ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಶೇ.60ರಷ್ಟು ಅನುದಾನ ಕಡಿತ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರವು ಬೆಂಗಳೂರು ವೈದ್ಯಕೀಯ ಮಹಾವಿದ್ಯಾನಿಲಯ ಮತ್ತು ಸಂಶೋಧನಾ ಸಂಸ್ಥೆಗೆ ಬಿಡುಗಡೆ ಮಾಡಿರುವ ಅನುದಾನದಲ್ಲಿ ಕಡಿತಗೊಳಿಸಿದೆ. 2023-24ನೇ ಆರ್ಥಿಕ ವರ್ಷದಲ್ಲಿ ಹಂಚಿಕೆ ಮಾಡಿರುವ ಅನುದಾನಕ್ಕಿಂತಲೂ 2024-25ನೇ ಸಾಲಿನಲ್ಲಿ ಹಂಚಿಕೆ ಮಾಡಿರುವ ಪ್ರಮಾಣಕ್ಕೆ ಹೋಲಿಸಿದರೆ ಶೇ.60ರಷ್ಟು ಕಡಿತಗೊಂಡಿರುವುದು ಗೊತ್ತಾಗಿದೆ.
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಮತ್ತು ಇದರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳ ಕುರಿತು 2024ರ ಎಪ್ರಿಲ್ 5ರಂದು ನಡೆದಿದ್ದ ಸಭೆಯಲ್ಲಿ ಈ ಸಂಗತಿಯ ಕುರಿತು ಚರ್ಚೆಯಾಗಿದೆ. ಈ ಸಭೆಯ ನಡಾವಳಿಗಳು ‘the-file.in’ಗೆ ಲಭ್ಯವಾಗಿವೆ.
ವೈದ್ಯಕೀಯ ಮಹಾವಿದ್ಯಾನಿಲಯದ ಟ್ರಾಮಾ ಕೇಂದ್ರಕ್ಕೆ ಅನುದಾನ ಕಡಿತಗೊಂಡಿದೆ ಎಂದು ಸಭೆಯಲ್ಲಿ ಕೇಂದ್ರದ ವಿಶೇಷಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಟ್ರಾಮಾ ಕೇರ್ ಕೇಂದ್ರಕ್ಕೆ ಬೆಂಗಳೂರು ವೈದ್ಯಕೀಯ ಮಹಾವಿದ್ಯಾನಿಲಯ ಮತ್ತು ಸಂಶೋಧನಾ ಸಂಸ್ಥೆಯ ಸಾಮಾನ್ಯ ಲೆಕ್ಕ ಶೀರ್ಷಿಕೆ 2210ರ 103ರ ಅಡಿಯಲ್ಲಿ 2024-25ನೇ ಸಾಲಿನಲ್ಲಿ ಮೊತ್ತ ನಿಗದಿಪಡಿಸಿದೆ. ಆದರೆ ಈ ಅನುದಾನವು ಹಿಂದಿನ ಆರ್ಥಿಕ ವರ್ಷದಲ್ಲಿ (2023-24) ಹಂಚಿಕೆ ಮಾಡಿರುವ ಅನುದಾನಕ್ಕಿಂತ ಶೇ.44 ಹಾಗೂ ಶೇ.15ರಷ್ಟು ಹಣದುಬ್ಬರದೊಂದಿಗೆ ಒಟ್ಟು ಶೇ.60ರಷ್ಟು ಅನುದಾನವು ಕಡಿತಗೊಂಡಿದೆ’ ಎಂದು ಸಭೆಗೆ ಮಾಹಿತಿ ಒದಗಿಸಿರುವುದು ನಡಾವಳಿಯಿಂದ ತಿಳಿದು ಬಂದಿದೆ.
ಬೆಂಗಳೂರು ವೈದ್ಯಕೀಯ ಮಹಾವಿದ್ಯಾನಿಲಯ ಮತ್ತು ಸಂಶೋಧನಾ ಸಂಸ್ಥೆಯ ಅಡಿಯಲ್ಲಿ ವಿಕ್ಟೋರಿಯಾ ಆಸ್ಪತ್ರೆ, ವಾಣಿ ವಿಲಾಸ, ಮಿಂಟೋ, ಸೂಪರ್ ಸ್ಪೆಷಾಲಿಟಿ, ಟ್ರಾಮಾ ಕೇಂದ್ರಗಳು, ಸರಕಾರಿ ಶುಶ್ರೂಷಾ ಮಹಾವಿದ್ಯಾಲಯ, ಸರಕಾರಿ ಶುಶ್ರೂಷಾ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಈ ಆಸ್ಪತ್ರೆಗಳಿಗೆ ಅಕ್ಕಪಕ್ಕದ ರಾಜ್ಯಗಳು ಹಾಗೂ ಇತರ ಭಾಗಗಳಿಂದಲೂ ಕ್ಲಿಷ್ಟಕರ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ಸೇವೆ ನೀಡಲಾಗುತ್ತಿದೆ.
ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸಾಗಾರಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರುಗಳಿಗೆ ಪೂರ್ವ ಶಸ್ತ್ರಚಿಕಿತ್ಸಾ ಕರ್ತವ್ಯ ವಿನಾಯಿತಿ ರದ್ದುಗೊಳಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಮಿಂಟೋ ಆಸ್ಪತ್ರೆಯಲ್ಲಿ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಈ ಮೂಲಕ ಬಡ ರೋಗಿಗಳಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಹಿಸಿನ್ ಅವರು ಅಧಿಕಾರಿಗಳಿಗೆ ಸೂಚಿಸಿರುವುದು ಗೊತ್ತಾಗಿದೆ.
ಹಾಗೆಯೇ ಸಂಸ್ಥೆಯಲ್ಲಿ ಲಭ್ಯವಿರುವ ಅನುದಾನಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಈ ಸಂಬಂಧ ಸರಕಾರಕ್ಕೆ ಕ್ರಿಯಾ ಯೋಜನೆ ಸಲ್ಲಿಸಬೇಕು. ಇದನ್ನು ಆರ್ಥಿಕ ಸಮಿತಿಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಬೇಕು ಎಂದು ಆರ್ಥಿಕ ಇಲಾಖೆಯ ಸರಕಾರದ ಕಾರ್ಯದರ್ಶಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದು ತಿಳಿದು ಬಂದಿದೆ.