ಉಡುಪಿ: ಉಳ್ತೂರು-ಚಿತ್ತೇರಿಯಲ್ಲಿ ವಿರಳಾತಿವಿರಳ ವೀರಸ್ಥಂಭ ಪತ್ತೆ
ಉಡುಪಿ, ಜ.19: ಜಿಲ್ಲೆಯ ಕುಂದಾಪುರ ತಾಲೂಕಿನ ಉಳ್ತೂರು- ಚಿತ್ತೇರಿಯ ನಂದಿಕೇಶ್ವರ ದೈವಸ್ಥಾನದ ಎದುರು ಅತ್ಯಂತ ಅಪರೂಪದ ವೀರಸ್ಥಂಭ ಕಂಡು ಬಂದಿದೆ ಎಂದು ನಿವೃತ್ತ ಪುರಾತತ್ತ್ವ ಸಂಶೋಧಕ ಹಾಗೂ ವಿದ್ವಾಂಸ ಪ್ರೊ. ಟಿ. ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವೀರಸ್ಥಂಭ ಚಿತ್ತೇರಿ ನಂದಿಕೇಶ್ವರ ದೈವಸ್ಥಾನದ ಎದುರು ನಿಲ್ಲಿಸಲ್ಪಟ್ಟಿದ್ದು, ಸುಮಾರು ಆರು ಅಡಿ ಎತ್ತರವಿದೆ. ನಾಲ್ಕು ಮುಖಗಳನ್ನು ಹೊಂದಿರುವ ಸ್ಥಂಭದ ಪ್ರತಿಯೊಂದು ಮುಖದಲ್ಲಿಯೂ, ತಲಾ ಮೂರು ಚಿತ್ರಪಟ್ಟಿಕೆಗಳನ್ನು ಒಳಗೊಂಡಿದೆ.
ಪೂರ್ವಾಭಿಮುಖದ ಕೆಳಗಿನ ಪಟ್ಟಿಕೆಯಲ್ಲಿ, ವೀರನೊಬ್ಬ ಅಶ್ವರೋಹಿಯ ಮೇಲೆ ದಾಳಿ ಮಾಡಿದ್ದು, ಅಶ್ವಾರೋಹಿಯನ್ನು ಎರಡು ಭಾಗವಾಗಿ ತುಂಡರಿಸಿದ್ದಾನೆ. ಎರಡನೇ ಪಟ್ಟಿಕೆಯಲ್ಲಿ ವೀರನೊಬ್ಬ ಯುದ್ಧಾನೆಯ ಮೇಲೆ ಅಂಕುಶವನ್ನು ಹಿಡಿದು ಕುಳಿತಿರುವಂತೆ ಚಿತ್ರಿಸಲಾಗಿದೆ. ಮೇಲಿನ ಪಟ್ಟಿಗೆಯಲ್ಲಿ ಕತ್ತಿಕಾಳಗದಲ್ಲಿ ತೊಡಗಿರುವಂತೆ ಚಿತ್ರಿಸಲಾಗಿದೆ.
ಪಶ್ಚಿಮಾಭಿಮುಖದ ಕೆಳಗಿನ ಪಟ್ಟಿಕೆಯಲ್ಲಿ, ಕತ್ತಿ ಕಾಳಗದ ಚಿತ್ರಣವಿದೆ. ಮಧ್ಯದ ಪಟ್ಟಿಕೆಯಲ್ಲಿ ಕುದುರೆಯ ಮೇಲೆ ಕುಳಿತು ಈಟಿಯನ್ನು ಹಿಡಿದು ಮುನ್ನುಗ್ಗುತ್ತಿರುವಂತೆ ಚಿತ್ರಿಸಲಾಗಿದೆ. ಮೂರನೇ ಪಟ್ಟಿಕೆಯಲ್ಲಿ ಮತ್ತೆ ಕತ್ತಿ ಕಾಳಗದ ಚಿತ್ರಣವಿದೆ.
ದಕ್ಷಿಣಾಭಿಮುಖದ ಕೆಳಗಿನ ಪಟ್ಟಿಕೆಯಲ್ಲಿ ಇಬ್ಬರು ವೀರರು ಕತ್ತಿಕಾಳಗದಲ್ಲಿ ನಿರತರಾಗಿದ್ದು ಓರ್ವ ಮೃತ ಸೈನಿಕನ ಶರೀರ ಕೆಳಗೆ ಬೀಳುವ ಸ್ಥಿತಿಯಲ್ಲಿದ್ದರೆ, ದೇಹದಿಂದ ಬೇರ್ಪಟ್ಟ ತಲೆಯನ್ನು ಬಲಭಾಗದ ವೀರನ ಹಿಂಭಾಗದಲ್ಲಿ ಚಿತ್ರಿಸಲಾಗಿದೆ. ಎರಡನೇ ಪಟ್ಟಿಕೆಯಲ್ಲಿ ಕತ್ತಿಕಾಳಗದ ಚಿತ್ರಣವಿದೆ. ಮೇಲಿನ ಪಟ್ಟಿಕೆಯಲ್ಲಿ ಮೂವರು ವೀರರ ಚಿತ್ರಣವಿದ್ದು, ಇಬ್ಬರು ತಮ್ಮ ಎಡಗೈಯಲ್ಲಿ ಖಡ್ಗವನ್ನು ಎತ್ತಿ ಹಿಡಿದಿದ್ದಾರೆ. ಮೂರನೇ ವ್ಯಕ್ತಿ ತನ್ನ ಎರಡೂ ಕೈಜೋಡಿಸಿ ಅಂಜಲೀಬದ್ಧನಾಗಿ ನಿಂತಿರು ವಂತೆ ಚಿತ್ರಿಸಲಾಗಿದೆ.
ಉತ್ತರಾಭಿಮುಖ ಭಾಗದ ಕೆಳಗಿನ ಪಟ್ಟಿಕೆಯಲ್ಲಿ ಸ್ವರ್ಗದಿಂದ ಇಳಿದು ಬರುತ್ತಿರುವ ಇಬ್ಬರು ಅಪ್ಸರೆಯರ ಕಾಲುಗಳು ಮೇಲ್ಮುಖವಾಗಿ ಗಾಳಿಯಲ್ಲಿ ತೇಲುತ್ತಿವೆ. ಮೃತವೀರನ ಭುಜವನ್ನು ಹಿಡಿದುಕೊಂಡಿದ್ದಾರೆ. ಎರಡನೇ ಪಟ್ಟಿಕೆಯಲ್ಲಿ ಅಪ್ಸರೆಯರು ತಮ್ಮ ಕಾಲುಗಳಿಂದ ವೀರನ ಕಾಲ್ಗಳನ್ನು ಬಳಸಿ ಹಿಡಿದು ಆತನ ಎರಡೂ ಕೈಗಳನ್ನು ತಮ್ಮ ಭುಜದ ಮೇಲೆ ಹಾಕಿಕೊಂಡು, ಎಡ-ಬಲದ ತಮ್ಮ ಒಂದೊಂದು ಕೈಯನ್ನು ಆಕಾಶದೆಡೆಗೆ ಎತ್ತಿ ತಮ್ಮ ಸ್ವರ್ಗದ ಕಡೆಗಿನ ಪಯಣವನ್ನು ಸಾಂಕೇತಿಕವಾಗಿ ಬಿಂಬಿಸಿದ್ದಾರೆ. ಕೊನೆಯ ಪಟ್ಟಿಕೆಯಲ್ಲಿ ಮೃತ ವೀರನು ವೀರಸ್ವರ್ಗ ಪಡೆದ ದ್ಯೋತಕವಾಗಿ ಒಂದು ಶಿವಲಿಂಗದ ಎದುರು ಕುಳಿತಿರುವಂತೆ ಚಿತ್ರಿಸಲಾಗಿದೆ.
ವೀರಸ್ಥಂಭದ ಮಹತ್ವ: ಮೃತ ವೀರರಿಗಾಗಿ ವೀರಗಲ್ಲುಗಳನ್ನು ನೆಡುವುದು ಸಾಮಾನ್ಯ ಪರಂಪರೆ. ಆದರೆ, ವೀರಸ್ಥಂಭ ವನ್ನು ನಿಲ್ಲಿಸುವುದು ವಿರಳಾತಿವಿರಳ ಸಂಗತಿಯಾಗಿದೆ. ಚಿತ್ರಪಟ್ಟಿಕೆಗಳಲ್ಲಿ ವಿವಿಧ ರೀತಿಯ ಯುದ್ಧದ ದೃಶ್ಯಗಳನ್ನು ಚಿತ್ರಿಸಿ, ಕೊನೆಗೆ ಆತ ಕೈಲಾಸವಾಸಿಯಾದ ಎಂಬುದನ್ನು ಚಿತ್ರಿಸಿರುವುದನ್ನು ನೋಡಿದರೆ, ಮೃತ ವ್ಯಕ್ತಿ ಸಾಧಾರಣ ಸೈನಿಕನಾಗಿರದೆ, ರಾಜಮನೆತನಕ್ಕೆ ಸೇರಿದ ವ್ಯಕ್ತಿ ಎಂದು ಕಂಡು ಬರುತ್ತದೆ.
ಇಂತಹ ವೀರಸ್ಥಂಭಗಳು ಕಾಸರಗೋಡಿನ ಕೂಡ್ಲು ಗೋಪಾಲಕೃಷ್ಣ ದೇವಾಲಯದ ಹೊರ ಆವರಣದಲ್ಲಿ ಒಂದು ಇದೆ ಹಾಗೂ ಮಂಗಳೂರಿನ ಅಮ್ಮುಂಜೆಯಲ್ಲಿ ಮತ್ತೊಂದಿದೆ. ಪ್ರಸ್ತುತ ಅಧ್ಯಯನದ ವೀರಸ್ಥಂಭವನ್ನು ಸ್ಥಳೀಯವಾಗಿ ಕ್ಷೇತ್ರಪಾಲ ಕಲ್ಲು ಎಂದು ಕರೆಯಲಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.
ಗುಳ್ಳಾಡಿಯ ಡಾ.ರಘುರಾಮ ಶೆಟ್ಟಿ ಅವರ ತೀವ್ರ ಆಸಕ್ತಿಯ ಫಲವಾಗಿ ಗುಳ್ಳಾಡಿಯ ಸುತ್ತಮುತ್ತ ಕೈಗೊಂಡ ಪುರಾತತ್ತ್ವ ಕ್ಷೇತ್ರ ಕಾರ್ಯದಿಂದಾಗಿ ಈ ಅಪೂರ್ವ ವೀರಸ್ಥಂಭ ಪತ್ತೆಯಾಗಿದೆ. ಇದಕ್ಕೆ ಪೂರಕವಾಗಿ ಸಹಕರಿಸಿದ ಚಿತ್ತೇರಿ ನಂದಿಕೇಶ್ವರ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ಎಂ.ರಾಜೀವ ಶೆಟ್ಟಿ, ಬೇಳೂರು ಗ್ರಾಪಂ ಅಧ್ಯಕ್ಷರಾದ ಜಯಶೀಲ ಶೆಟ್ಟಿ, , ರಮೇಶ್ ಶೆಟ್ಟಿ, ಪ್ರದೀಪ್ ಬಸ್ರೂರು ಹಾಗೂ ವಿದ್ಯಾರ್ಥಿಗಳಿಗೆ ಆಭಾರಿ ಯಾಗಿರುವುದಾಗಿ ಪ್ರೊ.ಮುರುಗೇಶಿ ತಿಳಿಸಿದ್ದಾರೆ.