ಜನಾಕ್ರೋಶ ಯಾತ್ರೆ ಕೇಂದ್ರ ಸರಕಾರದ ವಿರುದ್ಧವೇ ನಡೆಸಲಿ: ರಮೇಶ್ ಕಾಂಚನ್

ಉಡುಪಿ, ಎ.7: ಬೆಲೆ ಏರಿಸಿ ಜನರ ಬದುಕು ದುಸ್ತರವಾಗಲು ಕಾರಣ ವಾಗಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ರಾಜ್ಯ ಬಿಜೆಪಿಯವರು ಮೊದಲು ಸರಿಯಾಗಿ ತರಾಟೆಗೆ ತೆಗೆದುಕೊಳ್ಳಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗಿದ್ದರೂ ದೇಶದಲ್ಲಿ ಗಗನಕ್ಕೇರಿದ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಇಳಿಸದೆ ಜನರನ್ನು ವಂಚಿಸುತ್ತಿದ್ದೆ. ಗ್ಯಾಸ್ ಸಿಲಿಂಡರ್ ದರ ಹೆಚ್ಚಳ, ಟೋಲ್ ದರ ಏರಿಕೆ, ಆರೋಗ್ಯ ವಿಮೆ ಮೇಲೆ ಶೇ.18 ಜಿಎಸ್‌ಟಿ, ಜೀವವಿಮೆಯ ಮೇಲೂ ಜಿಎಸ್‌ಟಿ ಹೇರಿಕೆ, ಅಗತ್ಯದ ಔಷಧಿ, ಬ್ಯಾಂಕ್ ಸೇವಾ ಶುಲ್ಕ, ತರಕಾರಿ ಬೇಳೆಕಾಳುಗಳು ಹಾಗೂ ಅಡುಗೆಗೆ ಸಂಬಂಧಿಸಿದ ವಸ್ತುಗಳ ಬೆಲೆ ಏರಿಕೆಯಿಂದ ದೇಶದ ಜನರು ಕಂಗಾಲಾಗಿದ್ದಾರೆ ಎಂದು ಅವರು ದೂರಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಆಡಳಿತ ಬಂದ ದಿನದಿಂದ ಇಂದಿನವರೆಗೂ ಪಂಚ ಗ್ಯಾರಂಟಿಗಳನ್ನು ಯಥಾವತ್ತಾಗಿ ರಾಜ್ಯದ ಜನರಿಗೆ ನೀಡುವ ಮೂಲಕ ಬದುಕು ಕಟ್ಟಿಕೊಳ್ಳಲು ನೆರವಾ ಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿಯವರು ತಮ್ಮ ಪಕ್ಷದ ನೇತೃತ್ವದ ಕೇಂದ್ರ ಸರಕಾರ ಜನವಿರೋಧಿ ಎಂಬುದನ್ನು ಅರ್ಥೈಸಿಕೊಂಡು ತಮ್ಮ ಜನಾಕ್ರೋಶ ಯಾತ್ರೆಯನ್ನು ಕೇಂದ್ರ ಸರಕಾರದ ವಿರುದ್ಧವೇ ನಡೆಸಲಿ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.