ವಿಡಿಯೋ ಪ್ರಕರಣ: ಉಡುಪಿಯ ಕಾಲೇಜಿನಲ್ಲಿ ಸಿಐಡಿ ತಂಡ ಪರಿಶೀಲನೆ
ಉಡುಪಿ, ಆ.9: ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿ ನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ತಂಡ ತನಿಖೆ ಮುಂದುವರೆಸಿದ್ದು, ಸಿಐಡಿ ಪೊಲೀಸ್ ಅಧೀಕ್ಷಕ ರಾಘವೇಂದ್ರ ಕೆ.ಹೆಗ್ಡೆ ನೇತೃತ್ವದ ತಂಡ ಇಂದು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಬೆಳಗ್ಗೆ ಕಾಲೇಜಿಗೆ ಆಗಮಿಸಿದ ಸಿಐಡಿ ತಂಡವು, ಘಟನೆ ನಡೆದ ಶೌಚಾಲಯ ವನ್ನು ಪರಿಶೀಲಿಸಿ ಮಾಹಿತಿ ಹಾಕಿತು. ಬಳಿಕ ಆಡಳಿತ ಮಂಡಳಿ ನಿರ್ದೇಶಕಿ ರಶ್ಮಿ ಹಾಗೂ ಇತರರನ್ನು ವಿಚಾರಣೆಗೆ ಒಳಪಡಿಸಿದ ತಂಡವು, ಸಂತ್ರಸ್ತ ವಿದ್ಯಾರ್ಥಿನಿಯ ಹೇಳಿಕೆಯನ್ನು ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಪ್ರಕರಣದ ತನಿಖಾಧಿಕಾರಿ ಸಿಐಡಿ ಡಿವೈಎಸ್ಪಿ ಅಂಜುಮಾಲಾ ನಾಯಕ್ ಹಾಜರಿದ್ದರು.
ತಂಡವು ನಾಳೆ ಕಾಲೇಜಿನ ಆಡಳಿತ ಮಂಡಳಿಯ ಪ್ರಮುಖರ ಹಾಗೂ ಆರೋಪಿ ವಿದ್ಯಾರ್ಥಿನಿಯರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಅದೇ ರೀತಿ ಆ.10ರಂದು ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮನೀಶ್ ಖರ್ಬೀಕರ್ ಉಡುಪಿಗೆ ಆಗಮಿಸಿ ತನಿಖೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.