ಪರಿಶಿಷ್ಟ ಪಂಗಡದ ಮಹಿಳೆಯ ಮೇಲಿನ ಹಲ್ಲೆಗೆ ಸಹಬಾಳ್ವೆ ಖಂಡನೆ

Update: 2025-03-20 18:25 IST
ಪರಿಶಿಷ್ಟ ಪಂಗಡದ ಮಹಿಳೆಯ ಮೇಲಿನ ಹಲ್ಲೆಗೆ ಸಹಬಾಳ್ವೆ ಖಂಡನೆ
  • whatsapp icon

ಉಡುಪಿ, ಮಾ.20: ಮಲ್ಪೆಯ ಬಂದರು ಪ್ರದೇಶದಲ್ಲಿ ವಿಜಯನಗರ ಜಿಲ್ಲೆಯ ಪರಿಶಿಷ್ಟ ಪಂಗಡದ ಮಹಿಳೆಯ ಮೇಲೆ ನಡೆದಿರುವ ಕಾನೂನು ಬಾಹಿರ ಹಲ್ಲೆಯ ಕೃತ್ಯವನ್ನು ಸಹಬಾಳ್ವೆ ಸಂಚಾಲಕ ಸಮಿತಿಯು ತೀವ್ರವಾಗಿ ಖಂಡಿಸಿದೆ.

ಮಹಿಳೆ ಮೀನು ಕದ್ದಿದ್ದಾರೆ ಎಂದು ಆರೋಪಿಸಿ, ಅವರನ್ನು ಮರಕ್ಕೆ ಕಟ್ಟಿಹಾಕಿ ಥಳಿಸಲಾಗಿದೆ. ಆ ಮಹಿಳೆ ಕಳ್ಳತನ ಮಾಡಿದ್ದೇ ಆಗಿದ್ದರೆ, ಕಾನೂನು ರೀತ್ಯ ದೂರು ನೀಡುವ ಕ್ರಮ ಕೈಗೊಳ್ಳಬಹುದಿತ್ತು. ಆದರೆ, ಹಲ್ಲೆ ನಡೆಸಿದ ಆರೋಪಿಗಳು ತಾವೇ ಆರೋಪ ಮಾಡಿ, ವಿಚಾರಣೆ ನಡೆಸಿ, ಶಿಕ್ಷೆ ನೀಡುವ ಕ್ರಮ ಅತ್ಯಂತ ಹೀನವಾದದ್ದು. ಇವರು ಸಂವಿಧಾನಬಾಹಿರ ಆಗಿರುವ ಗುಂಪು ಹಿಂಸೆ ನಡೆಸಿದ್ದಾರೆ. ಇದನ್ನು ನಾಗರಿಕ ಸಮಾಜ ಸಾಮಾನ್ಯವಾದ ಘಟನೆ ಎಂದು ಪರಿಗಣಿಸಕೂಡದು ಎಂದು ಸಹಬಾಳ್ವೆ ಹೇಳಿಕೆಯಲ್ಲಿ ತಿಳಿಸಿದೆ.

ಈ ಆಕೃತ್ಯವನ್ನು ‘ಅಮಾನುಷ’ ‘ಅನಾಗರಿಕ’ ಎಂಬ ವಿಶೇಷಣಗಳಿಂದ ಖಂಡಿಸಿದರೆ ಸಾಲದು. ಈ ನಮೂನೆಯ ‘ಅಮಾನುಷ’ ‘ಅನಾಗರಿಕ’ ಕೃತ್ಯಕ್ಕೆ, ಕರಾವಳಿಯ ಜಿಲ್ಲೆಗಳಲ್ಲಿ ಸಂವಿಧಾನ ವಿರೋಧಿ ‘ಹಿಂದುತ್ವವಾದಿ’ ಗುಂಪುಗಳು ನಡೆಸುತ್ತಿರುವ ‘ಗುಂಪು ಹಿಂಸೆ’ಯ ಪ್ರೇರಣೆ ಇದೆ! ಇಂತಹ ಗುಂಪು ಹಿಂಸೆ ಗಳು ನಡೆದಾಗಲೆಲ್ಲ ನಾವು ಅವುಗಳನ್ನು ಖಂಡಿಸಿದ್ದು ಮಾತ್ರವಲ್ಲ, ಸೌಹಾರ್ದಯುತ ಸಾಮಾಜಿಕ ಬದುಕಿನ ಮೇಲೆ ಅದು ಉಂಟು ಮಾಡುವ ಪರಿಣಾಮದ ಕುರಿತು ನಾಗರಿಕರು ವಿವೇಚಿಸಿ ವಿರೋಧಿಸ ಬೇಕೆಂದೂ ಒತ್ತಾಯಿಸುತ್ತಿದ್ದೇವೆ ಎಂದು ಅದು ಹೇಳಿದೆ.

ಮತೀಯವಾಗಿ ‘ನಮ್ಮ ಮತದವರು’ ‘ಅನ್ಯ ಮತದವರು’ ಎಂಬ ದ್ವೇಷ ಹರಡಿ ಇಂಥ ಕೃತ್ಯಗಳು ನಡೆ ದಾಗ, ಅದು ಅಲ್ಲಿಗೆ ನಿಲ್ಲುವುದಿಲ್ಲ; ‘ಅನ್ಯ ಜಾತಿಯ ಜನ’ ‘ಅನ್ಯ ಪ್ರದೇಶಗಳ ಜನ’ ಎಂಬ ತಾರತಮ್ಯ ದ್ವೇಷ ಸೃಷ್ಟಿಸಿ ಹಿಂಸಿಸುವ ಕೆಲಸವು ಸಹಜವಾಗಿ ಬಿಡುತ್ತದೆ ಎಂದು ನಾವು ಸದಾ ಎಚ್ಚರಿಸುತ್ತಿದ್ದೇವೆ. ಅದು ಇಂದು ಅತ್ಯಂತ ಆತಂಕಕಾರಿ ಸ್ವರೂಪ ಪಡೆದಿದೆ. ಮಹಿಳೆ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಮಾತ್ರವಲ್ಲ, ‘ಹೊರಗಿನವರು’ ಎಂಬ ಭೇದವೆಣಿಸಿ ಈ ಕೃತ್ಯವನ್ನು ಎಸಗಿರುವ ಬಗ್ಗೆ ನಾಗರಿಕರು ಯೋಚಿಸ ಬೇಕು. ಇನ್ನು ಮುಂದೆ ಜಾತಿ, ಮತ, ಪ್ರದೇಶಗಳ ಆಧಾರದಲ್ಲಿ ತಾರತಮ್ಯವೆಣಿಸುವ, ಹಿಂಸೆ ನಡೆಸುವ ಸಮಾಜಘಾತುಕ ಶಕ್ತಿಗಳನ್ನು ವಿರೋಧಿಸಬೇಕು ಎಂದು ನಾವು ಮನವಿ ಮಾಡುತ್ತೇವೆ ಎಂದು ಸಹಬಾಳ್ವೆ ಹೇಳಿಕೆಯಲ್ಲಿ ತಿಳಿಸಿದೆ.

ಇದು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ ನಂತರ, ಜಿಲ್ಲಾ ಕಾನೂನು ಪಾಲಕರು ಸ್ವಪ್ರೇರಿತ ಕಾನೂನು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಸುದ್ಧಿಯಾ ಗುವ ತನಕ ಕಾನೂನು ಪಾಲಕರು ಕಾಯಬೇಕೆ? ಮಲ್ಪೆಯ ಸಾರ್ವಜನಿಕ ಪ್ರದೇಶದಲ್ಲಿ ಹಾಡಹಗಲು ಬಹಿರಂಗವಾಗಿ ಈ ಅಪರಾಧ ಕೃತ್ಯ ನಡೆದಿದೆ ಎಂದರೆ, ಹಲ್ಲೆಕೋರರಿಗೆ ಕಾನೂನಿನ ಭಯವಿಲ್ಲದ ವಾತಾವರಣ ಸೃಷ್ಟಿಯಾಗಿದೆ ಎಂದೆ ಅರ್ಥೈಸ ಬೇಕಾಗುತ್ತದೆ.

ಉಡುಪಿಯಲ್ಲಿ ‘ಆದಿಉಡುಪಿ ಬೆತ್ತಲೆ ಪ್ರಕರಣ’ ನಡೆದು ಎರಡು ದಶಕಗಳು ಸಂದು ಹೋಗಿವೆ. ಈ ಎರಡು ದಶಕಗಳಲ್ಲಿ, ಕಾನೂನನ್ನು ಲೆಕ್ಕಿಸದೇ, ಹತ್ತಾರು ಗುಂಪು ಹಿಂಸೆಯ ಅಪರಾಧಗಳು ನಡೆದಿವೆ ಎನ್ನುವುದು, ಕರಾವಳಿಯ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಒಳ್ಳೆಯ ಸಂಗತಿ ಏನಲ್ಲ. ಈ ಘಟನೆಯ ನಂತರ ವಾದರೂ, ಜಿಲ್ಲೆಯ ಕಾನೂನುಪಾಲಕರು, ನಾಗರಿಕರ ರಕ್ಷಣೆಗೆ ರಾಜಿ ಇಲ್ಲದೆ ಮುಂಜಾಗ್ರತಾ ಕ್ರಮ ಗಳನ್ನು ಯೋಜಿಸಿ, ಶಾಂತಿ ಸೌಹಾರ್ದಗಳ ಸಾಮಾಜಿಕ ಬದುಕಿಗೆ ಅವಕಾಶ ಕಲ್ಪಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಸಹಬಾಳ್ವೆಯ ಸಂಚಾಲಕ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News