ಪ್ರಶ್ನಿಸುವ ರಾಹುಲ್ ಮತ್ತು ಉತ್ತರಿಸಲಾರದ ಮೋದಿ

ಸತ್ಯವನ್ನು ಎದುರು ಹಿಡಿಯುವ ರಾಹುಲ್ ಮತ್ತು ಸತ್ಯವನ್ನು ಎದುರಿಸಲಾರದ ಮೋದಿ. ಧರ್ಮವನ್ನು ಬಳಸಿಕೊಳ್ಳುತ್ತ ರಾಜಕೀಯ ಮಾಡುವುದನ್ನು ವಿರೋಧಿಸುವ ರಾಹುಲ್ ಮತ್ತು ಹಿಂದುತ್ವದ ಮರೆಯಲ್ಲಿ ನಿಂತು ಬಾಣ ಹೂಡುವ ಮೋದಿ. ಈ ದೇಶದ ರೈತರು, ಕಾರ್ಮಿಕರು ಮತ್ತು ಬಡವರ ಪರ ದನಿಯಾಗುತ್ತಿರುವ ರಾಹುಲ್ ಮತ್ತು ಕಾರ್ಪೊರೇಟ್ ಮಿತ್ರರಿಗಾಗಿ ಕೆಲಸ ಮಾಡುತ್ತಿರುವ ಮೋದಿ. ಇವತ್ತಿನ ಜನಸಾಮಾನ್ಯರ ಜರೂರುಗಳ ಬಗ್ಗೆ ಪ್ರತಿಪಾದಿಸುವ ರಾಹುಲ್ ಮತ್ತು ಹಳೆಯದನ್ನು ಹಂಗಿಸುತ್ತ, ನಾಳೆಯ ಭ್ರಮೆಯಲ್ಲಿ ಜನರನ್ನು ಮುಳುಗಿಸಿ ನಿರಾಳವಾಗಿರಲು ಬಯಸುವ ಮೋದಿ. ಎಲ್ಲ ವಿಚಾರಗಳನ್ನೂ ಸರಳವಾಗಿ, ನಿರರ್ಗಳವಾಗಿ ಮಾತಾಡಬಲ್ಲ ರಾಹುಲ್ ಮತ್ತು ಟೆಲಿಪ್ರಾಂಪ್ಟರ್ ಇಲ್ಲದೆ ಮಾತಾಡದ ಮೋದಿ. ಹೀಗೆ ರಾಹುಲ್ ಮತ್ತು ಮೋದಿ ಮುಖಾಮುಖಿ ಹೇಗಿರುತ್ತದೆ ಎಂಬುದನ್ನು ಹಳೆಯ ಕೆಲವು ನಿದರ್ಶನಗಳನ್ನು ನೆನಪಿಸಿಕೊಳ್ಳುವ ಮೂಲಕ ಕಣ್ಣೆದುರು ತಂದುಕೊಳ್ಳಬಹುದು.

Update: 2024-07-27 10:11 GMT

೧. ಲೋಕಸಭೆ ಚುನಾವಣೆ ಹೊತ್ತಲ್ಲಿ ಮೋದಿ, ತಾವು ಇಂತಿಷ್ಟೇ ಸೀಟು ಗೆಲ್ಲುತ್ತೇವೆ ಎಂದು ತಾವೇ ಹೇಳಿಬಿಡುವ ಮೂಲಕ ಜನರ ಮೇಲೆ ಪ್ರಭಾವ ಬೀರಿ ಗೆದ್ದುಬಿಡಬಲ್ಲ ಭ್ರಮೆಯಲ್ಲಿದ್ದರು. ‘ಚಾರ್ ಸೌ ಪಾರ್’ ಎಂಬ ಮೋದಿ ಘೋಷಣೆ ಅದೇ ಭ್ರಮೆಯಿಂದ ಬಂದದ್ದಾಗಿತ್ತು.

ಆಗ ರಾಹುಲ್ ಎಂಥ ಉತ್ತರ ಕೊಟ್ಟಿದ್ದರು ಎಂಬುದನ್ನು ಗಮನಿಸೋಣ.

ದಿಲ್ಲಿಯಲ್ಲಿ ನಡೆದ ‘ಇಂಡಿಯಾ’ ಒಕ್ಕೂಟದ ರ್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್, ‘‘೪೦೦ ಸೀಟುಗಳನ್ನು ಗೆಲ್ಲುವುದಾಗಿ ಬಿಜೆಪಿ ಹೇಳುತ್ತಿದೆ. ಆದರೆ, ಇವಿಎಂ, ಮ್ಯಾಚ್ ಫಿಕ್ಸಿಂಗ್, ವಿರೋಧ ಪಕ್ಷಗಳ ನಾಯಕರ ಮೇಲೆ ಒತ್ತಡ ಹೇರುವುದು ಹಾಗೂ ಮಾಧ್ಯಮಗಳನ್ನು ಖರೀದಿಸದಿದ್ದಲ್ಲಿ ಬಿಜೆಪಿ ೧೮೦ ಸೀಟುಗಳನ್ನು ಗೆಲ್ಲುವುದು ಕೂಡ ಕಷ್ಟವಿದೆ’’ ಎಂದು ವ್ಯಂಗ್ಯವಾಡಿದ್ದರು.

ಚುನಾವಣೆಗೆ ಇನ್ನು ಕೆಲವೇ ದಿನಗಳು ಇರುವಾಗ ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿಗೆ ಕಳಿಸಿದ್ದರ ಬಗ್ಗೆ, ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದರ ಬಗ್ಗೆ ಪ್ರಸ್ತಾಪಿಸಿದ್ದ ರಾಹುಲ್, ಹೀಗೆಲ್ಲ ಮಾಡುವ ಮೂಲಕ, ಚುನಾವಣಾ ಆಯೋಗದ ಮೇಲೆ ತನ್ನ ಹತೋಟಿ ಸಾಧಿಸಿ ಚುನಾವಣೆಯನ್ನು ಮ್ಯಾಚ್ ಫಿಕ್ಸಿಂಗ್ ಮಾಡಲು ಮೋದಿ ಸರಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದ್ದರು. ರಾಹುಲ್ ಅವರ ಈ ಮಾತು ಮೋದಿಯನ್ನು ದಂಗುಬಡಿಸಿರಲೇಬೇಕು. ರಾಹುಲ್ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಮೋದಿಯವರಿಂದ ಉತ್ತರವೇ ಇರಲಿಲ್ಲ.

೨. ಕಳೆದ ೧೦ ವರ್ಷಗಳ ಅವಧಿಯಲ್ಲಿ ಮೋದಿ ಒಂದೇ ಒಂದು ಲೈವ್ ಸುದ್ದಿಗೋಷ್ಠಿಯನ್ನು ಎದುರಿಸಲಿಲ್ಲ. ಆದರೆ ರಾಹುಲ್ ಹಲವು ವರ್ಷಗಳಿಂದ ಸುದ್ದಿಗೋಷ್ಠಿಗಳಲ್ಲಿ ಪತ್ರಕರ್ತರ ಪ್ರಶ್ನೆಗಳನ್ನು ಬಹಿರಂಗವಾಗಿ ಎದುರಿಸಬಲ್ಲವರಾಗಿದ್ದಾರೆ.

ಮೋದಿಗೆ ಅದು ಸಾಧ್ಯವಿಲ್ಲ. ಈ ದೇಶದ ಪ್ರಧಾನಿ ಮೋದಿಗೆ, ‘‘ನೀವು ಮಾವಿನ ಹಣ್ಣನ್ನು ಕಚ್ಚಿ ತಿನ್ನುತ್ತೀರೋ, ಕತ್ತರಿಸಿ ತಿನ್ನುತ್ತೀರೊ?’’ ಎಂಬ ನಟನೊಬ್ಬನ ಪ್ರಶ್ನೆಗೆ ಆತನನ್ನೂ ಮೀರಿಸುವ ನಟನೆ ಮಾಡುತ್ತ ಉತ್ತರಿಸಲು ಮಾತ್ರ ಸಾಧ್ಯ.

ಅಂಥವರು ಶ್ವೇತಭವನದಲ್ಲಿ ಸುದ್ದಿಗೋಷ್ಠಿ ಎದುರಿಸಬೇಕಾಗಿ ಬಂದಿತ್ತು. ಕಡೆಗೆ ಎರಡು ಪ್ರಶ್ನೆಗಳನ್ನು ಮಾತ್ರ ತೆಗೆದುಕೊಂಡ ಮೋದಿ ಅಲ್ಲಿಯೂ ಹೇಳಿದ್ದು ಸುಳ್ಳುಗಳನ್ನೇ.

೩. ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿ ಹೇಳಿದ ಮಾತೊಂದು ಹೀಗಿತ್ತು:

‘‘ಜಾತಿ ಜನಗಣತಿಯಾಗಬೇಕು. ಅದರಿಂದ ದೇಶದ ಎಕ್ಸ್‌ರೇ ಸಿಕ್ಕಂತಾಗುತ್ತದೆ. ಹಾಲು ನೀರು ಬೇರೆ ಬೇರೆ ಆಗಬೇಕು. ಒಬಿಸಿ, ಎಸ್‌ಸಿ, ಎಸ್‌ಟಿ, ಆರ್ಥಿಕ ದುರ್ಬಲ ವರ್ಗ, ಅಲ್ಪಸಂಖ್ಯಾತರು ದೇಶದಲ್ಲಿ ತಮ್ಮ ನ್ಯಾಯಯುತ ಪಾಲು ಪಡೆಯುವಂತಾಗಬೇಕು’’ ಎಂದು ರಾಹುಲ್ ಹೇಳಿದ್ದರು.

ರಾಹುಲ್ ಮಾತಿನಲ್ಲಿ ಎಲ್ಲೂ ಆಸ್ತಿ ಮರು ಹಂಚಿಕೆ ಮಾತು ಇರಲಿಲ್ಲ. ಹಾಗೆ ಅರ್ಥ ಬರುವಂತೆಯೂ ಅವರ ಹೇಳಿಕೆ ಇರಲಿಲ್ಲ. ಆದರೆ ರಾಹುಲ್ ಮಾತಿಗೆ ಮೋದಿ ತತ್ತರಿಸಿ ರಾಹುಲ್ ಹೇಳಿಕೆಯನ್ನೇ ತಿರುಚಿ, ತಪ್ಪಾಗಿ ಜನರೆದುರು ಬಿಂಬಿಸುವ ಯತ್ನವನ್ನು ಮಾಡಿದ್ದರು.

‘‘ಕಾಂಗ್ರೆಸ್ ನಿಮ್ಮೆಲ್ಲರ ಆಸ್ತಿ ಸರ್ವೇ ಮಾಡಿ ಮುಸ್ಲಿಮರಿಗೆ ಹಂಚಲಿದೆ. ಹಿಂದೂ ಮಹಿಳೆಯರ, ಆದಿವಾಸಿ ಮಹಿಳೆಯರ ಚಿನ್ನ, ಬೆಳ್ಳಿಯನ್ನೆಲ್ಲ ಕಾಂಗ್ರೆಸ್ ಮುಸ್ಲಿಮರಿಗೆ ಹಂಚಲಿದೆ’’ ಎಂದು ಮೋದಿ ಅತ್ಯಂತ ಕೆಟ್ಟ ರೀತಿಯಲ್ಲಿ ಹೇಳಿದ್ದರು.

‘‘ನಿಮ್ಮ ಆಸ್ತಿಯನ್ನೆಲ್ಲ ಕಸಿದು, ಯಾರಿಗೆ ಹೆಚ್ಚು ಮಕ್ಕಳಿದ್ದಾರೋ ಅವರಿಗೆ ಕೊಡಲಾಗುತ್ತದೆ, ನುಸುಳುಕೋರರಿಗೆ ಕೊಡಲಾಗುತ್ತದೆ’’ ಎಂಬ ವಿಕೃತ ಹೇಳಿಕೆ ಮೋದಿಯಿಂದ ಬಂದಿತ್ತು. ದ್ವೇಷವನ್ನು ಹೊತ್ತಿಸುವ, ಹಬ್ಬಿಸುವ ರೀತಿಯಲ್ಲಿಯೇ ಮೋದಿ ಮಾತುಗಳು ಮುಂದುವರಿದಿದ್ದವು.

ಮಂಗಲಸೂತ್ರ, ಮಚಲಿ, ಮಟನ್, ಮುಜ್ರಾ, ಮುಸ್ಲಿಮ್ ಇತ್ಯಾದಿಯಾಗಿ ಮುಸ್ಲಿಮ್ ವಿರೋಧಿ ನಿಲುವನ್ನು ಸ್ಪಷ್ಟವಾಗಿಯೇ ತೋರಿಸಿಕೊಂಡಿದ್ದರು.

೪. ಮುಂಬೈನಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆ ಸಮಾರೋಪದಲ್ಲಿ ಮಾತನಾಡಿದ್ದ ರಾಹುಲ್, ಮೋದಿಯನ್ನು ಉಲ್ಲೇಖಿಸುತ್ತ, ‘‘ದೇಶದ ರಾಜನ ಶಕ್ತಿ ಇವಿಎಂನಲ್ಲಿ ಅಡಗಿದೆ ಹಾಗೂ ಇವಿಎಂ ಇಲ್ಲದೆ ಮೋದಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಈ.ಡಿ., ಸಿಬಿಐ, ಐಟಿಯಲ್ಲೂ ಈ ಶಕ್ತಿ ಅಡಗಿದೆ ಮತ್ತು ನಮ್ಮ ಹೋರಾಟ ಆ ಶಕ್ತಿಯ ವಿರುದ್ಧ’’ ಎಂದಿದ್ದರು.

ಆದರೆ ಮೋದಿ ಅದನ್ನು ಪೂರ್ತಿಯಾಗಿ ತಿರುಚಿ, ಹಿಂದೂ ವಿರೋಧಿ ಎಂಬಂತೆ ರಾಹುಲ್ ವಿರುದ್ಧ ಅಪಪ್ರಚಾರ ಮಾಡಿದ್ದರು. ಈ ದೇಶದ ನಾರಿಶಕ್ತಿಗೆ ಅವಮಾನವಾಗಿದೆ ಎಂದು ರಾಹುಲ್ ವಿರುದ್ಧ ಮಹಿಳೆಯರನ್ನು ಎತ್ತಿಕಟ್ಟುವ ರೀತಿಯಲ್ಲಿ ಮಾತಾಡಿದ್ದರು.

ಆದರೆ, ತಾವು ಹೇಳಿರುವುದನ್ನು ವಿವರಿಸಿದ್ದ ರಾಹುಲ್, ‘‘ನಾನು ಹೇಳಿದ ‘ಶಕ್ತಿ’ ಎಂಬುದು ಅಧಿಕಾರ. ಮೋದಿಯ ಆ ಶಕ್ತಿಯ ಮುಖವಾಡ ಮತ್ತು ನಾವು ಅದರ ವಿರುದ್ಧ ಹೋರಾಡುತ್ತಿದ್ದೇವೆ. ಅಂತಹ ಶಕ್ತಿಯೇ ಇಂದು ಭಾರತದ ಧ್ವನಿಯನ್ನು ಕಿತ್ತುಕೊಂಡಿದೆ’’ ಎಂದು ಹೇಳಿದ್ದರು.

‘‘ನಾನು ಆ ಶಕ್ತಿಯ ವಿರುದ್ಧ ಹೋರಾಡುತ್ತಿದ್ದೇನೆ ಮತ್ತು ಅದು ನರೇಂದ್ರ ಮೋದಿಯೂ ಹೌದು. ಇದು ಯಾವುದೇ ರೀತಿಯ ಧಾರ್ಮಿಕ ಶಕ್ತಿಯಲ್ಲ. ಬದಲಾಗಿ, ಅಧರ್ಮ, ಭ್ರಷ್ಟಾಚಾರ ಮತ್ತು ಸುಳ್ಳಿನ ಶಕ್ತಿ’’ ಎಂದು ರಾಹುಲ್ ಗಾಂಧಿ ವಿವರಿಸಿದ್ದರು.

೫. ಮೋದಿ ಮತ್ತು ಅದಾನಿ ನಡುವಿನ ಬಾಂಧವ್ಯದ ಬಗ್ಗೆ ಪ್ರಶ್ನಿಸುತ್ತಲೇ ಬಂದವರು ರಾಹುಲ್. ಅದನ್ನು ಸಹಿಸಲು ಮೋದಿಗೆ ಸಾಧ್ಯವಿರಲಿಲ್ಲವಾದರೂ, ಅದಕ್ಕೆ ಉತ್ತರಿಸಬಲ್ಲ ಛಾತಿಯೇ ಅವರಿಗೆ ಇರಲಿಲ್ಲ. ಕಡೆಗೆ ಆ ವಿಚಾರವಾಗಿ ಕೂಡ ಇನ್ನೊಂದು ಸುಳ್ಳು ಹೇಳಿದ್ದರು ಮೋದಿ. ‘‘ಅಂಬಾನಿ, ಅದಾನಿಗಳ ವಿರುದ್ಧ ರಾಹುಲ್ ಮಾತನಾಡುವುದೇ ನಿಂತುಹೋಗಿದೆ. ಇಬ್ಬರೂ ಕಪ್ಪುಹಣವನ್ನು ಟೆಂಪೋಗಳಲ್ಲಿ ತುಂಬಿ ಕಾಂಗ್ರೆಸ್ ಕಚೇರಿಗೆ ಕಳುಹಿಸಿರಬೇಕು’’ ಎಂದಿದ್ದರು.

ವಾಸ್ತವ ಏನೆಂದರೆ ಅಂಬಾನಿ, ಅದಾನಿ ವಿರುದ್ಧವಾಗಿ ಮಾತಾಡುವುದನ್ನೆಂದೂ ರಾಹುಲ್ ನಿಲ್ಲಿಸಿರಲೇ ಇಲ್ಲ. ಆದರೆ ಮೋದಿಗೆ ಸತ್ಯ ಬೇಕಿರಲಿಲ್ಲ. ಸುಳ್ಳು ಹೇಳಿ, ಜನರ ದಾರಿ ತಪ್ಪಿಸಲು ಯತ್ನಿಸಿದ್ದರು.

೬. ಮೊನ್ನೆ ಸರಕಾರ ರಚನೆ ಬಳಿಕ ಸಂಸತ್ತಿನ ಮೊದಲ ಅಧಿವೇಶನದಲ್ಲಿ ರಾಹುಲ್ ಮಾಡಿದ ಭಾಷಣ ಹಿಂದಿನ ಹತ್ತು ವರ್ಷಗಳ ವಿಪಕ್ಷಗಳ ದನಿಯನ್ನೂ ಕೂಡಿಸಿಕೊಂಡ ಹಾಗೆ ಇತ್ತು. ಸರಕಾರ ನಡುಗುವ ಹಾಗೆ ಮಾಡಿತ್ತು.

ಮೋದಿ, ಬಿಜೆಪಿ, ಆರೆಸ್ಸೆಸ್ ಮಾತ್ರ ಇಡೀ ಹಿಂದೂ ಸಮುದಾಯವಲ್ಲ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಬಿಜೆಪಿ ಈವರೆಗೂ ಕಟ್ಟಿಕೊಂಡಿದ್ದ ಭದ್ರ ಕೋಟೆಗೇ ಘಾತ ಕೊಟ್ಟಿದ್ದರು.

ಕೇಂದ್ರ ಸರಕಾರದಲ್ಲಿರುವ, ಹಿಂದೂಗಳೆಂದು ಕರೆದುಕೊಳ್ಳುವವರು ಹಿಂದೂ ಧರ್ಮದ ಮೂಲಭೂತವಾದ ಅಂಶ ಅಹಿಂಸೆಗೆ ವಿರುದ್ಧವಾಗಿ ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಧಾನಿ ಮೋದಿ, ಬಿಜೆಪಿ, ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ರಾಹುಲ್ ಹೇಳಿದ್ದ ಈ ಸತ್ಯಗಳಿಗೆ ಕಡೆಗೆ ಮೋದಿ ಉತ್ತರಿಸಿದ್ದು ಎಷ್ಟು ಹಾಸ್ಯಾಸ್ಪದವಾಗಿತ್ತು ಎಂಬುದನ್ನು ಕೂಡ ಗಮನಿಸಬೇಕು.

ಮೋದಿಗೆ ರಾಹುಲ್ ತೆರೆದಿಟ್ಟ ಸತ್ಯಗಳನ್ನು ಎದುರಿಸುವುದು ಸಾಧ್ಯವಾಗಲಿಲ್ಲ. ಹಾಗಾಗಿಯೇ ಅವರು, ಬಾಲಕ, ಬಾಲಬುದ್ಧಿ ಎಂದು ರಾಹುಲ್ ವಿರುದ್ಧ ಲೇವಡಿ ಮಾಡಿದ್ದರು.

ರಾಹುಲ್ ಹೇಳಿದ ಸತ್ಯವನ್ನು ಅರಗಿಸಿಕೊಳ್ಳಲಾರದ ಹತಾಶೆಯಲ್ಲಿ, ಅವರನ್ನು ಲೇವಡಿ ಮಾಡಿ ತನ್ನ ಹಿಂಬಾಲಕರಿಂದ ಚಪ್ಪಾಳೆ ಗಿಟ್ಟಿಸುವುದಷ್ಟನ್ನೇ ಮೋದಿ ತಮ್ಮ ಭಾಷಣದಲ್ಲಿ ಮಾಡಿದ್ದರು.

ತಮ್ಮ ಭಾಷಣದಲ್ಲಿ ಮೋದಿ ಬಿಜೆಪಿ ಸೋಲನ್ನು ದೊಡ್ಡ ಗೆಲುವೆಂಬಂತೆ ಬಿಂಬಿಸುವುದಕ್ಕೂ ವಿಫಲ ಯತ್ನ ನಡೆಸಿದ್ದರು.

ಅಗ್ನಿವೀರ್ ವಿಚಾರವಾಗಿ ಸದನಕ್ಕೆ ಕಾಂಗ್ರೆಸ್ ಸುಳ್ಳು ಹೇಳಿದೆ ಎಂದು ಆರೋಪಿಸಿದ ಮೋದಿ, ಅಗ್ನಿವೀರ್ ಬಗ್ಗೆ ವಿವರವಾಗಿ ಏನನ್ನೂ ಹೇಳಲೇ ಇಲ್ಲ. ಈ ವಿಚಾರವಾಗಿ ಎದ್ದಿರುವ ಹಲವಾರು ಪ್ರಶ್ನೆಗಳ ಬಗ್ಗೆಯೂ ಅವರೇನನ್ನೂ ಹೇಳಲಿಲ್ಲ.

ನೀಟ್ ಹಗರಣದ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳುವುದಕ್ಕೂ ಅವರು ವಿರುದ್ಧವಾಗಿಯೇ ಇದ್ದರು.

ಮಣಿಪುರದ ಬಗ್ಗೆಯೂ ಮೋದಿ ಮಾತಾಡಲಿಲ್ಲ.

೭. ಬಜೆಟ್ ವಿಚಾರದಲ್ಲಂತೂ ರಾಹುಲ್ ಬಹಳ ತೀಕ್ಷ್ಣವಾಗಿ, ಕುರ್ಚಿ ಬಚಾವ್ ಬಜೆಟ್ ಎಂದೇ ಟೀಕಿಸಿದ್ಧಾರೆ.

ಅಂಬಾನಿ, ಅದಾನಿಗಳನ್ನೇ ಸಂತುಷ್ಟಪಡಿಸಿ, ಬಡವರಿಗೆ ಏನೂ ಇಲ್ಲದಂತೆ ಮಾಡಲಾಗಿದೆ ಎಂದು ಟೀಕಿಸಿದ್ದಾರೆ.ಅಲ್ಲದೆ, ಕಾಂಗ್ರೆಸ್ ಪ್ರಣಾಳಿಕೆ ಮತ್ತು ಹಿಂದಿನ ಬಜೆಟ್‌ಗಳ ಕಾಪಿ ಪೇಸ್ಟ್ ಎಂದೂ ರಾಹುಲ್ ಟೀಕಿಸಿದ್ದಾರೆ. ಈ ಸವಾಲುಗಳಿಗೂ ಮೋದಿ ಉತ್ತರಿಸಲಾರರು.

೮. ದೇಶದಲ್ಲಿ ನಿರುದ್ಯೋಗ ದೊಡ್ಡ ಪಿಡುಗಾಗಿ ಯುವಜನರನ್ನು ಹತಾಶರಾಗಿಸಿದೆ.

ಪ್ರತೀ ವರ್ಷ ಕೋಟಿ ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದ ಮೋದಿ ಅದರಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ.

ಈ ಬಗ್ಗೆ ರಾಹುಲ್ ಗಾಂಧಿ ಮಾತಾಡುತ್ತಲೇ ಬಂದಿದ್ದಾರೆ.

ಆದರೆ ಇರುವ ಉದ್ಯೋಗಗಳಿಗೇ ಕತ್ತರಿ ಹಾಕುವ ನೀತಿ ನಿಯಮ ತಂದಿರುವ ಮೋದಿ ಅದಕ್ಕೆ ಉತ್ತರಿಸುವುದು ಹೇಗೆ?

೯. ‘‘ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಕೊಟ್ಟ ವಾಯಿದೆ ಮುಗಿದು ಎರಡು ವರ್ಷವಾಯಿತಲ್ಲ ಮೋದೀಜಿ’’ ಎಂದು ರಾಹುಲ್ ಗಾಂಧಿ ಕೇಳುತ್ತಲೇ ಇದ್ದಾರೆ.

ಆದರೆ ಮೋದಿ, ದೇಶದ ಸಂಸತ್ತಿನೊಳಗೆ ರೈತರು ಬರುವುದಕ್ಕೇ ತಡೆ ಹಾಕಿ ಅವರನ್ನು ವಿಲನ್‌ಗಳಂತೆ ನೋಡುತ್ತಿದ್ದಾರೆ. ರೈತರ ಇರುವ ಆದಾಯವೇ ಅಪಾಯಕ್ಕೆ ಸಿಲುಕುವ ಹಾಗಿದೆ ಮೋದಿ ಅವರ ಆಡಳಿತ ನೀತಿಗಳು.

೧೦. ಇನ್ನು ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ರಾಹುಲ್ ಗಾಂಧಿ ಕೇಳಿದರೆ ಮೋದಿ ಸಂಪೂರ್ಣ ನಿರುತ್ತರರಾಗುತ್ತ್ತಾರೆ.

ಯಾಕೆಂದರೆ ದ್ವೇಷ, ಸುಳ್ಳು ಕಾರುವವರನ್ನು ಇದೇ ಮೋದಿ ಟ್ವಿಟರ್‌ನಲ್ಲಿ ಫಾಲೋ ಮಾಡುತ್ತ್ತಾರೆ, ಅವರಿಗೆ ಬಿಜೆಪಿ ಟಿಕೆಟ್ ಕೊಡುತ್ತಾರೆ, ಅವರಿಗೆ ಪಕ್ಷದಲ್ಲಿ ಭಡ್ತಿ ಕೊಡುತ್ತಾರೆ. ಮತ್ತೆ ಏನಂತ ಉತ್ತರ ಕೊಡುತ್ತಾರೆ ಮೋದಿ?

೧೧. ‘‘ಮುಸಲ್ಮಾನರ ವಿರುದ್ಧ ಗುಂಪು ಹತ್ಯೆ, ಗುಂಪು ಹಲ್ಲೆಗಳು ಹೆಚ್ಚುತ್ತಲೇ ಇವೆ, ಯಾಕೆ ಅದಕ್ಕೆ ಕಡಿವಾಣ ಹಾಕುವುದಿಲ್ಲ?’’ ಎಂದು ರಾಹುಲ್ ಗಾಂಧಿ ಕೇಳಿದರೆ ಮೋದಿ ಉತ್ತರಿಸಲು ಸಾಧ್ಯವೇ?

ಸ್ವತಃ ತಾನೇ ಮುಸಲ್ಮಾನರ ಬಗ್ಗೆ ಇಲ್ಲಸಲ್ಲದ ಆರೋಪ ಹೊರಿಸಿ ಭಾಷಣ ಮಾಡಿ, ಈಗ ತನ್ನ ಪಕ್ಷದ ಸರಕಾರವೇ ಮುಸಲ್ಮಾನ ವ್ಯಾಪಾರಿಗಳಿಗೆ ಕಿರುಕುಳ ಕೊಡುತ್ತಿರುವಾಗ ಅವರು ಏನೆಂದು ಉತ್ತರ ಕೊಟ್ಟಾರು?

ರಾಹುಲ್ ಅತ್ಯಂತ ಗಂಭೀರ ಪ್ರಶ್ನೆಗಳನ್ನು ಎತ್ತಿದಾಗೆಲ್ಲ, ಮೋದಿ ತಿರುಚಿ ಅಪಪ್ರಚಾರ ಮಾಡುವ ಯತ್ನ ಮಾಡುತ್ತಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅದನ್ನು ಮತ್ತೆ ಮತ್ತೆ ಕಂಡೆವು. ಈಗ ಸರಕಾರ ರಚನೆ ನಂತರವೂ ಹಳೆಯ ಚಾಳಿಯೇ ಮುಂದುವರಿದಿದೆ.

ಸುಳ್ಳುಗಳನ್ನು ಯಾವ ಹಿಂಜರಿಕೆಯೂ ಇಲ್ಲದೆ ಪರಮ ಭಂಡತನದಿಂದ ಹೇಳುವ ಮೋದಿ, ಒಮ್ಮೆಯೂ ರಾಹುಲ್ ಎತ್ತುವ ವಿಚಾರಗಳಿಗೆ ಮುಖಾಮುಖಿಯಾದದ್ದಿಲ್ಲ.

ಹಾಗಾಗಿ ರಾಹುಲ್ ನಿರುದ್ಯೋಗ, ಬೆಲೆಯೇರಿಕೆ, ಮಣಿಪುರ ವಿಚಾರ, ರೈತರ ವಿಚಾರಗಳ ಬಗ್ಗೆ ಕೇಳಿದರೆ, ಮೋದಿ ಒಂದೋ ನೆಹರೂ ಕಾಲದ ಬಗ್ಗೆ ಮಾತಾಡುತ್ತ ಕಾಂಗ್ರೆಸ್ ಅನ್ನು ಜರೆಯುತ್ತಾರೆ. ಇಲ್ಲವೇ, ೨೦೪೭ರ ಬಗ್ಗೆ ಮಾತಾಡುತ್ತ, ಜನರಲ್ಲಿ ಭ್ರಮೆ ಬಿತ್ತುವುದಕ್ಕೆ ಶುರು ಮಾಡುತ್ತಾರೆ. ಮೋದಿಗೆ ವರ್ತಮಾನದ ಸವಾಲುಗಳಿಗೆ, ಸತ್ಯಗಳಿಗೆ ಮುಖಾಮುಖಿಯಾಗುವುದೇ ಬೇಕಿಲ್ಲ. ಹಾಗಾಗಿಯೇ ಅವರು ಬಹಿರಂಗ ಚರ್ಚೆಯ ಬಗೆಗಿನ ರಾಹುಲ್ ಆಹ್ವಾನಕ್ಕೂ ಸ್ಪಂದಿಸದೇ ಉಳಿದುಬಿಟ್ಟರು.

ಇನ್ನು ಮುಂದೆಯೂ ಅವರು ಸತ್ಯಗಳ ಎದುರು ನಿಲ್ಲುತ್ತಾರೆಂಬ ಭರವಸೆಯಿಲ್ಲ. ಯಾಕೆಂದರೆ ಸುಳ್ಳುಗಳು ಆಗಲೇ ಶುರುವಾಗಿಬಿಟ್ಟಿವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಸ್. ಸುದರ್ಶನ್

contributor

Similar News