ಬಿಜೆಪಿ ಪಕ್ಷ ಇಂದು ಆರೆಸ್ಸೆಸ್ ಇಲ್ಲದೆ ಏನೂ ಮಾಡಲು ಆಗದ ಸ್ಥಿತಿಯಲ್ಲಿದೆ: ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು

Update: 2025-02-17 21:01 IST
ಬಿಜೆಪಿ ಪಕ್ಷ ಇಂದು ಆರೆಸ್ಸೆಸ್ ಇಲ್ಲದೆ ಏನೂ ಮಾಡಲು ಆಗದ ಸ್ಥಿತಿಯಲ್ಲಿದೆ: ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು
  • whatsapp icon

ಉಡುಪಿ: ಇಂದು ದೇಶದಲ್ಲಿ ಸಂವಿಧಾನೇತರ ಶಕ್ತಿಗಳು ಆಡಳಿತ ನಡೆಸುತ್ತಿವೆ. ಬಿಜೆಪಿ ಪಕ್ಷ ಇಂದು ಆರೆಸ್ಸೆಸ್ ಇಲ್ಲದೇ ಏನು ಮಾಡಲು ಆಗದ ಸ್ಥಿತಿಯಲ್ಲಿದೆ. ಅದಕ್ಕೆ ಪರ್ಯಾಯವಾಗಿ ನಾವು ರಾಜಕೀಯೇತರವಾಗಿ ಸೆಕ್ಯುಲರ್ ಪರಿವಾರವನ್ನು ಕಟ್ಟಿ ಬಲಪಡಿಸುವ ಅಗತ್ಯ ಇದೆ. ಆ ಮೂಲಕ ಬಹುಸಂಸ್ಕೃತಿಯಲ್ಲಿರುವ ಸಂವಿಧಾನ ಆಶಯಗಳಾದ ಸ್ವಾತಂತ್ರ್ಯ ಸಮಾನತೆ, ಸಹೋದರತ್ವವನ್ನು ಉಳಿಸಬೇಕಾಗಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.

ಕರ್ನಾಟಕ ಮಾನವ ಬಂಧುತ್ವ ವೇದಿಕೆ ಹಾಗೂ ಮಹಿಳಾ ಬಂಧುತ್ವ ವೇದಿಕೆ ಮಂಗಳೂರು ವಿಭಾಗದ ವತಿಯಿಂದ ಅಂಬಾಗಿಲು ಕಕ್ಕುಂಜೆ ಅನುಗ್ರಹದಲ್ಲಿ ಸೋಮವಾರ ಆಯೋಜಿಸಲಾದ ಪದಾಧಿಕಾರಿಗಳ ಸಮಾವೇಶ ಹಾಗೂ ವಿಚಾರ ಸಂಕಿರಣದಲ್ಲಿ ಅವರು ‘ಬಹುಸಂಸ್ಕೃತಿಯ ಅಳಿವು- ಉಳಿವು’ ಕುರಿತು ವಿಚಾರ ಮಂಡಿಸಿದರು.

ತುಳುನಾಡನ್ನು ಬಂಟರು, ಬಿಲ್ಲವರು, ಮುಸ್ಲಿಮರು, ಕ್ರಿಶ್ಚಿಯನ್ನರು ಕೂಡಿ ಕಟ್ಟಿದರು. ಬಹುಸಂಸ್ಕೃತಿಯ ತುಳುನಾಡನ್ನು ಪ್ರೀತಿಯಿಂದ ಕಟ್ಟಲಾಗಿದೆಯೇ ಹೊರತು ಧ್ವೇಷ, ದೊಂಬಿ, ಗಲಾಟೆಯಿಂದಲ್ಲ. ಇಲ್ಲಿನ ಕೂಡು ಸಂಸ್ಕೃತಿಯನ್ನು ಒಡೆಯುವ ಕಾರ್ಯ ನಡೆಸಲಾಗುತ್ತಿದೆ. ಏಕಸಂಸ್ಕೃತಿ ಎಂಬುದು ಅಸಮಾನತೆ, ಸರ್ವಾಧಿಕಾರ ಹಾಗೂ ಶೋಷಣೆಯ ಪ್ರತೀಕವಾಗಿದೆ ಎಂದರು.

ಇಡೀ ದೇಶದಲ್ಲಿ ಕೋಮುವಾದದ ಬೀಜವನ್ನು ಬಾಬರಿ ಮಸೀದಿ ಧ್ವಂಸದ ಬಳಿಕ ಬಿತ್ತಿದರೆ, ಕರಾವಳಿಯಲ್ಲಿ 80ರ ದಶಕದಲ್ಲೇ ಬಿತ್ತಲಾಗಿತ್ತು. ಇಂದು ಕರಾವಳಿಯಲ್ಲಿ ವಿದ್ಯೆ ಹಾಗೂ ಧರ್ಮ ವ್ಯಾಪಾರವಾಗಿದೆ. ಜೊತೆಗೆ ರಾಜಕೀಯ ಹಾಗೂ ಸಂಬಂಧ ಕೂಡ ವ್ಯಾಪಾರವಾಗಿದೆ. ಇಲ್ಲಿನ ಬಹು ಸಂಸ್ಕೃತಿಯನ್ನು ಉದ್ದೇಶ ಪೂರ್ವಕವಾಗಿ ನಾಶ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಗಾಂಧೀಜಿ, ಅಂಬೇಡ್ಕರ್, ಬುದ್ಧ, ಬಸವ, ಕನಕ, ನಾರಾಯಣಗುರು, ವಾಲ್ಮೀಕಿ ನಮ್ಮವರು. ಅವರ ಸಿದ್ಧಾಂತವನ್ನು ನಾವು ಅಕ್ಷರ ಅಕ್ಷರ ಒಪ್ಪುತ್ತೇವೆ. ಆದರೆ ನಾವು ಮನು, ಗೋಲ್ವಾಲ್ಕರ್, ಹೆಗಡೆವಾರ್, ಸಾರ್ವಕರ್, ನರೇಂದ್ರ ಮೋದಿ ಸಿದ್ಧಾಂತವನ್ನು ಒಪ್ಪಲ್ಲ. ಧರ್ಮ ಎಂಬುದು ಮನೆಯೊಳಗೆ ಇರಬೇಕೆ ಹೊರತು ಬೀದಿಗೆ ತರಬಾರದು. ದೇವರನ್ನು ರಾಜಕೀಯದ ಪೋಸ್ಟರ್ ಆಗಿ ಬಳಕೆ ಮಾಡುವವರೇ ನಿಜವಾದ ಧರ್ಮದ್ರೋಹಿಗಳು ಎಂದು ದಿನೇಶ್ ಅಮೀನ್ ಮಟ್ಟು ಆರೋಪಿಸಿದರು.

‘ಬಹುತ್ವ ಭಾರತದ ಪ್ರಸ್ತುತ ಸವಾಲುಗಳು’ ಕುರಿತು ವಿಚಾರ ಮಂಡಿಸಿದ ಹಿರಿಯ ಚಿಂತಕ ಪ್ರೊ.ಕೆ.ಫಣಿರಾಜ್, ಬಹುತ್ವ ನಮ್ಮ ನಿತ್ಯದ ಸಂಸ್ಕೃತಿಯಲ್ಲಿ ಇದೆ. ಆದರೆ ರಾಜಕೀಯದ ಮೂಲಕ, ಸಂವಿಧಾನವನ್ನು ಒಳಗಿನಿಂದಲೇ ಒಡೆಯುವ ಮೂಲಕ ನಾಗರಿಕರ ಪ್ರಜಾ ಅಸ್ಮಿತಿಯನ್ನೇ ನಾಶ ಮಾಡುವ ಪ್ರಯತ್ನಗಳು ಆಗುತ್ತಿವೆ. ನಮಗೆ ಐಕ್ಯತೆಯ ಬಹುತ್ವ ಬೇಕು. ಅದು ಏಕತೆ ಆಗುವ ಸಂದರ್ಭದಲ್ಲಿ ನಾವು ಎಚ್ಚರ ವಹಿಸಬೇಕು. ಇದರ ಬಗ್ಗೆ ನಾಗರಿಕ ಸಮಾಜ ಹೋರಾಟ ಮಾಡಬೇಕು ಎಂದರು.

ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಲೋಕೋಪಯೋಗಿ ಇಲಾಖೆಯ ಸಚಿವ ಹಾಗೂ ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಸತೀಶ್ ಜಾರಕಿಹೊಳಿ ಮಾತನಾಡಿ, ದೇಶದ ನೈಜ್ಯ ಇತಿಹಾಸವನ್ನು ಜನ ತಿಳಿದುಕೊಳ್ಳಬೇಕು. ಆ ಮೂಲಕ ಬದಲಾವಣೆ ತರುವುದು ನಮ್ಮ ಉದ್ದೇಶವಾಗಿದೆ. ಕರಾವಳಿಯೇ ನಮಗೆ ಅತ್ಯಂತ ಸವಾಲು ಆಗಿರುವ ಜಿಲ್ಲೆಯಾಗಿದೆ. ಮುಂದಿನ 10 ವರ್ಷಗಳಲ್ಲಿ ಇಲ್ಲಿಯೂ ನಮ್ಮ ಗುರಿಯನ್ನು ಮುಟ್ಟುವ ಮೂಲಕ ಶಾಂತಿಯ ತಾಣವನ್ನಾಗಿ ಮಾಡಲಾಗುವುದು ಎಂದು ಹೇಳಿದರು.

ಅಧ್ಯಕ್ಷತೆಯನ್ನು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕಿ ಡಾ.ಲೀಲಾ ಸಂಪಿಗೆ, ಉಡುಪಿ ಜಿಲ್ಲಾ ಸಂಚಾಲಕಿ ಶಾಂತಿ ಬೈಂದೂರು, ದ.ಕ. ಜಿಲ್ಲಾ ಸಂಚಾಲಕ ಪ್ರೇಮಿ ಫರ್ನಾಂಡೀಸ್, ಮಾನವ ಬಂಧುತ್ವ ವೇದಿಕೆಯ ಮಂಗಳೂರು ವಿಭಾಗೀಯ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್, ರಾಜ್ಯ ಸಮಿತಿ ಸದಸ್ಯ ರೋನಾಲ್ಡ್ ಮನೋಹರ ಕರ್ಕಡ, ದ.ಕ. ಜಿಲ್ಲಾ ಸಂಚಾಲಕ ಜಯರಾಂ ಪೂಜಾರಿ ಉಪಸ್ಥಿತರಿದ್ದರು.

ವೇದಿಕೆಯ ಚಾರ್ಲ್ಸ್ ಆ್ಯಂಬ್ಲರ್ ಸ್ವಾಗತಿಸಿದರು. ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು.

‘ವೈದಿಕಶಾಹಿ ಏಕರೂಪದ ನಾಗರಿಕ ಸಂಹಿತೆ’

ದೇಶದಲ್ಲಿ ಶೋಷಣೆಗೆ ಒಳಗಾದವರಿಗೆ ಸಮಾನತೆ, ಸ್ವಾತಂತ್ರ್ಯ ತಂದು ಕೊಡುವ ಐಕ್ಯ ಕಾನೂನುನ್ನು ಜಾರಿಗೆ ತರಬೇಕಾದ ಅಗತ್ಯ ಇದೆ. ಸಮಾನ ನಾಗರಿಕ ಸಂಹಿತೆಯು ಏಕರೂಪದಲ್ಲಿ ಅಲ್ಲ, ಐಕ್ಯರೂಪದಲ್ಲಿ ಇರಬೇಕು ಎಂದು ಪ್ರೊ.ಫಣಿರಾಜ್ ಅಭಿಪ್ರಾಯ ಪಟ್ಟರು.

ಎಲ್ಲ ಮತಗಳಲ್ಲಿರುವ ಸ್ವಾತಂತ್ರ್ಯ, ಸಮಾನತೆಯ ಅಂಶಗಳನ್ನು ಸೇರಿಸಿ ಸಮಾನ ನಾಗರಿಕ ಸಂಹಿತೆ ಮಾಡಬೇಕು. ಆದರೆ ಇಂದು ಬಹುತ್ವವನ್ನು ಮುರಿಯುವ, ಸಮಾನತೆ ಕೊಲ್ಲುವ, ಸ್ವಾತಂತ್ರ್ಯವನ್ನು ಧಮನ ಮಾಡುವ ಬ್ರಾಹ್ಮಣಶಾಹಿ, ವೈದಿಕಶಾಹಿ ಏಕರೂಪದ ನಾಗರಿಕ ಸಂಹಿತೆ ದೇಶದಲ್ಲಿ ಹೇರಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News