ಕರ್ನಾಟಕ-ತಮಿಳುನಾಡು ಗಡಿ ಭಾಗದ ರಮಣೀಯ ಸಫಾರಿ

Update: 2023-12-04 06:15 GMT

ಚಾಮರಾಜನಗರ: ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಭಾಗ ಹೊಂದಿರುವ ಜೊತೆಗೆ ಅತ್ಯಧಿಕ ಅರಣ್ಯ ಪ್ರದೇಶವನ್ನು ಹೊಂದಿರುವ ಜಿಲ್ಲೆ ಚಾಮರಾಜನಗರಜಿಲ್ಲೆ. ಅರಣ್ಯ ಪ್ರದೇಶದ ರಮಣೀಯ ಸೌಂದರ್ಯ ಸವಿಯಲು ಅರಣ್ಯ ಇಲಾಖೆ ಪ್ರವಾಸಿಗರಿಗೆ ಸಫಾರಿ ಭಾಗ್ಯವನ್ನು ಕಲ್ಪಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಇದುವರೆಗೂ ಬಂಡೀಪುರ ಮತ್ತು ಕೆ.ಗುಡಿ ಭಾಗದಲ್ಲಿ ಸಫಾರಿಯನ್ನು ಆಯೋಜಿಸಿದ್ದ ಅರಣ್ಯ ಇಲಾಖೆಗೆ ಇದೀಗ ಮತ್ತೆರಡು ಸಫಾರಿಯನ್ನು ಅನುಷ್ಠಾನಗೊಳಿಸಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಬಳಿ ಇರುವ ಹೊಗನೇಕಲ್ ಗೆ ತೆರಳುವ ಮಾರ್ಗಮಧ್ಯೆ ಗೋಪಿನಾಥಂ ಬಳಿ ದಿ.ಪಿ.ಶ್ರೀನಿವಾಸ್ ಹೆಸರಿನಲ್ಲಿ ಸಫಾರಿ ಹಾಗೂ ಕೊಳ್ಳೇಗಾಲದ ಶ್ರೀ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಲೊಕ್ಕನಹಳ್ಳಿ ಬಳಿ ಪಿ.ಜಿ.ಪಾಳ್ಯ ವಲಯದಲ್ಲಿ ಸಫಾರಿಗೆ ಡಿ.2ರಂದು ಅಧಿಕೃತವಾಗಿ ಹಸಿರು ನಿಶಾನೆ ನೀಡಲಾಗಿದೆ.

ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ವಿಭಾಗವು ಕೊಳ್ಳೇಗಾಲ ಮತ್ತು ಹನೂರು ತಾಲೂಕಿನಲ್ಲಿ 949.469 ಚದರ ಕಿ.ಮೀ ಗಳಷ್ಟು ಅರಣ್ಯ ಪ್ರದೇಶವನ್ನು ಒಳಗೊಂಡಿದ್ದು, ಹುಲಿ, ಆನೆ, ಚಿರತೆ, ಜಿಂಕೆ, ಕಡವೆ, ಕಾಡೆಮ್ಮೆ, ಕರಡಿ, ತೆರಕರಡಿ, ತೋಳ, ನರಿ ಮುಂತಾದ ಪ್ರಾಣಿಗಳು ಸಫಾರಿ ಕೈಗೊಳ್ಳುವ ಪ್ರದೇಶದಲ್ಲಿ ವಾಸಿಸುತ್ತಿವೆ. ಪಿ.ಜಿ ಪಾಳ್ಯ ವನ್ಯಜೀವಿ ವಲಯದ ಲೊಕ್ಕನಹಳ್ಳಿ ಕಳ್ಳಬೇಟೆ ತಡೆ ಶಿಬಿರದ ಮಾರ್ಗದ ಒಟ್ಟು 18 ಕಿ.ಮೀ. ವ್ಯಾಪ್ತಿಯಲ್ಲಿ ಸಫಾರಿಯಲ್ಲಿ ರಮಣೀಯ ಸೌಂದರ್ಯ ಸವಿಯಬಹುದಾಗಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿರುವ ಈ ವಲಯದಲ್ಲಿ ಅರಣ್ಯ ಸೌಂದರ್ಯ ಕಣ್ತುಂಬಿಸಿಕೊಂಡು ಅರಣ್ಯ ಸಂಪತ್ತನ್ನು ಉಳಿಸುವ ಹೊಣೆ ಎಲ್ಲರಿಗೂ ಸೇರಿದ್ದಾಗಿದೆ.

ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ವ್ಯಾಪ್ತಿಯ ಪಿಜಿ ಪಾಳ್ಯ ವನ್ಯಜೀವಿ ವಲಯದಲ್ಲಿ ಸಫಾರಿ ಆರಂಭವಾಗಿರುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅವಕಾಶವಾಗಲಿದೆ. ಈ ಭಾಗದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವುದರಿಂದ ಸ್ಥಳೀಯರಿಗೆ ಉದ್ಯೋಗ ಅವಕಾಶಗಳು ಲಭಿಸಲಿವೆ. ಹೀಗಾಗಿ ಸಫಾರಿ ಆರಂಭವಾಗಿರುವುದು ಉತ್ತಮ ಹೆಜ್ಜೆಯಾಗಿದೆ.

► ಎಂ.ಆರ್.ಮಂಜುನಾಥ್, ಹನೂರು ಕ್ಷೇತ್ರದ ಶಾಸಕ

ಪಿ.ಜಿ ಪಾಳ್ಯ ವಲಯದ ಸಫಾರಿಯು ಪ್ರತೀ ದಿನ ಬೆಳಗ್ಗೆ 6ರಿಂದ 9ರವರೆಗೆ, ಮಧ್ಯಾಹ್ನ 3ರಿಂದ ಸಂಜೆ 6ಗಂಟೆಯವರೆಗೆ ಸಫಾರಿಗೆ ಸಮಯ ನಿಗದಿಪಡಿಸಲಾಗಿದೆ. ವಯಸ್ಕರಿಗೆ 400 ರೂ., ಮಕ್ಕಳಿಗೆ 200 ರೂ., ಸಫಾರಿ ಶುಲ್ಕ ಇದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ 9481995509 ಮತ್ತು 9008581495, ಸಂಪರ್ಕಿಸಬೇಕು.

► ಡಾ.ಸಂತೋಷ್ ಕುಮಾರ್,

ಅರಣ್ಯ ಸಂರಕ್ಷಣಾಧಿಕಾರಿ ಮಲೆ ಮಹದೇಶ್ವರ

ವನ್ಯಜೀವಿ ವಿಭಾಗ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನಾ.ಅಶ್ವಥ್ ಕುಮಾರ್

contributor

Similar News