ಸರಣಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಬಿಜೆಪಿ, ಸಂಘ ಪರಿವಾರ ಮುಖಂಡರು

Update: 2023-10-16 09:44 GMT
Editor : Thouheed | By : ಆರ್. ಜೀವಿ

ರಾಷ್ಟ್ರಮಟ್ಟದಲ್ಲಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯ ಪ್ರಚೋದನ​ಕಾರಿ ಪೋಸ್ಟರ್ ವಿವಾದ ಎಬ್ಬಿಸಿದೆ. ಇಲ್ಲಿ ರಾಜ್ಯದಲ್ಲಿ ಹಲವು ದಿನಗಳಿಂದ ಬಿಜೆಪಿ ಮತ್ತು ಸಂಘ ಪರಿವಾರದವರ ಪ್ರಚೋದನಕಾರಿ ಹೇಳಿಕೆಗಳು ಮತ್ತೆ ಮತ್ತೆ ಸದ್ದು ಮಾಡುತ್ತಿವೆ. ಇವೆಲ್ಲವೂ, ಬಿಜೆಪಿ ಯಾವ ದಾರಿಯಲ್ಲಿ ​ಮುಂದುವರೆದಿದೆ ಎಂಬುದನ್ನೇ ಸೂಚಿಸುವ ಹಾಗಿವೆ.

ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪ್ರಮೋದ್ ಮುತಾಲಿಕ್ ಮತ್ತು ಬಸನಗೌಡ ಪಾಟೀಲ ಯತ್ನಾಳ್ ಎಂಥ ದುರಹಂಕಾರದ ಮತ್ತು ಪ್ರಚೋದನಕಾರಿಯಾದ ಹೇಳಿಕೆಗಳನ್ನು ಕೊಟ್ಟರು, ಸಮಾಜದ ಶಾಂತಿ ಕದಡಲೆಂದೇ ಮಾತನಾಡಿದ್ದರು ಎಂಬುದನ್ನು ನೋಡಿದ್ದೆವು. ಅದಾದ ಬಳಿಕ ಶಿವಮೊಗ್ಗದಲ್ಲಿನ ಘಟನೆಯನ್ನು ​ದೊಡ್ಡ ಕೋಮು ಗಲಭೆ ಎಂದು ಬಿಂಬಿಸಲು ಬಿಜೆಪಿ ಯತ್ನಿಸಿದ್ದನ್ನೂ ನೋಡಿದೆವು.

ಆ ವಿಚಾರವನ್ನೇ ಇನ್ನೂ ಎಳೆಯುತ್ತ, ಈಗ ದಸರೆಯ ಹೊತ್ತಿಗೆ ಶಾಂತಿ ಕದಡುವ ಅತ್ಯಂತ ಕೆಟ್ಟ ಉದ್ದೇಶ ಇಟ್ಟುಕೊಂಡವರಂತೆ ಬಿಜೆಪಿಯವರು ಮತ್ತು ಸಂಘ ಪರಿವಾರದವರು ಮಾತನಾಡುತ್ತಿದ್ದಾರೆ. ದ್ವೇಷವನ್ನು ಹರಡುವವರು ಯಾವುದಾದರೂ ಒಂದು ನೆಪಕ್ಕಾಗಿ ಕಾಯುತ್ತಲೇ ಇರುತ್ತಾರೆ ಎಂಬುದು ನಿಜ. ಅಂಥವರ​ ಕೈಗೆ ಈಗ ಶಿವಮೊಗ್ಗ ಘಟನೆ ಸಿಕ್ಕಿದೆ.

ಒಂದು ಸಮುದಾಯದ ವಿರುದ್ಧ ನಿರಂತರವಾಗಿ ದ್ವೇಷದ ಮಾತಾಡುತ್ತ, ಪ್ರಚೋದಿಸಲೆಂದೇ ಮಾತನಾಡುತ್ತ, ​ಬಿಜೆಪಿ ಹಾಗು ಸಂಘ ಪರಿವಾರದ ಮುಖಂಡರು ದಿನಕ್ಕೊಂದು​ ಪ್ರಚೋದನಕಾರಿ ಹೇಳಿಕೆ ಕೊಡುತ್ತಲೇ ಇದ್ದಾರೆ. ದೆಹಲಿಯಲ್ಲಿ ಕೂತ ಬಿಜೆಪಿಯ ಮಂದಿ ಸೋಲುವ ಭೀತಿಯಲ್ಲಿ ದ್ವೇಷದ ಮಾತಾಡುತ್ತಿದ್ದರೆ, ಇಲ್ಲಿ ಬಿಜೆಪಿಯ ಜನ ​ಹೀನಾಯವಾಗಿ ಸೋತ ಹತಾಶೆಯಲ್ಲಿ ಪ್ರಚೋದನಕಾರಿ ಮಾತುಗಳ ತಲ್ವಾರುಗಳನ್ನು ಝಳಪಿಸುತ್ತಿದ್ಧಾರೆ.

ಇದರ ಉದ್ದೇಶ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವುದು. ರಾಜಕೀಯ ಎದುರಾಳಿಗಳ ವಿರುದ್ಧ ತಂತ್ರ ಮತ್ತು ತಮಗಾಗದ ಸಮುದಾಯದವರ ವಿರುದ್ಧ ದ್ವೇಷ ​- ಈ ಹೇಳಿಕೆಗಳ ಹಿಂದಿನ ಹುನ್ನಾರ ಎಂಬುದು ಯಾರಿಗೂ ಗೊತ್ತಾಗುವಷ್ಟು ಸ್ಪಷ್ಟವಿದೆ. ಶಿವಮೊಗ್ಗದ ಘಟನೆಯನ್ನು ಹಿಂದೂಗಳ ವಿರುದ್ಧದ ಸಂಚು ಎಂಬಂತೆ ವ್ಯಾಖ್ಯಾನಿಸುವುದನ್ನು ಬಿಜೆಪಿಯ ಮಂದಿ ಮುಂದುವರಿಸಿದ್ದಾರೆ.

ಹಿಂದೆ ಗೃಹಸಚಿವರಾಗಿದ್ದವರೂ, ಹಿಂದೆ ಕೂಡ ಸೂಕ್ಷ್ಮಗಳನ್ನೇ ಅರಿಯದವರ ಹಾಗೆ ಮಾತ​ನಾಡಿ ವಿವಾದಕ್ಕೆ ಸಿಲುಕಿದವರೂ ಆದ ಆರಗ ಜ್ಞಾನೇಂದ್ರ, ಹಿಂದೂಗಳ ಮನೆಗೆ ಮಾತ್ರ ಕಲ್ಲುಗಳು ಬಿದ್ದಿವೆ, ಮುಸ್ಲಿಮರ ಮನೆಗೆ ಕಲ್ಲು ಬಿದ್ದಿಲ್ಲ ಎಂದುಬಿಡುತ್ತಾರೆ. ಇಂಥ ಮಾತು ಎಷ್ಟು ಅಪಾಯಕಾರಿ ಎಂಬುದೂ ಅವರಿಗೆ ಅರ್ಥವಾಗುವುದಿಲ್ಲವೆ​ ?. ಬಿಜೆಪಿಯ ಮತ್ತೊಬ್ಬ ಮುಖಂಡ ನಳೀನ್ ಕುಮಾರ್ ಕಟೀಲ್ ಅವರಂತೂ ಶಿವಮೊಗ್ಗ ಘಟನೆಯ ಹಿಂದೆ ಭಯೋತ್ಪಾದನಾ ಸಂಘಟನೆಗಳ ಪಾತ್ರವಿದೆ ಎನ್ನುತ್ತಿದ್ದಾರೆ.

ಇನ್ನು ಕೆಲವು ನಾಯಕರಂತೂ ನೇರ ಯುದ್ಧಕ್ಕೇ ರೆಡಿ ಎಂಬಂತೆ ಮಾತನಾಡುತ್ತಿರುವುದು ನೋಡಿದರೆ, ಅಂಥದೊಂದು ಸಂದರ್ಭಕ್ಕಾಗಿ ಅವರು ತುದಿಗಾಲ ಮೇಲೆ ನಿಂತಿದ್ದಾರೆಯೆ? ಸಮಾಜ ಶಾಂತವಾಗಿರುವುದು ಅವರಿಗೆ ಬೇಡವಾಗಿದೆಯೆ ಎಂಬ ಅನುಮಾನ ಕಾಡುತ್ತದೆ. ಹಿಂದೂಗಳು ಮನೆಯಲ್ಲಿ ತಲ್ವಾರ್ ಇಟ್ಟುಕೊಳ್ಳಬೇಕು, ಆಯುಧ ಪೂಜೆ ದಿನ ಪೂಜೆ ಮಾಡಬೇಕು. ಮತಾಂಧರಿಗೆ ಉತ್ತರ ನೀಡುವ ಸಂದರ್ಭ ಬರಬಹುದು ಎಂದು ​ಸಂಘ ಪರಿವಾರದ ಮುಖಂಡ ಅರುಣ್ ಪುತ್ತಿಲ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅವರ ಹೇಳಿಕೆ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ ಎಂಬುದು ಬೇರೆ ಮಾತು. ಆದರೆ, ಅವರ ಈ ಮಾತಿನ ಉದ್ದೇಶವೇನು? ಯಾಕೆ ಇದ್ದಕ್ಕಿದ್ದಂತೆ ಅನಗತ್ಯವಾಗಿ ಇಂಥದೊಂದು ಹೇಳಿಕೆ?. ಶಸ್ತ್ರಾಸ್ತ್ರಗಳ ಮೂಲಕ ಪ್ರತಿಕ್ರಿಯೆ ನೀಡಲು ಹಿಂದೂ ಸಮಾಜ ಹಿಂದೆ ಮುಂದೆ ನೋಡುವುದಿಲ್ಲ ಎಂದರೆ ಏನರ್ಥ?. ಈ ವಿಷಯವನ್ನು ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ ಎಂದು ಆತ ಹೇಳುತ್ತಿದ್ದರೆ, ಈ ಸರ್ಕಾರ ಏನು ಮಾಡುತ್ತಿದೆ?.

ನವರಾತ್ರಿ ಉತ್ಸವ ಇನ್ನೇನು ಬರಲಿದೆ. ನವರಾತ್ರಿ ಸಂದರ್ಭದಲ್ಲಿ ಶಸ್ತ್ರಗಳಿಗೆ ಪೂಜೆ ಮಾಡಿ. ಸ್ಕ್ರ್ಯೂ ಡ್ರೈವರ್, ಸ್ಪಾನರ್ ಗಳ ಪೂಜೆ ಬಿಡಿ. ಅನಿವಾರ್ಯ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆದರೆ ಶಸ್ತ್ರಗಳನ್ನು ಇಟ್ಟುಕೊಳ್ಳಬೇಕು ಎಂಬ ಅವರ ಮಾತಿಗೂ, ದೆಹಲಿ​, ಯುಪಿಯಲ್ಲಿ ​ಕೆಲವು ಕಾವಿಧಾರಿಗಳು ನಡುರಸ್ತೆಯಲ್ಲೇ ಮುಸ್ಲಿಂರನ್ನು ಕೊಚ್ಚಿಹಾಕಲು ಹೇಳಿದ್ದಕ್ಕೂ ಏನಾದರೂ ವ್ಯತ್ಯಾಸವಿದೆ ಎನ್ನಿಸುತ್ತದೆಯೆ?

ದೇಶದಲ್ಲಿ ಸಾಮರಸ್ಯದ ಸಂದರ್ಭವಾಗಬೇಕಿದ್ದ ಹಬ್ಬಗಳು ಇವರಿಗೆ ಕತ್ತಿ ಮಸೆಯುವ, ದ್ವೇಷದ ಕೃತ್ಯಗಳಿಗೆ ಮುಂದಾಗುವ ಮುಹೂರ್ತಗಳಾಗುತ್ತಿವೆಯೆ?. ರಾಜಕೀಯ ನಾಯಕರಿಗಿಂತ ಕಾವಿಧಾರಿಗಳು ತಾವು ಇನ್ನೂ ಒಂದು ಕೈಮೇಲು ಎಂಬಂತೆ ಮಾತನಾಡುತ್ತಿದ್ದಾರೆ.

ಹಿಂದೂಗಳನ್ನು ಕೆಣಕಿದರೆ ಕರ್ನಾಟಕ ಎರಡನೇ ಗೋದ್ರಾ ಆಗುತ್ತದೆ ಎಂದು ಕಾವಿಧಾರಿಯೊಬ್ಬ ಹೇಳುವುದು ನೋಡಿದರೆ, ಇವರು ಧರ್ಮದ ಕೆಲಸ ಮಾಡುತ್ತಾರೊ ದ್ವೇಷದ ಕೆಲಸ ಮಾಡುತ್ತಾರೊ ಎಂದು ಆತಂಕವಾಗುತ್ತದೆ.

ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ, ಆಂದೋಲ ಮಠದ ಸಿದ್ಧಲಿಂಗ ಸ್ವಾಮೀಜಿ ನೀಡಿರುವ ಈ ವಿವಾದಾತ್ಮಕ ಹೇಳಿಕೆ, ಬಿಜೆಪಿಯವರಾಗಲೀ ಸಂಘ ಪರಿವಾರದವರಾಗಲಿ ಅವತ್ತಿನಿಂದಲೂ ಇದನ್ನೇ ಮಾಡಿಕೊಂಡು ಬಂದಿದ್ದಾರೆಯಲ್ಲವೆ ಎಂಬ ಪ್ರಶ್ನೆಯನ್ನೇ ಮೂಡಿಸುತ್ತದೆ. ಇದೆಲ್ಲ ಒಂದೆಡೆಯಾದರೆ, ಶಿವಮೊಗ್ಗ ಘಟನೆ ವಿಚಾರವಾಗಿ ಮಹಾ ಪಂಚಾಯತ್ ನಡೆಸುವುದಾಗಿ ​ವಿಶ್ವ ಹಿಂದೂ ಪರಿಷದ್ ಹೊರಟಿರುವುದು ಮತ್ತೊಂದು ಅತಿರೇಕದ ಹಾಗಿದೆ.

ಶಿವಮೊಗ್ಗದಲ್ಲಿ ಮಹಾ ಪಂಚಾಯತ್ ನಡೆಸಲು ನಿರ್ಧರಿಸಲಾಗಿದೆ ಎಂದು ವಿಎಚ್ಪಿ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದ್ದಾರೆ.

ದೇಶದ ಕಾನೂನು ಹಾಗು ಸಂವಿಧಾನಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಉತ್ತರ ಭಾರತದ ಮಹಾ ಪಂಚಾಯತ್ ಸಂಸ್ಕೃತಿಯನ್ನು ಇಲ್ಲಿಯೂ ತರುವ ಯತ್ನವೊಂದು ಈ ಮೂಲಕ ನಡೆದಿದೆ ಎಂಬುದನ್ನು ಇದು ಸೂಚಿಸುತ್ತದೆ.

​ಶಿವಮೊಗ್ಗದಲ್ಲಿ ನಡೆದಿರುವ ಘಟನೆಗೆ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಲಾಠಿ ಪ್ರಹಾರ ನಡೆಸಿದ್ದಾರೆ. ಡಝನ್ ಗಟ್ಟಲೆ ಜನರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಾರೆ. ಬಿಜೆಪಿ ಹಾಗು ಸಂಘ ಪರಿವಾರದ ಪ್ರಕಾರ ಅಲ್ಲಿ ಇನ್ನೇನು ಆಗಬೇಕಾಗಿದೆ ?. ಈ ನೆಲದ ಕಾನೂನು ಹಾಗು ಇಲ್ಲಿನ ಸಂವಿಧಾನಕ್ಕೆ ಸಂಪೂರ್ಣ ವಿರುದ್ಧವಾಗಿರುವ, ತಮಗೆ ತೋಚಿದ್ದನ್ನು ತೀರ್ಪಿನಂತೆ ಘೋಷಿಸುವ ಮಹಾ ಪಂಚಾಯತ್ ನಡೆಸಿ ಅರಾಜಕ ಕಾನೂನು ಜಾರಿಗೆ ತರಲು ಹೊರಟಿದ್ದಾರೆಯೇ ವಿಶ್ವ ಹಿಂದೂ ಪರಿಷತ್ ನವರು ?.

ಇಷ್ಟೆಲ್ಲ ನಡೆಯುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿದೆ?. ದ್ವೇಷದ ಮಾತುಗಳಿಗೆ, ಪ್ರಚೋದನಾಕಾರಿ ಹೇಳಿಕೆಗಳಿಗೆ ಹೇಗೆ ರಾಜ್ಯ ಸರ್ಕಾರ ಅವಕಾಶ ಕೊಡುತ್ತಿದೆ? ಯಾವ ಶಕ್ತಿ ಕಾಂಗ್ರೆಸ್ ಸರ್ಕಾರವನ್ನು ಈ ವಿಚಾರದಲ್ಲಿ ಕಟ್ಟಿಹಾಕಿದೆ?. ಧರ್ಮ ಅಥವಾ ಕೋಮುವಾದದ ಆಧಾರದ ಮೇಲೆ ಉದ್ರೇಕಕಾರಿ ಹೇಳಿಕೆಗಳನ್ನು ನೀಡುವ ವಿಷಯದಲ್ಲಿ ಸ್ವತಃ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕೋಮುವಾದದ ಆಧಾರದ ಮೇಲೆ ಪ್ರಚೋದನಕಾರಿ ಹೇಳಿಕೆ ನೀಡುವವರು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಅವರ ವಿರುದ್ಧ ತಕ್ಷಣವೇ​ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಹೇಳಿದೆ. ಇಂತಹ ಪ್ರಕರಣಗಳಲ್ಲಿ ಔಪಚಾರಿಕ ದೂರು ದಾಖಲಾಗುವವರೆಗೆ ಕಾಯದೆ ಪೊಲೀಸ್ ಅಧಿಕಾರಿಗಳು ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಬೇಕು. ದೇಶದ ಜಾತ್ಯತೀತ ಗುಣವನ್ನು ಕಾಪಾಡಲು ಇಂತಹ ಕ್ರಮ ಅಗತ್ಯ ಎಂದು​ ಸುಪ್ರೀಂ ಕೋರ್ಟ್ ಸೂಚಿಸಿದೆ.

ಪುತ್ತಿಲ ಹೇಳಿಕೆ ಹಿನ್ನೆಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ​ಸ್ವಯಂ ಪ್ರೇರಿತ ಕೇಸ್ ದಾಖಲಾಗಿರುವುದು ಆ ನಿಟ್ಟಿನ ಕ್ರಮ. ಆದರೆ ಇತರರ ಹೇಳಿಕೆ ವಿಚಾರವಾಗಿ ಏಕೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿಲ್ಲ?​. ಕೇಸು ದಾಖಲಾದ ಮೇಲೆ ಆ ಬಗ್ಗೆ ಏನು ಕ್ರಮವಾಗಿದೆ ? . ಶಿವಮೊಗ್ಗದಲ್ಲಿನ ಘಟನೆಗೆ ಈಗಾಗಲೇ ಕೋಮು ಗಲಭೆಯ ಸ್ವರೂಪ ನೀಡಿರುವವರು, ತಮ್ಮ ಪ್ರಚೋದನಕಾರಿ ಮಾತುಗಳಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವುದಕ್ಕೆ ಕಾರಣರಾಗುತ್ತಿದ್ದಾರೆ ಎಂಬುದನ್ನು ಈ ಸರ್ಕಾರ ಗಮನಿಸುತ್ತಿಲ್ಲವೆ?.

ನಡುರಸ್ತೆಯಲ್ಲಿ ಕೊಂದು ಹಾಕಲು ಕರೆ ನೀಡುವವರು, ಮುಸ್ಲಿಂ ಸಮುದಾಯವರಲ್ಲಿ ಭೀತಿ ಹುಟ್ಟಿಸಿ ಊರನ್ನೇ ಬಿಟ್ಟುಹೋಗುವಂತೆ ಮಾಡುವವರು ದೇಶದೆಲ್ಲೆಡೆ ಹರಡಿಹೋಗಿರುವುದು ನಮಗಿಂದು ಕಾಣಿಸುತ್ತಿರುವ ಸತ್ಯ. ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕವನ್ನೂ ಈಗ ಉತ್ತರ ಭಾರತದ ರಾಜ್ಯಗಳಲ್ಲಿದ್ದಂಥ ತೀವ್ರ ಅಸ​ಹಿಷ್ಣುತೆ, ದ್ವೇಷದ ಮನಃಸ್ಥಿತಿ ಬಾಧಿಸುತ್ತಿದೆಯೆ?.

ಇದಕ್ಕೆಲ್ಲ ಮದ್ದರೆಯಬೇಕಿದ್ದ ಸರ್ಕಾರ ಮತ್ತಾವುದೋ ಲೆಕ್ಕಾಚಾರದಲ್ಲಿ ಮೌನ ವಹಿಸಿದೆಯೆ​ ?. ಒಂದಂತೂ ನಿಜ. ಇಂಥ ಎಲ್ಲ ಅತಿರೇಕಗಳ ಸಂತ್ರಸ್ತರಾಗುವವರು ಕಡೆಗೆ ಅಮಾಯಕ​ ಶ್ರಮಿಕ ಜನತೆ ಮಾತ್ರ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಆರ್. ಜೀವಿ

contributor

Similar News