ಕಾರವಾರ| ಸೀಬರ್ಡ್ ನೌಕಾನೆಲೆ ಫೋಟೊ, ಇತರ ಮಾಹಿತಿ ರವಾನೆ ಆರೋಪ: ಮೂವರು ಎನ್‌ಐಎ ವಶಕ್ಕೆ
ಕಾರವಾರ: ಸೀಬರ್ಡ್ ನೌಕಾನೆಲೆ ಫೋಟೋಗಳು ಮತ್ತು ಇತರ ಮಾಹಿತಿಯನ್ನು ರವಾನೆ ಮಾಡಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ಎನ್‌ಐಎ (NIA) ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ತೋಡೂರಿನ ಸುನೀಲ್ ನಾಯ್ಕ್, ಮುದುಗಾದ ವೇತನ್ ತಾಂಡೇಲ್ ಮತ್ತು ಹಳವಳ್ಳಿಯ ಅಕ್ಷಯ್ ರವಿ ನಾಯ್ಕ್ ಎಂಬವರನ್ನು ವಶಕ್ಕೆ ಪಡೆದ ಎನ್‌ಐಎ ಡಿವೈಎಸ್‌ಪಿ ಮತ್ತು ಮೂವರು ಇನ್ಸ್‌ಪೆಕ್ಟರ್‌ಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿಗಳು ಸೀಬರ್ಡ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. 2023ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಎನ್‌ಐಎ ಕಾರ್ಯಾಚರಣೆಯಲ್ಲಿ ದೀಪಕ್ ಮತ್ತು ಇತರರನ್ನು ಬಂಧಿಸಲಾಗಿತ್ತು. ವಿದೇಶಿ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದ ಆರೋಪಗಳು ಅವರ ವಿರುದ್ಧ ಕೇಳಿ ಬಂದಿದ್ದು, ದೀಪಕ್ ಮತ್ತು ಇತರರನ್ನು ವಿಚಾರಣೆಗೆ ಒಳಪಡಿಸಿದಾಗ, ಸುನೀಲ್ ನಾಯ್ಕ್, ವೇತನ್ ತಾಂಡೇಲ್, ಮತ್ತು ಅಕ್ಷಯ್ ರವಿ ನಾಯ್ಕ್ ಎಂಬವರ ಹೆಸರುಗಳು ಬಹಿರಂಗವಾಗಿದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೀಬರ್ಡ್ ನೌಕಾನೆಲೆ ಫೋಟೊ ಮತ್ತು ಇತರ ಮಾಹಿತಿಯನ್ನು ದೀಪಕ್ ಮತ್ತು ಇತರರಿಗೆ ರವಾನಿಸಿರುವ ಕಾರಣ ಈ ಮೂವರ ಖಾತೆಗಳಿಗೆ ಹಣ ಜಮಾ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಕ್ಷಯ್ ನಾಯ್ಕ್ ಸೀಬರ್ಡ್ ನೌಕಾನೆಲೆ ಒಳಗೆ ಕೆಲಸ ಮಾಡುತ್ತಿದ್ದ, ಬಳಿಕ ಗೋವಾದಲ್ಲಿ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಎನ್‌ಐಎ ಅಧಿಕಾರಿಗಳು ಅಕ್ಷಯ್ ರವಿ ನಾಯ್ಕ್‌ನ ಮೊಬೈಲ್ ಮತ್ತು ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಿ, ವಿಚಾರಣೆಗಾಗಿ ನೋಟಿಸ್ ನೀಡಿದ ನಂತರ ಬಿಟ್ಟಿದ್ದಾರೆ. ಇಬ್ಬರನ್ನು ಗುಪ್ತ ಸ್ಥಳದಲ್ಲಿ ಇನ್ನೂ ತನಿಖೆಗೆ ಒಳಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.