ಕಾರವಾರ | ಮುರಿದು ಬಿದ್ದ ಕಾಳಿ ಸೇತುವೆ: ನದಿಪಾಲಾದ ಲಾರಿ
ಕಾರವಾರ, ಆ.7: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-66ರ ಕೋಡಿಬಾಗದಲ್ಲಿರುವ ಕಾಳಿ ಸೇತುವೆಯು ಮಂಗಳವಾರ ತಡರಾತ್ರಿ ಕುಸಿದು ಬಿದ್ದಿದೆ. ಈ ವೇಳೆ ಸೇತುವೆಯಲ್ಲಿ ಸಂಚರಿಸುತ್ತಿದ್ದ ಲಾರಿಯೊಂದು ನದಿಪಾಲಾಗಿದ್ದು, ಅದರ ಚಾಲಕನನ್ನು ರಕ್ಷಿಸಲಾಗಿದೆ.
ರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಾಳಿ ನದಿಯ ಹಳೆಯ ಸೇತುವೆಯು ಮೂರು ಕಡೆಗಳಲ್ಲಿ ಏಕಾಏಕಿ ಮುರಿದು ಬಿದ್ದಿದೆ. ಈ ವೇಳೆ ಸೇತುವೆ ಮೇಲೆ ಗೋವಾದಿಂದ ಕಾರವಾರ ಕಡೆಗೆ ಸಂಚರಿಸುತ್ತಿದ್ದ ತಮಿಳುನಾಡು ಮೂಲದ ಲಾರಿಯೊಂದು ನದಿಗೆ ಬಿದ್ದಿದೆ. ಲಾರಿ ಚಾಲಕ ತಮಿಳುನಾಡು ಮೂಲದ ರಾಧಾಕೃಷ್ಣ ನಾಳಾ ಸ್ವಾಮಿ (37) ಎಂಬವರನ್ನು ರಕ್ಷಣೆ ಮಾಡಲಾಗಿದೆ. ಗಂಭೀರಾವಸ್ಥೆಯಲ್ಲಿರುವ ಅವರನ್ನು ಕಾರವಾರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಇದ್ದಾರೆ.
ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-66ರಲ್ಲಿನ ಕಾಳಿ ನದಿಗೆ ಎರಡು ಸೇತುವೆಗಳಿವೆ. ಗೋವಾ ಕಡೆಯಿಂದ ಕಾರವಾರದತ್ತ ವಾಹನಗಳು ಸಂಚರಿಸುತ್ತಿದ್ದ ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಈ ಸೇತುವೆ ಏಕಾಏಕಿ ಕುಸಿದುಬಿದ್ದಿದೆ.
ಸದ್ಯ ರಸ್ತೆಯ ಎರಡೂ ಕಡೆಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ. ಸೇತುವೆ ಕುಸಿದು ಬಿದ್ದಿರುವುದನ್ನು ನೋಡಲು ಜನರ ದಂಡೇ ಆಗಮಿಸುತ್ತಿದೆ.