ಬಂಡವಾಳಶಾಹಿ ದೇಶಗಳ ರಕ್ತ ರಹಿತ ಯುದ್ಧ
ಯಾವುದೇ ದೇಶದ ವಿರುದ್ಧ ಯುದ್ಧ ಸಾರದೆ, ಅದಕ್ಕಾಗಿ ಬಂಡವಾಳ ಹೂಡಿ ನಷ್ಟ ಅನುಭವಿಸದೆ ಅಲ್ಲಿನ ಯುವ ಸಮುದಾಯವನ್ನು ಮಾತ್ರ ಗುರಿಯಾಗಿಸಿಕೊಂಡು ಮಾದಕ ದ್ರವ್ಯ ಜಾಲವನ್ನು ಬೇರೂರಿಸಿದರೂ ಸಾಕು; ಅಂತಹ ದೇಶ ತನಗೆ ತಾನೇ ಗುಲಾಮಗಿರಿಗೆ ಒಳಗಾಗುತ್ತದೆ ಎಂಬುದು ಬಂಡವಾಳಶಾಹಿ ದೇಶಗಳ ರಕ್ತರಹಿತ ಯುದ್ಧದ ಅಸಲಿ ಪರಿಕಲ್ಪನೆ. ಈ ಪರಿಕಲ್ಪನೆ ಇತ್ತಿತ್ತಲಾಗಿ ವ್ಯಾಪಕ ಸ್ವರೂಪ ಪಡೆದಿದ್ದು, ಇಂತಹ ಪರಿಕಲ್ಪನೆ ಹುಟ್ಟು ಹಾಕಿದ ಬಂಡವಾಳಶಾಹಿ ದೇಶಗಳಲ್ಲೇ ಪೆಡಂಭೂತ ಸ್ವರೂಪ ಪಡೆದು ಅಲ್ಲಿನ ಯುವಜನರನ್ನೇ ಬಲಿ ಪಡೆಯುತ್ತಿದೆ. ಹಾಗಾದರೆ, ಈ ಮಾದಕ ದ್ರವ್ಯ ಸೇವನೆಯಲ್ಲಿ ಅಂತಹ ಬಲವಾದ ಸೆಳೆತ ಏನಿದೆ? ವಾಸ್ತವ ಜಗತ್ತಿನಿಂದ ಸಂಪೂರ್ಣವಾಗಿ ವಿಮುಖಗೊಳಿಸಿ, ಭ್ರಾಮಕ ಜಗತ್ತಿನಲ್ಲಿ ತೇಲಾಡುವಂತೆ ಮಾಡುವುದು!!
ಭಾರತಕ್ಕಂತೂ ಋಷಿ ಮುನಿಗಳ ಪರಂಪರೆಯಿಂದಲೇ ಮಾದಕ ದ್ರವ್ಯ ಸೇವನೆಯ ಇತಿಹಾಸವಿದೆ. ಸಾಧು-ಸಂತರು, ಸನ್ಯಾಸಿಗಳು, ಅಘೋರಿಗಳು ಗಾಂಜಾ, ಅಫೀಮು ಇತ್ಯಾದಿ ಮಾದಕ ದ್ರವ್ಯಗಳನ್ನು ಸೇವಿಸುವುದು ಇಂದಿಗೂ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಅಧ್ಯಾತ್ಮ ಜೀವನ ಸಾಕಾರಗೊಳ್ಳಲು ಕೊಂಚ ಪ್ರಮಾಣದ ಮಾದಕ ದ್ರವ್ಯ ಸೇವನೆ ಅನಿವಾರ್ಯ ಎಂಬುದು ಇಂತಹ ಇಂತಹ ಆಧ್ಯಾತ್ಮಿಕ ಸಾಧಕರ ವಾದ. ಹಾಗೆಯೇ ಅಲೌಕಿಕ ಅನುಭವ ಪಡೆಯಲೂ ಮಾದಕ ದ್ರವ್ಯಗಳ ಸೇವನೆ ಸಹಜವೆಂಬಂತೆ ಆಧ್ಯಾತ್ಮಿಕ ಸಾಧಕರ ನಡುವೆ ಪಾಲನೆಯಾಗುತ್ತದೆ. ಈ ಮಾದಕ ದ್ರವ್ಯ ಸೇವನೆಯ ಮೇಲೆ ನಿಯಂತ್ರಣ ಸಾಧಿಸಬಲ್ಲ ಇಚ್ಛಾಶಕ್ತಿ ಇಂತಹ ಆಧ್ಯಾತ್ಮಿಕ ಸಾಧಕರಲ್ಲಿ ಇರುತ್ತದಾದ್ದರಿಂದ ಅದು ಅವರ ಪಾಲಿಗೆ ಚಟವಾಗಿ ಪರಿಣಮಿಸುವ ಸಾಧ್ಯತೆ ತೀರಾ ಕಡಿಮೆ. ಅವರದನ್ನು ಚಟವಾಗಿಸಿಕೊಂಡರೂ ಅದರಿಂದ ಮುಖ್ಯವಾಹಿನಿ ಸಮಾಜಕ್ಕೆ ಹಾನಿಯಾಗಿರುವುದೂ ತೀರಾ ಅತ್ಯಲ್ಪ.
ಆದರೆ, ಮಾದಕ ದ್ರವ್ಯ ಜಾಲ ನಿಜಕ್ಕೂ ಗುರಿಯಾಗಿಸಿಕೊಂಡಿರುವುದು ಇಂತಹ ಆಧ್ಯಾತ್ಮಿಕ ಸಾಧಕರನ್ನಲ್ಲ. ಬದಲಿಗೆ ಒಂದು ದೇಶದ ಬೆನ್ನೆಲುಬಾಗಿ, ಅದರ ಭವಿಷ್ಯವನ್ನು ನಿರ್ಮಿಸುವ ಗುರುತರ ಹೊಣೆಗಾರಿಕೆ ಹೊಂದಿರುವ ಯುವ ಜನರನ್ನು. ಹೀಗಾಗಿಯೇ ಇಂದು ಶಾಲಾ-ವಿದ್ಯಾರ್ಥಿಗಳ ನಡುವೆ ಇದು ದೊಡ್ಡ ಸ್ಥಾನ ಗಿಟ್ಟಿಸಿಕೊಂಡಿದೆ. ಇನ್ನು ಬಹುರಾಷ್ಟ್ರೀಯ ಕಂಪೆನಿಗಳ ಉದ್ಯೋಗಿಗಳು ನಡೆಸುವ ವಾರಾಂತ್ಯದ ಮೋಜು-ಮೇಜುವಾನಿಗಳಲ್ಲಿ ಮಾದಕ ದ್ರವ್ಯಗಳಿಗೆ ಅಗ್ರ ಸ್ಥಾನ ಪ್ರಾಪ್ತವಾಗುತ್ತಿದೆ. ಇದರಿಂದ ದೇಶದ ಭವ್ಯ ಭವಿಷ್ಯವನ್ನು ನಿರ್ಮಿಸುವ ಹೊಣೆಗಾರಿಕೆ ಹೊಂದಿದ್ದ ಯುವ ಸಮುದಾಯವಿಂದು ದೇಶದ ಪಾಲಿಗೆ ಹೊರೆಯಾಗುವ ಹಂತಕ್ಕೆ ತಲುಪತೊಡಗಿದೆ.
ಒಂದು ವರದಿಯ ಪ್ರಕಾರ, ಇಡೀ ವಿಶ್ವದಾದ್ಯಂತ ವಾರ್ಷಿಕ ೧೦೦ ಶತಕೋಟಿ ಡಾಲರ್ ನಿಂದ ೧೧೦ ಶತಕೋಟಿ ಡಾಲರ್ ಮೌಲ್ಯದ ಹೆರಾಯಿನ್ ಮಾರಾಟವಾಗುತ್ತಿದ್ದರೆ, ೧೧೦ ಶತಕೋಟಿ ಡಾಲರ್ ನಿಂದ ೧೩೦ ಶತಕೋಟಿ ಮೌಲ್ಯದ ಕೊಕೇನ್ ಮಾರಾಟವಾಗುತ್ತಿದೆ. ಇದಲ್ಲದೆ ಕ್ಯಾನೊಬಿಸ್ ಮಾರಾಟ ವಾರ್ಷಿಕ ೭೫ ಶತಕೋಟಿ ಡಾಲರ್ ನಷ್ಟಿದ್ದರೆ, ಕೃತಕ ಮಾದಕ ದ್ರವ್ಯಗಳ ಮಾರಾಟ ಮೊತ್ತ ಸುಮಾರು ೬೦ ಶತಕೋಟಿ ಡಾಲರ್ ನಷ್ಟಿದೆ. ಒಟ್ಟಾರೆ ಮಾದಕ ದ್ರವ್ಯಗಳ ವಾರ್ಷಿಕ ವಹಿವಾಟು ೩೬೦ ಶತಕೋಟಿ ಡಾಲರ್ ನಷ್ಟಿದೆ. ಇಷ್ಟು ದೊಡ್ಡ ಪ್ರಮಾಣದ ಮಾದಕ ದ್ರವ್ಯ ಉದ್ಯಮಕ್ಕೆ ಅತಿ ದೊಡ್ಡ ಗ್ರಾಹಕ ದೇಶಗಳಾಗಿರುವುದು ಇರಾನ್, ಅಫ್ಘಾನಿಸ್ತಾನ, ರಶ್ಯ, ಅಮೆರಿಕ ಹಾಗೂ ದಿ ಗ್ರೇಟ್ ಬ್ರಿಟನ್ ನಂತಹ ದೇಶಗಳು. ಈ ಪೈಕಿ ಅಮೆರಿಕ ಹಾಗೂ ದಿ ಗ್ರೇಟ್ ಬ್ರಿಟನ್ ದೇಶಗಳು ಮಾದಕ ದ್ರವ್ಯ ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿರುವ ದೇಶಗಳು. ಹಾಗೆಯೇ ಬಳಕೆಯಲ್ಲೂ ಕೂಡಾ.
ಆದರೆ, ಈ ಮಾದಕ ದ್ರವ್ಯ ಜಾಲದಿಂದ ನಿಜವಾಗಿ ಸಂತ್ರಸ್ತ ದೇಶಗಳಾಗುತ್ತಿರುವುದು ಆಫ್ರಿಕಾ ದೇಶಗಳಾದ ಕೀನ್ಯಾ, ನೈಜೀರಿಯಾ, ಇಥಿಯೋಪಿಯಾ, ಈಜಿಪ್ಟ್ ನಂತಹ ತೃತೀಯ ಜಗತ್ತಿನ ರಾಷ್ಟ್ರಗಳು. ಈ ಪೈಕಿ ಕೀನ್ಯಾ ಮತ್ತು ನೈಜೀರಿಯಾ ದೇಶದ ಪ್ರಜೆಗಳು ಮಾದಕ ದ್ರವ್ಯ ಜಾಲದ ಪ್ರಮುಖ ಕೊಂಡಿಗಳಾಗಿ ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಾತಿಗೆ ನಿದರ್ಶನ: ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಚಿತ್ರೋದ್ಯಮ ರಾಜಧಾನಿಯಾದ ಗಾಂಧಿನಗರದ ಮೇಲೆ ಭಾರತೀಯ ಮಾದಕ ದ್ರವ್ಯ ನಿಗ್ರಹ ದಳವು ದಾಳಿ ನಡೆಸಿದಾಗ, ಬಲೆಗೆ ಬಿದ್ದ ಬಹುತೇಕ ಮಾದಕ ದ್ರವ್ಯ ಮಾರಾಟಗಾರರು ಕೀನ್ಯಾ ಮತ್ತು ನೈಜೀರಿಯಾ ಪ್ರಜೆಗಳೇ ಆಗಿದ್ದುದು. ಇವರು ದೈಹಿಕವಾಗಿ ಕಟ್ಟುಮಸ್ತಾಗಿರುತ್ತಾರಾದ್ದರಿಂದ ವಿದ್ಯಾರ್ಥಿ ವೀಸಾದಲ್ಲಿ ವಿದೇಶಗಳನ್ನು ಪ್ರವೇಶಿಸುವ ಇವರೆಲ್ಲ ಕೆಲ ದಿನಗಳಲ್ಲೇ ತಮ್ಮದೇ ಆದ ಮಾದಕ ದ್ರವ್ಯ ಜಾಲದ ಭೂಗತ ಲೋಕವನ್ನೇ ಸೃಷ್ಟಿಸಿಕೊಂಡು ಬಿಡುತ್ತಾರೆ. ಬೆಂಗಳೂರಿನ ಪ್ರಮುಖ ವಾಣಿಜ್ಯ ಬೀದಿಗಳಾದ ಕಮರ್ಷಿಯಲ್ ಸ್ಟ್ರೀಟ್, ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿನ ಬಾರ್, ಪಬ್, ರೆಸ್ಟೋರೆಂಟ್, ಡಿಸ್ಕೊ ಥೆಕ್ ಗಳಿಗೆ ಸರಬರಾಜಾಗುವ ಮಾದಕ ದ್ರವ್ಯಗಳಲ್ಲಿ ಈ ದೇಶಗಳ ಪ್ರಜೆಗಳಿಂದಾಗುವ ಮಾರಾಟವೇ ಸಿಂಹಪಾಲಿನದಾಗಿದೆ.
ಇತ್ತಿತ್ತಲಾಗಿ ಭಾರತದಲ್ಲಿನ ಯುವ ಜನತೆಯೂ ಮಾದಕ ದ್ರವ್ಯದ ದಾಸರಾಗಿ ಬದಲಾಗತೊಡಗಿದ್ದಾರೆ. ಅದರಲ್ಲೂ ಶ್ರೀಮಂತ, ಭೂಮಾಲಕ ಕುಟುಂಬಕ್ಕೆ ಸೇರಿದ ಸುಶಿಕ್ಷಿತ ಯುವಕರೇ ಈ ಚಟಕ್ಕೆ ದಾಸರಾಗಿ ಬಲಿಯಾಗತೊಡಗಿದ್ದಾರೆ. ಅದಕ್ಕೆ ಕಾರಣವೂ ಇದೆ: ಮನೆಯಲ್ಲಿ ಆಗರ್ಭ ಶ್ರೀಮಂತಿಕೆ ಇದ್ದರೂ ಹಿಡಿಯಷ್ಟು ಪ್ರೀತಿ ದೊರೆಯದೆ, ಬದುಕಿನ ಬಗ್ಗೆ ಜಿಗುಪ್ಸೆ ಬೆಳೆಸಿಕೊಳ್ಳುತ್ತಿರುವ ಈ ವರ್ಗದ ಯುವ ಜನತೆ ಸಹಜವಾಗಿಯೇ ಭ್ರಾಮಕ ಅನುಭವವನ್ನು ನೀಡುವ ಮಾದಕ ದ್ರವ್ಯ ಸೇವನೆಗೆ ದಾಸರಾಗುತ್ತಿದ್ದಾರೆ. ಈ ಮಾತಿಗೆ ಜ್ವಲಂತ ನಿದರ್ಶನ: ಪಂಜಾಬ್. ಅತ್ಯಂತ ಶ್ರೀಮಂತ ಕೃಷಿ ಕುಟುಂಬಗಳನ್ನು ಹೊಂದಿರುವ ಪಂಜಾಬ್ ನಲ್ಲಿ ಕಳೆದ ಕೆಲವು ವರ್ಷಗಳಿಂದ ಮಾದಕ ದ್ರವ್ಯ ಜಾಲ ಬೃಹತ್ ಸ್ವರೂಪ ಪಡೆದು ನಿಂತಿದೆ. ಈ ಮಾದಕ ದ್ರವ್ಯ ಜಾಲಕ್ಕೆ ಅನಾಯಾಸವಾಗಿ ಬಲಿಯಾಗುತ್ತಿರುವ ಭೂಮಾಲಕ ಮತ್ತು ಶ್ರೀಮಂತ ವರ್ಗದ ಕುಟುಂಬಗಳ ಯುವ ಜನತೆ, ತಮ್ಮ ದೇಶದ ಭವಿಷ್ಯ ನಿರ್ಮಾಣದ ಹೊಣೆಯನ್ನು ಮರೆತು, ಕೇವಲ ಭ್ರಾಮಕ ಜಗತ್ತಿನ ದಾಸರಾಗಲು ಮಾದಕ ದ್ರವ್ಯದ ವ್ಯಸನಿಗಳಾಗಿ ರೂಪಾಂತರಗೊಂಡಿದ್ದಾರೆ. ಈ ಜ್ವಲಂತ ಸಮಸ್ಯೆಯನ್ನಿಟ್ಟುಕೊಂಡು ೨೦೧೬ರಲ್ಲಿ ಅಭಿಷೇಕ್ ಚೌಬೆ ರಚಿಸಿ, ನಿರ್ದೇಶಿಸಿದ ‘ಉಡ್ತಾ ಪಂಜಾಬ್’, ಆ ಕಾಲಕ್ಕೆ ದೊಡ್ಡ ಸಂಚಲನ ಸೃಷ್ಟಿಸಿದ, ಮಾದಕ ದ್ರವ್ಯ ಜಾಲದ ವ್ಯಾಪಕತೆ ಬಗ್ಗೆ ಗಂಭೀರ ಪ್ರಶ್ನೆಯನ್ನು ಹುಟ್ಟು ಹಾಕಿದ ಚಿತ್ರ. ಈ ಚಿತ್ರ ಬಿಡುಗಡೆಯಾಗಿ ಏಳು ವರ್ಷಗಳೇ ಕಳೆದಿದ್ದರೂ, ಪಂಜಾಬ್ ನಲ್ಲಿ ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗುತ್ತಿರುವ ಯುವ ಜನತೆಯ ಚಿತ್ರಣದಲ್ಲಿ ಒಂದಿನಿತೂ ಸುಧಾರಣೆಯಾಗಿಲ್ಲ. ಬದಲಿಗೆ, ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಸಾಗಿದೆ.
ಇಡೀ ಭಾರತದಲ್ಲಿ ಮಾದಕ ದ್ರವ್ಯ ವ್ಯಸನದಿಂದ ತೀವ್ರ ಹಾನಿಗೊಳಗಾಗಿರುವ ಮೊದಲ ಐದು ರಾಜ್ಯಗಳ ಪೈಕಿ ಕ್ರಮವಾಗಿ ದಿಲ್ಲಿ (೪೪ಶೇ.), ಮಣಿಪುರ (೩೨.೨ಶೇ.), ಪಶ್ಚಿಮ ಬಂಗಾಳ (೨೨.೧ಶೇ.), ರಾಜಸ್ಥಾನ (೩೦ಶೇ.) ಹಾಗೂ ಒಡಿಶಾ (೨೦.೭ಶೇ.) ರಾಜ್ಯಗಳಿವೆ. ಇನ್ನು ಅಫೀಮು ಸೇವನೆಯಲ್ಲಿ ಕ್ರಮವಾಗಿ ಪಂಜಾಬ್ (೪೨.೭ಶೇ.) ಹಾಗೂ ರಾಜಸ್ಥಾನ (೩೯.೮ಶೇ.) ರಾಜ್ಯಗಳಿವೆ. ಇತ್ತೀಚೆಗೆ ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷಕ್ಕೆ ಅಫೀಮಿನ ಕಚ್ಚಾವಸ್ತುವಾದ ಗಸಗಸೆಯನ್ನು ಅನಧಿಕೃತವಾಗಿ ಕೃಷಿ ಮಾಡುತ್ತಿರುವ ಕುಕಿ ಸಮುದಾಯವೇ ಕಾರಣ ಎಂದು ಅಲ್ಲಿನ ಆಡಳಿತಾರೂಢ ಬಿಜೆಪಿ ಸರಕಾರ ಆರೋಪಿಸುತ್ತಿದೆ. ಇದು ಸಂಪೂರ್ಣ ಸತ್ಯವಲ್ಲವಾದರೂ, ತಳ್ಳಿ ಹಾಕುವ ಸಂಗತಿಯಂತೂ ಅಲ್ಲವೇ ಅಲ್ಲ. ಯಾಕೆಂದರೆ, ಮಣಿಪುರ ಗಡಿಗೆ ಹೊಂದಿಕೊಂಡಿರುವ ಚೀನಾ ಕೂಡಾ ಮಾದಕ ದ್ರವ್ಯ ಜಾಲವನ್ನು ಪ್ರೋತ್ಸಾಹಿಸುತ್ತಿರುವ ಬಂಡವಾಳಶಾಹಿ ದೇಶಗಳ ಪೈಕಿ ಒಂದಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಮಾದಕ ದ್ರವ್ಯ ಜಾಲ ನಿಯಂತ್ರಣಕ್ಕೆ ಇಡೀ ವಿಶ್ವದಲ್ಲಿ ಅತ್ಯಂತ ಬಿಗಿಯಾದ ಕಾನೂನಿದ್ದರೂ ಈ ಜಾಲ ಇಷ್ಟು ಸುಲಭವಾಗಿ ಇಡೀ ವಿಶ್ವವನ್ನು ವ್ಯಾಪಿಸಿಕೊಳ್ಳಲು ಇರುವ ಪ್ರಮುಖ ಕಾರಣವಾದರೂ ಏನು? ಮಾದಕ ದ್ರವ್ಯಗಳಲ್ಲಿರುವ ಔಷಧೀಯ ಗುಣ. ಹೌದು! ಹೆರಾಯಿನ್, ಅಫೀಮು, ಕೊಕೇನ್, ಗಾಂಜಾ ಇತ್ಯಾದಿಗಳನ್ನು ಮಾನಸಿಕ ಕಾಯಿಲೆಗಳನ್ನು ಗುಣಪಡಿಸಲು Psychotropic substances ಆಗಿ ಬಳಸಲಾಗುತ್ತಿದೆ. ಈ Psychotropic substances ಕಾರಣದಿಂದಾಗಿಯೇ ವಿಶ್ವದಾದ್ಯಂತ ಅನೇಕ ಗಂಭೀರ ಸ್ವರೂಪದ ಮಾನಸಿಕ ಕಾಯಿಲೆಗಳು ನಿಯಂತ್ರಣಕ್ಕೆ ಬರಲು ಸಾಧ್ಯವಾಗಿದೆ. ಹಾಗೆಯೇ ಈ ಮಾದಕ ದ್ರವ್ಯಗಳಿಂದಾಗಿಯೇ ಯುವಜನರನ್ನು ನಿಷ್ಕ್ರಿಯರನ್ನಾಗಿಸುವ ಮಾದಕ ದ್ರವ್ಯ ಜಾಲವೂ ವಿಶ್ವದಾದ್ಯಂತ ವ್ಯಾಪಕವಾಗಿ ಬೆಳೆದು ನಿಂತಿದೆ.
ಈ ಮಾದಕ ದ್ರವ್ಯಗಳ ಸಾಗಣೆಗೆ ಕಠಿಣ ಕಾನೂನುಗಳಿದ್ದರೂ, ಆ ಕಾನೂನುಗಳಲ್ಲೂ ಇರುವ ಲೋಪಗಳನ್ನು ಬಳಸಿಕೊಂಡೇ ಮಾದಕ ದ್ರವ್ಯ ಜಾಲ ಇಷ್ಟು ದೊಡ್ಡ ಉದ್ಯಮ ಸ್ವರೂಪ ಪಡೆಯಲು ಸಾಧ್ಯವಾಗಿರುವುದು. ಇದರಲ್ಲಿ ಬೃಹತ್ ಔಷಧ ಕಂಪನಿಗಳ ಕೈವಾಡವಿರುವುದನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಯಾಕೆಂದರೆ, ಮಾದಕ ದ್ರವ್ಯಗಳನ್ನು ಔಷಧ ಉತ್ಪನ್ನಗಳ ತಯಾರಿಕೆಗಾಗಿ ಉತ್ಪಾದಿಸುವ ಪರವಾನಿಗೆ ಹೊಂದಿರುವುದು, ಔಷಧ ತಯಾರಿಕೆಗಾಗಿ ಖರೀದಿಸುವ ಪರವಾನಿಗೆ ಹೊಂದಿರುವುದು? ಈ ಎರಡೂ ಪರವಾನಿಗೆಗಳನ್ನು ಹೊಂದಿರುವುದು ಔಷಧ ತಯಾರಿಕಾ ಕಂಪೆನಿಗಳು ಮಾತ್ರ. ಈ ಹಂತದಲ್ಲೇ ಕಾನೂನಿನ ಲೋಪ ಬಳಸಿಕೊಂಡು, ಮಾದಕ ದ್ರವ್ಯ ಜಾಲಗಳು ಬೃಹತ್ ಉದ್ಯಮವಾಗಿ ಹೆಡೆ ಎತ್ತಿ ನಿಂತಿವೆ. ಈ ಮಾದಕ ದ್ರವ್ಯ ಜಾಲದ ವಾರ್ಷಿಕ ವಹಿವಾಟಿನ ಮೊತ್ತವೇ ೩೬೦ ಶತಕೋಟಿ ಡಾಲರ್‌ನಷ್ಟಿದೆ ಎಂದರೆ, ಇದರ ವ್ಯಾಪಕತೆ ಹಾಗೂ ಪ್ರಭಾವವನ್ನು ಯಾರಾದರೂ ಅರ್ಥ ಮಾಡಿಕೊಳ್ಳಬಹುದು.
ಯಾವುದೇ ದೇಶದ ಆಡಳಿತಗಾರರು, ತಮ್ಮ ದೇಶದ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದ್ದರೆ, ಮೊದಲು ಮಾದಕ ದ್ರವ್ಯ ಜಾಲಗಳ ಬುಡವನ್ನು ಬೇರುಸಮೇತ ಕಿತ್ತೊಗೆಯುವ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಈ ಇಚ್ಛಾಶಕ್ತಿ ಸಾಕಾರಗೊಳ್ಳಬೇಕಿದ್ದರೆ, ಗಡಿ ತಪಾಸಣೆ, ಆಂತರಿಕ ಬೇಹುಗಾರಿಕೆ, ಪೊಲೀಸರ ಕ್ರಿಯಾಶೀಲ ಕಾರ್ಯಾಚರಣೆ, ದೇಶವಾಸಿಗಳ ಸಕ್ರಿಯ ಸಹಕಾರ ಇತ್ಯಾದಿಗಳೆಲ್ಲ ಅತ್ಯಗತ್ಯ. ಅದನ್ನು ಹೊರತುಪಡಿಸಿ ಕೇವಲ ಸರಕಾರವೇ ಮಾದಕ ದ್ರವ್ಯ ಜಾಲಗಳನ್ನು ನಾಶಪಡಿಸಬೇಕು ಎಂದು ಬಯಸುತ್ತಾ ಕೂತರೆ, ಅದು ಇಡೀ ದೇಶವೊಂದರ ಭವಿಷ್ಯವನ್ನೇ ಕತ್ತಲಾಗಿಸಬಲ್ಲ ಬ್ರಹ್ಮ ರಾಕ್ಷಸ ಸ್ವರೂಪ ಪಡೆಯುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ.