಬ್ದುರ‌್ರಹ್ಮಾನ್ ಕಲ್ಕಟ್ಟ, ಸುಬಾನ್ ಹೊನ್ನಾಳ, ಶರ್ಫುದ್ದೀನ್ ಶೇಖ್ ಕಾಪು, ಮನ್ಸೂರ್ ಉಪ್ಪಿನಕೋಟೆ, ರಫೀಕ್ ಗಂಗೊಳ್ಳಿ, ಅಬ್ದುಲ್ ಅಜೀಜ್ ಮಣಿಪಾಲ, ಇದ್ರೀಸ್ ಹೂಡೆ, ಅಬ್ದುಲ್ ಅಝೀಝ್ ಉದ್ಯಾವರ, ಸಲಾವುದ್ದೀನ್ ಅಬ್ದುಲ್ಲಾ, ಶಭೀ ಅಹ್ಮದ್ ಖಾಜಿ, ಹುಸೇನ್ ಕೋಡಿಬೆಂಗ್ರೆ, ಮುನೀರ್ ಜನ್ಸಾಲೆ ಮೊದಲಾದವರು ಉಪಸ್ಥಿತರಿದ್ದರು. ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News