ಪರಶುರಾಮ ಥೀಂ ಪಾರ್ಕ್ ಹಗರಣ: ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅಮಾನತು

Update: 2024-07-25 11:30 GMT

ಉಡುಪಿ, ಜು.25: ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಬೈಲೂರು ಉಮಿಕಲ್ ಬೆಟ್ಟದಲ್ಲಿ ನಿರ್ಮಿಸಿರುವ ಪರುಶುರಾಮ ಥೀಂ ಪಾರ್ಕ್ ಕಾಮಗಾರಿಗೆ ಸಂಬಂಧಿಸಿ ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಅಮಾನತುಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಆದೇಶ ಹೊರಡಿಸಿದ್ದಾರೆ.

ಅನುಷ್ಠಾನ ಅಧಿಕಾರಿಯಾಗಿ ಅರುಣ್ ಕುಮಾರ್ ಪರಶುರಾಮ ಥೀಂ ಪಾರ್ಕ್ ಕಾಮಗಾರಿಯನ್ನು ನಿರ್ಮಿಸಿದ್ದು, ಈ ಕಾಮಗಾರಿಗೆ ಅಂದಾಜು ಮೊತ್ತ 11.05ಕೋಟಿ ರೂ. ಆಡಳಿತ್ಮಾತಕ ಮಂಜೂರಾತಿಗೊಂಡಿದೆ. ಈ ಪೈಕಿ 6.72 ಕೋಟಿ ರೂ. ಅನುದಾನ ಈಗಾಗಲೇ ಬಿಡುಗಡೆಯಾಗಿದೆ. ಆದರೆ ಕಾಮಗಾರಿ ಪೂರ್ಣಗೊಳಿಸದೆ, ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರ ಮಾಡದೆ ಉದ್ಘಾಟನಾ ಕಾರ್ಯಕ್ರಮವನ್ನು ಮಾಡಿದ್ದು, ಇದರಿಂದ ಈ ಕಾಮಗಾರಿಯ ಗುಣಮಟ್ಟ ಹಾಗೂ ಧಾರ್ಮಿಕ ಭಾವನೆಗಳಿಗೆ ಅಪಚಾರ ಆಗುತ್ತಿರುವ ಬಗ್ಗೆ ಆರೋಪಗಳಿವೆ.

ಅಲ್ಲದೆ ಈ ಪ್ರಕರಣದ ಬಗ್ಗೆ ಸಿಓಡಿ ಹಾಗೂ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ವಿಚಾರಣಾ ಆಯೋಗ ತನಿಖೆ ನಡೆಸುತ್ತಿವೆ. ಈ ಹಂತದಲ್ಲಿ ತನಿಖೆಗೆ ಅಡಚಣೆ ಆಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಅವರ ಸ್ಥಾನಕ್ಕೆ ನಿರ್ಮಿತಿ ಕೇಂದ್ರದ ಸಹಾಯಕ ಯೋಜನಾ ನಿರ್ದೇಶಕ ದಿವಾಕರ ಪಿ. ಅವರನ್ನು ಹೆಚ್ಚುವರಿ ಪ್ರಭಾರ ನೀಡಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಜು.24ರಂದು ಆದೇಶ ಹೊರಡಿಸಿದ್ದಾರೆ.

ಯೋಜನಾಧಿಕಾರಿ ಅಮಾನತು; ಜನಾಭಿಪ್ರಾಯಕ್ಕೆ ಸಂದ ಜಯ: ಕೃಷ್ಣ ಶೆಟ್ಟಿ

ಕಾರ್ಕಳ: ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಾರ್ಕಳ ತಾಲೂಕಿನ ಜನರ ಧಾರ್ಮಿಕ ಹಾಗೂ ಭಾವನಾತ್ಮಕ ವಿಚಾರ ಗಳಿಗೆ ಧಕ್ಕೆ ತಂದು ನಕಲಿ ಪರಶುರಾಮ ಮೂರ್ತಿ ನಿರ್ಮಾಣ ಮಾಡಿದ ಕ್ರಿಸ್ ಆರ್ಟ್ ವರ್ಲ್ಡ್ ಮಾಲಕ ಕೃಷ್ಣ ನಾಯಕ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ, ನಿರ್ಮಿತಿ ಕೇಂದ್ರದ ಯೋಜನಾ ಧಿಕಾರಿಯನ್ನು ಅಮಾನತ್ತು ಮಾಡಿರುವುದು ಜನಾಭಿಪ್ರಾಯಕ್ಕೆ ಸಂದ ಜಯ ಎಂದು ಪರಶು ರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಲ್ಲೂರು ಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ಥೀಮ್ ಪಾರ್ಕ್ ಅವ್ಯವಹಾರದ ಮೂಲಕ ಸರಕಾರದ ಷರತ್ತುಗಳನ್ನು ಉಲ್ಲಂಘನೆ ಮಾಡಿರುವ ಕುರಿತು ಜು.18ರಂದು ಉಡುಪಿಯ ಜಿಲ್ಲಾಧಿಕಾರಿಗಳಿಗೆ ಸಮಿತಿಯ ವತಿಯಿಂದ ದೂರನ್ನು ನೀಡಿಡಲಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿದ ಕ್ರಿಸ್ ಆರ್ಟ್ ವರ್ಲ್ಡ್ ಮಾಲಕ ಕೃಷ್ಣ ನಾಯಕ ವಿರುದ್ದ ಕ್ರಿಮಿನಲ್ ಪ್ರಕರಣ ಹಾಗೂ ಉಡುಪಿ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಅರುಣ್ ಕುಮಾರ್ ಅಮಾನತು ಮಾಡಲಾಗಿದೆ. ಈ ಮೂಲಕ ಕಾರ್ಕಳದ ಜನರನ್ನು ಮೂರ್ಖ ರನ್ನಾಗಿಸಲು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ ಎಂದು ಬಜಗೋಳಿ ಕೃಷ್ಣ ಶೆಟ್ಟಿ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News