ಕಾರವಾರ: ಬಸ್ ನ ಬ್ರೇಕ್ ಸಮಸ್ಯೆಯಾಗಿ ಕಾಡಿನಲ್ಲಿ ಸಿಲುಕಿದ 20ಕ್ಕೂ ಅಧಿಕ ಮಂದಿ ಪ್ರವಾಸಿಗರು

Update: 2025-02-17 21:42 IST
ಕಾರವಾರ: ಬಸ್ ನ ಬ್ರೇಕ್ ಸಮಸ್ಯೆಯಾಗಿ ಕಾಡಿನಲ್ಲಿ ಸಿಲುಕಿದ 20ಕ್ಕೂ ಅಧಿಕ ಮಂದಿ ಪ್ರವಾಸಿಗರು
  • whatsapp icon

ಕಾರವಾರ: ವಾಹನದ ಬ್ರೇಕ್ ಸಮಸ್ಯೆಯಾಗಿ 20ಕ್ಕೂ ಅಧಿಕ ಮಂದಿ ಪ್ರವಾಸಿಗರು ಕಾಡಿನಲ್ಲಿ ಸಿಲುಕಿದ್ದು, ಅವರನ್ನು 112 ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣೆ ಮಾಡಿದ ಘಟನೆ ಅಂಕೋಲಾ ತಾಲೂಕಿನ ವ್ಯಾಪ್ತಿಯ ಯಾಣ ಘಟ್ಟದಲ್ಲಿ ಸಂಭವಿಸಿದೆ.

ಬೆಂಗಳೂರು ಮೂಲದ ಪ್ರವಾಸಿಗರ ತಂಡವೊಂದು ಯಾಣ ಪ್ರವಾಸಕ್ಕೆಂದು ಬಂದಿದ್ದರು. 16 ಮಂದಿ ಯುವಕರು, 8 ಮಂದಿ ಯುವತಿಯರು ಹಾಗೂ ಓರ್ವ ಗೈಡ್ ಸೇರಿ 25 ಮಂದಿ ಮಿನಿ ಬಸ್ ಮಾಡಿಸಿಕೊಂಡು ಬಂದಿದ್ದು, ಸಂಜೆ ಬೆಂಗಳೂರಿಗೆ ವಾಪಸ್ಸಾಗಲು ಮುಂದಾಗಿದ್ದ ಸಂದರ್ಭದಲ್ಲಿ ವಾಹನದ ಬ್ರೇಕ್ ಡೌನ್ ಆಗಿದೆ. ಯಾಣ ಘಟ್ಟದಲ್ಲಿ ಕರೆ ಮಾಡಲು ನೆಟ್ವರ್ಕ್ ಕೂಡಾ ಇಲ್ಲದಿರುವುದರಿಂದ, ಅಲ್ಲದೇ ರಾತ್ರಿ ಕೂಡಾ ಆಗಿದ್ದರಿಂದ ಯಾವುದೇ ನೆರವು ದೊರೆಯದೇ ಪ್ರವಾಸಿಗರು ಕಂಗಾಲಾಗಿದ್ದರು.

ಈ ವೇಳೆ ಪ್ರವಾಸಿಗರು ಹರಸಾಹಸಪಟ್ಟು 112 ತುರ್ತು ನೆರವು ಸಂಖ್ಯೆಗೆ ಸಹಾಯಕ್ಕಾಗಿ ನೆರವು ಕೋರಿ ವಾಯ್ಸ್ ಮೆಸೇಜ್ ಕಳುಹಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಗೋಕರ್ಣದ 112 ಸಿಬ್ಬಂದಿ, ಪ್ರವಾಸಿಗರ ನೆರವಿಗೆ ಧಾವಿಸಲು ಸ್ಥಳದ ಮಾಹಿತಿಗಾಗಿ ಅವರನ್ನು ಸಂಪರ್ಕಿಸಲು ಯತ್ನಿಸಿದರಾದರೂ ನೆಟ್ವರ್ಕ್ ಇಲ್ಲದ ಹಿನ್ನಲೆ ಸಂಪರ್ಕ ಸಾಧ್ಯವಾಗಿರಲಿಲ್ಲ. ಬಳಿಕ ಯಾಣ ಘಟ್ಟದಲ್ಲಿ ಪ್ರವಾಸಿಗರನ್ನು ಹುಡುಕಿ ಹೊರಟಿದ್ದು, ರಾತ್ರಿ 9:45ರ ಸುಮಾರಿಗೆ ಪ್ರವಾಸಿಗರನ್ನು ಪತ್ತೆಹಚ್ಚುವಲ್ಲಿ 112 ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಈ ವೇಳೆ ಪರಿಶೀಲಿಸಿದಾಗ ಪ್ರವಾಸಿಗರ ವಾಹನದ ಬ್ರೇಕ್ ಡೌನ್ ಆಗಿದ್ದು ತಿಳಿದು ಬಂದಿದೆ. ನಂತರ ಜೆಸಿಬಿ, ಅಚವೆ ಉಪಠಾಣೆ ಸಿಬ್ಬಂದಿ ನೆರವಿನೊಂದಿಗೆ ಪ್ರವಾಸಿಗರ ಬಸ್ಸನ್ನು ಸುರಕ್ಷಿತ ಸ್ಥಳಕ್ಕೆ ತಂದು ನಿಲ್ಲಿಸಿ, ಪ್ರವಾಸಿಗರನ್ನು ಬೇರೆ ವಾಹನದ ಮೂಲಕ ಹಿಲ್ಲೂರು ಮಾರ್ಗವಾಗಿ ಮುಖ್ಯ ಹೆದ್ದಾರಿಗೆ ತಲುಪಿಸಿದರು.

ಬಳಿಕ ಅಲ್ಲಿಂದ ಎಲ್ಲ ಪ್ರವಾಸಿಗರೂ ಸುರಕ್ಷಿತವಾಗಿ ಬೆಂಗಳೂರಿಗೆ ತೆರಳಲು 112 ಸಿಬ್ಬಂದಿ ನೆರವಾಗಿದ್ದಾರೆ.

ತುರ್ತು ಸಂದರ್ಭದಲ್ಲಿ ನೆರವು ನೀಡಿ ಸುರಕ್ಷಿತವಾಗಿ ಕರೆತಂದ 112 ಸಿಬ್ಬಂದಿ ಕಾರ್ಯಕ್ಕೆ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News