ನಾನು ನಿವೃತ್ತನಾಗಿದ್ದೇನೆ, ಆದರೆ ದಣಿದಿಲ್ಲ: ನಿವೃತ್ತ ಶಿಕ್ಷಕ ಶೇಖ್ ಅಲಿ
ಅಂಕೋಲಾ: ನಾನು ಸೇವೆಯಿಂದ ನಿವೃತ್ತನಾಗಿದ್ದೇನೆಯೇ ಹೊರತು ದಣಿದುಕೊಂಡಿಲ್ಲ ಎಂದು ಉ.ಕ. ಜಿಲ್ಲೆಯ ದಾಂಡೇಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 40ವರ್ಷಗಳ ಕಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸಿ 2000ನೇ ಇಸ್ವಿಯಲ್ಲಿ ನಿವೃತ್ತರಾಗಿರುವ ಅಂಕೋಲಾದ ಬಬ್ರುವಾಡ ನಿವಾಸಿ ಶೇಖ್ ಅಲಿ ಮುಹಮ್ಮದ್ ಸ್ವಾಲೇಹ್ ಹೇಳಿದ್ದಾರೆ.
ಅವರು ಗುರುವಾರ ಆಲ್ ಇಂಡಿಯಾ ಐಡಿಯಲ್ ಟೇಚರ‍್ಸ್ ಅಸೋಸಿಯೇಶನ್ ಉತ್ತರಕನ್ನಡ ಜಿಲ್ಲೆ ಅವರ ಜೀವಮಾನದ ಸಾಧನೆಗಾಗಿ ಕೊಡಮಾಡಿದ ಲೈಫ್ ಟೈಮ್ ಅಚಿವ್ಮೆಂಟ್ ಐಡಿಯಲ್ ಟೀಚರ್ ಅವಾರ್ಡ-2024 ಸ್ವೀಕರಿಸಿ ಮಾತನಾಡಿದರು.
ಆಲ್ ಇಂಡಿಯಾ ಐಡಿಯಲ್ ಟೀಚರ‍್ಸ್ ಅಸೋಸಿಯೇಶನ್ ಉತ್ತರಕನ್ನಡ ಜಿಲ್ಲಾ ಪದಾಧಿಕಾರಿಗಳು ವಿಶಿಷ್ಟ ರೀತಿಯಲ್ಲಿ ಶಿಕ್ಷಕರ ದಿನ ವನ್ನು ಆಚರಿಸಿದ್ದು ಜಿಲ್ಲೆಯ ಇಬ್ಬರು ನಿವೃತ್ತ ಶಿಕ್ಷಕರಾದ ಶೇಕ್ ಅಲಿ ಮುಹಮ್ಮದ್ ಸ್ವಾಲೇಹ್ ಹಾಗೂ ಕುಮಟಾ ತಾಲೂಕಿನ ಗುಡ್ ಕಾಗಲ್ ನ ನಿವೃತ್ತ ಶಿಕ್ಷಕ ಅಲ್ ದಾಮಕರ್ ಅವರ ಮನೆಗೆ ತೆರಳಿ ಕುಟುಂಬದ ಸದಸ್ಯರ ನಡುವೆ ಅವರನ್ನು ಸನ್ಮಾನಿಸಿದ್ದು, ಅವರ ಜೀವಮಾನ ಸಾಧನೆಗಾಗಿ ಐಡಿಯಲ್ ಟೀಚರ್ ಅವಾರ್ಡ್ ನೀಡಿ ಗೌರವಿಸಲಾಯಿತು.
ಪ್ರಶಸ್ತಿಪತ್ರ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಿ ಮಾತನಾಡಿದ ಆಲ್ ಇಂಡಿಯಾ ಐಡಿಯಲ್ ಟೀಚರ‍್ಸ್ ಅಸೋಸಿಯೇಶನ್ ಕರ್ನಾಟಕ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ, ಶಿಕ್ಷಕರು ಸಮಾಜದ ನಿರ್ಮಾಪಕರಾಗಿದ್ದಾರೆ. ಅವರ ಸೇವೆಯನ್ನು ಸ್ಮರಿಸುವುದು, ಅವರನ್ನು ಗೌರವಿಸಿ ಸನ್ಮಾನಿಸುವುದು ನಮ್ಮ ಕರ್ತವ್ಯವಾಗಿದ್ದು ಉ.ಕ ಜಿಲ್ಲೆಯ ಇಬ್ಬರು ಮಹಾನುಭಾವ ಶಿಕ್ಷಕರನ್ನು ಸನ್ಮಾಸಿ ಗೌರವಿಸುತ್ತಿರುವುದು ತುಂಬಾ ಸಂತೋಷವಾಗಿದೆ ಎಂದರು.
ಸಮುದಾಯದೊಂದಿಗೆ ಅತ್ಯಂತ ನಿಕಟವಾಗಿದ್ದ ಶೇಖ ಅಲಿಯವರು ಹಲವು ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ನೂರಾರು ಶಿಕ್ಷಕರನ್ನು, ವೈದ್ಯರನ್ನು ಇಂಜಿನೀಯರ್ ಗಳನ್ನು ಇವರು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಮುಸ್ಲಿಮ್ ಹೆಣ್ಣುಮಕ್ಕಳ ವಿದ್ಯಾಬ್ಯಾಸದ ಕುರಿತು ವಿಶೇಷ ಕಾಳಜಿ ವಹಿಸಿದ್ದರು ಎಂದರು.
ಈ ಸಂದರ್ಭ ಐಟಾ ರಾಜ್ಯಕಾರ್ಯದರ್ಶಿ ಯಾಸೀನ್ ಭಿಕ್ಬಾ, ಉ.ಕ.ಜಿಲ್ಲಾಧ್ಯಕ್ಷ ಅಲಿ ಮನೆಗಾರ, ಜಿಲ್ಲಾ ಕಾರ್ಯದಶಿ ಇಸ್ಮಾಯಿಲ್ ಮುಜಾವರ್, ಕುಮಟಾ ಶಾಖೆಯ ಅಧ್ಯಕ್ಷ ಮುಹಮ್ಮದ್ ಶಫಿ ಮೊನ್ನಾ ಉಪಸ್ಥಿತರಿದ್ದರು.